ಕನ್ನಡ ಸುದ್ದಿ  /  Lifestyle  /  Health News Reasons For Migraine In Summer Experts Opinion On Treatment Lifestyle Wellness Health News In Kannada Rst

Migraine: ಅಯ್ಯೋ ತಲೆನೋವು; ಬೇಸಿಗೆಯಲ್ಲಿ ಕಾಡುವ ಮೈಗ್ರೇನ್‌ಗೆ ಕಾರಣ, ಪರಿಹಾರ ಕುರಿತು ತಜ್ಞರ ಸಲಹೆ ಇಲ್ಲಿದೆ

Migraine in Summer: ಮೈಗ್ರೇನ್‌ ಅಥವಾ ಅರೆ ತಲೆನೋವು ಬೇಸಿಗೆಯಲ್ಲಿ ತೀವ್ರವಾಗುತ್ತದೆ. ನಿರ್ಜಲೀಕರಣ ಇದಕ್ಕೆ ಪ್ರಮುಖ ಕಾರಣ. ಇದರೊಂದಿಗೆ ಇನ್ನೂ ಕೆಲವು ಅಂಶಗಳು ಕಾರಣವಾಗುತ್ತವೆ. ಬೇಸಿಗೆಯಲ್ಲಿ ಕಾಡುವ ಮೈಗ್ರೇನ್‌ಗೆ ಕಾರಣ ಹಾಗೂ ಪರಿಹಾರ ಮಾರ್ಗಗಳ ಕುರಿತ ತಜ್ಞರ ಸಲಹೆ ಇಲ್ಲಿದೆ.

ಬೇಸಿಗೆಯಲ್ಲಿ ಕಾಡುವ ಮೈಗ್ರೇನ್‌
ಬೇಸಿಗೆಯಲ್ಲಿ ಕಾಡುವ ಮೈಗ್ರೇನ್‌

ಮೈಗ್ರೇನ್‌ (ಅರೆ ತಲೆನೋವು) ಇತ್ತೀಚೆಗೆ ಹಲವರನ್ನು ಕಾಡುತ್ತಿರುವ ಸಮಸ್ಯೆಯಾಗಿದೆ. ಇದೊಂದು ನರ ವೈಜ್ಞಾನಿಕ ಸ್ಥಿತಿಯಾಗಿದ್ದು, ಪುರುಷರಿಗಿಂತ ಮಹಿಳೆಯರನ್ನು ಹೆಚ್ಚು ಬಾಧಿಸುತ್ತದೆ. ಪದೇ ಪದೇ ತಲೆನೋವು ಕಾಣಿಸುವ ಮೂಲಕ ನೆಮ್ಮದಿ ಇಲ್ಲದಂತೆ ಮಾಡುತ್ತದೆ.

ಬೇಸಿಗೆಯಲ್ಲಿ ಮೈಗ್ರೇನ್‌ ಕಾಣಿಸುವುದು ಜಾಸ್ತಿ. ಅತಿಯಾದ ತಾಪಮಾನವು ಮೈಗ್ರೇನ್‌ ಸಮಸ್ಯೆ ಹೆಚ್ಚಲು ಕಾರಣವಾಗುತ್ತದೆ. ಅಲ್ಲದೆ ಬೇರೆ ಸಮಯಗಳಿಗಿಂತ ಬೇಸಿಗೆಯಲ್ಲಿ ಮೈಗ್ರೇನ್‌ ತಲೆನೋವಿನ ಸ್ಥಿತಿ ಇನ್ನೂ ಕೆಟ್ಟದ್ದಾಗಿರುತ್ತದೆ. ಆದರೆ ಇದಕ್ಕೆ ಯಾವುದೇ ಔಷಧಿ ಪರಿಣಾಮ ಬೀರುವುದಿಲ್ಲ. ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಪರಿಹಾರ ಕಂಡುಕೊಳ್ಳಬಹುದು.

ಈ ವಿಷಯವಾಗಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ ಡಾ. ವಿಶಾಖ ಶಿವದಾಸಾನಿ. ಅವರ ಪ್ರಕಾರ ಕೇವಲ ದೇಹದಲ್ಲಿ ಶೇ 1ರಷ್ಟು ಪ್ರಮಾಣದಲ್ಲಿ ನಿರ್ಜಲೀಕರಣವು (ಡಿಹೈಡ್ರೇಷನ್‌) ಮೈಗ್ರೇನ್‌ ಅನ್ನು ಪ್ರಚೋದಿಸುತ್ತದೆ. ಆ ಕಾರಣಕ್ಕೆ ದೇಹ ನಿರ್ಜಲೀಕರಣಗೊಳ್ಳದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ʼಸಾಕಷ್ಟು ನೀರು ಕುಡಿಯುವುದು, ನಿಂಬೆರಸಕ್ಕೆ ಉಪ್ಪು ಸೇರಿಸಿ ಕುಡಿಯುವುದು ಮಾಡುವುದರಿಂದ ದೇಹದಲ್ಲಿ ಎಲೆಕ್ಟ್ರೋಲೈಟ್‌ ಪ್ರಮಾಣವನ್ನು ಹೆಚ್ಚಿಸಬಹುದುʼ ಎನ್ನುತ್ತಾರೆ.

ಮೈಗ್ರೇನ್‌ ತಲೆನೋವಿಗೆ ಇತರ ಕಾರಣಗಳ ಬಗ್ಗೆ ತಿಳಿಸುವ ಡಾ. ವಿಶಾಖ ʼದೇಹದಲ್ಲಿ ಪೌಷ್ಟಿಕಾಂಶದ ಕೊರತೆಯು ನಿರಂತರವಾಗಿ ಕಾಣಿಸುವ ಮೈಗ್ರೇನ್‌ಗೆ ಕಾರಣವಿರಬಹುದು. ಅದರಲ್ಲೂ ವಿಶೇಷವಾಗಿ ಕಬ್ಬಿಣಾಂಶ, ಮೆಗ್ನೇಶಿಯಂ, ವಿಟಮಿನ್‌ ಡಿ ಕೊರತೆಯು ದೇಹದಲ್ಲಿ ಮೈಗ್ರೇನ್‌ ಸಮಸ್ಯೆ ಹೆಚ್ಚಲು ಕಾರಣವಾಗುತ್ತದೆ. ಆ ಕಾರಣಕ್ಕೆ ನೋವು ನಿವಾರಕಗಳ ಮೇಲೆ ಅವಲಂಬಿತವಾಗುವ ಮೊದಲು ದೇಹಕ್ಕೆ ಸರಿಯಾಗಿ ಪೌಷ್ಟಿಕಾಂಶ ಸಿಗುವಂತೆ ಮಾಡುವುದು ಮುಖ್ಯವಾಗುತ್ತದೆ.

ʼಕೆಲವರಲ್ಲಿ ಬೇಸಿಗೆಯಲ್ಲಿ ಮೈಗ್ರೇನ್‌ ಸಮಸ್ಯೆ ಕಾಣಿಸುವುದು ಹೆಚ್ಚು. ಹೆಚ್ಚಿದ ತಾಪಮಾನ, ಆರ್ದ್ರತೆ ಹಾಗೂ ದೀರ್ಘ ಹಗಲು, ಬಿಸಿಲಿನಲ್ಲಿ ಓಡಾಡುವುದು ಇದಕ್ಕೆ ಪ್ರಾಥಮಿಕ ಕಾರಣಗಳಾಗಿರಬಹುದು. ಇದರೊಂದಿಗೆ ನಿರ್ಜಲೀಕರಣ, ಎಲೆಕ್ಟ್ರೋಲೈಟ್‌ ಅಸಮತೋಲನ ಮತ್ತು ಅಸರ್ಮಪಕ ನಿದ್ದೆ ಕೂಡ ಇದಕ್ಕೆ ಕಾರಣವಾಗಬಹುದು. ಈ ಎಲ್ಲವೂ ಸಂಭಾವ್ಯ ಮೈಗ್ರೇನ್‌ ಪ್ರಚೋದಕಗಳಾಗಿವೆʼ ಎಂದು ನಾನಾವತಿ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನರವಿಜ್ಞಾನದ ನಿರ್ದೇಶಕ ಡಾ. ಪ್ರದ್ಯುಮ್ನ ಓಕ್ ಹೇಳುತ್ತಾರೆ.

ನಿರ್ಜಲೀಕರಣ ಮತ್ತು ಮೈಗ್ರೇನ್‌ ನಡುವಿನ ಸಂಬಂಧ

ʼನಿರ್ಜಲೀಕರಣವು ಮೈಗ್ರೇನ್‌ಗೆ ಕಾರಣವಾಗಬಹುದು, ಏಕೆಂದರೆ ಇದರಿಂದ ಮೆದುಳಿಗೆ ಸರಿಯಾದ ಪ್ರಮಾಣದಲ್ಲಿ ರಕ್ತ ಪೂರೈಕೆಯಾಗುವುದಿಲ್ಲ. ಆಗ ರಕ್ತನಾಳಗಳು ಹಿಗ್ಗುವುದು, ಕುಗ್ಗುವುದು ಆಗುತ್ತಿರುತ್ತದೆ. ಇದರ ಪರಿಣಾಮವಾಗಿ ತಲೆನೋವು ಅಥವಾ ಮೈಗ್ರೇನ್‌ ಕಾಣಿಸುತ್ತದೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ ಡಾ. ಪ್ರದ್ಯುಮ್ನ.

ಮೈಗ್ರೇನ್‌ಗೆ ಕಾರಣವಾಗುವ ಅಂಶಗಳು

* ಒತ್ತಡ

* ಹಾರ್ಮೋನ್‌ಗಳ ಬದಲಾವಣೆ

* ಅಸರ್ಮಪಕ ನಿದ್ದೆ

* ಕೆಲವೊಂದು ಆಹಾರಗಳು ಹಾಗೂ ಪಾನೀಯ

* ಹವಾಮಾನ ಬದಲಾವಣೆ

* ಬೆಳಕು, ಶಬ್ದ ಹಾಗೂ ವಾಸನೆಯ ವಿಷಯದಲ್ಲಿ ಸೂಕ್ಷ್ಮವಾಗಿರುವುದು

ನಿಯಂತ್ರಣ ಮಾರ್ಗಗಳು

* ನಿಮ್ಮ ತಲೆನೋವಿಗೆ ಕಾರಣವಾಗುವ ಆಹಾರ ಅಥವಾ ಪಾನೀಯ ಯಾವುದು ಎಂದು ಗುರುತಿಸಿ ಅದನ್ನು ಸೇವಿಸುವುದನ್ನು ತಕ್ಷಣಕ್ಕೆ ನಿಲ್ಲಿಸಿ.

* ನಿದ್ದೆ ಮಾಡಲು ಒಂದು ನಿರ್ದಿಷ್ಟ ಸಮಯ ಹಾಗೂ ಕ್ರಮವನ್ನು ಅನುಸರಿಸಿ.

* ಯೋಗ, ಧ್ಯಾನದಂತಹ ಒತ್ತಡ ನಿರ್ವಹಣೆಯ ತಂತ್ರಗಳನ್ನು ಅನುಸರಿಸಿ.

* ದೇಹದಲ್ಲಿ ಎಲೆಕ್ಟ್ರೋಲೈಟ್‌ ಅಂಶ ಸಮತೋಲನದಲ್ಲಿರುವಂತೆ ನೋಡಿಕೊಳ್ಳಿ, ಜೊತೆಗೆ ದೇಹ ನಿರ್ಜಲೀಕರಣಗೊಳ್ಳದಂತೆ ನೋಡಿಕೊಳ್ಳುವುದು ಬಹಳ ಮುಖ್ಯ.

* ಕೆಫೀನ್‌ ಅಂಶವುಳ್ಳ ಪದಾರ್ಥಗಳ ಸೇವನೆಗೆ ಕಡಿವಾಣ ಹಾಕಿ.

ಜೀವನಶೈಲಿ ಬದಲಾವಣೆಯೂ ಅವಶ್ಯ

ನೈಸರ್ಗಿಕ ಮಾರ್ಗಗಳ ಮೂಲಕವು ಮೈಗ್ರೇನ್‌ ಅನ್ನು ನಿಯಂತ್ರಿಸಬಹುದು ಎನ್ನುತ್ತಾರೆ ಡಾ. ಪ್ರದ್ಯುಮ್ನ. ಅಂತಹ ಕೆಲವು ಮಾರ್ಗಗಳ ಬಗ್ಗೆ ಅವರು ವಿವರಿಸಿರುವುದು ಹೀಗೆ.

* ಪ್ರತಿದಿನ ವ್ಯಾಯಾಮ ಮಾಡುವುದರಿಂದ ರಕ್ತ ಸಂಚಲನದ ಪ್ರಮಾಣ ಹೆಚ್ಚುತ್ತದೆ, ಅಲ್ಲದೆ ಇದರಿಂದ ಒತ್ತಡವು ಕಡಿಮೆಯಾಗುತ್ತದೆ.

* ಮೆಗ್ನೀಸಿಯಮ್, ರೈಬೋಫ್ಲಾವಿನ್ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಸಮತೋಲಿತ ಆಹಾರ ಸೇವನೆಗೆ ಒತ್ತು ನೀಡಿ.

* ದೇಹ ನಿರ್ಜಲೀಕರಣಗೊಳ್ಳದಂತೆ ಸಾಕಷ್ಟು ನೀರು ಕುಡಿಯುವುದು ನೀರು ಕುಡಿಯುವುದರಿಂದ ಕೂಡ ಮೈಗ್ರೇನ್‌ ಅನ್ನು ತಪ್ಪಿಸಬಹುದು.

* ಒತ್ತಡ ಹಾಗೂ ಆತಂಕವನ್ನು ನಿವಾರಿಸುವ ವಿಶ್ರಾಂತಿ ತಂತ್ರಗಳನ್ನು ಅನುಸರಿಸಿ.

* ನಿದ್ರೆಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವುದು ಮತ್ತು ಸ್ಥಿರವಾದ ನಿದ್ರೆಯ ವೇಳಾಪಟ್ಟಿಯನ್ನು ನಿರ್ವಹಿಸುವುದು ಕೂಡ ಬಹಳ ಮುಖ್ಯವಾಗುತ್ತದೆ.