ಪುದೀನಾ ನೀರು ಕುಡಿದು ದಿನ ಪ್ರಾರಂಭಿಸಿ ನೋಡಿ; ಅಜೀರ್ಣ ಸಮಸ್ಯೆಯಿಂದ ತ್ವಚೆಯ ಆರೋಗ್ಯದವರೆಗೆ ಇದೆ ಬಹಳಷ್ಟು ಪ್ರಯೋಜನ
ಉತ್ತಮ ಅಭ್ಯಾಸಗಳಿಂದ ದಿನ ಪ್ರಾರಂಭಿಸಿದರೆ ದಿನ ಪೂರ್ತಿ ಉತ್ಸಾಹ ತುಂಬಿರುತ್ತದೆ. ಅದು ಆರೋಗ್ಯ ಕಾಪಾಡಿಕೊಳ್ಳುವ ಸರಳ ಮಾರ್ಗವೂ ಹೌದು. ಪುದೀನಾ ಸೂಪರ್ ಫುಡ್‌ಗಳ ಸಾಲಿಗೆ ಸೇರಿದ ಹಸಿರು ತರಕಾರಿ. ಪುದೀನಾ ಸೇವಿಸುವುದರಿಂದ ದೇಹಕ್ಕೆ ಬಹಳಷ್ಟು ಪ್ರಯೋಜನಗಳಿವೆ. ದಿನದ ಆರಂಭವನ್ನು ಈ ಪುದೀನಾ ನೀರು ಕುಡಿದು ಪ್ರಾರಂಭಿಸಿದರಂತೂ ಎಷ್ಟೆಲ್ಲಾ ಲಾಭವಿದೆ ನೀವೇ ನೋಡಿ.
ಸರಳ ಜೀವನಶೈಲಿಯಿಂದ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ಅನಾರೋಗ್ಯಕರ ಅಭ್ಯಾಸಗಳಿಂದ ರೋಗಗಳು ಬಹುಬೇಗ ಅಂಟಿಕೊಳ್ಳುತ್ತವೆ. ಹಾಗಾಗಿ ಪ್ರತಿದಿನವನ್ನು ಉತ್ತಮ ಅಭ್ಯಾಸಗಳಿಂದ ಪ್ರಾರಂಭಿಸುವುದು ಮುಖ್ಯವಾಗಿದೆ. ಪ್ರಮುಖವಾಗಿ ದೇಹವನ್ನು ಆಂತರಿಕವಾಗಿ ನಿರ್ವಿಷಗೊಳಿಸುವುದು ಅತ್ಯಂತ ಅವಶ್ಯಕವಾಗಿದೆ. ಅಂದರೆ ಜೀರ್ಣಾಂಗ ವ್ಯವಸ್ಥೆಯ ಕಾರ್ಯ ಸರಿಯಾಗಿ ನಡೆಯಬೇಕು. ಹಾಗಾದಾಗ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಉತ್ತಮ ಆರೋಗ್ಯ ನಮ್ಮದಾಗುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಚಹಾ ಅಥವಾ ಕಾಫಿ ಕುಡಿಯುವುದರ ಬದಲಿಗೆ ಆರೋಗ್ಯಕರವಾದ ಪುದೀನಾ ನೀರನ್ನು (Mint water) ಕುಡಿಯುವುದರಿಂದ ದೇಹದ ಕೆಲಸಗಳು ಸರಾಗವಾಗಿ ನಡೆಯುತ್ತವೆ. ಖಾಲಿ ಹೊಟ್ಟೆಯಲ್ಲಿ ಪುದೀನಾ ನೀರನ್ನು ಕುಡಿಯುವುದರಿಂದ ಹೊಟ್ಟೆಯಲ್ಲಿರುವ ಟಾಕ್ಸಿನ್ ಅನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದರಿಂದ ಜೀರ್ಣಾಂಗ ವ್ಯವಸ್ಥೆಯು ಸ್ವಚ್ಛವಾಗಿರುತ್ತದೆ.
ಪುದೀನಾ ಎಲೆಗಳು ಬಾಯಿಯಿಂದ ಬರುವ ಕೆಟ್ಟ ವಾಸನೆಯನ್ನು ಕೂಡಾ ತಡೆಯುತ್ತವೆ. ಇದು ನೈಸರ್ಗಿಕವಾಗಿಯೇ ಆಂಟಿಬ್ಯಾಕ್ಟೀರಿಯಲ್ ಗುಣವನ್ನು ಹೊಂದಿದೆ. ಪುದೀನಾ ನೀರು ಒಂದು ಆರೋಗ್ಯಕರ ಪಾನೀಯವಾಗಿದೆ. ಇದು ದೇಹವನ್ನು ಸುಲಭವಾಗಿ ಹೈಡ್ರೀಕರಿಸಲು ಸಹಾಯ ಮಾಡುತ್ತದೆ. ಈ ಮೂಲಕ ಪುದೀನಾವು ದೇಹದ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಜತೆಗೆ ಇದು ಒತ್ತಡ, ಆತಂಕ ಕಡಿಮೆ ಮಾಡುತ್ತದೆ. ದಿನಪೂರ್ತಿ ಫ್ರೆಶ್ ಆಗಿರುವಂತೆ ನೋಡಿಕೊಳ್ಳುತ್ತದೆ. ಖಾಲಿ ಹೊಟ್ಟೆಯಲ್ಲಿ ಪುದೀನಾ ನೀರನ್ನು ಕುಡಿಯುವುದರಿಂದ ಯಾವ ಯಾವ ಲಾಭಗಳನ್ನು ಪಡೆದುಕೊಳ್ಳಬಹುದು ಎಂಬುದನ್ನು ನೋಡೋಣ.
ಖಾಲಿ ಹೊಟ್ಟೆಯಲ್ಲಿ ಪುದೀನಾ ನೀರು ಕುಡಿಯುವುದರಿಂದ ಸಿಗುವ ಪ್ರಯೋಜನಗಳು
ನೈಸರ್ಗಿಕವಾಗಿ ಹೈಡ್ರೀಕರಿಸುತ್ತದೆ: ಪುದೀನಾ ನೀರು ರಿಫ್ರೆಶ್ ಮಾಡುವುದರ ಜೊತೆಗೆ ದೇಹವು ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳುತ್ತದೆ. ಇದು ಆರೋಗ್ಯವನ್ನು ಕಾಪಾಡಿಕೊಳ್ಳಲು ಇರುವ ಉತ್ತಮ ಪಾನೀಯಗಳಲ್ಲಿ ಒಂದಾಗಿದೆ.
ಜೀರ್ಣಾಂಗದ ಆರೋಗ್ಯ ಹೆಚ್ಚಿಸುತ್ತದೆ: ಪುದೀನಾ ಎಲೆಗಳನ್ನು ನೆನೆಸಿ ತಯಾರಿಸಿದ ನೀರು ಮೆಂಥಾಲ್‌ನಿಂದ ಸಮೃದ್ಧವಾಗಿರುತ್ತದೆ. ಅದು ಜೀರ್ಣಾಂಗದ ಸಮಸ್ಯೆಗಳಾದ ಹೊಟ್ಟೆ ಉಬ್ಬರ, ಅಸಿಡಿಟಿ ಮತ್ತು ಗ್ಯಾಸ್ಟ್ರಿಕ್‌ಗಳನ್ನು ಕಡಿಮೆ ಮಾಡುತ್ತದೆ. ಏಕೆಂದರೆ ಪುದೀನಾವು ಪಚನಕ್ರಿಯೆಗೆ ಅಗತ್ಯವಾದ ಕಿಣ್ವಗಳನ್ನು ಉತ್ತೇಜಿಸುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ: ಪುದೀನಾ ನೀರು ಉರಿಯೂತ ಶಮನ ಮಾಡುವ ಗುಣವನ್ನು ಹೊಂದಿದೆ. ಇದರಿಂದ ಪೋಷಕಾಂಶಗಳ ಹೀರುವಿಕೆಯ ಪ್ರಮಾಣ ಹೆಚ್ಚುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಚರ್ಮದ ಆರೋಗ್ಯ ಕಾಪಾಡುತ್ತದೆ: ಪುದೀನಾ ನೀರು ಆಂಟಿಆಕ್ಸಿಡೆಂಟ್‌ನಿಂದ ಸಮೃದ್ದವಾಗಿದ್ದು, ದೇಹದೊಳಗಿನಿಂದಲೇ ಚರ್ಮವನ್ನು ಹೈಡ್ರೇಟ್ ಆಗಿರಿಸುತ್ತದೆ. ಇದರಿಂದ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ.
ತೂಕ ಇಳಿಕೆಗೆ ಸಹಕಾರಿ: ಪುದೀನಾ ಜೀರ್ಣಕ್ರಿಯೆಗೆ ಬೇಕಾದ ಕಿಣ್ಣಗಳ ಉತ್ಪತ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ. ಪುದೀನಾ ನೀರು ಜೀವಸತ್ವಗಳನ್ನು ಉತ್ತಮ ರೀತಿಯಲ್ಲಿ ಹೀರಿಕೊಳ್ಳುವಂತೆ ಮಾಡುತ್ತದೆ. ಹೀಗಾಗಿ ಈ ನೀರು ತೂಕ ಇಳಿಕೆಗೆ ಉತ್ತಮವಾಗಿದೆ.
ಪುದೀನಾ ನೀರು ಹೀಗೆ ತಯಾರಿಸಿ
ಒಂದು ಲೋಟ ನೀರಿಗೆ 6 ರಿಂದ 7 ಪುದೀನಾ ಎಲೆ ಸೇರಿಸಿ. ಚಮಚದ ಸಹಾಯದಿಂದ ಚೆನ್ನಾಗಿ ಮಿಕ್ಸ್ ಮಾಡಿ. ಬೇಕಿದ್ದರೆ ಚಿಟಿಕೆ ಉಪ್ಪು ಮತ್ತು ಲಿಂಬೆ ರಸ ಸೇರಿಸಬಹುದು. 10 ನಿಮಿಷ ಬಿಟ್ಟು ಕುಡಿಯಿರಿ.