50ರ ನಂತರ ಪುರುಷರು ನಿರ್ಲಕ್ಷ್ಯ ಮಾಡಬಾರದಂತಹ ಮೂತ್ರಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳಿವು, ಮೂತ್ರಪಿಂಡದ ಆರೋಗ್ಯಕ್ಕೆ ನೀಡಿ ಆದ್ಯತೆ
ವಯಸ್ಸಾಗುತ್ತಿದ್ದಂತೆ ಇನ್ನಿಲ್ಲದ ಆರೋಗ್ಯ ಸಮಸ್ಯೆಗಳು ಕಾಡಲು ಶುರುವಾಗುವುದು ಸಹಜ. ಅದರಲ್ಲೂ 50ರ ನಂತರ ಪುರುಷರಲ್ಲಿ ಹೆಚ್ಚಾಗಿ ಮೂತ್ರಕೋಶ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ವಯಸ್ಸಿನ ನಂತರ ಕಾಡುವ ಮೂತ್ರಕೋಶ ಸಮಸ್ಯೆಗಳು ಯಾವುವು, ಮೂತ್ರಕೋಶ ಆರೋಗ್ಯ ಸುಧಾರಣೆಗೆ ಏನು ಮಾಡಬೇಕು ಎಂಬ ವಿವರ ಇಲ್ಲಿದೆ.
ಮನುಷ್ಯ ದೇಹದ ಪ್ರಮುಖ ಅಂಗಗಳಲ್ಲಿ ಮೂತ್ರಕೋಶವು ಒಂದು. ದೇಹದ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಮೂತ್ರಕೋಶವನ್ನು ಸುಸ್ಥಿತಿ ಇರಿಸಿಕೊಳ್ಳಲುವುದು ಬಹಳ ಮುಖ್ಯ. ಅದರಲ್ಲೂ ವಯಸ್ಸಾದ ಮೇಲೆ ಮೂತ್ರಕೋಶ ಆರೋಗ್ಯವನ್ನು ಕಾಪಾಡಿಕೊಳ್ಳುವತ್ತ ನಾವು ಗಮನಹರಿಸಬೇಕು. ಪ್ರಾಸ್ಟೇಟ್ ಸಮಸ್ಯೆಗಳು, ಮೂತ್ರಪಿಂಡ ವೈಫಲ್ಯ, ಬೆನಿಗ್ನ್ ಪ್ರೋಸ್ಟೇಟಿಕ್ ಹೈಪರ್ಪ್ಲಾಸಿಯಾ, ಪುರುಷ ಲೈಂಗಿಕ ಅಪಸಾಮಾನ್ಯ ಕ್ರಿಯೆ ಮತ್ತು ಪುರುಷ ಬಂಜೆತನ ಇಂತಹ ಸಮಸ್ಯೆಗಳು ವಯಸ್ಸು 50 ದಾಟುತ್ತಿದ್ದಂತೆ ಕಾಣಿಸುವುದು ಸಹಜ. ಆದರೆ ಸರಿಯಾದ ವಿಧಾನದಲ್ಲಿ ಮೂತ್ರಕೋಶವನ್ನು ನಿರ್ವಹಿಸಿದರೆ ಈ ಎಲ್ಲಾ ಸಮಸ್ಯೆಗಳನ್ನ ತಡೆಗಟ್ಟಬಹುದು.
ನಮಗೆ ವಯಸ್ಸಾದಂತೆ ಒರಾಗ್ನಾ ಬಿಡಿ ದೇಹದ ಕಾರ್ಯವು ಕ್ಷೀಣಿಸಲು ಆರಂಭವಾಗುತ್ತದೆ. ಆ ಕಾರಣಕ್ಕೆ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಲಕ್ನೋದ ಗೋಮತಿ ನಗರ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮೂತ್ರಪಿಂಡ ಕಸಿ ಮತ್ತು ರೋಬೋಟಿಕ್ ಯುರೋ-ಆಂಕೊಲಾಜಿ ವಿಭಾಗದ ಹಿರಿಯ ನಿರ್ದೇಶಕ ಡಾ. ಆದಿತ್ಯ ಕೆ. ಶರ್ಮಾ ಅವರ ಪ್ರಕಾರ ಪುರುಷರು ಮಹಿಳೆಯರಿಗೆ ಹೆಚ್ಚು ಮೂತ್ರಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಾರೆ. ಆದರೆ ಅವರ ದೈನಂದಿನ ದಿನಚರಿಯಲ್ಲಿ ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಹಾಗೂ ಫಿಟ್‌ನೆಸ್ ಕಾಯ್ದುಕೊಳ್ಳುವ ಮೂಲಕ ಮೂತ್ರಕೋಶದ ಆರೋಗ್ಯವನ್ನು ನಿರ್ವಹಿಸಬಹುದು ಎಂದು ಇಂಡಿಯಾ.ಕಾಮ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಪ್ರಾಸ್ಟೇಟ್ ಆರೋಗ್ಯ
ಪ್ರಾಸ್ಟೇಟ್ ಒಂದು ಸಣ್ಣ ಗ್ರಂಥಿಯಾಗಿದ್ದು ಅದು ಸೆಮಿನಲ್ ದ್ರವವನ್ನು ಉತ್ಪಾದಿಸುವ ಮೂಲಕ ಪುರುಷ ಸಂತಾನೋತ್ಪತ್ತಿ ಆರೋಗ್ಯದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಪುರುಷರ ವಯಸ್ಸಾದಂತೆ, ಪ್ರಾಸ್ಟೇಟ್ ಕ್ಯಾನ್ಸರ್ ಮತ್ತು BPH ಸೇರಿದಂತೆ ಪ್ರಮುಖ ಆರೋಗ್ಯ ಸಮಸ್ಯೆಗಳು ಎದುರಾಗಬಹುದು.
ಪ್ರಾಸ್ಟೇಟ್ ಆರೋಗ್ಯ ಕಾಪಾಡಿಕೊಳ್ಳಲು ಕ್ರಮ
ನಿಯಮಿತ ಸ್ಕ್ರೀನಿಂಗ್: 50 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ಪ್ರಾಸ್ಟೇಟ್ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ನಿಯಮಿತ ಪ್ರಾಸ್ಟೇಟ್-ನಿರ್ದಿಷ್ಟ ಪ್ರತಿಜನಕ (PSA) ಪರೀಕ್ಷೆಗಳು ಮತ್ತು ಡಿಜಿಟಲ್ ಗುದನಾಳದ ಪರೀಕ್ಷೆಗಳನ್ನು (DRE) ಮಾಡಿಸುತ್ತಿರಬೇಕು. ಪ್ರಾಸ್ಟೇಟ್ ಕ್ಯಾನ್ಸರ್‌ನ ಆರಂಭಿಕ ಪತ್ತೆ ಚಿಕಿತ್ಸೆಯ ಫಲಿತಾಂಶಗಳನ್ನು ಗಮನಾರ್ಹವಾಗಿ ಸುಧಾರಿಸುತ್ತದೆ.
ಆರೋಗ್ಯಕರ ಆಹಾರ: ಹಣ್ಣುಗಳು, ತರಕಾರಿಗಳು ಮತ್ತು ಆರೋಗ್ಯಕರ ಕೊಬ್ಬಿನಾಂಶಗಳಲ್ಲಿ ಸಮೃದ್ಧವಾಗಿರುವ ಆಹಾರವು ಪ್ರಾಸ್ಟೇಟ್ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಆಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿರುವ ಆಹಾರಗಳ ಸೇವನೆಯನ್ನ ಹೆಚ್ಚು ಮಾಡಬೇಕು.
ದೈಹಿಕ ಚಟುವಟಿಕೆ: ನಿಯಮಿತ ವ್ಯಾಯಾಮವು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಸ್ಥೂಲಕಾಯತೆ ಪರಿಣಾಮದಿಂದ ಪ್ರಾಸ್ಟೇಟ್ ಕ್ಯಾನ್ಸರ್‌ಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಬಹುದು.
ಕಿಡ್ನಿ ವೈಫಲ್ಯ
ಮೂತ್ರಪಿಂಡಗಳು ರಕ್ತದಿಂದ ತ್ಯಾಜ್ಯ ಮತ್ತು ಹೆಚ್ಚುವರಿ ದ್ರವಗಳನ್ನು ಫಿಲ್ಟರ್ ಮಾಡುವ ಸಾಮರ್ಥ್ಯವನ್ನು ಕಳೆದುಕೊಂಡಾಗ ಮೂತ್ರಪಿಂಡ ವೈಫಲ್ಯ, ಅಥವಾ ಕೊನೆಯ ಹಂತದ ಮೂತ್ರಪಿಂಡದ ಕಾಯಿಲೆ (ESRD)ಗಳು ಸಂಭವಿಸುತ್ತವೆ. ಈ ಸ್ಥಿತಿಯು ಜೀವಕ್ಕೆ ಅಪಾಯಕಾರಿ ಮತ್ತು ಆಗಾಗ್ಗೆ ಡಯಾಲಿಸಿಸ್ ಅಥವಾ ಮೂತ್ರಪಿಂಡ ಕಸಿ ಅಗತ್ಯವಿರುತ್ತದೆ.
ಕಿಡ್ನಿ ವೈಫಲ್ಯ ತಡೆಗಟ್ಟುವ ವಿಧಾನ
ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆಯ ನಿಯಂತ್ರಣ: ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಮೂತ್ರಪಿಂಡ ವೈಫಲ್ಯಕ್ಕೆ ಪ್ರಮುಖ ಕಾರಣಗಳಾಗಿವೆ. ಔಷಧಿ, ಆಹಾರ ಮತ್ತು ಜೀವನಶೈಲಿಯ ಬದಲಾವಣೆಗಳ ಮೂಲಕ ಈ ಪರಿಸ್ಥಿತಿಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ.
ಹೈಡ್ರೇಷನ್: ಹೆಚ್ಚು ಹೆಚ್ಚು ದ್ರವಾಹಾರ ಸೇವಿಸುವ ಮೂಲಕ ದೇಹವನ್ನು ಹೈಡ್ರೇಟ್ ಆಗಿರಿಸಿಕೊಳ್ಳುವುದು ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, NSAID ಗಳ (ನಾನ್ ಸ್ಟೆರೊಯ್ಡೆಲ್ ಉರಿಯೂತದ ಔಷಧಗಳು) ಅತಿಯಾದ ಬಳಕೆಯನ್ನು ತಪ್ಪಿಸುವುದು ಮುಖ್ಯವಾಗಿದೆ, ಇದು ಮೂತ್ರಪಿಂಡಗಳಿಗೆ ಹಾನಿ ಮಾಡುತ್ತದೆ, ಅದರಲ್ಲೂ ಮೂತ್ರಪಿಂಡದ ಸಮಸ್ಯೆ ಇರುವವರು ಇದರಿಂದ ದೂರ ಇರಬೇಕು.
ನಿಯಮಿತ ಮಾನಿಟರಿಂಗ್: ರಕ್ತ ಪರೀಕ್ಷೆ ಹಾಗೂ ಮೂತ್ರ ಪರೀಕ್ಷೆಗಳ ಮೂಲಕ ಮೂತ್ರಪಿಂಡದ ಕಾಯಿಲೆಯ ಆರಂಭಿಕ ಚಿಹ್ನೆಗಳನ್ನು ಪತ್ತೆಹಚ್ಚಲು ಸಹಾಯವಾಗುತ್ತದೆ.
ಬೆನಿಗ್ನ್ ಪ್ರೊಸ್ಟಾಟಿಕ್ ಹೈಪರ್ಪ್ಲಾಸಿಯಾ (BPH)
BPH ಎಂಬುದು ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್ ಅಲ್ಲದ ಹಿಗ್ಗುವಿಕೆಯಾಗಿದೆ, ಇದು ವಯಸ್ಸಾದ ಪುರುಷರಲ್ಲಿ ಮೂತ್ರದ ಸಮಸ್ಯೆಗಳನ್ನು ಉಂಟುಮಾಡಬಹುದು. ಇದರಿಂದ ಮೂತ್ರ ವಿಸರ್ಜಿಸಲು ತೊಂದರೆ, ಮೂತ್ರ ಮಾಡಲು ಕಷ್ಟವಾಗುವುದು, ರಾತ್ರಿ ಹೊತ್ತು ಪದೇ ಪದೇ ಮೂತ್ರ ಬರುವುದು ಇಂತಹ ಸಮಸ್ಯೆಗಳನ್ನು ಒಳಗೊಂಡಿರಬಹುದು.
ಬಿಪಿಎಚ್ ನಿರ್ವಹಣೆ
ಸಾಮಾನ್ಯವಾಗಿ ಈ ಸಮಸ್ಯೆಗೆ ವೈದ್ಯರು ಸೂಚಿಸಿದ ಔಷಧಿಗಳನ್ನು ತೆಗೆದುಕೊಳ್ಳುವ ಮೂಲಕ ಪರಿಹಾರ ಕಂಡುಕೊಳ್ಳಬಹುದು.
ಜೀವನಶೈಲಿ ಹೊಂದಾಣಿಕೆಗಳು: ಮಲಗುವ ಮುನ್ನ ದ್ರವ ಸೇವನೆಯನ್ನು ಕಡಿಮೆ ಮಾಡುವುದು, ಕೆಫೀನ್ ಮತ್ತು ಆಲ್ಕೋಹಾಲ್ ಅನ್ನು ಸೀಮಿತಗೊಳಿಸುವುದು ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಇಂತಹ ಜೀವನಶೈಲಿಯ ಬದಲಾವಣೆಯ ಮೂಲಕ ಸುಧಾರಣೆ ಮಾಡಿಕೊಳ್ಳಬಹುದು.
ಶಸ್ತ್ರಚಿಕಿತ್ಸಾ ಆಯ್ಕೆಗಳು: ತೀವ್ರತರವಾದ ಪ್ರಕರಣಗಳಿಗೆ, ಪ್ರಾಸ್ಟೇಟ್‌ನ ಟ್ರಾನ್ಸ್‌ಯುರೆಥ್ರಲ್ ರೆಸೆಕ್ಷನ್ (TURP) ನಂತಹ ಶಸ್ತ್ರಚಿಕಿತ್ಸಾ ವಿಧಾನದ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.
ಪುರುಷ ಬಂಜೆತನ
ಪುರುಷ ಬಂಜೆತನವು ತಂದೆಯಾಗುವ ಸಾಮರ್ಥ್ಯವನ್ನು ಕಡಿಮೆ ಮಾಡುವ ಸ್ಥಿತಿಯಾಗಿದೆ. ಇದು ಕಡಿಮೆ ವೀರ್ಯ ಉತ್ಪಾದನೆ, ಅಸಹಜ ವೀರ್ಯ ಕಾರ್ಯ, ಅಥವಾ ವೀರ್ಯದ ವಿತರಣೆಯನ್ನು ತಡೆಯುವ ಅಡೆತಡೆಗಳಿಂದಾಗಿರಬಹುದು.
ಪುರುಷ ಫಲವಂತಿಕೆಯನ್ನು ಸುಧಾರಿಸುವುದು
ಆರೋಗ್ಯಕರ ಜೀವನಶೈಲಿ: ಧೂಮಪಾನ, ಅತಿಯಾದ ಮದ್ಯಪಾನವನ್ನು ತಪ್ಪಿಸುವುದು ಉತ್ತಮ. ಏಕೆಂದರೆ ಇವುಗಳು ವೀರ್ಯದ ಗುಣಮಟ್ಟದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತವೆ. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಸಮತೋಲಿತ ಆಹಾರ ಸೇವನೆಯು ವೀರ್ಯದ ಆರೋಗ್ಯವನ್ನು ಸಹ ಬೆಂಬಲಿಸುತ್ತದೆ.
ವೈದ್ಯಕೀಯ ಪರೀಕ್ಷೆಗಳು: ಪುರುಷ ಬಂಜೆತನ ಸಮಸ್ಯೆ ಎದುರಿಸುತ್ತಿದ್ದರೆ ವೈದ್ಯರ ಬಳಿ ಸರಿಯಾದ ಚಿಕಿತ್ಸೆ ಪಡೆಯುವುದು ಸಮಸ್ಯೆ ಪರಿಹರಿಸುವ ಮಾರ್ಗವಾಗಿದೆ.
ಸಾಮಾನ್ಯವಾಗಿ 50ರ ನಂತರ ಕಾಡುವ ಮೂತ್ರಕೋಶಕ್ಕೆ ಸಂಬಂಧಿಸಿ ಈ ಎಲ್ಲಾ ಸಮಸ್ಯೆಗಳನ್ನು ನಿರ್ವಹಿಸಲು ಆರೋಗ್ಯ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಇದರಿಂದ ನಿಯಮಿತ ಆರೋಗ್ಯ ತಪಾಸಣೆಯನ್ನೂ ಮಾಡಬೇಕು. ಒಟ್ಟಾರೆ ಜೀವನ ಮಟ್ಟದ ಸುಧಾರಣೆಯು ಮೂತ್ರಕೋಶದ ಆರೋಗ್ಯ ಸುಧಾರಣೆಯನ್ನು ಪ್ರಮುಖ ಪಾತ್ರ ವಹಿಸುತ್ತದೆ.
(ಗಮನಿಸಿ: ಈ ಸುದ್ದಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ ಅವರಿಂದ ಅಭಿಪ್ರಾಯ ಪಡೆಯುವುದನ್ನು ಮರೆಯದಿರಿ.)