Breakfast Timing: ಬೆಳಗಿನ ಉಪಾಹಾರ ಸೇವಿಸಲು ಇದೇ ಬೆಸ್ಟ್ ಟೈಮ್; ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಈ ಸಮಯದೊಳಗೆ ತಿಂಡಿ ತಿನ್ನಿ
Ideal Time for Morning Breakfast: ದಿನದಲ್ಲಿ ಸೇವಿಸುವ ನಾವು ಆಹಾರಗಳಲ್ಲಿ ಬೆಳಗಿನ ಉಪಾಹಾರಕ್ಕೆ ಹೆಚ್ಚು ಮಹತ್ವ ಕೊಡಬೇಕು. ಬೆಳಗಿನ ಹೊತ್ತು ತಪ್ಪದೇ ಉಪಾಹಾರ ಸೇವಿಸುವುದು ಅತಿ ಮುಖ್ಯ, ಇದರೊಂದಿಗೆ ಉತ್ತಮ ಆರೋಗ್ಯಕ್ಕಾಗಿ ಸರಿಯಾದ ಸಮಯದಲ್ಲಿ ತಿಂಡಿ ತಿನ್ನುವುದು ಮುಖ್ಯವಾಗುತ್ತದೆ. ಹಾಗಾದರೆ ಬೆಳಗಿನ ಬ್ರೇಕ್‌ಫಾಸ್ಟ್ ಮಾಡಲು ಯಾವುದು ಸರಿಯಾದ ಸಮಯ ನೋಡಿ.
Best time of Morning Breakfast: ಬೆಳಗಿನ ಹೊತ್ತು ಉಪಾಹಾರ ಸೇವಿಸುವುದು ಬಹಳ ಮುಖ್ಯ. ಹಲವರು ತೂಕ ಇಳಿಕೆಯ ಬಯಕೆಯಲ್ಲಿ ಬೆಳಗಿನ ಹೊತ್ತು ತಿಂಡಿ ತಿನ್ನುವುದಿಲ್ಲ. ಆದರೆ ಬೆಳಗಿನ ಉಪಾಹಾರ ತಪ್ಪಿಸುವುದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಬೆಳಗಿನ ಹೊತ್ತು ಆರೋಗ್ಯಕರ ಆಹಾರ ಸೇವಿಸುವುದರಿಂದ ನಮ್ಮ ದಿನ ಚೈತನ್ಯದಿಂದಿರುವುದು ಮಾತ್ರವಲ್ಲ ಇದರಿಂದ ಆರೋಗ್ಯಕ್ಕೂ ನೂರಾರು ಪ್ರಯೋಜನಗಳಿವೆ.
ಬೆಳಿಗ್ಗೆ ಉಪಾಹಾರ ಸೇವಿಸುವುದರ ಪ್ರಯೋಜನಗಳು
ಬೆಳಗಿನ ಉಪಾಹಾರವು ನಮ್ಮ ದೇಹದಲ್ಲಿ ಚಯಾಪಚಯವನ್ನು ಹೆಚ್ಚಿಸುತ್ತದೆ. ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸಮತೋಲನಗೊಳಿಸುತ್ತದೆ, ತೂಕ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ, ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ಅರಿವಿನ ಕಾರ್ಯವನ್ನು ಸುಧಾರಿಸುತ್ತದೆ.
ಬೆಳಗಿನ ಉಪಾಹಾರ ಸೇವಿಸದೇ ಇರುವುದರ ಅಪಾಯ
ಬೆಳಗಿನ ಉಪಾಹಾರವನ್ನು ತ್ಯಜಿಸುವುದರಿಂದ ಒತ್ತಡ, ಆಯಾಸ, ಬೊಜ್ಜು ಮತ್ತು ಮಧುಮೇಹದಂತಹ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಅಲ್ಲದೇ ಇದರಿಂದ ಇನ್ನೂ ಹಲವು ಸಮಸ್ಯೆಗಳು ಎದುರಾಗಬಹುದು. ಬೆಳಗಿನ ಉಪಾಹಾರವನ್ನು ತಪ್ಪಿಸುವುದು ಹಸಿವಿನ ಹಾರ್ಮೋನುಗಳನ್ನು ಗೊಂದಲಗೊಳಿಸುತ್ತದೆ. ಇದರಿಂದಾಗಿ ವ್ಯಕ್ತಿಯು ದಿನದಲ್ಲಿ ಅತಿಯಾಗಿ ತಿನ್ನುತ್ತಾನೆ. ಬೆಳಗಿನ ಉಪಾಹಾರ ಮಾಡಲು ಸಾಧ್ಯವಾಗಿಲ್ಲ ಎಂದರೆ ರಾತ್ರಿಯವರೆಗೆ ಅತಿಯಾದ ಆಯಾಸ ಕಾಡುತ್ತದೆ. ಬೆಳಗಿನ ಹೊತ್ತು ಉಪಾಹಾರ ಸೇವಿಸದೇ ಇರುವುದು ದೀರ್ಘಕಾಲದ ಆರೋಗ್ಯ ಸಮಸ್ಯೆಗಳ ಜೊತೆಗೆ ತೂಕ ಏರಿಕೆಗೂ ಕಾರಣವಾಗುತ್ತದೆ.
ಬೆಳಗಿನ ಉಪಾಹಾರ ಯಾವಾಗ ಸೇವಿಸಬೇಕು?
ತಜ್ಞರ ಪ್ರಕಾರ ನಾವು ಬೆಳಿಗ್ಗೆ ಎದ್ದ 1 ಗಂಟೆಯೊಳಗೆ ಬೆಳಗಿನ ಉಪಾಹಾರ ಸೇವಿಸಬೇಕು. ದೀರ್ಘಕಾಲದವರೆಗೆ ಹೊಟ್ಟೆ ತುಂಬಿದಂತಿರಲು ಪ್ರೊಟೀನ್ ಮತ್ತು ನಾರಿನಾಂಶ ಸಮೃದ್ಧ ಆಹಾರಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು.
ಬೆಳಗಿನ ಉಪಾಹಾರ ಸೇವಿಸಲು ಐಡಿಯಲ್ ಟೈಮ್
ಇತ್ತೀಚಿನ ಜೀವನಶೈಲಿಯಲ್ಲಿ ರಾತ್ರಿ ತಡವಾಗಿ ಮಲಗಿ, ಬೆಳಿಗ್ಗೆ ತಡವಾಗಿ ಎದ್ದೇಳುವವರ ಸಂಖ್ಯೆಯೇ ಅಧಿಕ. ಆ ಕಾರಣಕ್ಕೆ ಅವರ ಬೆಳಗಿನ ಉಪಾಹಾರದಿಂದ ರಾತ್ರಿ ಊಟದವರೆಗೆ ಎಲ್ಲವೂ ತಡವಾಗುತ್ತದೆ. ಆದರೆ ಬೆಳಗಿನ ಉಪಾಹಾರ ಸೇವಿಸಲು ಐಡಿಯಲ್ ಟೈಮ್ ಎಂದರೆ ಬೆಳಿಗ್ಗೆ 6 ಗಂಟೆಯಿಂದ 10 ಒಳಗೆ ಉಪಾಹಾರ ಸೇವಿಸಬೇಕು. ಇದರಿಂದ ಒತ್ತಡ, ಆಯಾಸ ಕಡಿಮೆಯಾಗುತ್ತದೆ. ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಉತ್ತಮ ಆರೋಗ್ಯಕ್ಕಾಗಿ ತಪ್ಪದೇ ಉಪಾಹಾರ ಸೇವಿಸಬೇಕು ಎನ್ನುವುದು ಎಷ್ಟು ನಿಜವೋ ಸರಿಯಾದ ಸಮಯಕ್ಕೆ ತಿನ್ನುವುದು ಕೂಡ ಬಹಳ ಮುಖ್ಯ, ಸಾಮಾನ್ಯವಾಗಿ ನಾವು ಬೆಳಿಗ್ಗೆ ಎದ್ದ ಗಂಟೆಯೊಳಗೆ ಉಪಾಹಾರ ಸೇವಿಸುವುದು ಸರಿಯಾದ ಕ್ರಮ. ಆದರೆ 10 ಗಂಟೆಯ ನಂತರ ಉಪಾಹಾರ ಸೇವಿಸುವುದು ಆರೋಗ್ಯ ದೃಷ್ಟಿಯಿಂದ ಖಂಡಿತ ಒಳ್ಳೆಯದಲ್ಲ.
ಇತ್ತೀಚಿನ ಅಧ್ಯಯನವೊಂದರ ಪ್ರಕಾರ ಬೆಳಿಗ್ಗೆ 10 ಗಂಟೆಗಿಂತಲೂ 8 ಗಂಟೆಯೊಳಗೆ ಬೆಳಗಿನ ಉಪಾಹಾರ ಸೇವಿಸುವುದು ಹಾಗೂ ರಾತ್ರಿ 8 ಗಂಟೆಯೊಳಗೆ ರಾತ್ರಿಯೂಟ ಸೇವಿಸುವುದು ಬಹಳ ಮುಖ್ಯ. ಇದರಿಂದ ಆರೋಗ್ಯ ಸುಧಾರಿಸುವುದರೊಂದಿಗೆ ತೂಕ ನಿಯಂತ್ರಣವೂ ಸಾಧ್ಯವಾಗುತ್ತದೆ.
ನಿಧಾನವಾಗಿ ತಿನ್ನಿ ಜಗಿದು ತಿನ್ನಿ
ಇನ್ನೊಂದು ಪ್ರಮುಖ ವಿಚಾರ ಎಂದರೆ ಇತ್ತೀಚಿನ ಬಿಡುವಿಲ್ಲದ ದಿನಚರಿಯಲ್ಲಿ ಜನರು ಗಡಿಬಿಡಿಯಲ್ಲಿ ಕಾರ್‌ನಲ್ಲಿ, ಟ್ರೈನ್‌ನಲ್ಲಿ, ಬಸ್‌ನಲ್ಲಿ, ಮೆಟ್ರೊ ನಿಲ್ದಾಣಗಳಲ್ಲಿ ಆಫೀಸ್ ಡೆಸ್ಕ್‌ನಲ್ಲಿ ಹೀಗೆ ತಿಂದರೆ ಸಾಕು ಕಾರಣಕ್ಕೆ ತಿನ್ನುತ್ತಾರೆ. ಆದರೆ ಇದು ಖಂಡಿತ ಒಳ್ಳೆಯ ಅಭ್ಯಾಸವಲ್ಲ, ಯಾವುದೇ ಕಾರಣಕ್ಕೂ ಬೆಳಗಿನ ಉಪಾಹಾರ ಸೇವಿಸುವಾಗ ಗಡಿಬಿಡಿ ಮಾಡದಿರಿ. ಊಟ, ತಿಂಡಿ ಮಾಡುವಾಗ ನಿಧಾನಕ್ಕ ಸಮಾಧಾನದಿಂದ ಕೂತು ಜಗಿದು ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯ.