ಕನ್ನಡ ರಾಜ್ಯೋತ್ಸವಕ್ಕೆ ಶಾಲೆಯಲ್ಲಿ ಭಾಷಣ ಮಾಡಲು ಹೇಳಿದ್ದಾರಾ; ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಇಲ್ಲಿದೆ ಸುಲಭ ಭಾಷಣ
ಕನ್ನಡ ಸುದ್ದಿ  /  ಜೀವನಶೈಲಿ  /  ಕನ್ನಡ ರಾಜ್ಯೋತ್ಸವಕ್ಕೆ ಶಾಲೆಯಲ್ಲಿ ಭಾಷಣ ಮಾಡಲು ಹೇಳಿದ್ದಾರಾ; ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಇಲ್ಲಿದೆ ಸುಲಭ ಭಾಷಣ

ಕನ್ನಡ ರಾಜ್ಯೋತ್ಸವಕ್ಕೆ ಶಾಲೆಯಲ್ಲಿ ಭಾಷಣ ಮಾಡಲು ಹೇಳಿದ್ದಾರಾ; ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಇಲ್ಲಿದೆ ಸುಲಭ ಭಾಷಣ

ನವೆಂಬರ್‌ 1ರಂದು ಕರ್ನಾಟಕ ರಾಜ್ಯದಾದ್ಯಂತ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತದೆ. ಈ ದಿನ ಶಾಲೆಗಳಲ್ಲಿ ಭಾಷಣ ಅಥವಾ ಪ್ರಬಂಧ ಸ್ಪರ್ಧೆ ಏರ್ಪಡಿಸುವುದು ಸಾಮಾನ್ಯ. ಈ ಬಾರಿಯ ಕನ್ನಡ ರಾಜ್ಯೋತ್ಸವಕ್ಕೆ ನಿಮಗೆ ಭಾಷಣ ಮಾಡಲು ಹೇಳಿದ್ದರೆ, ಹೈಸ್ಕೂಲ್‌ ವಿದ್ಯಾರ್ಥಿಗಳಿಗೆ ಭಾಷಣ ಇಲ್ಲಿದೆ. ಪ್ರಬಂಧಕ್ಕೂ ಈ ಮಾಹಿತಿ ಬಳಸಬಹುದು.

ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಇಲ್ಲಿದೆ ಕನ್ನಡ ರಾಜ್ಯೋತ್ಸವ ಭಾಷಣ
ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಇಲ್ಲಿದೆ ಕನ್ನಡ ರಾಜ್ಯೋತ್ಸವ ಭಾಷಣ

ಕನ್ನಡ, ಒಂದು ಭಾಷೆಯಷ್ಟೇ ಅಲ್ಲ ಅದು ಕನ್ನಡಿಗರ ಅಸ್ಮಿತೆ. 'ಭಾರತದಲ್ಲಿರುವ ಎಲ್ಲಾ ಭಾಷೆಗಳ ರಾಣಿ' ಎಂದೇ ಹೆಮ್ಮೆಯಿಂದ ಕರೆಸಿಕೊಳ್ಳುವ ಸುಂದರ ಭಾಷೆ ನಮ್ಮ ಕನ್ನಡ. ಮೈಸೂರು ರಾಜ್ಯ (ಅಂದರೆ ಈಗಿನ ಕರ್ನಾಟಕ) 1956ರ ನವೆಂಬರ್ 1ರಂದು ನಿರ್ಮಾಣವಾದುದರ ಸಂಕೇತವಾಗಿ ಪ್ರತಿವರ್ಷ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಾ ಬರಲಾಗುತ್ತದೆ. ದಕ್ಷಿಣ ಭಾರತದಲ್ಲಿ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ. ಅಂದರೆ ಕರ್ನಾಟಕ ಏಕೀಕರಣಗೊಂಡ ದಿನವೇ ಕನ್ನಡ ರಾಜ್ಯೋತ್ಸವ.

ಕನ್ನಡ ರಾಜ್ಯೋತ್ಸವದಂದು ಶಾಲೆಗಳಲ್ಲಿ ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಏರ್ಪಡಿಸುವುದು ಸಾಮಾನ್ಯ. ಈ ಬಾರಿಯ ಕನ್ನಡ ರಾಜ್ಯೋತ್ಸವಕ್ಕೆ ನಿಮಗೆ ಭಾಷಣ ಮಾಡಲು ಹೇಳಿದ್ದರೆ, ಪ್ರೈಮರಿ ಮತ್ತು ಹೈಸ್ಕೂಲ್‌ ಮಕ್ಕಳಿಗೆ ಆಗುವಂತೆ ಕನ್ನಡ ಭಾಷಣ ಇಲ್ಲಿದೆ ನೋಡಿ.

ಕನ್ನಡ ಎನೆ ಕುಣಿದಾಡುವುದೆನ್ನೆದೆ, ಕನ್ನಡ ಎನೆ ಕಿವಿ ನಿಮಿರುವುದು. ಕಾಮನ ಬಿಲ್ಲನು ಕಾಣುವ ಕವಿಯೊಳು, ತೆಕ್ಕನೆ ಮನ ಮೈ ಮರೆಯುವುದು...

ಮಾನ್ಯ ಪರೀಕ್ಷಕರೇ ಹಾಗೂ ನಿರೀಕ್ಷಕರೆ, ರಾಷ್ಟ್ರಕವಿ ಕುವೆಂಪು ಅವರು ಬರೆದ ಈ ಸಾಲುಗಳು ಎಷ್ಟು ಅರ್ಥಪೂರ್ಣ. ಕನ್ನಡ ಭಾಷೆ ಚಂದ, ಕನ್ನಡ ನಾಡು ಚಂದ, ಕನ್ನಡ ನುಡಿ ಚಂದ. ಕನ್ನಡ ಭಾಷೆಯೇ ಸೊಗಸು. ಭಾರತದ ಎಲ್ಲಾ ಭಾಷೆಗಳ ರಾಣಿ ಎಂದು ಕರೆಸಿಕೊಳ್ಳುವ ನಮ್ಮ ಹೆಮ್ಮೆಯ ಭಾಷೆ ಕನ್ನಡ. ಈ ಸುಂದರ ಕನ್ನಡ ಭಾಷೆ ಮಾತನಾಡುವ ಕನ್ನಡಾಂಬೆ ಭುವನೇಶ್ವರಿಯ ಮಕ್ಕಳಿರುವ ಪ್ರಾಂತ್ಯಗಳನ್ನು ಒಗ್ಗೂಡಿಸಿ ರಚಿಸಲಾದ ನಾಡ ನಮ್ಮ ಕರ್ನಾಟಕ. ಎಲ್ಲೆಡೆ ಪಸರಿಸಿದ್ದ ಕನ್ನಡಿಗರು ಒಂದು ರಾಜ್ಯದೊಳಗೆ ಒಗ್ಗೂಡಿದಾಗ ಉದಯಿಸಿದ್ದೇ ನಮ್ಮ ಚೆಲುವ ಕನ್ನಡನಾಡು. ಕರ್ನಾಟಕ ಏಕೀಕರಣಗೊಂಡು ಸಂಭ್ರಮಿಸುವ ದಿನದ ಆಚರಣೆಯೇ ಕನ್ನಡ ರಾಜ್ಯೋತ್ಸವ.

ನಾವೆಲ್ಲರೂ ಇಂದು 68ನೇ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದೇವೆ. ಪ್ರತಿ ವರ್ಷವೂ ನವೆಂಬರ್‌ 1ರಂದು ರಾಜ್ಯದ ಎಲ್ಲೆಡೆ ಜಾತಿ-ಧರ್ಮದ ಭೇದವಿಲ್ಲದೇ ಕನ್ನಡದ ಕಂಪನ್ನು ಪಸರಿಸಲಾಗುತ್ತದೆ. ಈಗ ಕರ್ನಾಟಕ ಎಂದು ನಾವೆಲ್ಲರೂ ಖುಷಿಯಿಂದ ಕರೆಯುವ ನಮ್ಮ ರಾಜ್ಯದ ಹೆಸರು ಮೊದಲು ಮೈಸೂರು ರಾಜ್ಯವಾಗಿತ್ತು. 1956ರ ನವೆಂಬರ್‌ 1ರಂದು ಮೈಸೂರು ರಾಜ್ಯ ನಿರ್ಮಾಣವಾಯಿತು. ಇದರ ನೆನಪಿಗಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ಮೈಸೂರು ಸಂಸ್ಥಾನ, ಮುಂಬೈ ಕರ್ನಾಟಕ, ಹೈದರಾಬಾದ್‌ ಕರ್ನಾಟಕ ಹಾಗೂ ಮದ್ರಾಸ್‌ ಕರ್ನಾಟಕ ಎಂದು ನಾಲ್ಕು ಭಾಗಗಳಾಗಿದ್ದ ಕನ್ನಡ ನಾಡು ಈ ದಿನ ರಾಜಕೀಯವಾಗಿ ಒಂದಾಯಿತು. ದಕ್ಷಿಣ ಭಾರತದಲ್ಲಿ ಕನ್ನಡ ಭಾಷೆ ಮಾತನಾಡುವ ಎಲ್ಲ ಪ್ರದೇಶಗಳನ್ನು ವಿಲೀನಗೊಲೀಸಿ ಒಂದು ರಾಜ್ಯವಾಗಿ ಘೋಷಣೆ ಮಾಡಿದ ಈ ದಿನವನ್ನು ಕನ್ನಡ ರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ.

ಕನ್ನಡದ ಕುಲಪುರೋಹಿತ ಎಂದು ಕರೆಸಿಕೊಳ್ಳುವ ಆಲೂರು ವೆಂಕಟರಾವ್‌ ಅವರು 1905ರಲ್ಲಿಯೇ ಕರ್ನಾಟಕ ಏಕೀಕರಣ ಚಳುವಳಿಗೆ ಮುನ್ನುಡಿ ಬರೆದರು. 1950ರಲ್ಲಿ, ಭಾರತವು ಗಣರಾಜ್ಯವಾದ ನಂತರ ಭಾಷೆಗಳ ಆಧಾರದ ಮೇಲೆ ಭಾರತದ ವಿವಿಧ ಪ್ರಾಂತ್ಯಗಳು ರಾಜ್ಯಗಳಾಗಿ ರೂಪುಗೊಂಡವು. ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿ ಮೈಸೂರು ರಾಜ್ಯವು ಉದಯವಾಯಿತು. ಕರ್ನಾಟಕ ರಾಜ್ಯದ ಮೊದಲ ಹೆಸರು ಮೈಸೂರು ಎಂದಾಗಿತ್ತು. 1973ರ ನವೆಂಬರ್‌ 1ರಂದು ಮೈಸೂರು ರಾಜ್ಯವು ಕರ್ನಾಟಕ ಎಂಬ ಹೆಸರು ಪಡೆಯಿತು.

ಕರ್ನಾಟಕ ಏಕೀಕರಣದ ಮನ್ನಣೆ ಹಲವರಿಗೆ ಸಲ್ಲುತ್ತದೆ. ದೇವರಾಜ ಅರಸ್‌, ಅನಕೃ, ಕೆ ಶಿವರಾಮ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌, ಎಎನ್‌ ಕೃಷ್ಣರಾವ್‌ ಮತ್ತು ಬಿಎಂ ಶ್ರೀಕಂಠಯ್ಯ ಕನ್ನಡ ನಾಡಿಗಾಗಿ ಶ್ರಮಿಸಿದ್ದಾರೆ.

ಅರಿಶಿನ ಕುಂಕುಮದ ಬಣ್ಣದ ‘ಹಳದಿ-ಕೆಂಪು’ ಬಣ್ಣದ ಬಾವುಟವನ್ನು ಈ ದಿನ ರಾಜ್ಯದೆಲ್ಲೆಡೆ ಹಾರಿಸಲಾಗುತ್ತದೆ. ಕುವೆಂಪು ಅವರು ರಚಿಸಿದ ನಾಡಗೀತೆ ಜಯಭಾರತ ಜನನಿಯ ತನುಜಾತೆ ಹಾಡಲಾಗುತ್ತದೆ. ತಾಯಿ ಭುವನೇಶ್ವರಿ ದೇವಿಗೆ ನಮಿಸಲಾಗುತ್ತದೆ. ಸರ್ಕಾರದಿಂದ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತದೆ. ವಿವಿಧ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.

ಈ ಎಲ್ಲಾ ಖುಷಿಯ ನಡುವೆ ಹಲವು ಆತಂಕಗಳು ಕೂಡಾ ಹೆಚ್ಚುತ್ತಿವೆ. ಕನ್ನಡ ಭಾಷೆ ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ಖೇದಕರ. ಕನ್ನಡಿಗರು ಹಿಂದಿ ಸೇರಿದಂತೆ ಇತರ ಭಾಷೆಯ ಹೇರಿಕೆ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರಮುಖ ವಲಯಗಳಲ್ಲಿ ಕನ್ನಡಿಗರಿಗೆ ಉದ್ಯೋಗ ದೊರಕುತ್ತಿಲ್ಲ ಎಂಬ ಕೂಗು ಹೆಚ್ಚಾಗುತ್ತಿದೆ.

ಕನ್ನಡ ನಮ್ಮ ಹೃದಯದ ಭಾಷೆ. ಕೇವಲ ಒಂದು ದಿನ ಕನ್ನಡ ಮಾತನಾಡುತ್ತೇನೆ ಎಂದರೆ, ಅದಕ್ಕೆ ಅರ್ಥವಿಲ್ಲ. ಕನ್ನಡವೇ ನಮ್ಮ ಉಸಿರಾಗಿರಬೇಕು. ಬೇರೆ ಭಾಷೆಯನ್ನು ಪ್ರೀತಿಸುವುದರೊಂದಿಗೆ ನಮ್ಮ ಭಾಷೆಯಲ್ಲೇ ಜೀವಿಸಬೇಕು.ಆದರೆ ಬೇರೆ ಭಾಷೆ ಕಲಿತು ಕನ್ನಡ ಮರೆಯುವುದು ತಪ್ಪು. ಕನ್ನಡ ರಾಜ್ಯೋತ್ಸವದ ಶುಭದಿನದಂದು ಕನ್ನಡ ನಾಡು ನುಡಿಯ ಉಳಿವಿಗಾಗಿ ಶ್ರಮಿಸುವ ಸಂಕಲ್ಪ ಮಾಡೋಣ.

Whats_app_banner