ತೂಕ ಇಳಿಕೆಗೆ ಪ್ರಯತ್ನಿಸುತ್ತಿರುವವರು ಮೊಟ್ಟೆ-ಪಾಲಕ್ ಸೊಪ್ಪಿನ ಈ ಸಲಾಡ್ ಸೇವಿಸಿ: ಒಂದು ತಿಂಗಳಲ್ಲೇ ಬದಲಾವಣೆ ಕಾಣುತ್ತೆ
ತೂಕ ಇಳಿಕೆಗೆ ಪ್ರಯತ್ನಿಸುವವರಿಗೆ ಸಲಾಡ್ ಉತ್ತಮ ಆಯ್ಕೆ. ಆದರೆ, ಸಲಾಡ್ ಅನ್ನು ಹೇಗೆ ಮಾಡುವುದು ಎಂಬುದು ಅನೇಕರಿಗೆ ತಿಳಿದಿಲ್ಲ. ತೂಕ ಇಳಿಕೆಗೆ ಪ್ರಯತ್ನಿಸುತ್ತಿರುವವರು ಮೊಟ್ಟೆ-ಪಾಲಕ್ ಸೊಪ್ಪಿನ ಸಲಾಡ್ ಅನ್ನು ತಿನ್ನಬಹುದು. ಒಂದು ತಿಂಗಳಲ್ಲೇ ಬದಲಾವಣೆ ಕಾಣುತ್ತದೆ. ಈ ರೆಸಿಪಿ ಮಾಡುವುದು ಹೇಗೆ ಎಂಬುದು ಇಲ್ಲಿದೆ.
ಮೊಟ್ಟೆ ಮತ್ತು ಪಾಲಕ್ ಸೊಪ್ಪು ಎರಡೂ ಪೌಷ್ಟಿಕ ಆಹಾರವಾಗಿದೆ. ಇದನ್ನು ಸೇವಿಸುವುದರಿಂದ ತೂಕವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಒಂದು ತಿಂಗಳೊಳಗೆ ನಿಮ್ಮ ತೂಕವನ್ನು ಸಾಕಷ್ಟು ಕಡಿಮೆ ಮಾಡುವ ಆರೋಗ್ಯಕರ ಸಲಾಡ್ ರೆಸಿಪಿ ಇದು. ಇದಕ್ಕಾಗಿ ಪಾಲಕ್ ಸೊಪ್ಪು ಮತ್ತು ಮೊಟ್ಟೆಯನ್ನು ಬಳಸಬೇಕು. ಇದು ಆರೋಗ್ಯಕ್ಕೂ ತುಂಬಾನೇ ಪ್ರಯೋಜನಕಾರಿ. ಈ ಸಲಾಡ್ ಅನ್ನು ಪ್ರತಿದಿನ ಬೆಳಗಿನ ಉಪಾಹಾರದಲ್ಲಿ ಅಥವಾ ಸಂಜೆಯ ಸಮಯದಲ್ಲಿ ಸೇವಿಸಿದರೆ, ಒಂದು ತಿಂಗಳೊಳಗೆ ನಿಮ್ಮ ತೂಕದಲ್ಲಿ ಬದಲಾವಣೆಯನ್ನು ನೀವು ಗಮನಿಸುವಿರಿ. ಇದನ್ನು ಪ್ರತಿದಿನ ಸೇವಿಸುವುದರಿಂದ ಕನಿಷ್ಟ ಎರಡರಿಂದ ಮೂರು ಕೆಜಿಗಳಷ್ಟು ತೂಕ ಕಡಿಮೆ ಮಾಡಿಕೊಳ್ಳಬಹುದು. ಮೊಟ್ಟೆ ಪಾಲಕ್ ಸೊಪ್ಪು ಸಲಾಡ್ ಮಾಡುವುದು ಹೇಗೆ ಎಂಬುದು ಇಲ್ಲಿದೆ.
ಮೊಟ್ಟೆ, ಪಾಲಕ್ ಸೊಪ್ಪು ಸಲಾಡ್ ರೆಸಿಪಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ಮೊಟ್ಟೆ- ಎರಡು, ಪಾಲಕ್ ಸೊಪ್ಪು- ಒಂದು ಕಪ್, ಮೆಣಸಿನಕಾಯಿ- 2, ಉಪ್ಪು- ರುಚಿಗೆ ತಕ್ಕಷ್ಟು, ನೀರು- ಬೇಕಾದಷ್ಟು, ಬೆಳ್ಳುಳ್ಳಿ ಎಸಳು- ನಾಲ್ಕು, ಅಡುಗೆ ಎಣ್ಣೆ- ಎರಡು ಚಮಚ, ಮೆಣಸಿನ ಪುಡಿ- ಚಿಟಿಕೆ, ಕಾಳುಮೆಣಸಿನ ಪುಡಿ- ಚಿಟಿಕೆ, ಕೊತ್ತಂಬರಿ ಪುಡಿ- 1 ಚಮಚ, ಆಲೂಗಡ್ಡೆ – ಒಂದು, ಕೊತ್ತಂಬರಿ ಸೊಪ್ಪು- ಸ್ವಲ್ಪ.
ರೆಸಿಪಿ ಮಾಡುವ ವಿಧಾನ: ಮೊದಲಿಗೆ ಮೊಟ್ಟೆ ಮತ್ತು ಆಲೂಗಡ್ಡೆಯನ್ನು ಬೇಯಿಸಿ ಇಟ್ಟುಕೊಳ್ಳಿ. ಸ್ಟೌವ್ ಮೇಲೆ ಕಡಾಯಿಯಿಟ್ಟು, ಆಲಿವ್ ಎಣ್ಣೆಯನ್ನು ಸೇರಿಸಿ. ಎಣ್ಣೆ ಬಿಸಿಯಾದ ನಂತರ ಕತ್ತರಿಸಿದ ಬೆಳ್ಳುಳ್ಳಿಯನ್ನು ಸೇರಿಸಿ ಹುರಿಯಿರಿ. ನಂತರ ಬೇಯಿಸಿದ ಆಲೂಗಡ್ಡೆಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಸೇರಿಸಿ. ಬಳಿಕ ಪಾಲಕ್ ಸೊಪ್ಪನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಕಾಳುಮೆಣಸಿನ ಪುಡಿ, ಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮೆಣಸಿನಕಾಯಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಬೇಯಿಸಿದ ಮೊಟ್ಟೆಗಳನ್ನು ತುಂಡುಗಳಾಗಿ ಕತ್ತರಿಸಿ ಅದಕ್ಕೆ ಸೇರಿಸಿ, ಸ್ಟೌವ್ ಆಫ್ ಮಾಡಿ. ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿದರೆ ಟೇಸ್ಟಿ ಮೊಟ್ಟೆ-ಪಾಲಕ್ ಸೊಪ್ಪಿನ ಸಲಾಡ್ ರೆಡಿ.
ಬೆಳಗ್ಗೆ ತಿಂಡಿಯ ವೇಳೆ ಇದನ್ನು ತಿಂದರೆ ಸಂಜೆಯವರೆಗೂ ಹಸಿವಾಗುವುದಿಲ್ಲ. ಹಾಗೆಯೇ ಸಂಜೆ ತಿಂದರೆ ರಾತ್ರಿ ಊಟ ಮಾಡುವ ಅವಶ್ಯಕತೆ ಇರುವುದಿಲ್ಲ. ಈ ಸಲಾಡ್ ಅನ್ನು ಪ್ರತಿದಿನ ತಿನ್ನಲು ಪ್ರಯತ್ನಿಸಿ. ಅಲ್ಲದೆ, ಈ ಸಲಾಡ್‌ನಲ್ಲಿ ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒಳಗೊಂಡಿದೆ. ಇದನ್ನು ಸೇವಿಸುವುದರಿಂದ ಪೌಷ್ಟಿಕಾಂಶದ ಕೊರತೆ ಉಂಟಾಗುವುದಿಲ್ಲ.
ಮೊಟ್ಟೆ ಮತ್ತು ಪಾಲಕ್ ಸೊಪ್ಪು ಎರಡೂ ಕೂಡ ಪೌಷ್ಟಿಕಾಂಶಯುಕ್ತವಾಗಿದೆ. ಇವೆರಡನ್ನು ಸೇರಿಸಿ ಸಲಾಡ್ ಮಾಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪಾಲಕ್ ಸೊಪ್ಪು ನಮ್ಮ ದೇಹಕ್ಕೆ ಬೇಕಾದ ಅಗತ್ಯವಾದ ಕಬ್ಬಿಣಾಂಶವನ್ನು ಹೊಂದಿರುತ್ತದೆ. ಇದು ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ. ಹಾಗೂ ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ. ಆಯುರ್ವೇದದ ಪ್ರಕಾರ, ಪಾಲಕ್ ವಾತ ಮತ್ತು ಪಿತ್ತ ದೋಷಗಳನ್ನು ಸಮತೋಲನಗೊಳಿಸಲು ಸಹ ಉಪಯುಕ್ತವಾಗಿದೆ.