ಮಗಳ ಅದ್ಧೂರಿ ಮದುವೆಗೆಂದು ಜಮೀನು ಮಾರದೆ, ಭೂಮಿಯನ್ನೇ ಅವಳಿಗೆ ಕೊಡಿ; ಮೊಮ್ಮಕ್ಕಳ ಬದುಕಿಗೂ ಆಸರೆಯಾದೀತು
ಮಗಳ ಅದ್ಧೂರಿ ಮದುವೆ ಮಾಡಲು ಲಕ್ಷಾಂತರ ರೂಪಾಯಿ ಖರ್ಚು ಮಾಡುವವರಿದ್ದಾರೆ. ಅದ್ಧೂರಿತನಕ್ಕಾಗಿ ಹಣ ಹೊಂದಿಸಲಾಗದೆ ಇರುವ ಜಮೀನನ್ನು ಅಲ್ಪಮೊತ್ತಕ್ಕೆ ಮಾರಿ, ಅದ್ಧೂರಿ ವಿವಾಹ ಮಾಡುತ್ತಾರೆ. ಆದರೆ, ಸರಳ ವಿವಾಹ ಮಾಡಿ ಜಮೀನನ್ನು ಮಗಳಿಕೆ ಕೊಟ್ಟರೆ, ಮೊಮ್ಮಕ್ಕಳಿಗೂ ಆ ಜಮೀನು ಆಸರೆಯಾಗುತ್ತದೆ.
ಒಬ್ಬರಿಗೆ ಸರಳತೆ ಇಷ್ಟವಾದರೆ, ಇನ್ನೊಬ್ಬರಿಗೆ ಅದ್ಧೂರಿತನ ಇಷ್ಟವಾಗುತ್ತದೆ. ಸಾಮಾಜಿಕ ಮಾಧ್ಯಮಗಳೇ ಸಮಾಜದ ಮೊದಲ ಮುಖ ಆಗಿರುವ ಈ ಕಾಲದಲ್ಲಿ, ಜನರ 'ಸ್ಟೇಟಸ್' ಎಂಬ ಒಣಪ್ರತಿಷ್ಠೆ ಹೊಸ 'ಸ್ಟೋರಿ' ಏನೂ ಅಲ್ಲ. ಆರ್ಥಿಕ ಸಾಮರ್ಥ್ಯ ಕಡಿಮೆ ಇದ್ದರೂ, ಸಾಮಾಜಿಕ ಪ್ರತಿಷ್ಠೆ ಮುಖ್ಯ ಎಂಬವರು ಒಂದಷ್ಟು ಮಂದಿ ನಮ್ಮ ನಡುವೆ ಇರುತ್ತಾರೆ. ಮನೆಯಲ್ಲಿ ಮದುವೆ-ಮುಂಜಿ ಬಂದರೆ ಕೇಳಬೇಕೇ. ಇರುವ ಎಲ್ಲಾ ದುಡ್ಡು ಖರ್ಚು ಮಾಡುವುದು ಮಾತ್ರವಲ್ಲದೆ ಮುಂದಿನ ತಲೆಮಾರಿಗಾಗುವಷ್ಟು ಸಾಲ ಮಾಡಿಕೊಂಡು ಕೈಸುಟ್ಟುಕೊಳ್ಳುವವರು ಒಂದಷ್ಟು ಮಂದಿ. ಕೆಲವೊಮ್ಮೆ, ಮಕ್ಕಳ ಆಸೆ ಎಂದು ಎನ್ನುವ ಹೆತ್ತವರು, ಮಕ್ಕಳನ್ನು ನೋಯಿಸುವುದು ಬೇಡವೆಂದು ಸಾಮರ್ಥ್ಯ ಮೀರಿ ಮದುವೆಗೆ ಹಣ ಖರ್ಚು ಮಾಡುತ್ತಾರೆ. ಇರುವ ದುಡ್ದು ಸಾಲದೆ, ಸಾಲದ ಮೊರೆ ಹೋಗುತ್ತಾರೆ.
ಅದ್ಧೂರಿ ಮದುವೆ ಮಾಡಲು ಅಲ್ಪ ಮೊತ್ತ ಸಾಲುವುದಿಲ್ಲ. ಲಕ್ಷಾಂತರ ರೂಪಾಯಿ ಖರ್ಚಿಗೆ ಬೇಕಾಗುತ್ತದೆ. ಉತ್ತಮ ಆದಾಯವಿದ್ದರೆ ಅದ್ಧೂರಿತನಕ್ಕೆ ತೊಂದರೆ ಇಲ್ಲ. ಆದರೆ, ಸಾಮಾನ್ಯ ವರ್ಗದವರಿಗೆ ಹಣ ಹೊಂದಿಸುವುದು ಕಷ್ಟವಾಗುತ್ತದೆ. ಆಗ ಹೊಲ ಗದ್ದೆ ಮಾರಿ ಹಣ ಹೊಂದಿಸುತ್ತಾರೆ. ಬಂದ ಹಣ ಅದ್ಧೂರಿತನದೊಂದಿಗೆ ಖಾಲಿಯಾಗುತ್ತದೆ. ಆದರೆ ಮುಂದೇನು?
ದಿನಕಳೆದಂತೆ ತುಂಡು ಭೂಮಿಗೂ ಬಂಗಾರದ ಬೆಲೆಯಾಗುತ್ತಿದೆ. ಜಮೀನು ಖರೀದಿ ಮಾಡುವುದು, ಮಾರಾಟ ಮಾಡಿದಷ್ಟು ಸುಲಭ ಅಲ್ಲವೇ ಅಲ್ಲ. ಅದೇ ಜಮೀನಿನಲ್ಲಿ ಬೆಳೆ ತೆಗೆದರೆ ಬಂಗಾರದ ಫಲ ಕೊಡುತ್ತದೆ. ವರ್ಷ ಕಳೆದರೆ ಆ ಜಮೀನಿನ ಬೆಲೆ ಎಷ್ಟೋ ಪಾಲು ಏರಿಕೆಯಾಗುತ್ತದೆ. ಹೀಗಾಗಿ ಜಮೀನನ್ನು ಅಲ್ಪ ಬೆಲೆಗೆ ಮಾರಾಟ ಮಾಡಿ ಮದುವೆ ಮಾಡಿಸುವ ಬದಲು, ಅದನ್ನೇ ಮಕ್ಕಳಿಗೆ ಕೊಟ್ಟರೆ ಎಷ್ಟೋ ಲಾಭವಿದೆ. ಸರಳ ಮದುವೆ ಮಾಡಿದರೆ, ಆಸ್ತಿ ಮಾರುವ ಸಂದರ್ಭ ಬರುವುದಿಲ್ಲ. ಅದೇ ಆಸ್ತಿಯನ್ನು ಉಳಿಸಿ ಮಕ್ಕಳಿಗೆ ಕೊಟ್ಟರೆ ಕೆಲವೇ ವರ್ಷಗಳಲ್ಲಿ ಬೆಲೆ ಹೆಚ್ಚುತ್ತದೆ.
ಈ ಕುರಿತು ವಾದಿರಾಜ್ ಸಾಮರಸ್ಯ ಹೆಸರಿನ ಫೇಸ್‌ಬುಕ್ ಬಳಕೆದಾರರೊಬ್ಬರು ಪೋಸ್ಟ್ ಹಂಚಿಕೊಂಡಿದ್ದಾರೆ. ಶಿವಶಕ್ತಿ ಅಕ್ಕಿ ಎಂಬರು ಬರೆದ ಪೋಸ್ಟ್ ಇದಾಗಿದೆ. ಮಗಳ ಮದುವೆಗೆ ಜಮೀನು ಮಾರಬೇಡಿ. ಅದರ ಬದಲಿಗೆ ಮಗಳಿಗೆ ಜಮೀನನ್ನೇ ಕೊಡಿ ಎಂದು ಅವರು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ಪತ್ರವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿರುವ ಬರಹ ಹೀಗಿದೆ.
ಮಗಳ ಮದುವೆಗೆ ಜಮೀನು ಮಾರಬೇಡಿ, ಜಮೀನನ್ನೇ ಕೊಡಿ!
ಮಧ್ಯಮವರ್ಗಕ್ಕೆ ಸೇರಿದ ಕೃಷಿ ಕುಟುಂಬದ ರವಿಚಂದ್ರ (ಹೆಸರು ಬದಲಿಸಲಾಗಿದೆ) ಅವರ ಮಗಳಿಗೆ ಮದುವೆ ನಿಶ್ಚಯವಾಯಿತು. ವರನಿಗೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸ. ಆತನಿಗೆ ವರದಕ್ಷಿಣೆ, ವರೋಪಚಾರ ಮಾಡಿ ಗ್ರಾಂಡ್ ಆಗಿ ಮದುವೆ ಮಾಡಬೇಕು ಎಂದು ರವಿಚಂದ್ರ ನಿರ್ಧಾರ ಮಾಡಿದರು.
ರವಿಚಂದ್ರ ಅವರ ಬಳಿ ಒಂದಷ್ಟು ಉಳಿತಾಯದ ಹಣವಿತ್ತು. ಆದರೆ ಅದು ಅದ್ದೂರಿ ಮದುವೆಗೆ ಸಾಲುವುದಿಲ್ಲ ಎಂದು 1 ಎಕರೆ ಜಮೀನನ್ನು ಮಗಳ ಮದುವೆಯ ಸಲುವಾಗಿ 10 ಲಕ್ಷ ರೂ.ಗೆ ಮಾರಾಟ ಮಾಡಿದರು. ಅಂದುಕೊಂಡಂತೆ ಧಾಂ ಧೂಂ ಅಂತ ಮದುವೆಯನ್ನು ಅದ್ಧೂರಿಯಾಗಿ ಮಾಡಿದರು. ಒಂದು ದಿನದ ಮದುವೆಗೆ ಸುಮಾರು 20 ಲಕ್ಷ ರೂ.ಗೂ. ಹೆಚ್ಚು ಹಣ ವ್ಯಯಿಸಿದರು. ಮದುವೆಯಾಗಿ ಐದು ವರ್ಷಗಳು ಕಳೆದಿವೆ. ಈಗ ರವಿಚಂದ್ರ ಅವರು ಮಾರಾಟ ಮಾಡಿದ ಜಮೀನಿನ ಬೆಲೆ ಎಕರೆಗೆ 45 ಲಕ್ಷ ರೂಪಾಯಿಗೆ ಏರಿಕೆಯಾಗಿದೆ. ಅದ್ದೂರಿ ಮದುವೆಗಳು ಹೇಗೆ ಸಂಪತ್ತು ಕರಗಿಸುತ್ತವೆ ಎನ್ನುವುದಕ್ಕೆ ಇದೊಂದು ನಿದರ್ಶನ.
ರವಿಚಂದ್ರ ಅವರು ಕಡಿಮೆ ಖರ್ಚಿನಲ್ಲಿ ಸರಳವಾಗಿ ಮದುವೆ ಮಾಡಿ ಅದೇ ಜಮೀನನ್ನು ಮಗಳಿಗೆ ಕೊಟ್ಟಿದ್ದರೂ ಆಗುತ್ತಿತ್ತು. ಆ ಜಮೀನು ಮಗಳ ಮುಂದಿನ ಜೀವನಕ್ಕೆ ಆಸರೆಯಾಗುತ್ತಿತ್ತು. ಇದು ಕೇವಲ ರವಿಚಂದ್ರ ಅವರ ಪರಿಸ್ಥಿತಿ ಮಾತ್ರ ಅಲ್ಲ. ನಮ್ಮ ದೇಶದ ಬಹುಪಾಲು ಮಂದಿ ಗ್ರಾಂಡ್ ಆಗಿ ಮದುವೆ ಮಾಡಬೇಕೆಂದು ಕಷ್ಟಪಟ್ಟು ಸಂಪಾದಿಸಿದ ಆಸ್ತಿಗಳನ್ನು ಹೀಗೆ ಕಳೆದುಕೊಳ್ಳುತ್ತಿದ್ದಾರೆ. ಸರಳತೆಯ ಸೂತ್ರ ಅಳವಡಿಸಿಕೊಂಡಾಗ ಅಂತಹ ಸಂದರ್ಭಗಳನ್ನು ತಪ್ಪಿಸಬಹುದು. ಅದ್ದೂರಿ ಕಲ್ಯಾಣ ಮಾಡುವ ಸಲುವಾಗಿ ಪರಿಶ್ರಮದಿಂದ ಸಂಪಾದಿಸಿದ ಜಮೀನು. ಆಸ್ತಿ ಮಾರಾಟ ಮಾಡಿಕೊಳ್ಳಬೇಡಿ.
ಈ ಪೋಸ್ಟ್‌ಗೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಮದುವೆ ಎಂಬುದು ವೈವಾಹಿಕ ಜೀವನದ ಒಂದು ಮೆಟ್ಟಿಲು. ಅದನ್ನ ಸಿರಿವಂತಿಕೆ, ಅಡಂಬರ ತೋರಿಸುವ ವೇದಿಕೆಯಗಿ ಪರಿವರ್ತಸಿದಾಗ ಈ ರೀತಿ ಸಂಪತ್ತು ನಾಶಕ್ಕೆ ದಾರಿ ಮಾಡುಕೊಡುತ್ತದೆ ಎಂದು ಬಳಕೆದಾರ ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಪ್ರತಿಕ್ರಿಯಿಸಿ, ಅದೇ ಸ್ಥಾನದಲ್ಲಿ ಈ ಹಿಂದೆ ಅಥವಾ ಇತ್ತೀಚೆಗೆ ಕಾನೂನಿನ ಅಸ್ತ್ರ ಬಳಸಿ ಪಾಲು ಕೇಳುವ ದುರಾಸೆ ಸಮಾಜದಲ್ಲಿ ಹೆಚ್ಚಾಗಿದೆ. ಇದೇ ಕಾರಣಕ್ಕೆ ಸರಳ ವಿವಾಹದ ಬಗ್ಗೆ ಸಮಾಜ(ವರದಕ್ಷಿಣೆ ರಹಿತ) ಯೋಚಿಸುವುದು ಒಳಿತು.