ಕನ್ನಡ ಸುದ್ದಿ  /  ಜೀವನಶೈಲಿ  /  ಸಣ್ಣಪುಟ್ಟ ವಿಚಾರಕ್ಕೂ ಗಂಡ ಹೆಂಡತಿ ಮಧ್ಯೆ ಜಗಳ ತಾರಕಕ್ಕೇರುತ್ತಾ? ಈ ಕಾರಣಗಳನ್ನು ಕಂಡುಕೊಂಡರೆ ಜೀವನ ಸುಖಮಯವಾಗಿರುತ್ತೆ

ಸಣ್ಣಪುಟ್ಟ ವಿಚಾರಕ್ಕೂ ಗಂಡ ಹೆಂಡತಿ ಮಧ್ಯೆ ಜಗಳ ತಾರಕಕ್ಕೇರುತ್ತಾ? ಈ ಕಾರಣಗಳನ್ನು ಕಂಡುಕೊಂಡರೆ ಜೀವನ ಸುಖಮಯವಾಗಿರುತ್ತೆ

ಪತಿ-ಪತ್ನಿ ಸಂಬಂಧ ಬಹಳ ಮಧುರವಾದದ್ದು. ಆದರೆ, ಇತ್ತೀಚೆಗೆ ಗಂಡ-ಹೆಂಡತಿ ನಡುವೆ ಬಾಂಧವ್ಯ ಕಡಿಮೆಯಾಗುತ್ತಿದೆ. ಮದುವೆಯಾದ ಹೊಸತರಲ್ಲಿ ಇದ್ದ ಪ್ರೀತಿ ನಂತರ ನಿಧಾನಕ್ಕೆ ಕಡಿಮೆಯಾಗುತ್ತದೆ. ಸಣ್ಣ-ಪುಟ್ಟ ವಿಚಾರಗಳಿಗೂ ಮನಸ್ತಾಪವುಂಟಾಗುತ್ತದೆ. ಇದಕ್ಕೆ ಕಾರಣವೇನು ಎಂದು ಅರಿತರೆ ಭವಿಷ್ಯದಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ.

ಸಣ್ಣಪುಟ್ಟ ವಿಚಾರಕ್ಕೂ ಗಂಡ ಹೆಂಡತಿ ಮಧ್ಯೆ ಜಗಳ ತಾರಕಕ್ಕೇರುತ್ತಾ? ಈ ಕಾರಣಗಳನ್ನು ಕಂಡುಕೊಂಡರೆ ಜೀವನ ಸುಖಮಯವಾಗಿರುತ್ತೆ
ಸಣ್ಣಪುಟ್ಟ ವಿಚಾರಕ್ಕೂ ಗಂಡ ಹೆಂಡತಿ ಮಧ್ಯೆ ಜಗಳ ತಾರಕಕ್ಕೇರುತ್ತಾ? ಈ ಕಾರಣಗಳನ್ನು ಕಂಡುಕೊಂಡರೆ ಜೀವನ ಸುಖಮಯವಾಗಿರುತ್ತೆ

ಗಂಡ-ಹೆಂಡತಿ ಸಂಬಂಧ ಅಂದರೆ ಜನುಮ ಜನುಮದ ಅನುಬಂಧ ಅನ್ನೋ ಮಾತಿದೆ. ಏಳೇಳು ಜನ್ಮಕ್ಕೂ ಅವರೇ ತನ್ನ ಗಂಡ, ಆಕೆಯೇ ತನ್ನ ಹೆಂಡತಿಯಾಗಿ ಬರಬೇಕು ಅನ್ನೋದು ಬಹುತೇಕರ ಮನದಾಳದ ಮಾತು. ಆದರೆ, ಇತ್ತೀಚೆಗೆ ಗಂಡ-ಹೆಂಡತಿ ಸಂಬಂಧದಲ್ಲಿ ಬಿರುಕು ಮೂಡುವುದು ಸಹಜವಾಗಿದೆ. ಸೆಲೆಬ್ರಿಟಿಗಳ ಸಂಬಂಧ ಮುರಿದು ಬೀಳುತ್ತಿರುವುದು ಸದ್ದು ಮಾಡುತ್ತದೆ. ಆದರೆ ಕೇವಲ ಸೆಲೆಬ್ರಿಟಿಗಳು ಮಾತ್ರವಲ್ಲ ಜನಸಾಮಾನ್ಯರಲ್ಲೂ ಇಂದು ವಿಚ್ಛೇದನದ ಸಹಜ ಪ್ರಕ್ರಿಯೆಯಾಗಿದೆ.

ಗಂಡ-ಹೆಂಡತಿಯ ಜಗಳ ಉಂಡು ಮಲಗುವ ತನಕ ಅನ್ನೋ ಮಾತಿದೆ. ಆದರೆ, ಉಂಡು ಮಲಗಿದ ಮೇಲೂ ಜಗಳ ಮುಂದುವರಿದರೆ ಅದು ವಿಚ್ಛೇದನದಲ್ಲಿ ಅಂತ್ಯವಾಗುತ್ತದೆ ಅನ್ನೋದು ಪ್ರಸ್ತುತ ಚಾಲ್ತಿಯಲ್ಲಿರುವ ಮಾತು. ಸಣ್ಣ-ಪುಟ್ಟ ವಿಚಾರಕ್ಕೆ ಮನಸ್ತಾಪವುಂಟಾಗಿ ಕೊನೆಗೆ ಡೈವೋರ್ಸ್‌ನಲ್ಲಿ ಅಂತ್ಯವಾಗುತ್ತಿರುವುದು ತುಂಬಾ ಕಳವಳ ಮೂಡಿಸಿದೆ. ಯಾವುದೋ ಒಂದು ವಿಚಾರ ಪರಸ್ಪರ ವಾಕ್ಸಮರಕ್ಕೆ ಕಾರಣವಾಗಬಹುದು. ಇದು ಇಬ್ಬರು ವ್ಯಕ್ತಿಗಳ ನಡುವಿನ ಅಂತರವನ್ನು ಹೆಚ್ಚಿಸಬಹುದು. ಅಂತಿಮವಾಗಿ ಇದು ತಪ್ಪು ಸಂವಹನ, ಹತಾಶೆ ಮತ್ತು ಅಸಮಾಧಾನಕ್ಕೆ ಕಾರಣವಾಗಿ, ಸಂಬಂಧದಲ್ಲಿ ಪ್ರತ್ಯೇಕತೆಗೆ ಕಾರಣವಾಗಬಹುದು.

ಗಂಡ ಕುಡಿದು ಬಂದು ಗಲಾಟೆ ಮಾಡಿ ಹೆಂಡತಿಗೆ ಹೊಡೆಯುವುದು ಮುಂತಾದವು ಮಾಡಿದರೂ, ಅಂತಹ ಹೆಂಡತಿಯರು ಕಷ್ಟವನ್ನು ಸಹಿಸಿಕೊಂಡು ಮಕ್ಕಳಿಗಾಗಿ ಹೊಟ್ಟೆ-ಬಟ್ಟೆ ಕಟ್ಟಿಕೊಂಡು ಜೀವನ ಸಾಗಿಸುತ್ತಿರುವುದನ್ನು ನೀವು ನೋಡಿರುತ್ತೀರಿ. ಆದರೆ, ಕೆಲವು ಗಂಡ-ಹೆಂಡಿರ ಮಧ್ಯೆ ಸಿಕ್ಕಾಪಟ್ಟೆ ಜಗಳವಾಗುತ್ತದೆ. ಪ್ರತಿದಿನ ಯಾವುದೋ ಕಾರಣಕ್ಕೆ ಜಗಳವಾಗುತ್ತದೆ. ಮುನಿಸು, ಕೋಪ, ಹಠ ಸಾಧಿಸುತ್ತಾರೆ. ಜಗಳವೇನೋ ಕಮ್ಮಿಯಾಯಿತು ಅಂದಾಗ ಮತ್ತೆ ಹೊಸ ವಿಚಾರಕ್ಕೆ ಜಗಳ ಶುರುವಾಗುತ್ತದೆ. ಸಣ್ಣ-ಸಣ್ಣ ವಿಚಾರಕ್ಕೆ ಶುರುವಾಗುವ ಜಗಳ ವಿಪರೀತ ಮಟ್ಟಕ್ಕೆ ಹೋಗುತ್ತದೆ. ಯಾವೆಲ್ಲಾ ವಿಚಾರಗಳಿಗೆ ಗಂಡ-ಹೆಂಡತಿ ಮಧ್ಯೆ ಮನಸ್ತಾಪ ಉಂಟಾಗುತ್ತದೆ ನೋಡಿ. 

ಟ್ರೆಂಡಿಂಗ್​ ಸುದ್ದಿ

1. ಅಗೌರವದ ಭಾವನೆ

ಸಂಬಂಧದಲ್ಲಿ, ಗೌರವ ಪ್ರಧಾನ ಪ್ರಾಮುಖ್ಯವನ್ನು ಹೊಂದಿದೆ. ಪತಿ ಅಥವಾ ಪತ್ನಿ ಹೇಳಿದಂತೆ ಕೇಳಬೇಕು, ವ್ಯಂಗ್ಯ ಮಾತನಾಡುವುದು, ಟೀಕಿಸುವುದು ಮುಂತಾದವು ಮಾಡಿದಾಗ ಅಗೌರವದ ಭಾವನೆ ಕಾಡುತ್ತದೆ. ಇಂಥ ಮಾತುಗಳೇ ಪ್ರಚೋದನೆಗೆ ಕಾರಣವಾಗುತ್ತದೆ. ಹೀಗಾಗಿ ಪತಿ ಅಥವಾ ಪತ್ನಿ ಸುಖಾ ಸುಮ್ಮನೆ ಟೀಕೆ ಅಥವಾ ಆಕ್ರಮಣಕಾರಿ ಮಾತನಾಡಿದಾಗ ಜಗಳ/ವಾಕ್ಸಮರ ಶುರುವಾಗುತ್ತದೆ.

2. ಕಾಳಜಿ ವಹಿಸುವುದಿರುವುದು

 ಸಂಬಂಧದಲ್ಲಿ ಇಬ್ಬರು ಪರಸ್ಪರ ಕಾಳಜಿಯನ್ನು ತೋರಿಸುವುದು ಮತ್ತು ಭಾವನೆಗಳನ್ನು ವ್ಯಕ್ತಪಡಿಸುವುದು ಬಹಳ ಮುಖ್ಯ. ಸಂಬಂಧದಲ್ಲಿ ಪತಿ ಅಥವಾ ಪತ್ನಿ ಕಾಳಜಿ ವಹಿಸುತ್ತಿಲ್ಲ ಎಂದು ಭಾವಿಸಿದಾಗ ಅದು ಪ್ರಚೋದಿಸಲ್ಪಡುತ್ತದೆ. ಇದು ಸಂಬಂಧದಲ್ಲಿ ಬಿರುಕು ಉಂಟಾಗಬಹುದು.

3. ಭಯದ ಭಾವನೆ

 ಭಾವನೆಗಳಲ್ಲಿನ ಬದಲಾವಣೆಗಳು ಅಥವಾ ಹಿಂದೆ ನಡೆದಿರುವ ಘಟನೆಗಳ ಆಘಾತವು ಸಂಬಂಧದಲ್ಲಿ ಪ್ರಚೋದಕವಾಗಬಹುದು. ಸಂಗಾತಿಯ ಮನಸ್ಥಿತಿ ಬದಲಾವಣೆಗಳನ್ನು ಗಮನಿಸುವುದರ ಬಗ್ಗೆ ತುಂಬಾ ಸಂವೇದನಾಶೀಲರಾಗಿರುವಾಗ ಪ್ರಭಾವಿತರಾಗಬಹುದು. ಹಳೆಯ ಭಾವನೆಗಳು ಮರುಕಳಿಸಬಹುದು, ಇದರಿಂದ ಬಿರುಕು ಮೂಡಲು ಪ್ರಾರಂಭವಾಗಬಹುದು.

4. ದುಡುಕಿನ ಪ್ರತಿಕ್ರಿಯೆ

 ಕೆಲವೊಂದು ವಿಚಾರಗಳ ಬಗ್ಗೆ ಸಂವಹನ ಮಾಡುವಾಗ ಯಾರಾದರೊಬ್ಬರು ದುಡುಕಿನ ಪ್ರತಿಕ್ರಿಯೆ ನೀಡಿದಾಗ ಜಗಳ ಪ್ರಾರಂಭವಾಗಲು ಕಾರಣವಾಗುತ್ತದೆ. ಉದಾಹರಣೆಗೆ ಪತ್ನಿಯು ಏನೋ ಕೆಲಸ ಮಾಡುತ್ತಿದ್ದಾಗ ಪತಿ ಏನಾದರೂ ಪ್ರಶ್ನಿಸಿದ್ರೆ, ಪತ್ನಿ ಸಿಟ್ಟಲ್ಲಿ (ದುಡುಕಲ್ಲಿ) ಪ್ರತಿಕ್ರಿಯೆ ನೀಡುತ್ತಾರೆ. ಇದು ಪರಸ್ಪರ ವಾದವುಂಟಾಗಿ ಜಗಳ, ಹತಾಶೆಗೆ ಕಾರಣವಾಗಬಹುದು.

ಗಂಡ-ಹೆಂಡತಿ ಅಂತಲ್ಲ ಪ್ರತಿಯೊಂದು ಸಂಬಂಧದಲ್ಲೂ ಪರಸ್ಪರ ಪ್ರಚೋದಿಸಲ್ಪಡುವುದು ಸಾಮಾನ್ಯ. ಅಂದಿನ ಜಗಳ ಆಗಲೇ ಕೊನೆಯಾಗಿ ಅದನ್ನು ಮುಂದುವರೆಸದೆ ಇರುವುದೇ ಉತ್ತಮ. ಯಾವುದಕ್ಕೆ ಜಗಳ ಶುರುವಾಯ್ತು ಅಂತಾ ನಾವು ಕಾರಣ ಹುಡುಕುತ್ತಾ ಹೋದರೆ ಅದು ತುಂಬಾ ಸಣ್ಣ ವಿಚಾರವಾಗಿರುತ್ತದೆ. ಪತಿ-ಪತ್ನಿ ಸಂಬಂಧದಲ್ಲಿ ಪ್ರತಿನಿತ್ಯ, ಪ್ರತಿ ಘಳಿಗೆ ಜಗಳವಾಗುವುದು ಸಾಮಾನ್ಯ. ಇದು ಹೆಚ್ಚು ದೊಡ್ಡದಾಗದಂತೆ ಇಬ್ಬರೂ ಪರಸ್ಪರ ಅರಿತು ಬಾಳ್ವೆ ನಡೆಸಿದರೆ ಜೀವನ ತುಂಬಾ ಚೆನ್ನಾಗಿರುತ್ತದೆ.