ನುಡಿಯ ನೇತಾರ ನಾಲಿಗೆ: ಉಪ್ಪು, ಹುಳಿ, ಸಿಹಿ ತಿಳಿಯುವ ಜಿಹ್ವೆಗೆ ಖಾರವೇಕೆ ಗೊತ್ತಾಗಲ್ಲ? ನಾಲಿಗೆ ಬಗ್ಗೆ ನಿಮಗೆಷ್ಟು ಗೊತ್ತು? -ಜ್ಞಾನ ವಿಜ್ಞಾನ
ಎಚ್.ಎ.ಪುರುಷೋತ್ತಮ ರಾವ್: ನಾಲಿಗೆಯ ನಿರ್ದಿಷ್ಟ ಜಾಗದಲ್ಲಿ ನಿರ್ದಿಷ್ಟ ರುಚಿಯು ಗ್ರಹಿಕೆಗೆ ಬರುತ್ತದೆ. ಉಪ್ಪು, ಸಿಹಿ, ಹುಳಿ, ಕಹಿ ಗ್ರಹಿಸುವ ನಾಲಿಗೆಗೆ ಒಂದು ರುಚಿಯನ್ನು ಗ್ರಹಿಸುವ ಶಕ್ತಿಯೇ ಇಲ್ಲ. ಆದರೆ ಅದನ್ನು ನಾವೆಲ್ಲರೂ ರುಚಿಯೆಂದೇ ನಂಬಿದ್ದೇವೆ, ನೀವೂ ಅದರ ಬಗ್ಗೆ ಪ್ರತಿದಿನ ಮಾತಾಡ್ತೀರಿ.
ಆಲೋಚನೆ ಮತ್ತು ಮಾತು ಮಾನವನನ್ನು ಇತರ ಪ್ರಾಣಿಗಳಿಂದ ಪ್ರತ್ಯೇಕಿಸಿದೆ. ಇವುಗಳಿಂದಲೇ ಮಾನವ ಬುದ್ದಿವಂತ ಪ್ರಾಣಿ ಎನಿಸಿಕೊಂಡಿದ್ದಾನೆ. ಮಾತು ಸಂಪರ್ಕ ಸಾಧನವಾಗಿದ್ದು, ನಾಲಿಗೆ ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಷ್ಟೇ ಅಲ್ಲ, ಆಹಾರದ ಸಾಮಾನ್ಯ ಸ್ವರೂಪ, ರುಚಿಯ ಆಸ್ವಾದನೆಗಳಿಗೂ ನಾಲಿಗೆ ಬಹುಮುಖ್ಯ, ಆವಶ್ಯಕ ಅಂಗವಾಗಿದೆ. 'ಮಾತು ಬಲ್ಲಾತಂಗೆ ಏತವದು ಸುರಿದಂತೆ, ಮಾತಾಡಲರಿಯದಾತಂಗೆ ಬರಿ ಏತ ನೇತಾಡಿದಂತೆ ಸರ್ವಜ್ಞ'. 'ಹೊತ್ತಿಗೊದಗದ ಮಾತು ಹತ್ತು ಸಾಸಿರ ವ್ಯರ್ಥ, ಕತ್ತೆ ಕೂಗಿದರೆ ಫಲವುಂಟೆ, ಬರಿ ಮಾತು ಕತ್ತೆಗೂ ಕಷ್ಟ ಸರ್ವಜ್ಞ' ಎಂಬ ವಚನಗಳು ನಾಗರಿಕ ಬದುಕಿನಲ್ಲಿ ಮಾತಿಗಿರುವ ಪ್ರದಾನ ಪಾತ್ರವನ್ನು ಎತ್ತಿ ತೋರಿಸುತ್ತದೆ. ನಾಲಿಗೆ ಒಳ್ಳೆಯ ಮಾತು, ಕೆಟ್ಟಮಾತು ಎರಡನ್ನೂ ಹೊರಗೆಡವಬಲ್ಲದು.ಆದರೆ ಅವು ಬುದ್ದಿ ವಿವೇಚನೆಗೆ ಬಿಟ್ಟಿದ್ದು
ನಾಲಿಗೆ ಬಾಯಿಯಲ್ಲಿರುವ ಒಂದು ಚಾಲಕ ಶಕ್ತಿ. ಬಾಯಿಯ ತಳಕ್ಕೆ ಅಂಟಿಕೊಂಡಿರುವದರಿಂದಲೇ ಎಷ್ಟೇ ಶ್ರಮಪಟ್ಟರೂ ಅದನ್ನು ಬಾಯಿಯಿಂದ ಸಂಪೂರ್ಣವಾಗಿ ಹೊರಚಾಚಲು ಸಾಧ್ಯವಾಗುವುದಿಲ್ಲ. ಚಾಚಿದಾಗ ಚೂಪಾಗುವ ಇದು ಒಳ ತೆಗೆದುಕೊಂಡಾಗ ಮೊಂಡಾಗುತ್ತದೆ. ಎಳೆಗೆಂಪು ಮಡಿಕೆಯ ಅಂಗುಳದ ಹಿಂದೆ ನೇತು ಬಿದ್ದಿರುವ ಭಾಗವೇ ಕಿರುನಾಲಿಗೆ. ನಾಲಿಗೆ ಯಾವ ಕಡೆಗಾದರೂ ಹೊರಳಬಲ್ಲದು. ಹಲ್ಲುಗಳಿಗೆ ಅಂಟಿದ ಜಿಗುಟು ಪದಾರ್ಥಗಳನ್ನು ತೆಗೆಯಲೂ ಸಹಕರಿಸುತ್ತದೆ.
ವಿವಿಧ ಪ್ರಾಣಿಗಳಲ್ಲಿ ನಾಲಿಗೆ ಹೇಗಿರುತ್ತೆ? ಏನು ಕೆಲಸ ಮಾಡುತ್ತೆ?
ಎಲ್ಲಾ ಕಶೇರುಕಗಳಲ್ಲಿಯೂ ನಾಲಿಗೆಯಿದೆ. ವೈವಿದ್ಯತೆಯೂ ಸಾಕಷ್ಟಿದೆ. ತಿಮಿಂಗಲದ ನಾಲಿಗೆ ಚಿಕ್ಕದಾಗಿದ್ದು ಚಲಿಸಲು ಸಾಧ್ಯವಿಲ್ಲ. ಬೆಕ್ಕಿನ ಜಾತಿಗೆ ಸೇರುವ ಚಿರತೆಯಂಥ ಪ್ರಾಣಿಗಳ ನಾಲಿಗೆಗಳಲ್ಲಿ ಬಿರುಗೂದಲುಗಳಿದ್ದು ಮೂಳೆಯಿಂದ ಮಾಂಸವನ್ನು ಒರಟಾಗಿ ಉಜ್ಜಿ ಎಳೆಯಬಲ್ಲ ಶಕ್ತಿ ಹೊಂದಿದೆ. ಕೆಲವು ಮೀನುಗಳ ನಾಲಿಗೆಯ ಮೇಲೆ ಹಲ್ಲು ಬೆಳೆದಿರುತ್ತದೆ. ಕಪ್ಪೆಯ ನಾಲಿಗೆ ಅಂಟುಅಂಟಾಗಿದ್ದು ಮುಂಬಾಗದಲ್ಲಿ ಬಾಯಿಯ ಅಂಗಳಕ್ಕೆ ಅಂಟಿಕೊಂಡಿರುತ್ತದೆ. ಅಂಟುಅಂಟಾಗಿರುವ ನಾಲಿಗೆಯನ್ನು ಕಪ್ಪೆಯು ಉದ್ದಕ್ಕೆ ಚಾಚಬಲ್ಲುದು. ತನ್ನ ಆಹಾರವಾದ ಕೀಟಗಳನ್ನುಹಿಡಿಯಲು ಕಪ್ಪಗೆ ನಾಲಿಗೆಯೇ ಮುಖ್ಯ ಸಾಧನವಾಗಿದೆ.
ಹಾವುಗಳ ನಾಲಿಗೆ ತುದಿಯಲ್ಲಿ ಎರಡು ಸೀಳು ಕಂಡುಬರುತ್ತದೆ. ಹಾವುಗಳಿಗೆ ವಾಸನೆ ಗ್ರಹಿಸಲೂ ನಾಲಿಗೆಯು ನೆರವಾಗುತ್ತದೆ. ಚಿಟ್ಟೆಗಳ ನಾಲಿಗೆ ಉದ್ದವಾಗಿರುತ್ತದೆ. ಬಳಕೆಯಿಲ್ಲದಾಗ ಸುರುಳಿ ಸುತ್ತಿಕೊಂಡು ಒಳ ಸೇರುತ್ತದೆ. ಹೀಗೆ ನಾಲಿಗೆಯು ಹೊಂದಾಣಿಕೆಗೆ ಅನುಗುಣವಾಗಿ ವಿವಿಧ ಪ್ರಾಣಿಗಳಲ್ಲಿ ಹಲವು ರೀತಿಯ ಮಾರ್ಪಾಟುಗಳನ್ನು ಪಡೆದಿದೆ.
ನಾಲಿಗೆಯ ಉಪಯೋಗಗಳೇನು? ನಾಲಿಗೆ ಹೇಗೆ ಕೆಲಸ ಮಾಡುತ್ತೆ?
ಬಾಯಿಯಲ್ಲಿ ದಿನವೊಂದಕ್ಕೆ ಕನಿಷ್ಠ ಒಂದೂವರೆ ಲೀಟರ್‌ನಷ್ಟು ಜೊಲ್ಲು ರಸ ಉತ್ಪತ್ತಿಯಾಗಲಿದೆ. ಆಹಾರವು ಬಾಯಿಗೆ ಬಂದ ತಕ್ಷಣ ಹಲ್ಲುಗಳು ಅಗಿಯುವ ಕೆಲಸ ಶುರು ಮಾಡುವುದು ಎಲ್ಲರಿಗೂ ಗೊತ್ತು. ಹೀಗೆ ಅಗಿಯುವಾಗ ಆಹಾರದ ತುಣುಕುಗಳನ್ನು ಜೊಲ್ಲು ರಸದಲ್ಲಿ ನೆನೆಸಿ ಹಲ್ಲಿನಡಿಗೆ ನೂಕುವ ಕೆಲಸವನ್ನು ನಾಲಿಗೆ ಮಾಡುತ್ತದೆ. ಧ್ವನಿಗೆ ಮಾತಿನ ಸ್ಪಷ್ಟರೂಪ ನೀಡಲೂ ನಾಲಿಗೆಯ ಚಲನೆ ಅತ್ಯಗತ್ಯವಾಗಿದೆ.
ನಾಲಿಗೆಯು ನಸುಕೆಂಪು ಪೊರೆಯಿಂದ ಆವೃತವಾಗಿದೆ. ಹಿಂಬದಿಯಲ್ಲಿ ಸ್ವಲ್ಪ ಮುಳ್ಳುಮುಳ್ಳಾಗಿದೆ. ರುಚಿ ನೋಡುವುದು ನಾಲಿಗೆಯ ಪ್ರಮುಖ ಕೆಲಸಗಳಲ್ಲೊಂದು. ಇದಕ್ಕಾಗಿ ನಾಲಿಗೆಯ ಮೇಲ್ಪದರದಲ್ಲಿ ರುಚಿ ಮೊಗ್ಗುಗಳಿವೆ. ಇವು ನರ ಸೂಕ್ಷಾಂಗಗಳ ಮೂಲಕ ರುಚಿ ವ್ಯತ್ಯಾಸಗಳನ್ನು ಗ್ರಹಿಸುತ್ತವೆ. ನಾಲಿಗೆಯು ನಾಲ್ಕು ಬಗೆಯ ರುಚಿಗಳನ್ನು ಮಾತ್ರ ಗ್ರಹಿಸಬಲ್ಲದು. ಅವೆಂದರೆ ಸಿಹಿ, ಉಪ್ಪು, ಹುಳಿ ಹಾಗೂ ಕಹಿ. ಈ ರುಚಿಗಳನ್ನು ತಿಳಿಯಲು ನಾಲಿಗೆಯಲ್ಲಿ ಸ್ಪಷ್ಟ ಜಾಗಗಳಿವೆ.
ನಾಲಿಗೆಯ ಮುಂದುತಿಯಲ್ಲಿ ಸಿಹಿ, ಮುಂಭಾಗದ ಎರಡೂ ಪಾರ್ಶ್ವಗಳಲ್ಲಿ ಉಪ್ಪು, ಹಿಂಭಾಗದ ಪಾರ್ಶ್ವಗಳಲ್ಲಿ ಹುಳಿ ಹಾಗೂ ಅರ್ಧಕ್ಕಿಂತ ಹಿಂಭಾಗದ ನಾಲಿಗೆಯಲ್ಲಿ ಕಹಿಯನ್ನು ಗ್ರಹಿಸುವ ವಿಶೇಷ ರುಚಿಮೊಗ್ಗುಗಳಿವೆ. ಇವು ನರದ ಎಳೆಗಳ ಮೂಲಕ ಮಿದುಳಿನೊಂದಿಗೆ ನೇರ ಸಂಪರ್ಕ ಹೊಂದಿದ್ದು ರುಚಿ ಗ್ರಹಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.
ಖಾರ ಒಂದು ರುಚಿಯೇ? ನಾಲಿಗೆ ಅದನ್ನು ಗ್ರಹಿಸುವುದೇ?
ರುಚಿ ಗ್ರಹಿಕೆ ವ್ಯವಸ್ಥೆಯ ವೈಶಿಷ್ಟ್ಯವೆಂದರೆ ಒಂದು ರುಚಿಯ ಸೂಕ್ಷ್ಮಾಂಗಗಳು ಮತ್ತೊಂದರ ರುಚಿಯನ್ನು ಗ್ರಹಿಸುವುದಿಲ್ಲ. ಉದಾಹರಣೆಗೆ ಕಲ್ಲುಸಕ್ಕರೆಯನ್ನು ನಾಲಿಗೆಯ ಹಿಂಬಾಗದಲ್ಲಿ ಇಟ್ಟುಕೊಂಡರೆ ತಕ್ಷಣವೇ ಅದರ ರುಚಿ ತಿಳಿಯುವುದಿಲ್ಲ. ಅದು ಸ್ವಲ್ಪ ಕರಗಿ ಸಂಬಂಧಿಸಿದ ಮುಂಭಾಗದ ರುಚಿ ಮೊಗ್ಗುಗಳಿಗೆ ತಲುಪಿದಾಗಲೇ ಆ ರುಚಿಯ ಸಂವೇದನೆ ಅರ್ಥವಾಗುತ್ತದೆ. ಆದರೆ ಖಾರವು ರುಚಿಯಲ್ಲ .ಅದು ಕೇವಲ ನಾಲಿಗೆಯ ಎಲ್ಲಾ ಭಾಗದಲ್ಲೂ ಉರಿಯನ್ನು ಉಂಟು ಮಾಡುತ್ತದೆಯಷ್ಟೇ.
ನಾಲಿಗೆಯು ಆರೋಗ್ಯವನ್ನು ಹೇಗೆ ಸೂಚಿಸುತ್ತದೆ?
ಸಾಮಾನ್ಯವಾಗಿ ಆರೋಗ್ಯವಂತನ ನಾಲಿಗೆ ತೇವವಾಗಿ ಚೊಕ್ಕಟವಾಗಿರುತ್ತದೆ. ಜ್ವರ ಬಂದಾಗ ನಾಲಿಗೆ ಒಣಗುತ್ತದೆ. ಅದರ ಮೇಲೆ ಬಿಳಿಯ ಲೇಪನ ಕಂಡು ಬರುತ್ತದೆ. ಜೀರ್ಣಶಕ್ತಿಯಲ್ಲಿ ವ್ಯತ್ಯಾಸವಾದಾಗ ಹಳದಿ ಬಣ್ಣದ ಲೇಪನವಿರುತ್ತದೆ. ಕೆಲ ಕಾಯಿಲೆಗಳಿದ್ದಲ್ಲಿ ನಾಲಿಗೆ ಹೆಚ್ಚು ಕೆಂಪಾಗಿ ಕಂಡುಬರುವುದುಂಟು. ನೆಗಡಿಯಿದ್ದಾಗ ಆಹಾರ ರುಚಿಸುವುದೇ ಇಲ್ಲ. ಇದಕ್ಕೆ ನಾಲಿಗೆ ಮಾತ್ರವಲ್ಲದೆ ಮೂಗಿನಲ್ಲಿನ ವಾಸನೆಯನ್ನು ಗ್ರಹಿಸುವ ಸೂಕ್ಷ್ಮಾಂಗಗಳ ಕಾರ್ಯ ದೋಷವೂ ಕಾರಣವಾಗುತ್ತದೆ. ಹೀಗೆ ನಾಲಿಗೆ ಬಹು ಉಪಯೋಗಿ ಅಂಗವೆನಿಸಿಕೊಂಡಿದೆ.
ಎಚ್‌ಎ ಪುರುಷೋತ್ತಮ ರಾವ್ ಪರಿಚಯ
ಅರಣ್ಯ ಇಲಾಖೆಯಲ್ಲಿ ಆಡಳಿತ ವಿಭಾಗದಲ್ಲಿ ಹಲವು ದಶಕಗಳ ಕಾಲ ಸೇವೆ ಸಲ್ಲಿಸಿದ ಕೋಲಾರದ ಎಚ್.ಎ.ಪುರುಷೋತ್ತಮ ರಾವ್ ವಿಜ್ಞಾನ ಬರಹಗಾರರಾಗಿ ಪ್ರಸಿದ್ಧರು. ಕಿವುಡನ ಮಾಡಯ್ಯ ತಂದೆ (ವಿಜ್ಞಾನ ವಿದ್ಯಮಾನಗಳು), ಭೂರಮೆಗೆ ಸ್ಪೆಥೋಸ್ಕೋಪ್ (ವಿಜ್ಞಾನ ಲೇಖನಗಳು), ಕಾಡು ಪ್ರತಿಭೆ ಮಾರಪ್ಪ (ಅರಣ್ಯಾಧಿಕಾರಿಯ ಬದುಕು-ಸಾಧನೆ), ಗಾಳಿಬೇರುಗಳು (ವಿಜ್ಞಾನ ಮತ್ತು ಪರಿಸರ ಲೇಖನಗಳು), ಅರಣ್ಯ ತಜ್ಞ ಅಜ್ಜಂಪುರ ಕೃಷ್ಣಸ್ವಾಮಿ (ವ್ಯಕ್ತಿ ಚಿತ್ರ) ಇವರ ಪ್ರಕಟಿತ ಕೃತಿಗಳು. ಕೋಲಾರ ಪತ್ರಿಕೆ, ಪ್ರಜಾವಾಣಿ ಸೇರಿದಂತೆ ಹಲವು ದಿನಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಸಂಪರ್ಕ ಸಂಖ್ಯೆ: 99723 39974