ShadowVault: ಆನ್‌ಲೈನ್ ಬಳಕೆದಾರರೇ ಎಚ್ಚರ, ಬಂದಿದೆ ಹೊಸ ಶಾಡೋವಾಲ್ಟ್ ಮಾಲ್‌ವೇರ್, ಆನ್‌ಲೈನ್ ಡೇಟಾ ಹಣ ಎಲ್ಲವನ್ನೂ ಗುಳುಂ ಮಾಡೋ ರಾಕ್ಷಸ
Malware steals passwords Money: ಭಾರತದಲ್ಲಿ ಆನ್‌ಲೈನ್ ವಂಚನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂತಹ ಆತಂಕದ ಸಮಯದಲ್ಲಿಯೇ ಶಾಡೋವಾಲ್ಟ್ (ShadowVault) ಹೆಸರಿನ ಮಾಲ್‌ವೇರ್ ಸಾಕಷ್ಟು ಆತಂಕ ಹುಟ್ಟಿಸಿದೆ. ಇದು ನಿಮ್ಮ ಪಾಸ್‌ವಾರ್ಡ್ ಮತ್ತು ಇತರೆ ಸೂಕ್ಷ್ಮ ಮಾಹಿತಿ ಕದಿಯುವುದು ಮಾತ್ರವಲ್ಲದೆ ನಿಮ್ಮ ಹಣವನ್ನೂ ಗುಳುಂ ಮಾಡೋ ಕುಖ್ಯಾತಿಯನ್ನು ಹೊಂದಿದೆ.
ದೇಶದಲ್ಲಿ ಆನ್‌ಲೈನ್ ವಂಚನೆ ಉಲ್ಬಣಗೊಂಡಿದೆ. ಸೈಬರ್ ಕ್ರೈಮ್, ಮೊಬೈಲ್ ಮೂಲಕ ಮೋಸ ಮಾಡೋ ವಂಚಕರು, ಬ್ಯಾಂಕ್ ಖಾತೆಗೆ ಕನ್ನ ಹಾಕೋ ಆನ್‌ಲೈನ್ ವಂಚಕರು ಹೆಚ್ಚಾಗಿದ್ದಾರೆ. ಇತ್ತೀಚಿಗೆ ಆನ್‌ಲೈನ್‌ನಲ್ಲಿ ಸಿಹಿತಿಂಡಿ ಆರ್ಡರ್ ಮಾಡಲು ಹೋದ ವ್ಯಕ್ತಿಯೊಬ್ಬರು 2.65 ಲಕ್ಷ ರೂಪಾಯಿ ಕಳೆದುಕೊಂಡಿದ್ದರು. ಕಳೆದ ವರ್ಷ ನಟಿ ಶುಭಾಂಗಿ ಅತ್ರೆ ಕೂಡ ಇದೇ ರೀತಿಯ ವಂಚನೆಗೆ ಬಲಿಯಾಗಿ ರೂ. 2.24 ಲಕ್ಷ ಕಳೆದುಕೊಂಡಿದ್ದರು. ಕರ್ನಾಟಕದ ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಪ್ರತಿನಿತ್ಯ ವಿವಿಧ ಬಗೆಯ ಆನ್‌ಲೈನ್ ವಂಚನೆಗಳು ವರದಿಯಾಗುತ್ತಿವೆ. ಸಾಲದ ಆಪ್‌ಗಳಿಂದ ಸಾಕಷ್ಟು ಜನರು ಸಂಕಷ್ಟಕ್ಕೆ ಈಡಾಗಿದ್ದಾರೆ. ಕರ್ನಾಟಕದಲ್ಲಿ ಆನ್‌ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ಬ್ಯಾನ್ ಮಾಡಲು ಸರಕಾರ ಉದ್ದೇಶಿಸಿದೆ. ಇಂತಹ ಸಂದರ್ಭದಲ್ಲಿ ಆನ್‌ಲೈನ್‌ನಲ್ಲಿ ಶಾಡೋವಾಲ್ಟ್ ಎಂಬ ವೈರಸ್ ಕೂಡ ಆತಂಕ ಹುಟ್ಟಿಸುತ್ತಿದೆ.
ಏನಿದು ಶಾಡೋವಾಲ್ಟ್ ಮಾಲ್‌ವೇರ್?
ಇದು ಮೆಕ್‌ಬುಕ್ ಗುರಿಯಾಗಿಸಿ ದಾಳಿ ನಡೆಸುವ ಮಾಲ್‌ವೇರ್. ಮುಖ್ಯವಾಗಿ ದುರ್ಬಲ ಮತ್ತು ಅಸುರಕ್ಷಿತ ಮ್ಯಾಕ್‌ಬುಕ್‌ಗಳನ್ನು ಗುರಿಯಾಗಿಸಿ ದಾಳಿ ಮಾಡುತ್ತದೆ. ಡಾರ್ಕ್ ವೆಬ್ ಫೋರಮ್‌ಗಳಲ್ಲಿ ಇಂತಹ ಮಾಲ್‌ವೇರ್ ಮೊದಲು ಕಾಣಿಸಿಕೊಂಡಿತ್ತು. ಈ ಮಾಲ್‌ವೇರ್ ದುರ್ಬಲ ಸುರಕ್ಷತೆ ಹೊಂದಿರುವ ಮ್ಯಾಕ್‌ಬುಕ್‌ಗಳಲ್ಲಿ ಸೈಲೆಂಟ್ ಆಗಿ ಸೇರಿಕೊಳ್ಳುತ್ತದೆ. ಬಳಕೆದಾರರ ಲಾಗಿನ್ ಐಡಿಗಳು, ಹಣಕಾಸು ಡೇಟಾ, ವೈಯಕ್ತಿಕ ಗುರುತಿನ ಮಾಹಿತಿ ಇತ್ಯಾದಿಗಳನ್ನು ಕದಿಯುತ್ತದೆ. ಈ ಮಾಲ್‌ವೇರ್ ನಿಮ್ಮ ಪಾಸ್‌ವರ್ಡ್, ಕ್ರೆಡಿಟ್ ಕಾರ್ಡ್ ಮಾಹಿತಿ, ಬ್ರೌಸರ್‌ನ ಕುಕೀ ಮಾಹಿತಿ ಸೇರಿದಂತೆ ಹಲವು ವಿಷಯಗಳನ್ನು ಕದಿಯುವ ಸಾಮರ್ಥ್ಯ ಹೊಂದಿದೆ.
ಮಾಲ್‌ವೇರ್ ವಿತರಣೆ ಹೇಗೆ
ಇದು ಒಂದು ಹ್ಯಾಕಿಂಗ್ ಗ್ರೂಪ್ ಮುನ್ನಡೆಸುತ್ತಿರುವ ಮಾಲ್‌ವೇರ್ ಆಗಿದೆ. ಹ್ಯಾಕರ್‌ಗಳು ಇಂತಹ ಮಾಲ್‌ವೇರ್ ಅನ್ನು ಮಾಸಿಕ 500 ಡಾಲರ್ ಅಂದರೆ ಸುಮಾರು 41,000 ರೂಪಾಯಿಗೆ ಬಾಡಿಗೆಗೆ ಪಡೆಯುತ್ತಾರೆ. ಈ ರೀತಿ ಸೈಬರ್‌ಕ್ರಿಮಿನಲ್‌ಗಳ ನಡುವೆ ಮಾರಾಟಗೊಂಡು ಅಮಾಯಕ ಜನರ ಡೇಟಾ ಕದಿಯಲು ಬಳಸಲಾಗುತ್ತದೆ.
ಆನ್‌ಲೈನ್ ಸ್ಕ್ಯಾಮ್ ಕುರಿತು ಎಚ್ಚರದಿಂದ ಇರಿ
ಶಾಡೋವಾಲ್ಟ್ ಒಂದು ಉದಾಹರಣೆಯಷ್ಟೇ. ಇಂತಹ ಹಲವು ಮಾಲ್‌ವೇರ್‌ಗಳು ಇವೆ. ಅಮಾಯಕ ಜನರ ಹಣ ಕದಿಯಲು ಇಂತಹ ಮಾಲ್‌ವೇರ್ ಬಳಸಲಾಗುತ್ತದೆ. ಆನ್‌ಲೈನ್‌ನಲ್ಲಿ ಅಪರಿಚಿತ ಲಿಂಕ್ ಕ್ಲಿಕ್ ಮಾಡಬೇಡಿ. ಅನಧಿಕೃತ ಆಪ್‌ಗಳನ್ನು ಡೌನ್‌ಲೋಡ್ ಮಾಡಬೇಡಿ. ಈ ರೀತಿ ಮಾಡಿದರೆ ನಿಮ್ಮ ಆನ್‌ಲೈನ್ ಮಾಹಿತಿಯನ್ನು ಮಾಲ್‌ವೇರ್‌ಗಳು ಕದಿಯಬಹುದು. ನಿಮ್ಮ ಫೋನ್ ಸುರಕ್ಷತೆಯ ಕುರಿತು ಪ್ರತಿನಿತ್ಯ ಆಲೋಚಿಸಿ.
ಆನ್‌ಲೈನ್‌ನಲ್ಲಿ ಸುರಕ್ಷತೆ ಹೇಗೆ?
- ನಿಮ್ಮ ಸಾಧನಗಳ ಸುರಕ್ಷತೆಗೆ ಆದ್ಯತೆ ನೀಡಿ. ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್‌ಗಳಿಗೆ ಇತ್ತೀಚಿನ ಆಂಟಿವೈರಸ್, ಸೆಕ್ಯುರಿಟಿ ಪ್ಯಾಚ್‌ಗಳನ್ನು ಇನ್‌ಸ್ಟಾಲ್ ಮಾಡಿ.
- ವಾಟ್ಸಪ್ ಇತ್ಯಾದಿಗಳಲ್ಲಿ ಬರುವ ಅನಧಿಕೃತ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ.
- ನಿಮ್ಮ ಎಲ್ಲಾ ಸೂಕ್ಷ್ಮ ಮಾಹಿತಿಗಳನ್ನು ಒಂದೇ ಸಾಧನ ಅಥವಾ ನೆಟ್‌ವರ್ಕ್ನಲ್ಲಿ ಇಡಬೇಡಿ. ಇಂತಹ ಡೇಟಾಗಳನ್ನು ಆಫ್‌ಲೈನ್‌ನಲ್ಲಿ ಇಡುವುದು ಸೂಕ್ತ.
- ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಇತ್ಯಾದಿಗಳಲ್ಲಿ 2 ಪ್ಯಾಕ್ಟರ್ ಅಥೆನಿಟಿಕೇಷನ್ ಆನ್ ಮಾಡಿ.
- ನಿಯಮಿತವಾಗಿ ಪಾಸ್‌ವರ್ಡ್‌ಗಳನ್ನು ಬದಲಾಯಿಸುತ್ತ ಇರಿ. ಕಠಿಣ ಪಾಸ್‌ವರ್ಡ್ ಬಳಸಿ.
- ಝೊಮೆಟೊ, ಸ್ವಿಗ್ಗಿಯಂತಹ ನಂಬಿಕಸ್ಥ ಆನ್‌ಲೈನ್ ವೇದಿಕೆಗಳಿಂದ ಮಾತ್ರ ಫುಡ್ ಆರ್ಡರ್ ಮಾಡಿ. ಗೂಗಲ್‌ನಲ್ಲಿ ಸರ್ಚ್ ಮಾಡಿ ಸಿಕ್ಕಸಿಕ್ಕ ವೆಬ್‌ಸೈಟ್‌ಗಳಿಂದ ಆರ್ಡರ್ ಮಾಡಬೇಡಿ.