Find My Phone: ನಿಮ್ಮ ಆಂಡ್ರಾಯ್ಡ್ ಫೋನ್ ಕಳೆದೋಯ್ತ? ಈ ರೀತಿ ಸರಳ ಹಂತಗಳನ್ನು ಬಳಸಿ ಟ್ರ್ಯಾಕ್ ಮಾಡಿ
Find My Phone: ನಿಮ್ಮ ಸ್ಮಾರ್ಟ್‌ಫೋನ್ ಕಳೆದುಹೋಗಬಹುದು. ಸೈಲೆಂಟ್ ಮೋಡ್‌ನಲ್ಲಿ ಇಟ್ಟ ಪೋನ್ ಎಷ್ಟು ಹುಡುಕಿದರೂ ದೊರಕದೆ ಇರಬಹುದು. ಇಂತಹ ಸಮಯದಲ್ಲಿ ಕಳೆದು ಹೋದ ಫೋನ್ ಟ್ರ್ಯಾಕ್ ಮಾಡಲು, ಫೋನ್‌ನಲ್ಲಿರುವ ಮಾಹಿತಿಗಳನ್ನು ಅಳಿಸಿಹಾಕಲು... ಸೇರಿದಂತೆ ನಿಮ್ಮ ಫೋನ್ ಹುಡುಕಲು ಇಲ್ಲೊಂದಿಷ್ಟು ವಿಧಾನಗಳನ್ನು ನೀಡಲಾಗಿದೆ.
Find My Phone: ಪ್ರತಿದಿನದ ನಮ್ಮ ಚಟುವಟಿಕೆಯಲ್ಲಿ ಮೊಬೈಲ್ ಫೋನ್‌ಗಳು ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಆಫೀಸ್ ವಿಚಾರಗಳ ಮಾತುಕತೆ ಫೋನ್‌ನಲ್ಲೇ ನಡೆಯುತ್ತದೆ. ಇದರೊಂದಿಗೆ ಸ್ನೇಹಿತರು, ಆಪ್ತರ ಜತೆ ಸಂವಹನವೂ ನಡೆಸಲು ಫೋನ್ ಬೇಕು. ಇದೇ ಸಮಯದಲ್ಲಿ ಸೋಷಿಯಲ್ ಮೀಡಿಯಾ ಅಪ್‌ಡೇಟ್‌ಗಳನ್ನು ಪಡೆಯಲು ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಸುದ್ದಿಗಳನ್ನು ಓದಲು ಫೋನ್ ಬೇಕೇಬೇಕು. ಒಂದಿಷ್ಟು ಹೊತ್ತು ಫೋನ್ ಕೈಯಲ್ಲಿ ಇಲ್ಲದೆ ಇದ್ದರೆ ಕೆಲವರು ತಲೆಮೇಲೆ ಕೈಹೊತ್ತು ಕೂತುಕೊಳ್ಳುತ್ತಾರೆ. ಪ್ರತಿದಿನ ಹಣಕಾಸು ವಹಿವಾಟು ಕೂಡ ಫೋನ್‌ನಲ್ಲೇ ನಡೆಸುತ್ತಾರೆ. ಸಿನಿಮಾ, ಸೀರಿಯಲ್ ಫೋನ್‌ನಲ್ಲೇ ನೋಡುತ್ತಾರೆ. ಇಂತಹ ಸಮಯದಲ್ಲಿ ಕೆಲವೊಮ್ಮೆ ಫೋನ್ ಕಳೆದುಹೋಗುವುದುಂಟು. ಬೆಂಗಳೂರಿನಂತಹ ನಗರಗಳಲ್ಲಿ ಮೊಬೈಲ್ ಕಳ್ಳರು ಹೇಗೋ ನಿಮ್ಮ ಫೋನ್ ಅನ್ನು ಎಗರಿಸಿಬಿಡಬಹುದು. ಇನ್ನು ಕೆಲವೊಮ್ಮೆ ಎಲ್ಲೋ ಬಿದ್ದು ಹೋಗಬಹುದು. ಒಮ್ಮೊಮ್ಮೆ ಮನೆಯಲ್ಲಿ ಎಲ್ಲೋ ಫೋನ್ ಇಟ್ಟು (ಸೈಲೆಂಟ್ ಮೋಡ್‌ನಲ್ಲಿ) ಮತ್ತೆ ಎಷ್ಟು ಹುಡುಕಿದರೂ ದೊರಕದೆ ಕೆಲವರು ಪರದಾಡುತ್ತಾರೆ. ಮೊಬೈಲ್ ಫೋನ್ ಕಳೆದುಹೋದರೆ ತಕ್ಷಣ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದರೆ ನಿಮ್ಮ ಫೋನ್ ಬಳಸಿ ಹಣಕಾಸು ವ್ಯವಹಾರ ನಡೆಸಬಹುದು. ನಿಮ್ಮ ಬ್ಯಾಂಕ್ ಖಾತೆಗೆ ಕಳ್ಳರು ಪ್ರವೇಶಿಸಬಹುದು. ನಿಮ್ಮ ವೈಯಕ್ತಿಕ ಮಾಹಿತಿ, ಡಾಕ್ಯಮೆಂಟ್, ಫೋಟೋಗಳು ಅನ್ಯರ ಪಾಲಾಗಬಹುದು. ನಿಮ್ಮ ಆಂಡ್ರಾಯ್ಡ್ ಫೋನ್ ಮಿಸ್ಸಾದರೆ ಈ ಮುಂದಿನ ಹಂತಗಳನ್ನು ಅನುಸರಿಸಿ. ಈ ಮೂಲಕ ಕಳೆದುಹೋದ ಫೋನ್‌ನ ನಿಯಂತ್ರಣವನ್ನು ನಿಮ್ಮದಾಗಿಸಿಕೊಳ್ಳಿ.
ಕಳೆದುಹೋದ ಫೋನ್ ಟ್ರ್ಯಾಕ್ ಮಾಡಿ
1. ಗೂಗಲ್‌ನ ಫೈಂಡ್ ಮೈ ಡಿವೈಸ್ ಫೀಚರ್ ಬಳಸಿ
ಬೇರೆ ಕಂಪ್ಯೂಟರ್ ಅಥವಾ ಮೊಬೈಲ್ ಫೋನ್‌ಗಳಲ್ಲಿ ಮೈಂಡ್ ಮೈ ಡಿವೈಸ್ ಬಳಸಬಹುದು. ಇದಕ್ಕಾಗಿ google.com/android/find ಲಿಂಕ್ ಪ್ರವೇಶಿಸಬಹುದು. ಮೊದಲಿಗೆ ನೀವು ನಿಮ್ಮ ಜೀಮಲ್ ಮೂಲಕ ಲಾಗಿನ್ ಆಗಬೇಕು. ಜೀಮೆಲ್‌ಗೆ ಕನೆಕ್ಟ್ ಆಗಿರುವ ಫೋನ್‌ನ ವಿವರ ಅಲ್ಲಿ ಕಾಣಿಸುತ್ತದೆ. ಆ ಫೋನ್ ವಿಭಾಗ ಕ್ಲಿಕ ಮಾಡಿ. ಈ ಸಮಯದಲ್ಲಿ ಪಿನ್ ಹಾಕಲು ತಿಳಿಸಲಾಗುತ್ತದೆ. ನಿಮ್ಮ ಮೊಬೈಲ್ ಸ್ಕ್ರೀನ್‌ಗೆ ಹಾಕಿರುವ ಪಿನ್ ಅನ್ನು ಇಲ್ಲಿ ನಮೂದಿಸಿ. ಇದಾದ ಬಳಿಕ ಅಲ್ಲಿ ಮೂರು ಆಯ್ಕೆಗಳು ಕಾಣಿಸುತ್ತವೆ. ಪ್ಲೇ ಸೌಂಡ್, ಸೆಕ್ಯುರ್ ಡಿವೈಸ್ ಮತ್ತು ರಿಸೆಟ್ ಆಯ್ಕೆಗಳು ಕಾಣಿಸುತ್ತವೆ. ಪಕ್ಕದಲ್ಲಿ ಗೂಗಲ್ ಮ್ಯಾಪ್ ಕೂಡ ಕಾಣಿಸುತ್ತದೆ.
2. ಗೂಗಲ್ ಮ್ಯಾಪ್ ಮೂಲಕ ಹುಡುಕಿ
ಫೈಂಡ್ ಮೈ ಫೋನ್‌ನಲ್ಲಿ ಕಾಣಿಸುವ ಮ್ಯಾಪ್ ಮೂಲಕ ನಿಮ್ಮ ಫೋನ್ ಎಲ್ಲಿದೆ ಎಂದು ಹುಡುಕುತ್ತ ಸಾಗಬಹುದು. ಆ ಮ್ಯಾಪ್‌ನಲ್ಲಿ ನಿಮ್ಮ ಫೋನ್ ಇರುವ ಲೊಕೆಷನ್ ಅನ್ನು ಕ್ಲಿಕ್ ಮಾಡಿ. ಗೂಗಲ್ ಮ್ಯಾಪ್ ಬಳಸಿ ತಕ್ಷಣ ಆ ಸ್ಥಳಕ್ಕೆ ಹೋಗಿ. ಅಲ್ಲೇ ಕಳ್ಳ ಇರಬಹುದು. ಕಳೆದುಹೋಗಿದ್ದರೆ ಅಲ್ಲೇ ಆ ಫೋನ್ ದೊರಕುತ್ತದೆ.
3. ಡಿವೈಸ್ ರಿಂಗ್ ಫೀಚರ್
ಎಲ್ಲೋ ಇಟ್ಟ ಫೋನ್ ದೊರಕುತ್ತಿಲ್ಲ ಎಂದಾದರೆ ಅದರಲ್ಲಿ ಡಿವೈಸ್ ರಿಂಗ್ ಫೀಚರ್ ಬಳಸಬಹುದು. ನಿಮ್ಮ ಫೋನ್ ಸೈಲೆಂಟ್‌ನಲ್ಲಿದ್ದರೂ ಸೌಂಡ್ ರಿಂಗ್ ಮೂಲಕ ಸೌಂಡ್ ಮಾಡಬಹುದು. ಆ ಶಬ್ದದ ಆಧಾರದಲ್ಲಿ ಫೋನ್ ಎಲ್ಲಿದೆ ಎಂದು ಹುಡುಕಾಟ ನಡೆಸಬಹುದು.
ಫೋನ್‌ನ ಮಾಹಿತಿ
- ಐಎಂಇಐ ಸಂಖ್ಯೆ: ಫೈಂಡ್ ಮೈ ಡಿವೈಸ್‌ನ ಸೆಟ್ಟಿಂಗ್ ಕ್ಲಿಕ್ ಮಾಡಿ. ಅಲ್ಲಿ ಡಿವೈಸ್ ಹೆಸರು, ಐಎಂಇಐ ಸಂಖ್ಯೆ ದೊರಕುತ್ತದೆ. ಮೊದಲು ರಿಜಿಸ್ಟಾರ್ ಮಾಡಿದ ಸಮಯವೂ ದೊರಕುತ್ತದೆ. ನಿಮ್ಮ ಫೋನ್ ಎಷ್ಟು ವರ್ಷ ಹಳೆಯದು ಎಂಬ ಮಾಹಿತಿಯನ್ನೂ ಫಸ್ಟ್ ರಿಜಿಸ್ಟಾರ್ಡ್ ಮೂಲಕ ಪಡೆದುಕೊಳ್ಳಬಹುದು.
- ಫ್ಯಾಕ್ಟರಿ ರಿಸೆಟ್ ಮಾಡಿ: ಎಲ್ಲಾದರೂ ಕಳ್ಳರ ಕೈಗೆ ನಿಮ್ಮ ಫೋನ್‌ನಲ್ಲಿರುವ ಮಾಹಿತಿ ದೊರಕಬಾರದು ಎಂದಾದರೆ ನೀವು ದೂರದಿಂದಲೇ ಕಂಪ್ಯೂಟರ್ ಅಥವಾ ಬೇರೆ ಫೋನ್ ಮೂಲಕ ಗೂಗಲ್‌ನ ಫೈಂಡ್ ಮೈ ಫೋನ್ ಫೀಚರ್ ಮೂಲಕ ಫ್ಯಾಕ್ಟರಿ ರಿಸೆಟ್ ಮಾಡಬಹುದು. ಆದರೆ, ಈ ರೀತಿ ಮಾಡಿದ ಬಳಿಕ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಫೈಂಡ್ ಮೈ ಡಿವೈಸ್ ಮೂಲಕ ಟ್ರ್ಯಾಕ್ ಮಾಡಲು ಸಾಧ್ಯವಾಗದು.
ಗಮನಿಸಿ: ಈ ರೀತಿ ನಿಮ್ಮ ಸ್ಮಾರ್ಟ್‌ಫೋನ್ ಕೆಲಸ ಮಾಡಲು ಇಂಟರ್‌ನೆಟ್ ಕನೆಕ್ಟ್ ಆಗಿರಬೇಕು. ಇಂಟರ್‌ನೆಟ್ ಕನೆಕ್ಟ್ ಆಗಿರದ ಸಮಯದಲ್ಲಿ ಈ ಫೀಚರ್ ಸರಿಯಾಗಿ ಕೆಲಸ ಮಾಡದು. ಈಗಿನ 5ಜಿ ಜಮಾನದಲ್ಲಿ ಬಹುತೇಕರು ಇಂಟರ್‌ನೆಟ್ ಆನ್ ಮಾಡಿಯೇ ಇರುತ್ತಾರೆ. ಹೀಗೆ, ಮೇಲಿನ ಟಿಪ್ಸ್ ಮತ್ತು ಟ್ರಿಕ್ಸ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್ ಸುರಕ್ಷಿತವಾಗಿಡಿ.