ಪಾನ್ ಮಸಾಲ, ಸಿಗರೇಟು, ಮದ್ಯ ಸೇವನೆಗಿಂತ ಮೊಬೈಲ್ ಅತ್ಯಂತ ಅಪಾಯಕಾರಿ ಮೋಹಕ ವಿಷ; ಕವಿ ವೀರಣ್ಣ ಮಡಿವಾಳರ
ಇಂದಿನ ಪೀಳಿಗೆಯಲ್ಲಿ ದೊಡ್ಡವರು ಮಾತ್ರವಲ್ಲ ಮಕ್ಕಳು ಕೂಡಾ ಮೊಬೈಲ್‌ಗೆ ದಾಸರಾಗಿದ್ದಾರೆ. ಆಟ, ಪಾಠ ಮರೆತಿರುವ ಮಕ್ಕಳು ಮೊಬೈಲ್ ಇದ್ದರೆ ಮಾತ್ರ ಊಟ ಮಾಡುವುದು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಬಗ್ಗೆ ಕವಿ ವೀರಣ್ಣ ಮಡಿವಾಳರ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮೊಬೈಲ್ ಅತ್ಯಂತ ಅಪಾಯಕಾರಿ ಮೋಹಕ ವಿಷ ಎಂದಿದ್ದಾರೆ.
ಹೈಲು ಹೈಲು ಹೈಲು ಕೈಲಿದ್ರೆ ಮೊಬೈಲು....ಎಂಬ ಚಪ್ಪಾಳೆ ಸಿನಿಮಾದ ಹಾಡು ಈಗಿನ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುತ್ತದೆ. ಮೊಬೈಲ್ ಕೈಲಿದ್ರೆ ಸಾಕು ಪ್ರಪಂಚವೇ ಬೇಡ ಎನ್ನುವಷ್ಟು ಕೆಲವರು ಅಡಿಕ್ಟ್ ಆಗಿದ್ದಾರೆ. ರಾತ್ರಿ ಮಲಗುವಾಗ ಪಕ್ಕದಲ್ಲಿ ಮೊಬೈಲ್ ಇರದಿದ್ರೆ, ಬೆಳಗ್ಗೆ ಎದ್ದ ಕೂಡಲೇ ಮೊಬೈಲ್ ನೋಡದಿದ್ದರೆ ಜೀವನದಲ್ಲಿ ಏನೋ ದೊಡ್ಡದನ್ನು ಕಳೆದುಕೊಂಡಂತೆ ವರ್ತಿಸುವವರೂ ಇದ್ದಾರೆ.
ಈಗ ಚಿಕ್ಕಮಕ್ಕಳು ಕೂಡಾ ಮೊಬೈಲ್‌ಗೆ ದಾಸರಾಗಿದ್ದಾರೆ. ಕೆಲವು ಮಕ್ಕಳಂತೂ ಮೊಬೈಲ್ ಇಲ್ಲದೆ ಊಟ ಕೂಡಾ ಮಾಡುವುದಿಲ್ಲ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವೀರಣ್ಣ ಮಡಿವಾಳರ ಅವರು ಮೊಬೈಲನ್ನು ಅತ್ಯಂತ ಅಪಾಯಕಾರಿ ಮೋಹಕ ವಿಷ ಎಂದಿದ್ದಾರೆ. ಇತ್ತೀಚೆಗೆ ನಡೆದ ಘಟನೆಯೊಂದನ್ನು ವೀರಣ್ಣ ಮಡಿವಾಳರ ವಿವರಿಸಿದ್ದಾರೆ
15 ತಿಂಗಳ ಮಗುವಿಗೆ ಮೊಬೈಲ್ ನೋಡುವ ಅಭ್ಯಾಸ
ಅವರೀಗ ತಾನೆ ಮಿಲಿಟರಿಯಿಂದ ಬಂದಂತಿದ್ದರು. ತಮ್ಮ ಆಪ್ತನೊಂದಿಗೆ ತಮ್ಮ ಮಗಳ ಬಗ್ಗೆ ಮಾತು ನಡೆದಿತ್ತು.
ಮಿಲಿಟರಿಯವರು: 'ಮಗಳು ರಾತ್ರಿ ನಿದ್ದೆ ಮಾಡಲ್ಲ, ತುಂಬಾ ಕಾಡ್ತಾಳೆ'
ಆಪ್ತ: ಹೌದು ಪುಟ್ಟ ಮಕ್ಕಳು ತುಂಬಾ ಹಟ ಮಾಡ್ತಾವೆ
ನಾನು: (ಸುಮ್ಮನಿರಲಾರದೆ... ಕುತೂಹಲದಿಂದ) ಮಗುವಿಗೆ ವಯಸ್ಸೆಷ್ಟು ಸರ್?
ಮಿಲಿಟರಿಯವರು: 15 ತಿಂಗಳು
ನಾನು: ಮಗು ಎಷ್ಟೇ ಹಟ ಮಾಡಲಿ, ಆದರೆ ಮೊಬೈಲ್ ಖಯಾಲಿ ಹಚ್ಚಬೇಡಿ
ಮಿಲಿಟರಿಯವರು: (ಸಿಟ್ಟಿನಿಂದ) ಮತ್ತೇನ್ ಮಾಡ್ಬೇಕ್ರಿ.... ಒಂದು ವಾರ ಮೊಬೈಲ್‌ನಿಂದ ದೂರ ಇಟ್ಟಿದ್ದಕ್ಕೆ ಮಗು ಏನನ್ನೂ ತಿನ್ನಲಿಲ್ಲ. ಮೊಬೈಲ್ ಇದ್ರೆ ಮಾತ್ರ ಊಟ ಮಾಡ್ತಾಳೆ, ಅಷ್ಟು ಇಷ್ಟು ನಿದ್ರೆ ಮಾಡ್ತಾಳೆ ಎಂದರು.
ಅವರ ಮಾತು ಕೇಳುತ್ತಿದ್ದಂತೆ ಅಲ್ಲಿಂದ ನಾನು ಸುಮ್ಮನೆ ಕಾಲ್ಕಿತ್ತೆ. ಹುಟ್ಟಿದ ಕೂಸಿಗೆ ಮೊಬೈಲ್ ರೂಢಿ ಮಾಡಿದ್ದು ತಪ್ಪು, ಮೊಬೈಲ್, ಹುಟ್ಟಿದ ಕೂಸಿನಿಂದ ಹಿಡಿದು ಹಣ್ಣು ಹಣ್ಣು ಮುದುಕರನ್ನೂ ಆವರಿಸಿಕೊಂಡಿರುವ ಮೋಹಕ ವಿಷ ಎಂದೆಲ್ಲಾ ಹೇಳಬೇಕೆಂದುಕೊಂಡೆ, ಅಲ್ಲಿ ಕೇಳುವವರಾರೂ ಇರಲಿಲ್ಲ. ಅದಕ್ಕೆ ಮನಸಿನಲ್ಲಿ ಗೊಣಗಿಕೊಂಡು ಸುಮ್ಮನೆ ಬಂದೆ. ಮೊನ್ನೆ ಹಾಸ್ಪಿಟಲ್ ಒಂದಕ್ಕೆ ಹೋಗಿದ್ದೆ. ಅಲ್ಲಿ ಹತ್ತಾರು ಮಕ್ಕಳಿದ್ದರು. ಎಲ್ಲರೂ ವಿಚಿತ್ರವಾಗಿ ಆಡುತ್ತಿದ್ದರು. ಅಲ್ಲಿನ ಡಾಕ್ಟರ್ ನನ್ನ ಪರಿಚಯಿಸಿಕೊಂಡರು.
ಆಸ್ಪತ್ರೆಯಲ್ಲಿ ವೈದರು ಹೇಳಿದ್ದೇನು?
ಡಾಕ್ಟರ್: ನೋಡಿ ಸರ್, ಈ ಮಕ್ಕಳೆಲ್ಲಾ ಮೊಬೈಲ್ ದಾಳಿಯಿಂದ ಅರೆ ಹುಚ್ಚರಾಗಿದ್ದಾರೆ. ಕೈ ಮುರಿದರೆ, ಕಾಲು ಮುರಿದರೆ ತಲೆ ಒಡೆದರೂ ಚಿಕಿತ್ಸೆ ಕೊಡಬಹುದು. ಆದರೆ ಈ ತಲೆ ಕೆಟ್ಟರೆ ಮನಸ್ಸು ಛಿದ್ರಗೊಂಡರೆ ಚಿಕಿತ್ಸೆ ಬಲುಕಷ್ಟ ಎಂದರು.
ಹಾದಿಯಲ್ಲಿ ಬರುವಾಗ ಇದೆಲ್ಲಾ ನೆನಪಾಯಿತು. ಗುಟ್ಕಾ, ಪಾನ್ ಮಸಾಲಾ, ಸಿಗರೇಟು, ಮದ್ಯ ಇನ್ನುಳಿದ ಎಲ್ಲಾ ವಿಷಗಳಿಗಿಂತ ಮೊಬೈಲ್ ಅತ್ಯಂತ ಅಪಾಯಕಾರಿಯಾದ ಮೋಹಕ ವಿಷ. ನನಗೆ ನಾನೇ ಹೇಳಿಕೊಳ್ಳುತ್ತಾ ನಡೆದೆ ಎಂದು ವೀರಣ್ಣ ಮಡಿವಾಳರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವೀರಣ್ಣ ಮಡಿವಾಳರ ಪರಿಚಯ
ವೀರಣ್ಣ ಮಡಿವಾಳರ ಕವಿ, ಕಥೆಗಾರರಾಗಿ ಗುರುತಿಸಿಕೊಂಡಿದ್ದಾರೆ. ಗದಗ ಜಿಲ್ಲೆಗೆ ಸೇರಿದ ಈ ಯುವಕವಿ 1983ರಲ್ಲಿ ಜನಿಸಿದರು. ಕೊಪ್ಪಳ, ಗುಲ್ಬರ್ಗಾದಲ್ಲಿ ವಿದ್ಯಾಭ್ಯಾಸ ಮುಗಿಸಿ ಸವಣೂರಿನಲ್ಲಿ 2007 ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿ ಆರಂಭಿಸಿದರು. ಸದ್ಯಕ್ಕೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗಾವಡ್ಯಾನವಾಡಿಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.
ಗುಲ್ಬರ್ಗಾ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಇಂಗ್ಲೀಷ್ ಸಾಹಿತ್ಯದಲ್ಲಿ ಪ್ರಥಮ ರ್ಯಾಂಕ್‌ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರ ಕವಿತೆಗಳು ಇತರ ಭಾಷೆಗಳಿಗೆ ಅನುವಾದಗೊಂಡಿರುವುದಲ್ಲದೆ ಶಾಲಾಪಠ್ಯದಲ್ಲಿ ಸೇರಿವೆ. ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆಗಾಗಿ ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ , ಬೇಂದ್ರೆ ಗ್ರಂಥ ಬಹುಮಾನ, ಇಂಚಲ ಕಾವ್ಯ ಪ್ರಶಸ್ತಿ, ಅಮ್ಮ ಪ್ರಶಸ್ತಿ, ಅರಳು ಪ್ರಶಸ್ತಿ, ಸಾಂಬಶಿವಪ್ಪ ಸ್ಮಾರಕ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ದೊರೆತಿವೆ.