Elephant Whisperers: ಆಸ್ಕರ್ ವಿಜೇತ ಎಲಿಫೆಂಟ್ ವಿಸ್ಪರರ್ಸ್ ಆನೆಮರಿ ನೋಡಲು ಪ್ರವಾಸಿಗರ ದಂಡು, ರಘುವನ್ನು ನೋಡಿ ಖುಷಿಯಾಗ್ತಿದೆ ಅಂದ್ರು
ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಮಧುಮಲೈ ತೆಪ್ಪಕಾಡು ಎಲಿಫೆಂಟ್ ಕ್ಯಾಂಪ್‌ಗೆ ಆಗಮಿಸುತ್ತಿದ್ದು, ಆನೆ ಮರಿಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಚೆನ್ನೈ: ನಿನ್ನೆ ಆಸ್ಕರ್ ಪ್ರಶಸ್ತಿ ಪಡೆದ ಭಾರತದ ಸಾಕ್ಷ್ಯಚಿತ್ರ ದಿ ಎಲಿಫೆಂಟ್ ವಿಸ್ಪರರ್ಸ್‌ನ ಹೀರೋವಾದ ಆನೆ ಮರಿಯನ್ನು ನೋಡಲು ಈಗ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಬೆಸ್ಟ್ ಡಾಕ್ಯುಮೆಂಟರಿ ಶಾರ್ಟ್ ಫಿಲ್ಮ್ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದ ಈ ಸಾಕ್ಷ್ಯಚಿತ್ರವು ರಘು ಎಂಬ ಆನೆಯ ಕತೆಯನ್ನು ಒಳಗೊಂಡಿದೆ.
ಇಂದು ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಮಧುಮಲೈ ತೆಪ್ಪಕಾಡು ಎಲಿಫೆಂಟ್ ಕ್ಯಾಂಪ್‌ಗೆ ಆಗಮಿಸಿದ್ದು, ಆನೆ ಮರಿಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ತಮಿಳುನಾಡಿನ ದಕ್ಷಿಣ ಭಾಗದಲ್ಲಿರುವ, ಸುಂದರವಾದ ಗುಡ್ಡಗಾಡು ಪ್ರದೇಶ ಮುದುಮಲೈ ಅರಣ್ಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಾಕ್ಷ್ಯಚಿತ್ರವನ್ನು ಚಿತ್ರೀಕರಿಸಲಾಗಿದೆ. ಇದರಲ್ಲಿ ಈ ಆನೆ ಮರಿಯ ಆರೈಕೆ ಮತ್ತು ಬದುಕಿನ ಕತೆಯಿದೆ.
ಬೊಮ್ಮನ್ ಹಾಗೂ ಬೆಳ್ಳಿ ಈ ಆನೆ ಮರಿಯನ್ನು ಸಾಕುವ ಕತೆಯಿದೆ. ಗುಂಪಿನಿಂದ ತಪ್ಪಿಸಿಕೊಂಡ ಗಾಯಾಳು ಆನೆಯನ್ನು ಉಪಚರಿಸಿ ಆರೈಕೆ ಮಾಡುವ ಬೊಮ್ಮನ್ ಹಾಗೂ ಬೆಳ್ಳಿ ಅದಕ್ಕೆ ರಘು ಎಂದು ಹೆಸರಿಸುತ್ತಾರೆ. ಈ ಮೂವರ ನಡುವೆ ಒಂದು ಅಸಾಮಾನ್ಯ ಬಂಧ ರೂಪುಗೊಂಡಿರುತ್ತದೆ. ಈ ಸಾಕ್ಷ್ಯಚಿತ್ರವು ಪ್ರಕೃತಿಯೊಂದಿಗಿನ ಬುಡಕಟ್ಟು ಜನರ ಸಾಮರಸ್ಯವನ್ನೂ ತಿಳಿಸುತ್ತದೆ.
ಇದೀಗ ಈ ಆನೆ ಮರಿ ಎಲ್ಲರ ಕುತೂಹಲದ ಕೇಂದ್ರಬಿಂದು. ಈ ಆನೆ ಮರಿಯನ್ನು ನೋಡಿ ಒಬ್ಬರು "ಎಕೈಟೆಡ್" ಅಂದ್ರೆ, ಇನ್ನೊಬ್ಬರು, "ಅಬ್ಬಾ ಈ ಆನೆ ಮರಿಯನ್ನು ನೋಡುವ ಅದೃಷ್ಟ ದೊರಕಿದೆ. ಎಂತಹ ಅದ್ಭುತ ದಿನವಿದು" ಎಂದಿದ್ದಾರೆ.
ವಿದೇಶಿ ಪ್ರವಾಸಿಗರೊಬ್ಬರು, "ನಾನು ಲಂಡನ್‌ನಿಂದ ಬಂದಿದ್ದೇನೆ. ನಿನ್ನೆ ರಾತ್ರಿ ಈ ಆನೆ ಮರಿಯ ಕತೆಯುಳ್ಳ ಚಿತ್ರಕ್ಕೆ ಆಸ್ಕರ್ ದೊರಕಿರುವುದು ತಿಳಿಯಿತು. ಅವನನ್ನು ನೋಡಿ ಖುಷಿಯಾಯಿತು. ಆನೆಗಳು ನನ್ನ ಆತ್ಮೀಯ ಪ್ರಾಣಿಗಳು. ಇವನನ್ನು ನೋಡಿ ಸಂತೋಷಗೊಂಡಿದ್ದೇನೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಎಲಿಫೆಂಟ್ ವಿಸ್ಪರರ್ಸ್ 2023 ರ ಆಸ್ಕರ್ ಪ್ರಶಸ್ತಿಯನ್ನು ಗೆದ್ದಾಗ ಮುದುಮಲೈ ಕಾಡುಗಳಲ್ಲಿ ವಾಸಿಸುವ ಬೆಳ್ಳಿ ಸಂತೋಷ ವ್ಯಕ್ತಪಡಿಸಿದ್ದಾರೆ. ಮುದುಮಲೈ ನಿವಾಸಿಗಳೆಲ್ಲರೂ ಈ ವಿಷಯ ಕೇಳಿ ಸಂತಸಗೊಂಡಿದ್ದಾರೆ. ಇದೀಗ ಪ್ರವಾಸಿಗರು ಈ ಆನೆ ಮರಿಯನ್ನು ನೋಡಲು ಬರುತ್ತಿದ್ದು, ವಾರಾಂತ್ಯದಲ್ಲಿ ಇನ್ನಷ್ಟು ಜನರು ರಘುವನ್ನು ನೋಡಲು ಬರುವ ನಿರೀಕ್ಷೆಯಿದೆ.
ಎಲಿಫೆಂಟ್ ವಿಸ್ಪರರ್ಸ್ ಆಸ್ಕರ್ ಗೆದ್ದ ನಂತರ ನರೇಂದ್ರ ಮೋದಿಯವರ ಭಾವನಾತ್ಮಕ ಟ್ವೀಟ್ ಮಾಡಿದ್ದಾರೆ. ʼಸುಸ್ಥಿರ ಅಭಿವೃದ್ಧಿಯ ಮಹತ್ವವನ್ನು ಚಿತ್ರ ಸುಂದರವಾಗಿ ಎತ್ತಿ ತೋರಿಸಿದೆʼ ಎಂದಿದ್ದಾರೆ.
ಒಂದು ಅನಾಥ ಆನೆ ಮರಿಯ ಆರೈಕೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ದಕ್ಷಿಣ ಭಾರತೀಯ ದಂಪತಿಯ ಕಥೆಯಿದು. ಮುದುಮಲೈ ರಾಷ್ಟ್ರೀಯ ಉದ್ಯಾನವನದಲ್ಲಿ ನಿರ್ಮಿಸಲಾದ ಈ ಸಾಕ್ಷ್ಯಚಿತ್ರದಲ್ಲಿ ಸ್ಥಳೀಯ ದಂಪತಿಗಳಾದ ಬೊಮ್ಮನ್ ಮತ್ತು ಬೆಳ್ಳಿಯ ಆರೈಕೆಯಲ್ಲಿ ಬೆಳೆದ ರಘು ಎಂಬ ಅನಾಥ ಆನೆ ಮರಿಯ ಕತೆಯನ್ನು ಬಿಚ್ಚಿಡಲಾಗಿದೆ.