ಎರ್ಟಿಗಾ, ಇನ್ನೋವಾಗೆ ಪೈಪೋಟಿ ನೀಡಲು 7 ಸೀಟಿನ 3 ಕಾರು ಆಗಮನ; ದರವೂ ದುಬಾರಿಯೇನಲ್ಲ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಎರ್ಟಿಗಾ, ಇನ್ನೋವಾಗೆ ಪೈಪೋಟಿ ನೀಡಲು 7 ಸೀಟಿನ 3 ಕಾರು ಆಗಮನ; ದರವೂ ದುಬಾರಿಯೇನಲ್ಲ

ಎರ್ಟಿಗಾ, ಇನ್ನೋವಾಗೆ ಪೈಪೋಟಿ ನೀಡಲು 7 ಸೀಟಿನ 3 ಕಾರು ಆಗಮನ; ದರವೂ ದುಬಾರಿಯೇನಲ್ಲ

7 Seater Cars : ಭಾರತದ ವಾಹನ ಮಾರುಕಟ್ಟೆಯಲ್ಲಿ 7 ಸೀಟಿನ ಕಾರುಗಳಿಗೆ ಬೇಡಿಕೆ ಹೆಚ್ಚಿದೆ. ಇವುಗಳನ್ನು ಖರೀದಿಸಲು ಅನೇಕರು ಆಸಕ್ತಿ ತೋರುತ್ತಿದ್ದಾರೆ. ಇದರಿಂದಾಗಿ ಕಂಪನಿಗಳೂ ಈ ಮಾದರಿಯ ಕಾರುಗಳನ್ನು ಬಿಡುಗಡೆ ಮಾಡುತ್ತಿವೆ. ಈ ವಿಭಾಗದಲ್ಲಿ ಇನ್ನೂ ಮೂರು ಕಾರುಗಳು ಬರಲು ಸಿದ್ಧವಾಗಿವೆ. ಈ ಕುರಿತು ಹೆಚ್ಚಿನ ವಿವರ ತಿಳಿಯೋಣ.

ಎರ್ಟಿಗಾ, ಇನ್ನೋವಾಗೆ ಪೈಪೋಟಿ ನೀಡಲು 7 ಸೀಟಿನ 3 ಕಾರು ಆಗಮನ ಸಾಧ್ಯತೆ
ಎರ್ಟಿಗಾ, ಇನ್ನೋವಾಗೆ ಪೈಪೋಟಿ ನೀಡಲು 7 ಸೀಟಿನ 3 ಕಾರು ಆಗಮನ ಸಾಧ್ಯತೆ

ಭಾರತದಲ್ಲಿ ಸಣ್ಣಕಾರುಗಳಿಗೆ ಬೇಡಿಕೆ ಇರುವಂತೆ ದೊಡ್ಡ ಕಾರುಗಳಿಗೂ ಬೇಡಿಕೆ ಹೆಚ್ಚಿದೆ. ವಿಶೇಷವಾಗಿ ಏಳು ಸೀಟುಗಳ ಕಾರುಗಳ ಬೇಡಿಕೆ ಗಮನಾರ್ಹವಾಗಿ ಏರಿಕೆ ಕಂಡಿದೆ. ಈ ಕಾರುಗಳ ಒಳಗಿರುವ ವಿಶಾಲ ಸ್ಥಳಾವಕಾಶದಿಂದಾಗಿ ಇದಕ್ಕೆ ಡಿಮ್ಯಾಂಡ್‌ ಹೆಚ್ಚು. ಏಳು ಜನರು ಆರಾಮವಾಗಿ ಕುಳಿತು ಪ್ರಯಾಣ ಕೈಗೊಳ್ಳಬಹುದು, ಸ್ಟೋರೇಜ್‌ ಸ್ಥಳಾವಕಾಶವೂ ಉತ್ತಮವಾಗಿರುತ್ತದೆ. ಕುಟುಂಬ ಪ್ರಯಾಣಕ್ಕೆ, ಪ್ರವಾಸಕ್ಕೆ ಸೂಕ್ತವಾಗಿರುತ್ತದೆ. ಈ ವಿಭಾಗದಲ್ಲಿ ಮಾರುತಿ ಎರ್ಟಿಗಾ ಹೆಚ್ಚಿನ ಬೇಡಿಕೆಯನ್ನು ಪಡೆದಿದೆ. ಮಹೀಂದ್ರ ಸ್ಕಾರ್ಪಿಯೊ, ಮಹೀಂದ್ರ ಬೊಲೆರೊ, ಕಿಯಾ ಕ್ಯಾರೆನ್ಸ್, ಮಾರುತಿ ಇಕೊ, ಟೊಯೊಟಾ ಇನ್ನೋವಾ ಕ್ರಿಸ್ಟಾ, ಮಹೀಂದ್ರ ಎಕ್ಸ್‌ಯುವಿ700 ನಂತಹ ಮಾದರಿಗಳನ್ನು ಇಷ್ಟಪಡುತ್ತಾರೆ. ಅನೇಕ ಕಂಪನಿಗಳು ಈಗ ಈ ವಿಭಾಗದಲ್ಲಿ ಹೊಸ ಕಾರುಗಳನ್ನು ತರಲು ಸಿದ್ಧವಾಗಿವೆ. ಮುಂಬರುವ ದೊಡ್ಡ ಕಾರುಗಳ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ನಿಸ್ಸಾನ್ ಕಾಂಪ್ಯಾಕ್ಟ್ ಎಂಪಿವಿ

ನಿಸ್ಸಾನ್ ಇಂಡಿಯಾವು ಹೊಸ ಎಂಪಿವಿ ಪರಿಚಯಿಸಿಲು ಉದ್ದೇಶಿಸಿದೆ. ಇದು ರೆನಾಲ್ಟ್ ಟ್ರೈಬರ್ ಅನ್ನು ಆಧರಿಸಿದೆ. ಇದು ಮ್ಯಾಗ್ನೆಟ್ ಸಬ್-ಕಾಂಪ್ಯಾಕ್ಟ್ ಎಸ್‌ಯುವಿ ರೀತಿಯ ವಿನ್ಯಾಸವನ್ನು ಹೊಂದಿರುವ ಸಾಧ್ಯತೆ ಇದೆ. ನೋಡಲು ಇವುಗಳಿಗಿಂತ ವಿಭಿನ್ನವಾಗಿರುವ ಸಾಧ್ಯತೆ ಇದೆ. ಇದರ ವೈಶಿಷ್ಟ್ಯಗಳು, ಆಂತರಿಕ ವಿನ್ಯಾಸ, ಎಂಜಿನ್ ಸೆಟಪ್ ಕೂಡ ಮ್ಯಾಗ್ನೈಟ್‌ನಿಂದ ಬರಬಹುದು. ಹೊಸ ನಿಸ್ಸಾನ್ ಕಾಂಪ್ಯಾಕ್ಟ್ ಎಂಪಿವಿಯು 1.0-ಲೀಟರ್, 3-ಸಿಲಿಂಡರ್‌ನ ಪೆಟ್ರೋಲ್ ಎಂಜಿನ್‌ ಹೊಂದಿರಲಿದೆ. ಇದು ಗರಿಷ್ಠ 71 ಬಿಎಚ್‌ಪಿ ಪವರ್ ಮತ್ತು 96 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ 7 ಸೀಟಿನ ಫ್ಯಾಮಿಲಿ ಕಾರಿನ ಬೆಲೆ ಸುಮಾರು 6 ಲಕ್ಷ ರೂಪಾಯಿಯಿಂದ ಆರಂಭವಾಗಲಿದೆ.

ಕಿಯಾ ಇವಿ

ಕಿಯಾ ಇಂಡಿಯಾ ಭಾರತೀಯ ಮಾರುಕಟ್ಟೆಯಲ್ಲಿ ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ವಾಹನವನ್ನು (ಇವಿ) ಬಿಡುಗಡೆ ಮಾಡಲು ಯೋಜಿಸಿದೆ. ಇದು ಕ್ಯಾರೆನ್ಸ್‌ ಇವಿ, ಸೈರೋಸ್‌ ಇವಿಯನ್ನು ಒಳಗೊಂಡಿರಬಹುದು. ಈ ಎರಡೂ ಮಾದರಿಗಳು 2025 ರ ದ್ವಿತೀಯಾರ್ಧದಲ್ಲಿ ರಸ್ತೆಗಿಳಿಯಲಿವೆ. 2026ರ ವೇಳೆಗೆ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ 50,000 ರಿಂದ 60,000 ಯುನಿಟ್‌ ಮಾರಾಟ ಮಾಡುವ ಗುರಿಯನ್ನು ಕಂಪನಿ ಹೊಂದಿದೆ. ಮುಂಬರುವ Kia Carens EV ದರವೂ ಕಡಿಮೆ ಇರುವ ನಿರೀಕ್ಷೆಯಿದೆ. ಸದ್ಯ ಈ ಕುರಿತು ಹೆಚ್ಚಿನ ವಿವರ ಲಭ್ಯವಿಲ್ಲ. ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಕಾರುಗಳಿಗೆ ಉತ್ತಮ ಬೇಡಿಕೆಯಿದೆ. ನೂತನ ಇವಿಗೂ ಬೇಡಿಕೆ ಇರಬಹುದು ಎಂದು ಕಂಪನಿ ನಿರೀಕ್ಷಿಸಿದೆ.

ಮಾರುತಿ ಕಾಂಪ್ಯಾಕ್ಟ್ ಎಂಪಿವಿ

ಮಾರುತಿ ಸುಜುಕಿಯು ಜಪಾನ್-ಸ್ಪೆಕ್ ಸ್ಪೆಸಿಯಾವನ್ನು ಆಧರಿಸಿ ಹೊಸ ಮಿನಿ ಎಂಪಿವಿ ಪರಿಚಯಿಸಲಿದೆ ಎನ್ನಲಾಗುತ್ತಿದೆ. ಇದು ನಾಲ್ಕು ಮೀಟರ್‌ನೊಳಗಿನ (ಸಬ್-4 ಮೀಟರ್ ಎಂಪಿವಿ) ಎಂಪಿವಿ ಆಗಿದ್ದು, ಹೊಸ ಝಡ್‌ ಸರಣಿ ಪೆಟ್ರೋಲ್‌ ಎಂಜಿನ್‌ನೊಂದಿಗೆ ಇರಲಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.