ಫೋರ್ಡ್ ಕಂಪನಿ ಭಾರತಕ್ಕೆ ವಾಪಸ್ ಬರುತ್ತಾ? ನಮ್ಮ ಪಕ್ಕದ ರಾಜ್ಯದ ಮುಖ್ಯಮಂತ್ರಿ ಜತೆ ಚರ್ಚೆ ಆರಂಭಿಸಿದ ಅಮೆರಿಕದ ಕಂಪನಿ
ಫೋರ್ಡ್ ಇಂಡಿಯಾವು ರಾಜ್ಯದಲ್ಲಿ ವಾಹನ ಉತ್ಪಾದನೆ ಪುನರ್ ಆರಂಭಿಸುವ ಕುರಿತು ತಮಿಳುನಾಡಿನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಜತೆ ಚರ್ಚೆ ನಡೆಸುತ್ತಿದೆ. ಈ ಮೂಲಕ ಭಾರತಕ್ಕೆ ವಾಪಸ್ ಬರುವ ಪ್ರಯತ್ನದಲ್ಲಿ ಅಮೆರಿಕದ ಫೋರ್ಡ್ ಮೋಟಾರ್ ಕಂಪನಿ ಇದೆ.
ಬೆಂಗಳೂರು: ಫೋರ್ಡ್ ಮೋಟಾರ್ ಕಂಪನಿಯು ಭಾರತದ ವಾಹನ ಮಾರುಕಟ್ಟೆಗೆ ಮರಳುವ ಯೋಜನೆಯಲ್ಲಿದೆ. ಫೋರ್ಡ್ ಮೋಟಾರ್ ಕಂಪನಿಯು ದಕ್ಷಿಣದ ರಾಜ್ಯವಾದ ತಮಿಳುನಾಡನ್ನು ಜಾಗತಿಕ ರಫ್ತು ಕೇಂದ್ರವಾಗಿ ಬಳಸಿಕೊಳ್ಳುವ ಮೂಲಕ ಭಾರತೀಯ ವಾಹನ ಮಾರುಕಟ್ಟೆಗೆ ಮರಳಲು ಗಂಭೀರವಾಗಿ ಪರಿಗಣಿಸುತ್ತಿರುವಂತೆ ಇದೆ. ಅಮೆರಿಕ ಮೂಲದ ಪ್ರಮುಖ ಆಟೋಮೊಬೈಲ್ ತಯಾರಕ ಫೋರ್ಡ್ ಕಂಪನಿಯು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಜತೆ ರಾಜ್ಯದಲ್ಲಿ ವಾಹನ ಉತ್ಪಾದನೆಯನ್ನು ಪುನರ್ ಆರಂಭಿಸುವ ಕುರಿತು ಚರ್ಚಿಸುತ್ತಿದೆ.
ಈ ಹಿಂದೆ ಭಾರತದಲ್ಲಿ ತನ್ನ ಪ್ರತಿಸ್ಪರ್ಧಿಗಳ ಜತೆ ಸ್ಪರ್ಧಿಸಲಾಗದೆ ಫೋರ್ಡ್ ಕಂಪನಿಯು ನಿರ್ಮಿಸಿತ್ತು. 2021ರಲ್ಲಿ ಭಾರತೀಯ ಪ್ರಯಾಣಿಕ ಕಾರು ಮಾರುಕಟ್ಟೆಗೆ ಕಂಪನಿ ಗುಡ್‌ಬೈ ಹೇಳಿತ್ತು. ಇದೀಗ ಕಂಪನಿ ಯು ಟರ್ನ್ ತೆಗೆದುಕೊಳ್ಳಲು ಮುಂದಾಗಿದೆ. ಈ ಹಿಂದೆ ಮಾರುಕಟ್ಟೆಯಲ್ಲಿ ತನ್ನ ಸ್ಥಾನ ಹೆಚ್ಚಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಿತ್ತು. ಇನ್ನೂ ಇಲ್ಲಿನ ಮಾರುಕಟ್ಟೆ ಬಗ್ಗೆ ಆಶಾವಾದ ಹೊಂದಿದೆ. ವಾಹನ ರಫ್ತಿಗೆ ಉತ್ಪಾದನಾ ನೆಲೆಗೆ ತಮಿಳುನಾಡು ಸೂಕ್ತ ಸ್ಥಳವೆಂದು ಕಂಪನಿ ಯೋಚಿಸಿದಂತೆ ಇದೆ.
“ಫೋರ್ಡ್ ಮೋಟಾರ್ಸ್ ತಂಡದೊಂದಿಗೆ ಅತ್ಯುತ್ತಮ ಚರ್ಚೆ ನಡೆಸಿದ್ದೇನೆ. ತಮಿಳುನಾಡಿನೊಂದಿಗೆ ಫೋರ್ಡ್‌ನ ಮೂರು ದಶಕಗಳ ಪಾಲುದಾರಿಕೆಯನ್ನು ಮತ್ತೆ ನವೀಕರಿಸುವ ಕಾರ್ಯಸಾಧ್ಯತೆಯ ಕುರಿತು ಚರ್ಚಿಸಲಾಗಿದೆ. ಮತ್ತೆ ತಮಿಳುನಾಡಿನಿಂದ ಜಗತ್ತಿಗೆ ವಾಹನ ರಫ್ತು ಮಾಡುವ ಕುರಿತು ಚರ್ಚಿಸಲಾಗಿದೆ" ಎಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ವರದಿಗಳ ಪ್ರಕಾರ ಫೋರ್ಡ್ ಕಂಪನಿಯು ಚೆನ್ನೈನಲ್ಲಿರುವ ತನ್ನ ಘಟಕಕ್ಕೆ ಮರಳಲು ಯತ್ನಿಸುತ್ತಿದೆ. ಕಂಪನಿಯು ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ತಮಿಳುನಾಡಿನ ಘಟಕವನ್ನು ಎಲೆಕ್ಟ್ರಿಕ್ ವಾಹನ ತಯಾರಿಕಾ ಹಬ್ ಆಗಿ ಬದಲಾಯಿಸುವ ಯೋಜನೆಯೂ ಕಂಪನಿಗಿದೆ. ಜಾಗತಿಕವಾಗಿ ಎಲೆಕ್ಟ್ರಿಕ್ ವಾಹನವನ್ನು ಪೂರೈಸಲು ತಮಿಳುನಾಡನ್ನು ಬಳಸುವ ಸೂಚನೆ ಇದೆ.
ಫೋರ್ಡ್ ಭಾರತದಿಂದ ಹೊರಹೋದದ್ದು ಯಾಕೆ?
ಫೋರ್ಡ್ ಮೋಟಾರ್ ಕಂಪನಿಯು ದಶಕಗಳಿಂದ ಭಾರತದಲ್ಲಿ ಇದೆ. ಆದರೆ, ಮಾರುಕಟ್ಟೆಯ ಕುರಿತು ತಪ್ಪಾಗಿ ತಿಳಿದು ಭಾರತದಿಂದ ಹೊರಕ್ಕೆ ಹೋಗಿತ್ತು. ಸ್ಥಳೀಯ ಮಾರಾಟ ಮತ್ತು ರಫ್ತು ಇಳಿಕೆ ಕಂಡ ಕಾರಣ 2021ರಲ್ಲಿ ಭಾರತದಿಂದ ವಾಪಸ್ ಹೋಗಿತ್ತು. ಈ ಕಂಪನಿಯು 4 ಸಾವಿರಕ್ಕೂ ಹೆಚ್ಚು ಜನರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಉದ್ಯೋಗ ಮಾಡುತ್ತಿದ್ದರು. ಫೋರ್ಡ್ ಕಂಪನಿಯು ಭಾರತ ಬಿಟ್ಟು ಹೊರಕ್ಕೆ ಹೋದಾಗ ಸಾವಿರಾರು ಜನರ ಉದ್ಯೋಗಕ್ಕೆ ತೊಂದರೆಯಾಗಿತ್ತು. ಸ್ಥಳೀಯ ವಾಹನ ಎಕೋಸಿಸ್ಟಮ್‌ಗೆ ಹಾನಿಯಾಗಿತ್ತು.
ಫೋರ್ಡ್ ಕಂಪನಿಯು ಭಾರತದಿಂದ ನಿರ್ಗಮಿಸಲು ನಿರ್ಣಾಯಕವಾದ ಹಲವು ಕಾರಣಗಳನ್ನು ಉದ್ಯಮದ ತಜ್ಞರು ಹೇಳಿದ್ದಾರೆ. ಭಾರತೀಯ ಮಾರುಕಟ್ಟೆಯ ನಿರ್ದಿಷ್ಟ ಬೇಡಿಕೆಗಳನ್ನು ಪೂರೈಸಲು ವಿಫಲವಾಗಿರುವುದು, ಇದಕ್ಕೆ ತಕ್ಕಂತೆ ತನ್ನ ಉತ್ಪನ್ನ ಮತ್ತು ಕಾರ್ಯತಂತ್ರಗಳನ್ನು ಮಾಡುವಲ್ಲಿ ಕಂಪನಿ ವಿಫಲವಾಯಿತು. ಫೋರ್ಡ್ ಕಂಪನಿಯು ಎಂಜಿನ್‌ಗಳ ಶಕ್ತಿ ಮತ್ತು ಕಾರ್ಯಕ್ಷಮತೆಯ ಮೇಲೆ ಗಮನ ಕೇಂದ್ರೀಕರಿಸಿದ್ದರೂ, ಭಾರತದಲ್ಲಿ ಜನರು ಯಾವಾಗಲೂ ಇಂಧನ ದಕ್ಷತೆ ಮತ್ತು ಕಾರಿನ ಬೆಲೆಯನ್ನು ಪರಿಗಣಿಸುತ್ತಿದ್ದಾರೆ. ಈ ವಿಷಯವನ್ನೂ ಫೋರ್ಡ್ ಅಷ್ಟು ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ. ಇಂತಹ ಹಲವು ಕಾರಣಗಳಿಂದ ಭಾರತದಲ್ಲಿ ಕಂಪನಿಯ ವ್ಯವಹಾರ ಕುಗ್ಗಿತ್ತು.