ಕೇಂದ್ರ ಬಜೆಟ್ 2024ರಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಮಧ್ಯಮ ವರ್ಗ ಬಯಸುವ 5 ತೆರಿಗೆ ವಿನಾಯಿತಿಗಳಿವು
Union Budget 2024: ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2024 ನಾಳೆ (ಫೆ.1) ಮಂಡನೆಯಾಗಲಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಮಧ್ಯಮ ವರ್ಗ ತೆರಿಗೆ ವಿನಾಯಿತಿ ಬಯಸುತ್ತಿದೆ. ಇಂತಹ 5 ತೆರಿಗೆ ವಿನಾಯಿತಿಗಳ ಕಡೆಗೊಂದು ನೋಟ.
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ಲೋಕಸಭೆಯಲ್ಲಿ ಮಧ್ಯಂತರ ಬಜೆಟ್ 2024 ಅನ್ನು ಮಂಡಿಸಲಿದ್ದಾರೆ. ಈ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಸರ್ಕಾರವು ಸಾರ್ವತ್ರಿಕ ಚುನಾವಣೆಯನ್ನು ಎದುರಿಸುತ್ತಿರುವ ಕಾರಣ ಈ ಸಲದ ಬಜೆಟ್ ಮಧ್ಯಂತರ ಬಜೆಟ್ ಆಗಿರುತ್ತದೆ. ಇದೇ ಪಕ್ಷದ ಸರ್ಕಾರ ಅಥವಾ ಬೇರೆ ಪಕ್ಷದ ಸರ್ಕಾರ ಯಾವುದೇ ಆದರೂ, ಚುನಾವಣೆ ಆಗಿ ಹೊಸ ಸರ್ಕಾರ ರಚನೆಯಾದ ಬಳಿಕ ಜುಲೈನಲ್ಲಿ ಪೂರ್ಣ ಬಜೆಟ್ ಮಂಡನೆಯಾಗಲಿದೆ.
ಮಧ್ಯಂತರ ಬಜೆಟ್ ಅನ್ನು ಕೇಂದ್ರ ಸರ್ಕಾರ ಮಂಡನೆ ಮಾಡುತ್ತಿದ್ದರೂ, ಮಧ್ಯಮ ವರ್ಗವು ತಮ್ಮ ತೆರಿಗೆ ವೆಚ್ಚವನ್ನು ಕಡಿತಗೊಳಿಸಲು ಅನುವು ಮಾಡಿಕೊಡುವ ಕೆಲವು ಆದಾಯ ತೆರಿಗೆ ಸುಧಾರಣೆಗಳನ್ನು ಕುತೂಹಲದಿಂದ ನಿರೀಕ್ಷಿಸುತ್ತಿದೆ. ಸೆಕ್ಷನ್ 80 ಸಿ ಮತ್ತು ಸೆಕ್ಷನ್ 80 ಡಿ ನಂತಹ ವಿವಿಧ ವಿಭಾಗಗಳ ಅಡಿಯಲ್ಲಿ ಲಭ್ಯವಿರುವ ಕೆಲವು ತೆರಿಗೆ ವಿನಾಯಿತಿ ಮಿತಿಗಳಲ್ಲಿ ಹೆಚ್ಚಳವಾಗಬಹುದು ಎಂಬ ನಿರೀಕ್ಷೆಯಲ್ಲಿದೆ ಮಧ್ಯಮ ವರ್ಗ.
1) ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ರಿಯಾಯಿತಿ
ಮಧ್ಯಮ ವರ್ಗವು ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 2.5 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಗೆ ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಳೆದ ವರ್ಷ (2023) ಫೆಬ್ರವರಿ 1 ರಂದು ಕೇಂದ್ರ ಬಜೆಟ್ 2023 ಅನ್ನು ಮಂಡಿಸುವಾಗ, ಹೊಸ ಆದಾಯ ತೆರಿಗೆ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳುವ ವ್ಯಕ್ತಿಗಳಿಗೆ ಸ್ಲ್ಯಾಬ್ ದರಗಳನ್ನು ಬದಲಾಯಿಸಿದರು.
1) 3 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ಶೇ.5,
2) 6-9 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ಶೇ.10,
3) 9-12 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ಶೇ.15,
4) 12-15 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ಶೇ.20,
5) 15 ಲಕ್ಷ ರೂಪಾಯಿಗಿಂತ ಹೆಚ್ಚಿನ ಆದಾಯಕ್ಕೆ ಶೇ.30
2) ಸೆಕ್ಷನ್ 80 ಸಿ ಮಿತಿಯಲ್ಲಿ ಹೆಚ್ಚಳ
ಒಂದು ದಶಕದಿಂದ ನವೀಕರಿಸದ ಸೆಕ್ಷನ್ 80 ಸಿ ಅಡಿಯಲ್ಲಿ ಹೂಡಿಕೆ ಕಡಿತಗಳಿಗೆ ಪ್ರಸ್ತುತ ಇರುವ ಮಿತಿ 1.5 ಲಕ್ಷ ರೂಪಾಯಿಯನ್ನು ಹೆಚ್ಚಿಸಬೇಕು, ಇದು ಹೆಚ್ಚಿನ ತೆರಿಗೆ ಉಳಿತಾಯ ಮತ್ತು ಹೆಚ್ಚಿನ ಹೂಡಿಕೆಗಳಿಗೆ ಅನುವು ಮಾಡಿಕೊಡಬೇಕು ಎಂದು ಮಧ್ಯಮ ವರ್ಗ ಬಯಸಿದೆ.
ಈ ಹಿಂದೆ 2003ರಲ್ಲಿ 1 ಲಕ್ಷ ರೂಪಾಯಿ ಮಿತಿಯನ್ನು ನಿಗದಿಪಡಿಸಲಾಗಿತ್ತು. ಈ ಮೂಲ ಮಿತಿಯನ್ನು 1 ಲಕ್ಷ ರೂಪಾಯಿಯನ್ನು ನಿಗದಿಪಡಿಸಿ ಸುಮಾರು 18 ವರ್ಷಗಳಾಗಿವೆ. ಇದನ್ನು 2014 ರಲ್ಲಿ ಕೇವಲ 50% ರಷ್ಟು ಹೆಚ್ಚಿಸಲಾಗಿದೆ. ಅಂದರೆ, ವಾರ್ಷಿಕವಾಗಿ ಕೇವಲ 3% ಕ್ಕಿಂತ ಕಡಿಮೆ ಏರಿಕೆ ಆದಂತಾಗಿದೆ.
"ಈ ವಾರ್ಷಿಕ ಸರಾಸರಿ ಹೆಚ್ಚಳವು ಇದೇ ಅವಧಿಯಲ್ಲಿನ ಸರಾಸರಿ ಹಣದುಬ್ಬರಕ್ಕೆ ಕೂಡ ಸಮನಾಗಿಲ್ಲ. ನನ್ನ ಅಭಿಪ್ರಾಯದಲ್ಲಿ, ಇದನ್ನು ನೇರವಾಗಿ ಕನಿಷ್ಠ 2.5 ಲಕ್ಷ ರೂಪಾಯಿಗೆ ಹೆಚ್ಚಿಸಬೇಕು" ಎಂದು ಮುಂಬೈ ಮೂಲದ ತೆರಿಗೆ ಮತ್ತು ಹೂಡಿಕೆ ತಜ್ಞ ಬಲ್ವಂತ್ ಜೈನ್ ಹೇಳಿದ್ದಾರೆ
3) ಸ್ಟ್ಯಾಂಡರ್ಡ್ ಡಿಡಕ್ಷನ್ ಹೆಚ್ಚಳ
ಹಣಕಾಸು ಕಾಯ್ದೆ 2018ರ ಪ್ರಕಾರ, ವೇತನದಿಂದ 40,000 ರೂಪಾಯಿ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು ಪರಿಚಯಿಸಲಾಯಿತು. ಇದನ್ನು 2019 ರಲ್ಲಿ 50,000 ರೂ.ಗೆ ಹೆಚ್ಚಿಸಲಾಯಿತು. ಈಗ, ವೈದ್ಯಕೀಯ ವೆಚ್ಚಗಳು ಮತ್ತು ಇಂಧನದ ವೆಚ್ಚಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು 50,000 ರೂಪಾಯಿಯಿಂದ 1 ಲಕ್ಷ ರೂಪಾಯಿಗೆ ಹೆಚ್ಚಿಸಲು ಹೆಚ್ಚಿನ ಆಗ್ರಹವಿದೆ.
4) ಮನೆ ಖರೀದಿದಾರರಿಗೆ ಪರಿಹಾರ
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಯ ಪ್ರಸ್ತುತ ನಿಬಂಧನೆಗಳ ಪ್ರಕಾರ, ವಸತಿ ಮನೆಗಾಗಿ ತೆಗೆದುಕೊಂಡ ಗೃಹ ಸಾಲದ ಅಸಲು ಮೊತ್ತವನ್ನು ಮರುಪಾವತಿಸಲು ನಿಮ್ಮ ತೆರಿಗೆಗೆ ಒಳಪಡುವ ಆದಾಯದಿಂದ 1.5 ಲಕ್ಷ ರೂಪಾಯಿ ತನಕ ತೆರಿಗೆ ವಿನಾಯಿತಿ ಪಡೆಯಲು ನಿಮಗೆ ಅವಕಾಶವಿದೆ. ಜೀವ ವಿಮಾ ಪ್ರೀಮಿಯಂಗಳು, ಬೋಧನಾ ಶುಲ್ಕಗಳು, ಭವಿಷ್ಯ ನಿಧಿ ಮತ್ತು ಸಾರ್ವಜನಿಕ ಭವಿಷ್ಯ ನಿಧಿ ಮತ್ತು ಇಪಿಎಫ್‌ಗೆ ದೇಣಿಗೆಗಳು, ಇಎಲ್ಎಸ್ಎಸ್‌ನ ಹೂಡಿಕೆಗಳು, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು, ತೆರಿಗೆ ಉಳಿತಾಯ ಬ್ಯಾಂಕ್ ಎಫ್ಡಿಗಳು ಮುಂತಾದ ಇತರ ಅರ್ಹ ವೆಚ್ಚಗಳೊಂದಿಗೆ ಈ ಕಡಿತ ಲಭ್ಯವಿದೆ.
ಸೆಕ್ಷನ್ 80 ಸಿ, 80 ಸಿಸಿಸಿ ಮತ್ತು 80 ಸಿಸಿಡಿ (1) ರ ಜನದಟ್ಟಣೆ ಮತ್ತು ದೊಡ್ಡ ಗೃಹ ಸಾಲಗಳ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ಹಣಕಾಸು ಸಚಿವರು ಮುಂಬರುವ ಬಜೆಟ್‌ನಲ್ಲಿ ಗೃಹ ಸಾಲಗಳ ಮರುಪಾವತಿಗೆ ಪ್ರತ್ಯೇಕ ಕಡಿತವನ್ನು ಒದಗಿಸಬೇಕು. ಮೊದಲ ಬಾರಿಗೆ ಮನೆ ಖರೀದಿಸುವವರಿಗೆ ಗೃಹ ಸಾಲದ ಮೇಲಿನ ಬಡ್ಡಿಗೆ 2019 ರಲ್ಲಿ ಪ್ರತ್ಯೇಕ ಕಡಿತವನ್ನು ಪರಿಚಯಿಸಿದ ಸೆಕ್ಷನ್ 80 ಇಇಎಯಿಂದ ಹೆಚ್ಚುವರಿ ವಿನಾಯಿತಿಗೆ ಅವಕಾಶ ಮಾಡಿಕೊಡಬಹುದು" ಎಂದು ಬಲ್ವಂತ್ ಜೈನ್ ಹೇಳಿದರು.
5) 80ಡಿ ಕಡಿತ ಮಿತಿ ಹೆಚ್ಚಳ
ಕ್ಲಿಯರ್ ಟ್ಯಾಕ್ಸ್ ಸಂಸ್ಥಾಪಕ ಮತ್ತು ಸಿಇಒ ಅರ್ಚಿತ್ ಗುಪ್ತಾ ಅವರ ಪ್ರಕಾರ, ವೈದ್ಯಕೀಯ ವಿಮಾ ಪ್ರೀಮಿಯಂಗಳಿಗೆ ಸೆಕ್ಷನ್ 80 ಡಿ ಅಡಿಯಲ್ಲಿ ಕಡಿತ ಮಿತಿಯನ್ನು ವ್ಯಕ್ತಿಗಳಿಗೆ 25,000 ರೂಪಾಯಿಯಿಂದ 50,000 ರೂಪಾಯಿಗೆ ಮತ್ತು ಹಿರಿಯ ನಾಗರಿಕರಿಗೆ 50,000 ರೂಪಾಯಿಯಿಂದ 75,000 ರೂಪಾಯಿಗೆ ಹೆಚ್ಚಿಸಬೇಕು. ಹೊಸ ತೆರಿಗೆ ವ್ಯವಸ್ಥೆಗೆ ಸೆಕ್ಷನ್ 80 ಡಿ ಪ್ರಯೋಜನಗಳನ್ನು ವಿಸ್ತರಿಸುವುದರಿಂದ ಆರೋಗ್ಯ ರಕ್ಷಣೆಗೆ ಸಮಾನ ಅವಕಾಶವನ್ನು ಉತ್ತೇಜಿಸುತ್ತದೆ.
ಹಕ್ಕುತ್ಯಾಗ: ಮೇಲೆ ಹೇಳಿರುವ ಅಭಿಪ್ರಾಯ ಮತ್ತು ಶಿಫಾರಸು ವಿಶ್ಲೇಷಕರ ವೈಯಕ್ತಿಕ. ಅದು ಹಿಂದೂಸ್ತಾನ್ ಟೈಮ್ಸ್ ಕನ್ನಡದ ಅಭಿಪ್ರಾಯ, ಶಿಫಾರಸು ಅಲ್ಲ. ಯಾವುದೇ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಪ್ರಮಾಣೀಕೃತ ತಜ್ಞರೊಂದಿಗೆ ಪರಿಶೀಲಿಸಬೇಕು ಎಂದು ನಾವು ಹೂಡಿಕೆದಾರರಿಗೆ ಸಲಹೆ ನೀಡುತ್ತೇವೆ.
ವಿಭಾಗ