ದೆಹಲಿ ವಿವಿ ಮಾಜಿ ಪ್ರೊಫೆಸರ್ ಸಾಯಿಬಾಬಾ ನಿಧನ; ಮಾವೋವಾದಿಗಳ ಜೊತೆ ನಂಟಿನ ಆರೋಪದಿಂದ ಖುಲಾಸೆಗೊಂಡಿದ್ದ ಪ್ರಾಧ್ಯಾಪಕ
ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಸಾಯಿಬಾಬಾ ನಿಧನರಾಗಿದ್ದಾರೆ. ಶನಿವಾರ ಅಕ್ಟೋಬರ್ 12ರಂದು ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹೈದರಾಬಾದ್‌ನ ನಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಜಿಎನ್ ಸಾಯಿಬಾಬಾ ನಿಧನರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹೈದರಾಬಾದ್‌ನ ನಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಶನಿವಾರ ಅಕ್ಟೋಬರ್ 12 ರಾತ್ರಿ ಮೃತಪಟ್ಟಿದ್ದಾರೆ. ಪ್ರೊ.ಸಾಯಿಬಾಬಾ ಅವರು ರಾತ್ರಿ 8.45ಕ್ಕೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಹತ್ತು ದಿನಗಳ ಹಿಂದೆ ಅನಾರೋಗ್ಯದ ಕಾರಣ ನಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಮಾವೋವಾದಿಗಳೊಂದಿಗೆ ನಂಟು ಹೊಂದಿರುವ ಆರೋಪದ ಮೇಲೆ ಪ್ರೊಫೆಸರ್ ಸಾಯಿಬಾಬಾ ಅವರನ್ನು ಎನ್‌ಐಎ ಬಂಧಿಸಿತ್ತು. ಇತ್ತೀಚೆಗೆ ಆರೋಪ ಖುಲಾಸೆಗೊಂಡು ಜೈಲಿನಿಂದ ಬಿಡುಗಡೆಯಾಗಿದ್ದರು.
ಕಷ್ಟವನ್ನು ಹಿಮ್ಮೆಟ್ಟಿ ಬದುಕಿದ್ದ ಪ್ರೊ.ಸಾಯಿಬಾಬ
ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಪ್ರೊ.ಸಾಯಿಬಾಬಾ ಅವರನ್ನು ಬಂಧಿಸಲಾಗಿತ್ತು. ಅವರು ಸುಮಾರು 9 ವರ್ಷಗಳ ಕಾಲ ಜೈಲಿನಲ್ಲಿದ್ದರು. ಪ್ರೊ. ಸಾಯಿಬಾಬಾ ಅವರು ಆಂದ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಅಮಲಾಪುರಂನಲ್ಲಿ ಬಡ ರೈತ ಕುಟುಂಬದಲ್ಲಿ 1967ರಲ್ಲಿ ಜನಿಸಿದರು. ಐದನೇ ವಯಸ್ಸಿನಲ್ಲೇ ಪೋಲಿಯೊದಿಂದಾಗಿ ವೀಲ್‌ಚೇರ್‌ನಲ್ಲಿ ಕುಳಿತೇ ಜೀವನ ನಡೆಸುತ್ತಿದ್ದರು. ಪ್ರೊ. ಸಾಯಿಬಾಬಾ ಅವರು ದೆಹಲಿ ವಿಶ್ವವಿದ್ಯಾಲಯದ ರಾಮಲಾಲ್ ಆನಂದ ಕಾಲೇಜಿನಲ್ಲಿ ಹಲವು ವರ್ಷಗಳ ಕಾಲ ಇಂಗ್ಲಿಷ್ ಪಾಠ ಮಾಡುತ್ತಿದ್ದರು.
ಮಾವೋವಾದಿಗಳೊಂದಿಗೆ ಸಂಪರ್ಕವಿದೆ ಎಂಬ ಆರೋಪ
2014ರಲ್ಲಿ ಮಹಾರಾಷ್ಟ್ರ ಪೊಲೀಸರು ಮಾವೋವಾದಿಗಳ ಜತೆ ನಂಟು ಹೊಂದಿರುವ ಆರೋಪದ ಮೇಲೆ ದೆಹಲಿ ವಿಶ್ವವಿದ್ಯಾಲಯದ ರಾಮಲಾಲ್ ಆನಂದ್ ಕಾಲೇಜಿನ ಪ್ರಾಧ್ಯಾಪಕ ಸಾಯಿಬಾಬಾ ಅವರನ್ನು ಬಂಧಿಸಿದ್ದರು. ಅವರ ವಿರುದ್ಧ ಭಯೋತ್ಪಾದನಾ ಚಟುವಟಿಕೆಗಳ ತಡೆ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಗಳನ್ನು ದಾಖಲಿಸಲಾಗಿತ್ತು. 2017ರವರೆಗೆ ಪ್ರಕರಣದ ವಿಚಾರಣೆ ನಡೆಸಿದ ಗಡ್ಚಿರೋಲಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಸಾಯಿಬಾಬಾ ಮತ್ತು ಇತರ ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಪರಿಣಾಮವಾಗಿ, ಅವರನ್ನು ಫೆಬ್ರವರಿ 2021ರಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಯಿಂದ ತೆಗೆದುಹಾಕಲಾಗಿತ್ತು. ಆದರೆ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು ಮಾವೋವಾದಿಗಳೊಂದಿಗೆ ನಂಟು ಹೊಂದಿರುವ ಆರೋಪದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದ ಪ್ರೊಫೆಸರ್ ಸಾಯಿಬಾಬಾ ಮತ್ತು ಇತರ ಐವರನ್ನು ಖುಲಾಸೆಗೊಳಿಸಿತು. ಈ ಮೂಲಕ ಅವರು ಬಿಡುಗಡೆಯಾಗಿದ್ದರು.
ಬಾಂಬೆ ಹೈಕೋರ್ಟ್ 2022 ರಲ್ಲಿ ಸಾಯಿಬಾಬಾ ವಿರುದ್ಧದ ಪ್ರಕರಣವನ್ನು ವಜಾಗೊಳಿಸಿತು. ಆದರೆ ಮಹಾರಾಷ್ಟ್ರ ಸರ್ಕಾರ ತಕ್ಷಣವೇ ಈ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಹೈಕೋರ್ಟ್ ಮತ್ತೊಮ್ಮೆ ವಿಚಾರಣೆ ನಡೆಸಿ ಪ್ರೊಫೆಸರ್ ಸಾಯಿಬಾಬಾ ಮತ್ತು ಇತರ ಐವರನ್ನು ಬಿಡುಗಡೆ ಮಾಡಿತ್ತು.
ವಿಭಾಗ