ಹರಿಯಾಣ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್‌ಗೆ ಜಯಭೇರಿ, ಜಮ್ಮು ಮತ್ತು ಕಾಶ್ಮಿರದಲ್ಲಿ ಅತಂತ್ರ ವಿಧಾನಸಭೆ ಸಾಧ್ಯತೆ
ಹರಿಯಾಣ, ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ ಫಲಿತಾಂಶ: ಈಗಾಗಲೇ ಎಕ್ಸಿಟ್ ಪೋಲ್‌ಗಳು ಹರಿಯಾಣದಲ್ಲಿ ಕಾಂಗ್ರೆಸ್ ಭರ್ಜರಿ ಜಯಗಳಿಸಲಿದೆ ಎಂದಿವೆ. ಆದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಫಲಿತಾಂಶವು ಅತಂತ್ರ ವಿಧಾನಸಭೆಗೆ ದಾರಿಮಾಡಲಿದೆಯೇ?
ಹರಿಯಾಣ, ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ ಫಲಿತಾಂಶ: ಹರಿಯಾಣ, ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣಾ ಫಲಿತಾಂಶ ಏನಾಗಬಹುದು ಎಂದು ಎಲ್ಲರೂ ಕುತೂಹಲಗೊಂಡಿದ್ದಾರೆ. ಈಗಾಗಲೇ ಬಿಡುಗಡೆಗೊಂಡಿರುವ ಮತಗಟ್ಟೆ ಸಮೀಕ್ಷೆಗಳು ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಸಿಹಿ ಸುದ್ದಿ ನೀಡಿವೆ. ಚುನಾವಣಾ ಮತಗಟ್ಟೆ ಸಮೀಕ್ಷೆಗಳು ನಿಜವಾಗುತ್ತದೆಯೋ ಅಥವಾ ಸುಳ್ಳಾಗುತ್ತದೆಯೋ ಎನ್ನುವುದು ಬೇರೆಯ ವಿಷಯ. ಹರಿಯಾಣ ಮತ್ತು ಕಾಶ್ಮೀರದ ಫಲಿತಾಂಶದ ಕುರಿತು ಕಾಂಗ್ರೆಸ್ ತುಸು ಪಾಸಿಟಿವ್ ಆಗಿದೆ. ಏಕೆಂದರೆ, ಇವೆರಡು ಕಡೆ ಕಾಂಗ್ರೆಸ್ ಹೆಚ್ಚು ಸೀಟುಗಳನ್ನು ಬಾಚಿಕೊಳ್ಳುವ ತವಕದಲ್ಲಿದೆ. 90 ಸದಸ್ಯ ಬಲದ ಹರಿಯಾಣ ವಿಧಾನಸಭೆಯಲ್ಲಿ ಕಾಂಗ್ರೆಸ್ ನಿರ್ಣಾಯಕವಾಗಿ 65 ಸೀಟುಗಳನ್ನು ಬಾಚಿಕೊಳ್ಳುವ ಉಮೇದಿನಲ್ಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಎನ್‌ಸಿ ಕಾಂಗ್ರೆಸ್ ಸಿಪಿಎಂ ಮೈತ್ರಿಕೂಟಕ್ಕೆ ಬಿಜೆಪಿಗಿಂತ ಹೆಚ್ಚಿನ ಸೀಟುಗಳು ದೊರಕುವ ಸೂಚನೆಯಿದೆ. ಆದರೆ, ಈ ಸಂದರ್ಭದಲ್ಲಿ ಈ ಮೈತ್ರಿಕೂಟಕ್ಕೆ ಬಹುಮತದ ಕೊರತೆಯಾಗಬಹುದೇ ಎಂಬ ಪ್ರಶ್ನೆಯೂ ಎದ್ದಿದೆ. ಜಮ್ಮು ಮತ್ತು ಕಾಶ್ಮೀರದ ಫಲಿತಾಂಶ ಅತಂತ್ರ ವಿಧಾನಸಭೆಗೆ ದಾರಿ ಮಾಡಿಕೊಡುವುದೇ ಎಂಬ ಪ್ರಶ್ನೆಯೂ ಎದ್ದಿದೆ.
ಈಗಾಗಲೇ ಬಿಡುಗಡೆಗೊಂಡ ಎಕ್ಸಿಟ್ ಪೂಲ್‌ಗಳ ಪ್ರಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಎನ್‌ಸಿ ನೇತೃತ್ವದ ಮೈತ್ರಿಕೂಟವು ಹೆಚ್ಚು ಸ್ಥಾನ ಪಡೆಯಬಹುದು ಎಂದಿವೆ. ಹರಿಯಾಣದಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಎಲ್ಲಾದರೂ ಈ ಸಮೀಕ್ಷೆಗಳೇ ನಿಜವಾದರೆ ಜನರು ಬಿಜೆಪಿ ವಿರುದ್ಧ ಇದ್ದಾರೆ ಮತ್ತು ಇಂಡಿಯಾ ಬಣದ ಕುರಿತು ಆಸಕ್ತಿ ಹೊಂದಿದ್ದಾರೆ ಎಂಬ ಸಂದೇಶವನ್ನು ರವಾನಿಸಬಹುದು. ಮುಂದಿನ ತಿಂಗಳು ಮಹಾರಾಷ್ಟ್ರದಲ್ಲಿ ಮತ್ತು ಮುಂದಿನ ವರ್ಷದ ಆರಂಭದಲ್ಲಿ ಜಾರ್ಖಂಡ್ ಮತ್ತು ದೆಹಲಿಯಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುಣಾವಣೆಗಳ ಮೇಲೂ ಈ ಫಲಿತಾಂಶಗಳು ಪರಿಣಾಮ ಬೀರಲಿವೆ. ವಿಶೇಷವಾಗಿ ವಿರೋಧ ಪಕ್ಷಗಳಿಗೆ ಈ ಫಲಿತಾಂಶಗಳು ಟಾನಿಕ್ ನೀಡಲಿವೆ. ಕೇಂದ್ರ ಸರಕಾರಕ್ಕೆ ಇದು ಎಚ್ಚರಿಕೆಯ ಸಂದೇಶವೂ ಆಗಲಿದೆ.
ಈಗಾಗಲೇ ಹರಿಯಾಣದ ನಾಲ್ಕು ಸಮೀಕ್ಷೆಗಳು ಇಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದಿವೆ. ಈ ನಾಲ್ಕು ಸಮೀಕ್ಷೆಗಳಲ್ಲಿ ಮೂರು ಸಮೀಕ್ಷೆಗಳು ಕಾಂಗ್ರೆಸ್‌ಗೆ 50 ಅಥವಾ ಅದಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಸೂಚನೆಯನ್ನು ನೀಡಿವೆ. ಕಾಂಗ್ರೆಸ್ ಗರಿಷ್ಠ 65 ಸ್ಥಾನಗಳನ್ನು ಪಡೆಯಬಹುದು ಎಂದು ಕೆಲವು ಸಮೀಕ್ಷೆಗಳು ತಿಳಿಸಿವೆ. ದೈನಿಕ್ ಭಾಸ್ಕರ್ ಸಮೀಕ್ಷೆಯಲ್ಲಿ ಬಹುಮತದ ಸ್ಥಾನಗಳು 49 ಆಗಿದ್ದವು.
ಐದು ವರ್ಷಗಳ ಹಿಂದೆ ಕಿಂಗ್ ಮೇಕರ್ ಆಗಿದ್ದ ದುಶ್ಯಂತ್ ಚೌತಾಲಾ ನೇತೃತ್ವದ ಜೆಜೆಪಿ ಸಂಪೂರ್ಣವಗಿ ನೆಲಕಚ್ಚಲಿದೆ. ಐಎನ್‌ಎಲ್‌ಡಿ ಬಿಎಸ್‌ಪಿ ಮೈತ್ರಿಕೂಟಕ್ಕೂ ಗಮನಾರ್ಹ ಸೀಟುಗಳನ್ನು ಗೆಲ್ಲಲಾಗದು ಎಂದು ಎಲ್ಲಾ ಸಮೀಕ್ಷೆಗಳು ಮುನ್ನೋಟ ನೀಡಿವೆ.
ಇದೇ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಎನ್‌ಸಿ ಕಾಂಗ್ರೆಸ್ ಸಿಪಿಎಂ ಮೈತ್ರಿಕೂಟ ಬಿಜೆಪಿಗಿಂತ ಸ್ಪಷ್ಟ ಬಹುಮತ ಪಡೆಯಲಿದೆ. 2014ರಲ್ಲಿ ಬಿಜೆಪಿ ಜತೆ ಸರಕಾರ ರಚಿಸಿದ್ದ ಪಿಡಿಪಿ ನಾಶವಾಗುವುದು ಬಹುತೇಕ ಖಚಿತ ಎಂದು ಮೂರು ಸಮೀಕ್ಷೆಗಳು ಒಪ್ಪಿಕೊಂಡಿವೆ. ಹೀಗೆ, ಹರಿಯಾಣ ಮತ್ತು ಜಮ್ಮು ಕಾಶ್ಮೀರ ಫಲಿತಾಂಶ ಸಮೀಕ್ಷೆಗಳು ಹೇಳಿದಂತೆ ಕಾಂಗ್ರೆಸ್‌ಗೆ ವರವಾಗುವುದೇ ಕಾದು ನೋಡಬೇಕಿದೆ.