ಝೆರೋದಾದ ನಿಖಿಲ್ ಕಾಮತ್ ಭಾರತದ ಅತ್ಯಂತ ಕಿರಿಯ ಶತಕೋಟ್ಯಧಿಪತಿ; ಫೋರ್ಬ್ಸ್ 2024ರ ಪಟ್ಟಿಯಲ್ಲಿ ಇವರೆಲ್ಲ ಇದ್ದಾರೆ ಗಮನಿಸಿ
ಝೆರೋದಾ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಭಾರತದ ಅತ್ಯಂತ ಕಿರಿಯ ಶತಕೋಟ್ಯಧಿಪತಿ. ಅವರ ಸಂಪತ್ತು 3.1 ಶತಕೋಟಿ ಡಾಲರ್. ಇನ್ನು ದೇಶದ ಮುಂಚೂಣಿ ಉದ್ಯಮಿ ಮುಕೇಶ್ ಅಂಬಾನಿ ಅತ್ಯಂತ ಶ್ರೀಮಂತರಾಗಿ ಉಳಿದಿದ್ದಾರೆ. ಅಂದ ಹಾಗೆ, ಫೋರ್ಬ್ಸ್ 2024ರ ಪಟ್ಟಿಯಲ್ಲಿ ಇವರೆಲ್ಲ ಇದ್ದಾರೆ ಗಮನಿಸಿ.
ನವದೆಹಲಿ: ಜೆರೋಧಾ ಸಂಸ್ಥಾಪಕರಾದ ನಿತಿನ್ ಮತ್ತು ನಿಖಿಲ್ ಕಾಮತ್ ಮತ್ತು ಫ್ಲಿಪ್ಕಾರ್ಟ್ ಸಂಸ್ಥಾಪಕರಾದ ಸಚಿನ್ ಮತ್ತು ಬಿನ್ನಿ ಬನ್ಸಾಲ್ ಭಾರತದ ಅತ್ಯಂತ ಕಿರಿಯ ಶತಕೋಟ್ಯಧಿಪತಿಗಳಾಗಿ ಹೊರಹೊಮ್ಮಿದ್ದಾರೆ. ಫೋರ್ಬ್ಸ್ ಶತಕೋಟ್ಯಧಿಪತಿಗಳ ಪಟ್ಟಿ 2024 ರ ಪ್ರಕಾರ 37 ವರ್ಷದ ನಿಖಿಲ್ ಕಾಮತ್ 3.1 ಶತಕೋಟಿ ಡಾಲರ್ (258.69 ಶತಕೋಟಿ ರೂಪಾಯಿ) ನಿವ್ವಳ ಸಂಪತ್ತಿನೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಏತನ್ಮಧ್ಯೆ, ಮುಖೇಶ್ ಅಂಬಾನಿ 116 ಬಿಲಿಯನ್ ಡಾಲರ್ (9,680.46 ಶತ ಕೋಟಿ ರೂಪಾಯಿ) ನಿವ್ವಳ ಮೌಲ್ಯದೊಂದಿಗೆ ದೇಶದ ಶ್ರೀಮಂತ ವ್ಯಕ್ತಿಯಾಗಿ ಉಳಿದಿದ್ದಾರೆ. ಗೌತಮ್ ಅದಾನಿ 84 ಬಿಲಿಯನ್ ಡಾಲರ್ (7,009.98 ಶತಕೋಟಿ ರೂಪಾಯಿ) ನಿವ್ವಳ ಮೌಲ್ಯದೊಂದಿಗೆ 17 ನೇ ಸ್ಥಾನದಲ್ಲಿದ್ದಾರೆ.
ಫೋರ್ಬ್ಸ್ ಅತಿಶ್ರೀಮಂತರ ಪಟ್ಟಿಯಲ್ಲಿರುವ ಭಾರತದ ಶತಕೋಟ್ಯಧಿಪತಿಗಳು
ನಿಖಿಲ್ ಕಾಮತ್ 3.1 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ಫೋರ್ಬ್ಸ್ ಪಟ್ಟಿಯಲ್ಲಿ 1062 ನೇ ಸ್ಥಾನದಲ್ಲಿದ್ದಾರೆ. 41 ವರ್ಷದ ಬಿನ್ನಿ ಬನ್ಸಾಲ್ 1.4 ಬಿಲಿಯನ್ ಡಾಲರ್ (116.83 ಶತಕೋಟಿ ರೂಪಾಯಿ) ನಿವ್ವಳ ಮೌಲ್ಯ ಮತ್ತು 2152 ನೇ ಶ್ರೇಯಾಂಕದೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ. ಫ್ಲಿಪ್ಕಾರ್ಟ್ ಸಂಸ್ಥಾಪಕ ಸಚಿನ್ ಬನ್ಸಾಲ್ 1.4 ಬಿಲಿಯನ್ ಡಾಲರ್ (116.83 ಶತಕೋಟಿ ರೂಪಾಯಿ ) ನಿವ್ವಳ ಮೌಲ್ಯ ಮತ್ತು 2410 ನೇ ಶ್ರೇಯಾಂಕದೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.
ಬುರ್ಜೀಲ್ ಹೋಲ್ಡಿಂಗ್ಸ್ ಸಂಸ್ಥಾಪಕ ಶಂಶೀರ್ ವಯಲಿಲ್ 3.5 ಬಿಲಿಯನ್ ಡಾಲರ್ ನಿವ್ವಳ ಮೌಲ್ಯ ಮತ್ತು ಒಟ್ಟಾರೆ 920 ನೇ ಶ್ರೇಯಾಂಕದೊಂದಿಗೆ ಅಗ್ರ ಐದು ಸ್ಥಾನದಲ್ಲಿದ್ದಾರೆ. ವೇದಾಂತ್ ಫ್ಯಾಷನ್ಸ್ನ 47 ವರ್ಷದ ರವಿ ಮೋದಿ 2.6 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಝೇರೋಧಾ ಕಂಪನಿಯ ನಿಖಿಲ್- ನಿತಿನ್ ಯಶೋಗಾಥೆ
ನಿಖಿಲ್ ಕಾಮತ್ ಅವರು 2010ರಲ್ಲಿ ತಮ್ಮ ಅಣ್ಣ ನಿತಿನ್ ಕಾಮತ್ ಅವರೊಂದಿಗೆ ಸೇರಿ ರಿಯಾಯಿತಿ ಬ್ರೋಕರೇಜ್ ಝೇರೋಧಾ ಕಂಪನಿಯನ್ನು ಸ್ಥಾಪಿಸಿದ್ದರು. ಇದು ಭಾರತದ ಬ್ರೋಕರೇಜ್ ಮಾರುಕಟ್ಟೆಯಲ್ಲಿ ಆಮೂಲಾಗ್ರ ಸಂಚಲನ ಮೂಡಿಸಿತು. ಬೆಂಗಳೂರು ಮೂಲದ ಜೆರೋಧಾ 10 ಮಿಲಿಯನ್ ಗ್ರಾಹಕರನ್ನು ಹೊಂದಿದ್ದು, ಇದು ದೇಶದ ಅತಿದೊಡ್ಡ ಬ್ರೋಕರೇಜ್ ಸಂಸ್ಥೆಗಳಲ್ಲಿ ಒಂದಾಗಿದೆ" ಎಂದು ಫೋರ್ಬ್ಸ್ ತನ್ನ ಪಟ್ಟಿಯಲ್ಲಿ ಉದ್ಯಮಿಯ ಪರಿಚಯ ನೀಡುತ್ತ ಹೇಳಿದೆ.
2023ರ ಜೂನ್‌ನಲ್ಲಿ ತಮ್ಮ ಸಂಪತ್ತಿನ ಅರ್ಧದಷ್ಟು ನೀಡಲು ಬದ್ಧರಾಗಿರುವ ಅವರು ಗಿವಿಂಗ್ ಪ್ಲೆಡ್ಜ್‌ಗೆ ಸಹಿ ಹಾಕಿದ ಅತ್ಯಂತ ಕಿರಿಯ ಭಾರತೀಯರಾಗಿ ಕೂಡ ಇವರು ಗಮನಸೆಳೆದಿದ್ದರು.
ಫೋರ್ಬ್ಸ್ ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಹಲವಾರು ಪ್ರಮುಖ ಉದ್ಯಮಿಗಳು ಕಾಣಿಸಿಕೊಂಡಿದ್ದಾರೆ. ಈ ಪೈಕಿ 66 ವರ್ಷದ ಮುಖೇಶ್ ಅಂಬಾನಿ 9 ನೇ ಸ್ಥಾನದಲ್ಲಿದ್ದಾರೆ. ಗೌತಮ್ ಅದಾನಿ (84 ಬಿಲಿಯನ್ ಡಾಲರ್ ನಿವ್ವಳ ಮೌಲ್ಯ) 17 ನೇ ಸ್ಥಾನದಲ್ಲಿದ್ದರೆ, ಶಿವ ನಾಡರ್ (36.9 ಬಿಲಿಯನ್ ಡಾಲರ್ ನಿವ್ವಳ ಮೌಲ್ಯ) 39 ನೇ ಸ್ಥಾನದಲ್ಲಿದ್ದಾರೆ. ಸಾವಿತ್ರಿ ಜಿಂದಾಲ್ ಮತ್ತು ಕುಟುಂಬವು 33.5 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ 46 ನೇ ಸ್ಥಾನದಲ್ಲಿದೆ.
(ಏಜೆನ್ಸಿ ಮಾಹಿತಿಯೊಂದಿಗೆ ನೀಡಿರುವ ವರದಿ ಇದು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.