ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಭಾರತೀಯ ರಾಜಕೀಯದಲ್ಲಿ ನಿತೀಶ್ ಕುಮಾರ್ ಆಗಿರುವುದರ ಮಹತ್ವ, ಎಲ್ಲರ ಗಮನವೂ ಈಗ ಅವರತ್ತ, ಸರ್ಕಾರ ರಚನೆಯ ಕಸರತ್ತು

ಭಾರತೀಯ ರಾಜಕೀಯದಲ್ಲಿ ನಿತೀಶ್ ಕುಮಾರ್ ಆಗಿರುವುದರ ಮಹತ್ವ, ಎಲ್ಲರ ಗಮನವೂ ಈಗ ಅವರತ್ತ, ಸರ್ಕಾರ ರಚನೆಯ ಕಸರತ್ತು

ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿಗೆ ಸರಳ ಬಹುಮತ ಸಿಕ್ಕಿಲ್ಲ. ಹೀಗಾಗಿ ಈ ಬಾರಿ ಎನ್‌ಡಿಎಗೆ ಬಹುಮತ. ಮೈತ್ರಿ ಸರ್ಕಾರ ರಚನೆ ಕಾರಣ ಅನೇಕ ವಿಚಾರಗಳು ಮುನ್ನೆಲೆಗೆ ಬಂದಿವೆ. ಭಾರತೀಯ ರಾಜಕೀಯದಲ್ಲಿ ನಿತೀಶ್ ಕುಮಾರ್ ಆಗಿರುವುದರ ಮಹತ್ವ ಗಮನಸೆಳೆದಿದ್ದು, ಎಲ್ಲರ ಗಮನವೂ ಈಗ ಅವರತ್ತ ತಿರುಗಿದೆ. ಇದರ ನಡುವೆ ಸರ್ಕಾರ ರಚನೆಯ ಕಸರತ್ತು ಮುಂದುವರಿದಿದೆ.

ಭಾರತೀಯ ರಾಜಕೀಯದಲ್ಲಿ ನಿತೀಶ್ ಕುಮಾರ್ ಆಗಿರುವುದರ ಮಹತ್ವ, ಎಲ್ಲರ ಗಮನವೂ ಈಗ ಅವರತ್ತ, ಸರ್ಕಾರ ರಚನೆಯ ಕಸರತ್ತು (ಸಾಂದರ್ಭಿಕ ಚಿತ್ರ)
ಭಾರತೀಯ ರಾಜಕೀಯದಲ್ಲಿ ನಿತೀಶ್ ಕುಮಾರ್ ಆಗಿರುವುದರ ಮಹತ್ವ, ಎಲ್ಲರ ಗಮನವೂ ಈಗ ಅವರತ್ತ, ಸರ್ಕಾರ ರಚನೆಯ ಕಸರತ್ತು (ಸಾಂದರ್ಭಿಕ ಚಿತ್ರ)

ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಯಾವ ಪಕ್ಷಕ್ಕೂ ಸರಳ ಬಹುಮತ ಸಿಕ್ಕಿಲ್ಲ. ಆದರೆ, ಎನ್‌ಡಿಎ ಮತ್ತು ಇಂಡಿಯಾ ಎಂಬ ಎರಡು ಪ್ರಮುಖ ಮೈತ್ರಿಕೂಟಗಳ ಪೈಕಿ ಎನ್‌ಡಿಎ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಸಿಕ್ಕಿದೆ. ಆದರೆ, ಭಾರತದ ರಾಜಕೀಯ ಪರಿಸ್ಥಿತಿ ಹೇಗಿದೆ ಎಂದರೆ ಮಿತ್ರ ಪಕ್ಷಗಳ ಪೈಕಿ ಕೆಲವು ಪಕ್ಷಗಳು ಪದೇಪದೆ ಮೈತ್ರಿ ಬದಲಾಯಿಸಿಕೊಳ್ಳುವ ಪ್ರವೃತ್ತಿ ಹೊಂದಿರುವ ಕಾರಣ ಮೈತ್ರಿ ಸರ್ಕಾರ ರಚನೆ ಕಸರತ್ತು ಸುಲಭವಲ್ಲ ಎಂಬುದು ಸ್ಪಷ್ಟ.

ಟ್ರೆಂಡಿಂಗ್​ ಸುದ್ದಿ

ಬಿಹಾರದ ಲೋಕಸಭಾ ಚುನಾವಣಾ ಫಲಿತಾಂಶಗಳು ರಾಷ್ಟ್ರ ರಾಜಕಾರಣದಲ್ಲಿ ತ್ರಿಕೋನ ರಾಜಕೀಯ ಲೆಕ್ಕಾಚಾರಕ್ಕೆ ಕಾರಣವಾಗಿದೆ. ಹೀಗಾಗಿ, ಭಾರತದ ರಾಜಕೀಯದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಗಿರುವುದರ ಮಹತ್ವವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಇನ್ನೇನು ನಿತೀಶ್ ಕುಮಾರ್ ಆಟ ಮುಗಿದೇ ಬಿಡ್ತು ಎನ್ನುವಷ್ಟರಲ್ಲಿ, ಅವರು ಮತ್ತೆ ಪುಟಿದೇಳುವ ಸನ್ನಿವೇಶ ನಿರ್ಮಾಣವಾಗಿದೆ.

ನಿತೀಶ್ ಕುಮಾರ್ ಅವರು ಎನ್‌ಡಿಎ ಜೊತೆಗಿನ ಸುದೀರ್ಘ ಮೈತ್ರಿ ಮುರಿದುಕೊಂಡು ಗ್ರ್ಯಾಂಡ್ ಅಲಯನ್ಸ್ (ಮಹಾಗಟ ಬಂಧನ್‌) ಸೇರಿದ್ದರು. ಅದಾಗಿ, ಈ ಸಲದ ಚುನಾವಣೆಗೆ ಮೊದಲು ಪುನಃ ಎನ್‌ಡಿಎ ಒಕ್ಕೂಟ ಸೇರಿದ್ದರು. ಬಿಹಾರದಲ್ಲಷ್ಟೇ ಪ್ರಾಬಲ್ಯವನ್ನು ಉಳಿಸಿಕೊಂಡಿರುವ ಜೆಡಿಯು, ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಪಾತ್ರವಹಿಸುತ್ತಿರುವುದು ಇದೇ ಮೊದಲ್ಲ. ಅದರಲ್ಲೂ ನಿತೀಶ್ ಕುಮಾರ್ ಅವರ ರಾಜಕೀಯ ಜಾಣ್ಮೆ, ಅವಕಾಶ ಬಳಸಿಕೊಳ್ಳುವ ರೀತಿ ರಾಜಕೀಯ ವಲಯವನ್ನು ಮೂಗಿನ ಮೇಲೆ ಬೆರಳು ಇಟ್ಟುಕೊಂಡು ನೋಡುವಂತೆ ಮಾಡಿದೆ.

ಲೋಕಸಭಾ ಫಲಿತಾಂಶ ಪ್ರಕಟವಾಗಿರುವುದು ಗಮನಿಸಿದರೆ, ಬಿಜೆಪಿ ಸ್ವಂತವಾಗಿ 272ರ ಗಡಿ ದಾಟಿಲ್ಲ. ಇಂತಹ ಸನ್ನಿವೇಶದಲ್ಲಿ ಇಂಡಿಯಾ ಬ್ಲಾಕ್ ಸಹಜವಾಗಿಯೇ ತನ್ನ ಹಳೆಯ ದೋಸ್ತಿ, ಮಿತ್ರ ಪಕ್ಷದ ನಾಯಕ ಎಂಬ ಭಾವನೆಯಲ್ಲಿ ಇಂಡಿಯಾ ಬ್ಲಾಕ್‌ ನಿತೀಶ್ ಕುಮಾರ್ ಅವರ ಕಡೆಗೆ ನೋಟ ಹರಿಸಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರಷ್ಟೇ ಅಲ್ಲ, ಎನ್‌ಸಿಪಿಯ ಶರದ್ ಪವಾರ್ ಕೂಡ ನಿತೀಶ್ ಕುಮಾರ್ ಸಂಪರ್ಕದಲ್ಲಿದ್ದಾರೆ. ಇದು ಕುತೂಹಲ ಕೆರಳಿಸುವಂತಹ ರಾಜಕಾರಣ.

ಜೆಡಿಯು ಬಿಹಾರದ ರಾಜ್ಯ ಅಧ್ಯಕ್ಷ ಉಮೇಶ್ ಕುಶ್ವಾಹಾ ಅವರು ಮೈತ್ರಿ ವಿಚಾರವಾಗಿ ಮಾತನಾಡುತ್ತ, ನಿತೀಶ್ ಕುಮಾರ್ ಅವರ ಕೆಲಸ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ಷಮತೆಗೆ ಬಿಹಾರದ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಜೆಡಿಯು ತಾನು ಸ್ಪರ್ಧಿಸಿದ ಎಲ್ಲಾ ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದ್ದರು.

ಭಾರತದ ರಾಜಕೀಯದಲ್ಲಿ ನಿತೀಶ್ ಕುಮಾರ್ ಆಗಿರುವುದು ಎಂದರೆ…

ಬಿಹಾರದ ವಿಧಾನಸಭೆಯಲ್ಲಿ 2005 ರಿಂದ ಸಂಖ್ಯಾಬಲ ಇದ್ದರೂ ಅಥವಾ ಇಲ್ಲದೇ ಇರುವಾಗಲೂ ಸುಮಾರು 18 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದವರು ನಿತೀಶ್ ಕುಮಾರ್‌. ಅದಾದ ನಂತರವೂ ಬಿಹಾರ ರಾಜಕೀಯದಲ್ಲಿ ನಿತೀಶ್ ಅವರ ನಿರಂತರ ಅನಿವಾರ್ಯತೆ ಕಾಣುತ್ತದೆ. ಎರಡು ದೊಡ್ಡ ಪಕ್ಷಗಳಾದ ಬಿಜೆಪಿ ಮತ್ತು ಆರ್‌ಜೆಡಿಗೆ ವಿಶ್ವಾಸಾರ್ಹವಾದ ಪರ್ಯಾಯವಾಗಿ ಕಾಣುತ್ತಿದೆ. ಆದರೂ, ಆತ್ಮವಿಶ್ವಾಸದ ಕೊರತೆಯ ಪರಿಣಾಮವಾಗಿ ನಿತೀಶ್ ಅವರ ಅನಿಯಂತ್ರಿತ ನಡವಳಿಕೆ ಅವರನ್ನು ಸಂದೇಹದಿಂದ ನೋಡುವಂತೆ ಮಾಡಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ಕಳೆದ ಕೆಲವು ವರ್ಷಗಳ ಅವಧಿಯಲ್ಲಿ ನಿತೀಶ್ ಕುಮಾರ್ ಅವರ ಮೇಲಾಗಿರುವ ದಾಳಿಯನ್ನು ಗಮನಿಸಿ. ಅಷ್ಟಾದರೂ ಅವರು ಪ್ರಾಮುಖ್ಯವನ್ನು ಕಳೆದುಕೊಂಡಿಲ್ಲ. ತ್ರಿಕೋನ ರಾಜಕಾರಣದಲ್ಲಿ ಜೆಡಿಯುಗೆ ಒಂದು ಸ್ಥಾನ ಇದ್ದೇ ಇದೆ. ಬಿಜೆಪಿ ಮತ್ತು ಆರ್‌ಜೆಡಿಗೆ ಇದು ಗೊತ್ತಿದೆ. ಈ ಸಲದ ಚುನಾವಣೆಯಲ್ಲಿ ಬಿಹಾರದಲ್ಲಿ ಬಿಜೆಪಿಗಿಂತ ಒಂದು ಸ್ಥಾನ ಕಡಿಮೆ ಸ್ಪರ್ಧಿಸಿದ್ದ ಜೆಡಿಯು ಉತ್ತಮ ಫಲಿತಾಂಶ ಪಡೆದಿದೆ ಎಂಬುದರ ಕಡೆಗೆ ಸಾಮಾಜಿಕ ವಿಶ್ಲೇಷಕ ಡಿಎಂ ದಿವಾಕರ್‌ ಗಮಸೆಳೆಯುತ್ತಾರೆ.

ನಿತೀಶ್ ಕೆಲವೊಮ್ಮೆ ರಾಜಕೀಯ ಪ್ರಭಾವವನ್ನು ಕಳೆದುಕೊಂಡಂತೆ ತೋರಬಹುದು, ಆದರೆ ಅವರು ಯಾವಾಗಲೂ ಎರಡು ದೊಡ್ಡ ಪಕ್ಷಗಳಲ್ಲಿ ಯಾವುದೂ ಪರ್ಯಾಯವಾಗಿ ಪ್ರದರ್ಶಿಸಲು ಸಾಧ್ಯವಾಗದ ಮುಖಬೆಲೆಯನ್ನು ನಿತೀಶ್‌ ಹೊಂದಿದ್ದಾರೆ. ನಿತೀಶ್‌ ಕುಮಾರ್ ಅವರಿಗೆ ಅವರೇ ಸಾಟಿ. ಇದನ್ನು ಜನರು ಮನಗಂಡಿದ್ದಾರೆ ಮತ್ತು ಅದು ಅವರಲ್ಲಿ ಮತ್ತೆ ಮತ್ತೆ ರಾಜಕೀಯವಾಗಿ ಜೀವಂತಿಕೆಯನ್ನು ತುಂಬುವ ವಿಲಕ್ಷಣ ಜಾಣ್ಮೆಯನ್ನು ನೀಡುತ್ತದೆ.

ಬಿಜೆಪಿ ಬಹುಮತದ ಗಡಿ ದಾಟದು ಎಂಬ ಸುಳಿವು ಸಿಗುತ್ತಲೇ ಇಂಡಿಯಾ ಬ್ಲಾಕ್ ನಾಯಕರು, ನಿತೀಶ್ ಕುಮಾರ್ ಅವರತ್ತ ನೋಡಲಾರಂಭಿಸಿದ ರೀತಿ ಗಮನಿಸಿ ನೋಡಿ. ಇದು ನಿತೀಶ್ ಕುಮಾರ್ ಅವರು ತಮ್ಮ ರಾಜಕೀಯ ಕಾರ್ಡ್‌ಗಳನ್ನು ಎಷ್ಟು ಚೆನ್ನಾಗಿ ಆಡುತ್ತಾರೆ ಎಂಬುದನ್ನು ಎತ್ತಿ ತೋರಿಸುತ್ತದೆ.

"ಅವರು ಬಿಜೆಪಿ ಮತ್ತು ಪ್ರತಿಪಕ್ಷಗಳೆರಡಕ್ಕೂ ನಿರ್ಣಾಯಕರಾಗಿದ್ದಾರೆ ಮತ್ತು ಈಗ ಅವರು ವಿಷಯಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು. ಆದರೆ ಅವರು ಹೇಗೆ ವರ್ತಿಸುತ್ತಾರೆ ಎಂಬುದನ್ನು ಕಾಲವೇ ನಿರ್ಣಯಿಸಬಹುದಷ್ಟೆ. ಏಕೆಂದರೆ ಅವರ ನಿರ್ಧಾರಗಳು ಅವರದು ಮಾತ್ರ" ಎಂದು ದಿವಾಕರ್ ಹೇಳಿದರು.

ಭಾರತದ ರಾಜಕಾರಣದಲ್ಲಿ ನಿತೀಶ್‌ ಕುಮಾರ್ ಅವರಿಗೆ ಅವರೇ ಸಾಟಿ, ಅವರಂತೆ ಮತ್ತೊಬ್ಬರಿಲ್ಲ

ನಿತೀಶ್ ಕುಮಾರ್ ಅವರ ರಾಜಕಾರಣದ ಶೈಲಿಯನ್ನು ವಿಶ್ಲೇಷಣೆ ಮಾಡಿದ ಮತ್ತೊಬ್ಬ ಸಾಮಾಜಿಕ ವಿಶ್ಲೇಷಕ ಎನ್‌ಕೆ ಚೌಧರಿ, ಚುನಾವಣೆ ಸಮೀಪದಲ್ಲಿರುವಾಗ ನಿತೀಶ್ ಕುಮಾರ್ ಅವರ ಜೊತೆಗಿನ ಮೈತ್ರಿ ಕಡಿದುಕೊಳ್ಳುವುದರಿಂದ ಆಗುವ ಪರಿಣಾಮವನ್ನು ಆರ್‌ಜೆಡಿ ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ಈ ಸಲದ ಚುನಾವಣಾ ಫಲಿತಾಂಶದಲ್ಲಿ ಕಂಡುಕೊಂಡಿದ್ದಾರೆ. ಎರಡೂ ಪಕ್ಷಗಳು ಉತ್ತಮ ಸಾಧನೆ ತೋರುವಲ್ಲಿ ವಿಫಲವಾಗಿವೆ. ಈ ಎರಡೂ ಪಕ್ಷಗಳಿಗೆ ಹೋಲಿಸಿದರೆ, ಸಿಪಿಐಎಂಎಲ್ ಎರಡು ಸ್ಥಾನ ಗೆದ್ದು ಉತ್ತಮ ಸಾಧನೆ ತೋರಿದೆ ಎಂಬುದರ ಕಡೆಗೆ ಗಮನಸೆಳೆದರು.

ನಿತೀಶ್ ಕುಮಾರ್ ಅವರ ಚಿತ್ರಣ ಮತ್ತು ಆರ್‌ಜೆಡಿಯ ಸಂಖ್ಯಾ ಬಲವು ವಿಷಯಗಳನ್ನು ಸಂಪೂರ್ಣವಾಗಿ ವಿಭಿನ್ನವಾಗಿ ಕಾಣಿಸಬಹುದು. ನರೇಂದ್ರ ಮೋದಿಯವರ ಜನಪ್ರಿಯತೆಯ ಉತ್ತುಂಗದಲ್ಲಿ ಬಿಜೆಪಿಯ ಜೊತೆಗೆ ನಿತೀಶ್ ಕುಮಾರ್ ಮೈತ್ರಿ ಕಡಿದುಕೊಂಡಿದ್ದರು. 2015ರ ಪ್ರದರ್ಶನವನ್ನು ಪುನರಾವರ್ತಿಸಲು ಇದು ಮತ್ತೊಂದು ಆಯ್ಕೆಯಾಗಿ ಹೊರಹೊಮ್ಮಬಹುದು. ನಿತೀಶ್ ಅವರು ಇಲ್ಲದೇ ಚುನಾವಣೆ ಎದುರಿಸಿದ ಆರ್‌ಜೆಡಿ ಮತ್ತು ಬಿಜೆಪಿ ಎರಡಕ್ಕೂ ಮೈತ್ರಿಯ ಮಹತ್ವ ಮನವರಿಕೆ ಆಗಿರುತ್ತದೆ ಎಂದು ಚೌಧರಿ ವಿವರಿಸಿದರು. ಬಿಹಾರದಲ್ಲಿ ನಿತೀಶ್ ಯಾರ ಜೊತೆಗೆ ಮೈತ್ರಿ ಮಾಡಿಕೊಳ್ಳುತ್ತಾರೋ ಅವರು ಅಧಿಕಾರದಲ್ಲಿರುವುದು ಇತ್ತೀಚಿನ ವಾಡಿಕೆಯಾಗಿಬಿಟ್ಟಿದೆ. ಇದು ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆ ಮಟ್ಟಿಗೆ ಮಹತ್ವದ್ದಾಗಿರಲಿದೆ.

ಆದಾಗ್ಯೂ, ರಾಜಕೀಯದ ಲೆಕ್ಕಾಚಾರಗಳನ್ನು ಬದಲಾಯಿಸಲು 2024 ರ ಲೋಕಸಭಾ ಚುನಾವಣೆಯ ವೇಳೆ ನಿತೀಶ್ ಕುಮಾರ್ ಮತ್ತೆ ಎನ್‌ಡಿಎ ಸೇರಿದರು. ಇನ್ನು ಮುಂದೆ ಎನ್‌ಡಿಎ ಮೈತ್ರಿಕೂಟ ಬಿಡುವುದಿಲ್ಲ ಎಂದು ಪ್ರತಿಜ್ಞೆಯನ್ನೂ ಮಾಡಿದರು. ಆದರೆ, ರಾಜಕೀಯದಲ್ಲಿ ಇಂತಹ ಪ್ರತಿಜ್ಞೆ, ಶಪಥಗಳು ಅಂತಿಮವಲ್ಲ. ಪರಿಸ್ಥಿತಿಗಳು ಎಂತಹ ನಿರ್ಧಾರಗಳನ್ನಾದರೂ ಬದಲಾಯಿಸಿಬಿಡುತ್ತವೆ. ಎಲ್ಲದಕ್ಕಿಂತ ಮಿಗಿಲಾಗಿ ನಿತೀಶ್ ಕುಮಾರ್ ಅವರಿಗೆ ಈ ವಿಚಾರ ಎಲ್ಲರಿಗಿಂತ ಚೆನ್ನಾಗಿ ಗೊತ್ತು.

ಭಾವಾನುವಾದ - ಉಮೇಶ್ ಕುಮಾರ್ ಶಿಮ್ಲಡ್ಕ

ಮೂಲ ಬರಹ- ಅರುಣ್ ಕುಮಾರ್

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024