ಕನ್ನಡ ಸುದ್ದಿ  /  Nation And-world  /  India News Union Govt Approves 17 Pc Salary Hike For Over 1 Lakh Lic Employees Effective From Aug 2022 Lic Updates Uks

Salary Hike: ಎಲ್‌ಐಸಿ ಉದ್ಯೋಗಿಗಳ ವೇತನ ಶೇಕಡ 17 ಹೆಚ್ಚಳ; 2022ರ ಆಗಸ್ಟ್‌ನಿಂದ ಪೂರ್ವಾನ್ವಯ, 1 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು

ಹೋಳಿ ಹಬ್ಬ ಸನಿಹದಲ್ಲಿರುವಾಗ ಎಲ್‌ಐಸಿ ಉದ್ಯೋಗಿಗಳಿಗೆ ಶುಭ ಸುದ್ದಿ. 2022ರ ಆಗಸ್ಟ್‌ 1ರಿಂದ ಪೂರ್ವಾನ್ವಯವಾಗುವಂತೆ ವೇತನ ಹೆಚ್ಚಳ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ. ಇದರ ವಿವರ ಇಲ್ಲಿದೆ.

ಎಲ್‌ಐಸಿ ಉದ್ಯೋಗಿಗಳ ವೇತನ ಶೇಕಡ 17 ಹೆಚ್ಚಳವಾಗಿದ್ದು 2022ರ ಆಗಸ್ಟ್‌ನಿಂದ ಪೂರ್ವಾನ್ವಯವಾಗಿ ಜಾರಿಯಾಗುತ್ತಿದೆ. (ಸಾಂಕೇತಿಕ ಚಿತ್ರ)
ಎಲ್‌ಐಸಿ ಉದ್ಯೋಗಿಗಳ ವೇತನ ಶೇಕಡ 17 ಹೆಚ್ಚಳವಾಗಿದ್ದು 2022ರ ಆಗಸ್ಟ್‌ನಿಂದ ಪೂರ್ವಾನ್ವಯವಾಗಿ ಜಾರಿಯಾಗುತ್ತಿದೆ. (ಸಾಂಕೇತಿಕ ಚಿತ್ರ)

ನವದೆಹಲಿ: ಎಲ್‌ಐಸಿ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಹೋಳಿ ಹಬ್ಬಕ್ಕೆ ಮುಂಗಡವಾಗಿ ಉಡುಗೊರೆ ಘೋಷಿಸಿದೆ. ಕೇಂದ್ರ ಸರ್ಕಾರವು ಲೈಫ್‌ ಇನ್ಶೂರೆನ್ಸ್‌ ಕಾರ್ಪೊರೇಷನ್‌ ಆಫ್ ಇಂಡಿಯಾ (ಎಲ್‌ಐಸಿ)ಯ 1.10 ಲಕ್ಷ ಉದ್ಯೋಗಿಗಳ ವೇತನವನ್ನು ಶೇಕಡ 17 ರಷ್ಟು ಏರಿಕೆ ಮಾಡುವ ಪ್ರಸ್ತಾವನೆಯನ್ನು ಅಂಗೀಕರಿಸಿದೆ.

ಇತ್ತೀಚೆಗಷ್ಟೇ ಸಾರ್ವಜನಿಕ ವಲಯದ ಬ್ಯಾಂಕ್ ಉದ್ಯೋಗಿಗಳ ವೇತನವನ್ನು ಹೆಚ್ಚಳ ಮಾಡಿದ್ದ ಕೇಂದ್ರ ಸರ್ಕಾರ ಈಗ ದೇಶದ ಅತಿದೊಡ್ಡ ವಿಮಾ ಕಂಪನಿಯ ಉದ್ಯೋಗಿಗಳ ವೇತನವನ್ನು ಹೆಚ್ಚಿಸಿದೆ. ಇದು 2022ರ ಆಗಸ್ಟ್‌ 1ರಿಂದ ಪೂರ್ವಾನ್ವಯವಾಗುವಂತೆ ಜಾರಿಗೊಳ್ಳುತ್ತಿದೆ.

ಇದನ್ನು ಲೈಫ್‌ ಇನ್ಶೂರೆನ್ಸ್‌ ಕಾರ್ಪೊರೇಷನ್‌ ಆಫ್ ಇಂಡಿಯಾ ಖಚಿತಪಡಿಸಿದೆ. ಇದಲ್ಲದೆ, ಎಲ್‌ಐಸಿಯ 2010ರ ಏಪ್ರಿಲ್ 1ರ ನಂತರ ಸೇರಿದ ಸುಮಾರು 24,000 ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್‌) ಕೊಡುಗೆಯನ್ನು ಶೇಕಡ 10 ರಿಂದ ಶೇಕಡ 14ಕ್ಕೆ ಹೆಚ್ಚಿಸಲಾಗಿದೆ ಎಂದು ಎಲ್‌ಐಸಿ ತಿಳಿಸಿದೆ.

ವೇತನ ಪರಿಷ್ಕರಣೆ ಪ್ರಯೋಜನ ಎಷ್ಟು ಜನರಿಗೆ

ಈ ವೇತನ ಪರಿಷ್ಕರಣೆಯು ಎಲ್‌ಐಸಿಯ 1.10 ಲಕ್ಷ ಉದ್ಯೋಗಿಗಳಿಗೆ ನೇರ ಪ್ರಯೋಜನವನ್ನು ಒದಗಿಸಿದೆ. ಇದಲ್ಲದೆ, ಎಲ್‌ಐಸಿಯ ಪಿಂಚಣಿದಾರರಾದ 30,000 ನಿವೃತ್ತ ಉದ್ಯೋಗಿಗಳಿಗೂ ಅವರ ಕುಟುಂಬದವರಿಗೂ ಏಕ ಕಂತಿನ ಪರಿಹಾರ ಧನವೂ ಒದಗಿಸುತ್ತಿದೆ. ಹಾಲಿ ಉದ್ಯೋಗಿಗಳ ಪೈಕಿ 24,000 ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಕೊಡುಗೆ ಪ್ರಮಾಣ ಶೇಕಡ 10ರಿಂದ 14ಕ್ಕೆ ಏರಿಕೆಯಾಗಿದೆ.

ವೇತನ ಹೆಚ್ಚಳದ ವೆಚ್ಚ ಎಷ್ಟು?

ಈ ವೇತನ ಪರಿಷ್ಕರಣೆಯಿಂದಾಗಿ ಎಲ್‌ಐಸಿಗೆ ವಾರ್ಷಿಕ 4000 ಕೋಟಿ ರೂಪಾಯಿ ಹೆಚ್ಚು ವ್ಯಯಿಸಬೇಕಾಗುತ್ತದೆ. ಇದಲ್ಲದೆ, ಒಮ್ಮೆ ವೇತನ ಹೆಚ್ಚಳ ಅನುಷ್ಠಾನಗೊಂಡರೆ ವಾರ್ಷಿಕ ವೇತನ ವೆಚ್ಚ 29,000 ಕೋಟಿ ರೂಪಾಯಿಗೆ ಏರಿಕೆಯಾಗಲಿದೆ. ಪ್ರಸಕ್ತ ವರ್ಷ, ಹಿಂದಿನ ವೇತನ ಬಾಕಿ ಎಲ್ಲ ಪಾವತಿಸಬೇಕಾಗಿರುವ ಕಾರಣ ಒಟ್ಟು ವೇತನ ವೆಚ್ಚ 32,000 ಕೋಟಿ ರೂಪಾಯಿ ದಾಟಲಿದೆ ಎಂದು ಕಂಪನಿ ಮೂಲಗಳು ತಿಳಿಸಿದೆ.

ಬ್ಯಾಂಕ್ ಉದ್ಯೋಗಿಗಳ ವೇತನ ಪರಿಷ್ಕರಣೆ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಅಂಗೀಕರಿಸಿತ್ತು. ಶೇಕಡ 17 ವೇತನ ಹೆಚ್ಚಳದ ಪ್ರಸ್ತಾವನೆ ಅದಾಗಿತ್ತು. ಇದು 2022ರ ನವೆಂಬರ್ 1ರಿಂದ ಪೂರ್ವಾನ್ವಯವಾಗುವಂತೆ ಜಾರಿಯಾಗಿತ್ತು.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point