Mauni Baba: ಪ್ರಧಾನಿ ಕುರಿತು 'ಮೌನಿ ಬಾಬಾ' ಹೇಳಿಕೆಗೆ ಖರ್ಗೆ ಮೇಲೆ ರಾಜ್ಯಸಭೆ ಸಭಾಪತಿ ಗರಂ: ಆ ಬಳಿಕ ಆಗಿದ್ದೇನು?
ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಅದಾನಿ ವಿವಾದ ಪ್ರತಿಧ್ವನಿಸುತ್ತಿದ್ದು, ಅದಾನಿ ವಿಷಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 'ಮೌನಿ ಬಾಬಾ' ಆಗಿದ್ದಾರೆ ಎಂಬ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ, ರಾಜ್ಯಸಭೆ ಸಭಾಪತಿ ಜಗದೀಪ್ ಧನ್ಕರ್ ಗರಂ ಆದ ಘಟನೆ ನಡೆದಿದೆ. ಈ ಕುರಿತು ಇಲ್ಲಿದೆ ಮಾಹಿತಿ..
ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಅದಾನಿ ವಿವಾದ ಪ್ರತಿಧ್ವನಿಸುತ್ತಿದ್ದು, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಿಪಕ್ಷಗಳು ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡು ತೀವ್ರ ವಾಗ್ದಾಳಿ ನಡೆಸುತ್ತಿವೆ. ಈ ಮಧ್ಯೆ ಅದಾನಿ ವಿಷಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 'ಮೌನಿ ಬಾಬಾ' ಆಗಿದ್ದಾರೆ ಎಂಬ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ, ರಾಜ್ಯಸಭೆ ಸಭಾಪತಿ ಜಗದೀಪ್ ಧನ್ಕರ್ ಗರಂ ಆದ ಘಟನೆ ನಡೆದಿದೆ.
ಉದ್ಯಮಿ ಗೌತಮ ಅದಾನಿ ಕಂಪನಿಗಳ ವ್ಯವಹಾರ ಕುರಿತ ಚರ್ಚೆ ಇಂದೂ ಸಂಸತ್ನಲ್ಲಿ ಪ್ರತಿದ್ವನಿಸಿತು. ಈ ಕುರಿತು ರಾಜ್ಯಸಭೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಹಿಂಡನ್‌ಬರ್ಗ್ ವಿವಾದವನ್ನು ಜಂಟಿ ಸದನ ಸಮಿತಿಗೆ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿದರು. ಆದರೆ ಅದಾನಿ ವಿಷಯದಲ್ಲಿ ಪ್ರಧಾನಿ ಮೋದಿ 'ಮೌನಿ ಬಾಬಾ' ಆಗಿದ್ದಾರೆ ಎಂಬ ಖರ್ಗೆ ಹೇಳಿಕೆಗೆ, ರಾಜ್ಯಸಭೆ ಸಭಾಪತಿ ಜಗದೀಪ್ ಧನ್ಕರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಅದಾನಿ ವಿವಾದದ ಕುರಿತು ಮಾತನಾಡಿದ ಖರ್ಗೆ, ಉದ್ಯಮಿ ಅದಾನಿ ಹಾಗೂ ಪ್ರಧಾನಿ ಮೋದಿ ನಡುವಿನ ಸ್ನೇಹ ಸಂಬಂಧದ ಕುರಿತು ಇಡೀ ದೇಶ ಮಾತನಾಡುತ್ತಿದೆ. ಇವರಿಬ್ಬರ ಈ ಸ್ನೇಹ ಸಂಬಂಧ ದೇಶಕ್ಕೆ ಹಾನಿ ಮಾಡುತ್ತಿದೆ. ಅದಾನಿ ವಿವಾದದಿಂದ ದೇಶದ ಕೋಟ್ಯಂತರ ಹೂಡಿಕೆದಾರರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಹಾಗಾಗಿ ಈ ವಿವಾದದ ಬಗ್ಗೆ ಜಂಟಿ ಸದನ ಸಮಿತಿ ರಚಿಸಿ ತನಿಖೆ ನಡೆಸಬೇಕು ಎಂದು ಮಲ್ಲಿಖಾರ್ಜುನ ಖರ್ಗೆ ಆಗ್ರಹಿಸಿದರು.
ಅದಾನಿ ವಿಚಾರ ದೇಶಾದ್ಯಂತ ಇಷ್ಟೆಲ್ಲಾ ಚರ್ಚೆಗೆ ಕಾರಣರಾದರೂ, ಪ್ರಧಾನಿ ಮೋದಿ ಮಾತ್ರ ಈ ವಿಷಯದಲ್ಲಿ 'ಮೌನಿ ಬಾಬಾ'ರಂತೆ ವರ್ತಿಸುತ್ತಿದ್ದಾರೆ ಎಂದು ಖರ್ಗೆ ಕಿಚಾಯಿಸಿದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕೂಡಲೇ ಮಧ್ಯಪ್ರವೇಶಿಸಿದ ಸಭಾಪತಿ ಜಗದೀಪ್ ಧನ್ಕರ್, ಪ್ರಧಾನಿ ಬಗ್ಗೆ ಹೀಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಖರ್ಗೆ ಅವರನ್ನು ತರಾಟೆಗೆ ತೆಗೆದುಕೊಂಡರು.
ಪ್ರಧಾನಿ ಮೋದಿ ಅವರನ್ನು 'ಮೌನಿ ಬಾಬಾ' ಎಂದು ಕರೆಯುವುದು ನಿಮ್ಮ ಘನತೆಗೆ ತಕ್ಕುದಾದ ಮಾತಲ್ಲ. ಅರೋಪಗಳು ಏನೇ ಇದ್ದರೂ, ಮಾತಿನಲ್ಲಿ ಹಿಡಿತವಿರಬೇಕು ಎಂದು ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಸಲಹೆ ನೀಡಿದರು.
ಆದರೆ ಇದೇ ಧಾಟಿಯಲ್ಲಿ ಮಾತು ಮುಂದುವರೆಸಿದ ಖರ್ಗೆ, ಹಾಗಿದ್ದರೆ ಈ ವಿಷಯದಲ್ಲಿ ಪ್ರಧಾನಿ ಮೋದಿ ಅವರ ಮೌನವನ್ನು ನಾವು ಏನೆಂದು ಕರೆಯಬೇಕು ಎಂದು ಪ್ರಶ್ನಿಸಿದರು. ಯಾವ ತಪ್ಪೂ ನಡೆದಿಲ್ಲ ಎಂದಾದರೆ, ಜಂಟಿ ಸದನ ಸಮಿತಿಗೆ ತನಿಖೆಯನ್ನು ಒಪ್ಪಿಸಲು ಮೋದಿ ಸರ್ಕಾರ ಏಕೆ ಹಿಂದೇಟು ಹಾಕುತ್ತಿದೆ ಎಂದು ಖರ್ಗೆ ಖಾರವಾಗಿ ಪ್ರಶ್ನಿಸಿದರು.
ಖರ್ಗೆ ಮಾತಿನಿಂದ ಸಿಡಿದೆದ್ದ ಆಡಳಿತ ಪಕ್ಷದ ಸದಸ್ಯರು, ವಿಪಕ್ಷ ನಾಯಕರು ಪ್ರಧಾನಿ ಬಗ್ಗೆ ಹೀಗೆ ಮಾತನಾಡುವುದು ಸರಿಯಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಆಗ ಖರ್ಗೆ ನೆರವಿಗೆ ಧಾವಿಸಿದ ವಿಪಕ್ಷ ಸದಸ್ಯರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪರಿಸ್ಥಿತಿ ತಿಳಿಯಾಗುತ್ತಿದ್ದಂತೇ ತಮ್ಮ ಮಾತು ಮುಂದುವರೆಸಿದ ಖರ್ಗೆ, ಪ್ರಧಾನಿ ಅವರನ್ನು ಟೀಕಿಸಲೇಬಾರದು ಎಂಬ ನಿಲುವು ಪ್ರಜಾಪ್ರಭುತ್ವ ನೀತಿಗೆ ವಿರುದ್ಧವಾದುದು ಎಂದು ಕಿಡಿಕಾರಿದರು.
ನಾವು ಅದಾನಿ ವಿವಾದದ ಬಗ್ಗೆ ದೇಶದ ಜನತೆಗೆ ಸತ್ಯ ಗೊತ್ತಾಗಬೇಕು ಎಂದು ಬಯಸುತ್ತೇವೆ. ಇದು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ನೇಹ ಸಂಬಂಧದ ಬಗೆಗಿನ ಪ್ರಶ್ನೆಯಲ್ಲ. ಕೋಟ್ಯಂತರ ಜನರ ಹೂಡಿಕೆಯ ಬಗ್ಗೆ ನಾವು ಧ್ವನಿ ಎತ್ತುತ್ತಿದ್ದೇವೆ. ಜಂಟಿ ಸದನ ಸಮಿತಿ ತನಿಖೆಯಿಂದ ಸತ್ಯ ಹೊರಬರಲಿದೆ ಎಂದು ಖರ್ಗೆ ಹೇಳಿದರು.
ವಿಭಾಗ