ಯಶೋಗಾಥೆ: ಬರಪೀಡಿತ ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗದಲ್ಲಿ ಜಲಕ್ರಾಂತಿ ಹುಟ್ಟುಹಾಕಿದ ಸುರತ್ಕಲ್‌ ಹಳೆ ವಿದ್ಯಾರ್ಥಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಯಶೋಗಾಥೆ: ಬರಪೀಡಿತ ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗದಲ್ಲಿ ಜಲಕ್ರಾಂತಿ ಹುಟ್ಟುಹಾಕಿದ ಸುರತ್ಕಲ್‌ ಹಳೆ ವಿದ್ಯಾರ್ಥಿ

ಯಶೋಗಾಥೆ: ಬರಪೀಡಿತ ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗದಲ್ಲಿ ಜಲಕ್ರಾಂತಿ ಹುಟ್ಟುಹಾಕಿದ ಸುರತ್ಕಲ್‌ ಹಳೆ ವಿದ್ಯಾರ್ಥಿ

ಸುರತ್ಕಲ್‌ನ ಮಾಜಿ ವಿದ್ಯಾರ್ಥಿ, ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗದ ಹಳ್ಳಿ, ಹುಟ್ಟೂರಲ್ಲಿ ಮಾಡಿದ ಜಲಕ್ರಾಂತಿ ನಿಜಕ್ಕೂ ಮಾದರಿ. ಇಲ್ಲಿದೆ ಯಶೋಗಾಥೆ..

ಊರಲ್ಲಿ ನೀರು, ಹಸಿರು ನಳನಳಿಸುವಂತೆ ಮಾಡಿದ ದತ್ತಾ ಪಾಟೀಲ್‌.
ಊರಲ್ಲಿ ನೀರು, ಹಸಿರು ನಳನಳಿಸುವಂತೆ ಮಾಡಿದ ದತ್ತಾ ಪಾಟೀಲ್‌. (The Better India)

ಆತನ ಹೆಸರು ದತ್ತಾ ಪಾಟೀಲ್‌. ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಲಾತೂರ್‌ ಜಿಲ್ಲೆಯ ಹಲಗರ ಗ್ರಾಮದ ಯುವಕ. ಕರ್ನಾಟಕ ಸುರತ್ಕಲ್‌ ಎನ್‌ಐಟಿಕೆಯಲ್ಲಿ( ಎಂಜಿನಿಯರಿಂಗ್‌ ಪದವಿ ಪಡೆದು ಅಮೆರಿಕಾದ ಕ್ಯಾಲಿಪೋರ್ನಿಯಾದ ಸಾಂಟಾ ಕ್ಲಾರಾದಲ್ಲಿ ಕೈ ತುಂಬಾ ಸಂಬಳ ಪಡೆಯುತ್ತಿದ್ದರು ದತ್ತಾ ಪಾಟೀಲ್‌. ಅಲ್ಲಿಯೇ ಸುಖವಾಗಿಯೇ ಇದ್ದು ಬಿಡಬಹುದಿತ್ತು. ಹುಟ್ಟೂರಿಗೆ ಏನಾದರೂ ಮಾಡಬೇಕು. ಬರದ ಸಮಸ್ಯೆಗೆ ನೀರ ಉತ್ತರ ನೀಡಬೇಕು ಎಂದು ಹಠ ಮಾಡಿ ಪ್ರಯತ್ನ ಶುರು ಮಾಡಿಯೇ ಬಿಟ್ಟರು.

ಬಾಲ್ಯದ ಗಾಢ ನೆನಪು

ಆದರೆ ದತ್ತಾ ಪಾಟೀಲ್‌ಗೆ ತಾನು ಮಾಡುತ್ತಿದ್ದ ಕೆಲಸ, ಪಡೆಯುತ್ತಿದ್ದ ಸಂಬಳದ ನೋಡಿದಾಗ ಸದಾ ನೆನಪಿಗೆ ಬರುತ್ತಿದ್ದವರು ತನ್ನ ತಂದೆ, ತಾಯಿ ಹಾಗೂ ಊರ ಜನ. ಸದಾ ಬರದಿಂದಲೇ ನಲುಗಿ ಹೋಗಿರುವ ಲಾತೂರ್‌ ಜಿಲ್ಲೆಯಲ್ಲಿ ಮಳೆಯೆನ್ನುವುದೇ ಅಪರೂಪ. ಹಸಿರನ್ನು ಹುಡುಕಿಕೊಂಡು ಹೋಗಬೇಕು. ಎರಡು ದಶಕದ ಹಿಂದೆ ದತ್ತಾ ಪಾಟೀಲ್‌ ಬಾಲಕನಾಗಿದ್ದಾಗ ಕಂಡ ಚಿತ್ರ ಹಾಗೆಯೇ ಮನದಲ್ಲಿ ನೆಲೆಯೂರಿತ್ತು. ಇದಾಗಿ ವಿದ್ಯಾಭ್ಯಾಸ ಮುಗಿಸಿ ಅಮೆರಿಕಾದಲ್ಲಿ ಉದ್ಯೋಗ ಹಿಡಿದರೂ ಚಿತ್ರಣ ಮಾತ್ರ ಬದಲಾಗಿಲಿಲ್ಲ. ಅಮೆರಿಕಾದಿಂದ ಬ್ರೇಕ್‌ ಪಡೆದು ಊರಿಗೆ ಬಂದಾಗ, ಜಮೀನು ಕಡೆ ಹೋದಾಗ ದತ್ತಾ ಪಾಟೀಲ್‌ಗೆ ಹೊಳೆದಿದ್ದು ಇಲ್ಲಿ ಏನಾದರೂ ಬದಲಾವಣೆ ಮಾಡಬೇಕಲ್ಲ. ಊರವರೊಂದಿಗೆ ಸೇರಿ ಶ್ರಮಿಸಿದರೆ ನೀರಿಗೆ ಇರುವ ಸಮಸ್ಯೆಯನ್ನು ಕೊಂಚವಾದರೂ ಬದಲಿಸಬಹುದಲ್ಲಾ ಎನ್ನುವ ಯೋಚನೆ ಬಂದಿತು.

ವಿಠ್ಠೋಬನ ಸನ್ನಿಧಿಯಲ್ಲಿ

ಒಂದು ದಿನ ಅಪ್ಪ ಅಮ್ಮ ಸ್ನೇಹಿತರೊಂದಿಗೆ ದತ್ತಾ ಪಾಟೀಲ್‌ ಹೊರಟಿದ್ದ ಪ್ರಸಿದ್ದ ಯಾತ್ರಾ ಸ್ಥಳ ಫಂಡರಪುರಕ್ಕೆ. ಅಲ್ಲಿ ವಿಠ್ಠೋಬನ ದರ್ಶನ ಮಾಡಿಕೊಂಡು ಬರುವುದು ಮಾತ್ರ ದತ್ತಾ ಉದ್ದೇಶವಾಗಿರಲಿಲ್ಲ.ಬದಲಿಗೆ ವಿಠ್ಠೋಬನ ಆಶಿರ್ವಾದ ಪಡೆದು ತನ್ನ ಜಲ ಕ್ರಾಂತಿ ಯೋಜನೆ ಆರಂಭಿಸುವುದಕ್ಕೂ ವೇದಿಕೆ ರೂಪಿಸುವುದೂ ಆಗಿತ್ತು. ಬೆಂಗಳೂರಿನ ಸ್ನೇಹಿತರನ್ನೂ ದತ್ತಾ ಬರಲು ಹೇಳಿದರು. ಮನೆಯವರು, ಸೇಹಿತರು ಕೂಡಿ ಫಂಡರ ಪುರದಲ್ಲಿ ಕುಳಿತು ಚರ್ಚಿಸಿದರು. ಇದರೊಟ್ಟಿಗೆ ತಾನು ಕೆಲಸ ಮಾಡುವ ಕ್ಯಾಲಿಫೋರ್ನಿಯಾ ಪ್ರದೇಶವೂ ಬರದಿಂದ ಹೊರತಾಗಿರಲಿಲ್ಲ. ಬರದಿಂದ ಕಂಗೆಟ್ಟು ಹೋಗಿದ್ದ ಹಲಗರದಂತೆಯೇ ಅಮೆರಿಕಾದ ಪ್ರದೇಶವೂ ಕೂಡ ಇತ್ತು. ಅಲ್ಲಿಯೂ ಕೆಲವರು ಜಲಕ್ರಾಂತಿಗೆ ಕೈ ಹಾಕಿ ಯಶಸ್ವಿಯಾಗಿದ್ದರು ಕೂಡ. ನಮ್ಮೂರಲ್ಲಿ ಇದು ಏಕೆ ಸಾಧ್ಯವಿಲ್ಲ ಎನ್ನುವುದು ದತ್ತಾ ಪಾಟೀಲ್‌ ತಲೆಯಲ್ಲಿ ಕೊರೆಯುತ್ತಲೇ ಇತ್ತು.

ಕೊನೆಗೆ ಅಪ್ಪ, ಅಮ್ಮ, ಆತ್ಮೀಯ ಗೆಳೆಯರೊಂದಿಗೆ ಈ ವಿಚಾರ ಚರ್ಚಿಸಿದಾಗ ಇದು ಸುಲಭದ ಯಾನ ಅಲ್ಲವೇ ಅಲ್ಲ. ಒಬ್ಬರೋ ಒಬ್ಬರಿಂದ ಆಗುವಂತದ್ದಲ್ಲ. ಊರವರ ಸಹಕಾರ ಇದ್ದರೆ ಏನಾದರೂ ಬದಲಾವಣೆ ಮಾಡಬಹುದು ಎನ್ನುವುದು ಸ್ನೇಹಿತರ ಸಲಹೆಯೂ ಆಗಿತ್ತು. ಅದನ್ನು ಪರಿಗಣಿಸಿ ದತ್ತಾ ಪಾಟೀಲ್‌ ಈ ಬಾರಿ ಊರಲ್ಲಿ ಜಲಕ್ರಾಂತಿಗೆ ಹೈಹಾಕಬೇಕು ಎಂದು ತೀರ್ಮಾನಿಸಿಕೊಂಡರು.

ಊರವರ ಸಾಥ್‌

ಫಂಡರಪುರದಿಂದ ಹೋದ ಮರು ದಿನವೇ ಊರಿನ ಆತ್ಮೀಯರು. ಸ್ನೇಹಿತರೊಂದಿಗೆ ಈ ಕುರಿತು ಚರ್ಚಿಸಿದರು. ನಮ್ಮೂರಲ್ಲಿ ನೀರು ಕಾಣುವುದೇ ಕಷ್ಟವಾಗಿದೆ. ಹಸಿರಂತೂ ಇಲ್ಲವೇ ಇಲ್ಲ. ಅಂತರ್ಜಲ ಕುಸಿದು ಹೋಗಿದೆ. 800 ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಇನ್ನೂ ಎಷ್ಟು ದಿನ ಅಂತ ಹೀಗೆ ಇರುವುದು. ಬದಲಾವಣೆಗೆ ನಾವು ಕೈ ಏನಾದರೂ ಮಾಡೋಣ. ಅಂತರ್ಜಲ ವೃದ್ದಿಗೆ ಕೆಲಸ ಮಾಡೋಣ, ಚೆಕ್‌ ಡ್ಯಾಂ ನಿರ್ಮಿಸಿಕೊಂಡು ನೀರು ಹಿಡಿದಿಟ್ಟುಕೊಳ್ಳೋಣ, ಮಳೆಗಾಲದ ನೀರನ್ನು ವರ್ಷಪೂರ್ತಿ ಬಳಸುವ ಕ್ರಮಗಳನ್ನು ಯೋಚಿಸೋಣ ಎಂದು ದತ್ತಾ ಪಾಟೀಲ್‌ ಯೋಜನೆ ಬಿಡಿಸಿಟ್ಟರು. ಇದಕ್ಕಾಗಿ ಊರವರೂ ನೆರವು ನೀಡಬೇಕು ಎಂದಾಗ ಆ ದಿನವೇ ಐದು ಲಕ್ಷ ರೂ. ಕೂಡ ಸಂಗ್ರಹವಾಯಿತು. ಇಷ್ಟೇ ಅಲ್ಲ ಈ ಎಲ್ಲಾ ಚಟುವಟಿಕೆಗೆ ಮನೆಯವರು ದಿನಾ ಎರಡು ಗಂಟೆ ಶ್ರಮದಾನ ಮಾಡುತ್ತೇವೆ ಎನ್ನುವ ಭರವಸೆಯನ್ನೂ ನೀಡಿದರು.

ಅಮೆರಿಕಾದಲ್ಲೂ ಯಥೇಚ್ಛ ನೆರವು

ರಜೆ ಮುಗಿಸಿ ಅಮೆರಿಕಾಕ್ಕೆ ಹೋದ ದತ್ತಾ ಪಾಟೀಲ್‌ ಅಲ್ಲಿ ಸುಮ್ಮನೇ ಕೂರಲಿಲ್ಲ. ತಾನು ಕೆಲಸ ಮಾಡುವ ಸಂಸ್ಥೆ ಸಹಿತ ಹಲವಾರು ಸಂಸ್ಥೆಗಳನ್ನು ಎಡತಾಕಿದರು. ಸ್ನೇಹಿತರ ಕಿವಿಗೂ ತನ್ನೂರ ಜಲಕ್ರಾಂತಿಯ ಆರಂಭಿಕ ಹೆಜ್ಜೆಗಳ ವಿವರ ತಲುಪಿಸಿದರು. ದತ್ತಾ ಪಾಟೀಲ್‌ ಪ್ರಯತ್ನ ನಿಜಕ್ಕೂ ಯಶ ಸಿಕ್ಕಿತು. ಬರೋಬ್ಬರಿ ಒಂದು ಕೋಟಿ ರೂ. ದೇಣಿಗೆ ನಾನಾ ರೂಪದಲ್ಲಿ ಅಲ್ಲಿಂದಲೇ ದೊರೆಯಿತು. ಅದೆಲ್ಲವನ್ನು ಒಟ್ಟುಗೂಡಿಸಿ ಮುಂದಿನ ಮಳೆಗಾಲದ ಹೊತ್ತಿಗೆ ಎಲ್ಲವನ್ನೂ ಸಿದ್ದತೆ ಮಾಡಿಕೊಳ್ಳಬೇಕು ಎಂದು ಮತ್ತೊಂದು ರಜೆಗೆಂದು ಊರಿಗೆ ಹೊರಟರು ದತ್ತಾ ಪಾಟೀಲ್.

ಆಗದು ಎಂದು ಕೈ ಕಟ್ಟಿ ಕುಳಿತರೆ..

ಊರವರಿಗೆ ಹಣದ ಹೊಂದಿಕೆಯ ವಿವರವನ್ನು ನೀಡಿ ಮೊದಲು ತನ್ನೂರಿನ ಕಾಲುವೆಯ ಹೂಳು ತೆಗೆಸುವ ಕಾಯಕ ಶುರು ಮಾಡಿದರು. ಬರೋಬ್ಬರಿ ಕಿ.ಮಿ. ಕಾಲುವೆಯಿದ್ದರೂ ಹೂಳಿನಿಂದ ನೀರು ಮುಂದೆ ಹರಿಯುತ್ತಲೇ ಇರಲಿಲ್ಲ. ಹೂಳು ತೆಗೆದಿದ್ದು ಶೇ. 30 ನೀರು ಇಂಗುವಿಕೆಗೂ ದಾರಿಯಾಯಿತು. ಮೂರು ವರ್ಷಗಳ ಕಾಲ ಊರಲ್ಲಿ ನಡೆದದ್ದು ಸಂಪೂರ್ಣ ಜಲಕ್ರಾಂತಿಯೇ. ಹಲಗರಕ್ಕೆ ಹೊಂದಿಕೊಂಡ ಹಲವು ಗ್ರಾಮಗಳವರು ಇದನ್ನು ಗಮನಿಸಿ ತಾವೂ ಸಾಥ್‌ ನೀಡಿದರು. ಸಸಿ ನೆಟ್ಟರು. ಚೆಕ್‌ಡ್ಯಾಂ ನಿರ್ಮಿಸಿದರು. ನೀರು ಇಂಗುವಿಕೆಗೆ ಇನ್ನಿಲ್ಲದ ಒತ್ತು ನೀಡಿದರು. ಮೂರೇ ವರ್ಷದಲ್ಲಿ ಆದ ಬದಲಾವಣೆ ಹೇಗಿತ್ತು ಎಂದರೆ ಭೂಮಿಯನ್ನು ಕೊರದರೆ ಬರೀ 100 ಅಡಿಗೆ ನೀರು ಲಭ್ಯವಾಗುವಂತಹ ಸನ್ನಿವೇಶ. ಇದೊಂದು ರೀತಿಯಲ್ಲಿ ಬಂಗಾರದ ಮನುಷ್ಯ ಆಗದು ಎಂದು ಕೈ ಕಟ್ಟಿ ಕುಳಿತರೇ ಹಾಡಿನ ಸನ್ನಿವೇಶದಂತೆಯೇ ಇತ್ತು.

ಸತತ ಮೂರು ವರ್ಷಗಳಲ್ಲಿ ಅವರು ತಮ್ಮ ಗ್ರಾಮ ವ್ಯಾಪ್ತಿಯಲ್ಲಿ ಅಂತರ್ಜಲ ವೃದ್ಧಿಸುವ ಕಾರ್ಯಕ್ಕಾಗಿ ತಮ್ಮ ಸ್ವಂತ ಹಣದಿಂದ 22 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದಾರೆ. ಸ್ನೇಹಿತರು, ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರನ್ನು ಒಳಗೊಂಡ ಸಮಾನಸಕ್ತ ತಂಡದೊಂದಿಗೆ ಸೇರಿ ಕೆರೆ- ಕಾಲುವೆಗಳ ಹೂಳು ತೆಗೆಯುವ ಕಾರ್ಯ ಸೇರಿ 26 ಚೆಕ್ ಡ್ಯಾಂಗಳನ್ನು ನಿರ್ಮಿಸಿದ್ದಾರೆ.

ಆದಾಯ ಹೆಚ್ಚಳ

2016 ಮೊದಲು ಮತ್ತು 2018 ರ ನಂತರದ ಹಾಗೂ ಈಗಿನ ಹಲಗರ ಹಾಗೂ ಸುತ್ತಮುತ್ತಲಿನ ಗ್ರಾಮದ ಉಪಗ್ರಹ ಚಿತ್ರಗಳನ್ನು ನೋಡಿದಾಗ ಅಲ್ಲಿನ ಹಸಿರಿನ ಪ್ರಮಾಣದಲ್ಲಿ ಕಾಣಬಹುದಾಗ ಬದಲಾವಣೆ, ದತ್ತಾ ರವರ ಅಂತರ್ಜಲ ವೃದ್ಧಿಗಾಗಿ ಕೈಗೊಂಡ ಕಾರ್ಯದ ಫಲಿತಾಂಶಕ್ಕೆ ಕನ್ನಡಿ ಹಿಡಿಯುತ್ತವೆ. ಈಗ ಅಲ್ಲಿ ಜನ ನೀರು ಲಭ್ಯತೆಯಿಂದ ದೀರ್ಘ ಕೃಷಿ, ಅಲ್ಪಾವಧಿ ಕೃಷಿಯನ್ನೂ ಮಾಡುತ್ತಾರೆ. ಅವರ ಆದಾಯ ಪ್ರಮಾಣ ಹಿಂದಿಗಿಂತ 300 ಪಟ್ಟು ಹೆಚ್ಚಿದೆ ಎಂದಾಗ ಬರೀ ದತ್ತಾ ಪಾಟೀಲ್‌ ಮೊಗದಲ್ಲಿ ಮಾತ್ರವಲ್ಲ ಊರವರ ಮೊಗದಲ್ಲೂ ಖುಷಿ ಉಕ್ಕುತ್ತದೆ. ನಗೆಯ ಹಿಂದೆ ನೀರು ಹಾಗೂ ಹಸಿರಿನ ಮಹತ್ವ ಅರಿವೂ ಆಗುತ್ತದೆ. ಹಳ್ಳಿ ಹುಡುಗ ಅಮೆರಿಕಾ ಸೇರಿದರೂ ಹುಟ್ಟೂರ ಜಲಕ್ರಾಂತಿ ಮಾಡಿದ ಯಶೋಗಾಥೆಯಿದು.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.