ಜಗತ್ತಿನ ಈ 4 ಸ್ಥಳಗಳಿಗೆ ಪ್ರವಾಸಿಗರಿಗೆ ನೋ ಎಂಟ್ರಿ; ಸಾರ್ವಜನಿಕ ನಿರ್ಬಂಧದ ಹಿಂದಿದೆ ಹಲವು ರಹಸ್ಯ
ಕನ್ನಡ ಸುದ್ದಿ  /  ಜೀವನಶೈಲಿ  /  ಜಗತ್ತಿನ ಈ 4 ಸ್ಥಳಗಳಿಗೆ ಪ್ರವಾಸಿಗರಿಗೆ ನೋ ಎಂಟ್ರಿ; ಸಾರ್ವಜನಿಕ ನಿರ್ಬಂಧದ ಹಿಂದಿದೆ ಹಲವು ರಹಸ್ಯ

ಜಗತ್ತಿನ ಈ 4 ಸ್ಥಳಗಳಿಗೆ ಪ್ರವಾಸಿಗರಿಗೆ ನೋ ಎಂಟ್ರಿ; ಸಾರ್ವಜನಿಕ ನಿರ್ಬಂಧದ ಹಿಂದಿದೆ ಹಲವು ರಹಸ್ಯ

ಪ್ರಪಂಚದ ಕೆಲವೊಂದು ಸ್ಥಳಗಳಿಗೆ ಪ್ರವಾಸಿಗರಿಗೆ ನಿರ್ಬಂಧ ಇರುತ್ತದೆ. ಕೆಲವೊಂದು ಅಪಾಯಕಾರಿ ಸ್ಥಳಗಳಿಗೂ ಜನರ ಪ್ರವೇಶಕ್ಕೆ ಅವಕಾಶ ಇರಲ್ಲ. ಹೆಚ್ಚಿನ ಸ್ಥಳಗಳನ್ನು ಭವಿಷ್ಯದ ದೃಷ್ಟಿಯಿಂದ ಸರಂಕ್ಷಿಸುವ ಉದ್ದೇಶದಿಂದ ಸಾರ್ವಜನಿಕ ಪ್ರವೇಶ ಇರುವುದಿಲ್ಲ. ಪ್ರಪಂಚದ ನಾಲ್ಕು ನಿರ್ಬಂಧಿತ ತಾಣಗಳ ಕುರಿತು ನೋಡೋಣ.

ಜಗತ್ತಿನ ಈ 4 ಸ್ಥಳಗಳಿಗೆ ಪ್ರವಾಸಿಗರಿಗೆ ನೋ ಎಂಟ್ರಿ
ಜಗತ್ತಿನ ಈ 4 ಸ್ಥಳಗಳಿಗೆ ಪ್ರವಾಸಿಗರಿಗೆ ನೋ ಎಂಟ್ರಿ (Pexel)

ಜಗತ್ತಿನಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಹಲವು ಸ್ಥಳಗಳಿವೆ. ಅಂಥಾ ಸ್ಥಳಗಳನ್ನು ನೋಡಲು ಪ್ರವಾಸಿಗರು ಮುಗಿಬೀಳುತ್ತಾರೆ. ಇನ್ನೂ ಕೆಲವು ಪ್ರದೇಶಗಳನ್ನು ನೋಡಲು ಸ್ಥಳೀಯಾಡಳಿತ ಅನುಮತಿ ನೀಡುವುದಿಲ್ಲ. ಅವು ಪ್ರವಾಸಿಗರಿಗೆ ನೋಡಲು ಅನುಮತಿ ಇಲ್ಲದ, ನಿಷೇಧಿತ ಸ್ಥಳಗಳು. ಇಂಥಾ ತಾಣಗಳ ಬಳಿ ನೋ ಎಂಟ್ರಿ ಎಂದು ಹಾಕಲಾಗುತ್ತದೆ. ಹೀಗಾಗಿ ಅಂಥಾ ಸ್ಥಳಗಳಿಗೆ ಸಾರ್ವಜನಿಕರಿಗೆ ಪ್ರವೇಶದ ಅವಕಾಶ ಯಾಕಿಲ್ಲ ಎಂಬ ಕುತೂಹಲ ಪ್ರವಾಸಿಗರಿಗಿರುತ್ತದೆ. ಹೀಗಾಗಿಯೇ ಅವು ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿರುತ್ತವೆ. ಅಲ್ಲದೆ ಆ ತಾಣಗಳ ಬಗ್ಗೆ ಜನರ ಆಕರ್ಷಣೆ ಹಾಗೂ ಕುತೂಹಲ ಹೆಚ್ಚಿರುತ್ತದೆ.

ಪ್ರಾಚೀನ ರಹಸ್ಯಗಳು,ಸಂರಕ್ಷಣೆ, ಭದ್ರತೆ ಅಥವಾ ಭಿನ್ನ ಪರಿಸರ ವ್ಯವಸ್ಥೆಗಳ ಕಾರಣದಿಂದಾಗಿ ಇಂಥಾ ಸ್ಥಳಗಳಿಗೆ ಪ್ರವಾಸಿಗರಿಗೆ ಅನುಮತಿ ಇಲ್ಲದಿರಬಹುದು. ಅಲ್ಲದೆ ಕೆಲವೊಂದು ಅಪಾಯಕಾರಿ ಸ್ಥಳಗಳಿಗೂ ಜನರ ಪ್ರವೇಶಕ್ಕೆ ಅವಕಾಶ ಇರಲ್ಲ. ಹೆಚ್ಚಿನ ಸ್ಥಳಗಳನ್ನು ಭವಿಷ್ಯದ ದೃಷ್ಟಿಯಿಂದ ಸರಂಕ್ಷಿಸುವ ಉದ್ದೇಶದಿಂದ ಸಾರ್ವಜನಿಕ ಪ್ರವೇಶ ಇರುವುದಿಲ್ಲ. ಇದೇ ಕಾರಣಕ್ಕೆ ಅಲ್ಲಿಗೆ ಹೋಗಲು ನಿರ್ಬಂಧ ಹೇರಲಾಗುತ್ತದೆ. ಪ್ರಪಂಚದ ಕೆಲವು ಅತ್ಯಂತ ನಿರ್ಬಂಧಿತ ತಾಣಗಳ ಕುರಿತ ಚಿತ್ರಣ ಇಲ್ಲಿದೆ.

ಸ್ವಾಲ್ಬಾರ್ಡ್ ಗ್ಲೋಬಲ್ ಸೀಡ್ ವಾಲ್ಟ್, ನಾರ್ವೆ

ಸ್ವಾಲ್ಬಾರ್ಡ್ ಗ್ಲೋಬಲ್ ಸೀಡ್ ವಾಲ್ಟ್ ಅನ್ನು 'ಡೂಮ್ಸ್‌ಡೇ ವಾಲ್ಟ್' ಎಂದೂ ಕರೆಯುತ್ತಾರೆ. ಇದು ನಾರ್ವೆಯ ಆರ್ಕ್ಟಿಕ್ ಪರ್ವತದಲ್ಲಿ ವಿಶ್ವದ ಅತಿದೊಡ್ಡ ಬೀಜ ಸಂಗ್ರಹವನ್ನು ಹೊಂದಿದೆ. ಇಲ್ಲಿಗೆ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದೆ. ಸಂಶೋಧಕರು ಮತ್ತು ಅಧಿಕಾರಿಗಳು ಮಾತ್ರ ಪ್ರವೇಶ ಮಾಡಬಹುದು. ಆಹಾರ ಭದ್ರತೆಗಾಗಿ ಮತ್ತು ಜೀವವೈವಿಧ್ಯವನ್ನು ಸಂರಕ್ಷಿಸಲು ಇದನ್ನು ರಚಿಸಲಾಗಿದೆ. ಈ ವಾಲ್ಟ್ ಅನ್ನು ವಿಪತ್ತುಗಳನ್ನು ತಡೆದುಕೊಳ್ಳಲು ಮತ್ತು ಘನೀಕರಿಸುವ ಸ್ಥಿತಿಯಲ್ಲಿ ಲಕ್ಷಾಂತರ ಬೀಜಗಳನ್ನು ಸಂಗ್ರಹಿಸುವ ಸಲುವಾಗಿ ವಿನ್ಯಾಸಗೊಳಿಸಲಾಗಿದೆ.

ಲಾಸ್ಕಾಕ್ಸ್ ಗುಹೆಗಳು, ಫ್ರಾನ್ಸ್

ಫ್ರಾನ್ಸ್‌ನಲ್ಲಿರುವ ಲಾಸ್ಕಾಕ್ಸ್ ಗುಹೆಗಳಲ್ಲಿ ಪ್ರಪಂಚದಲ್ಲೇ ಅಪರೂಪದ ಹಾಗೂ ಅತ್ಯಂತ ಗಮನಾರ್ಹವಾದ ಇತಿಹಾಸಪೂರ್ವ ವರ್ಣಚಿತ್ರಗಳಿವೆ. ಈ ಕಲಾಕೃತಿಯು 17,000 ವರ್ಷಗಳಿಗಿಂತಲೂ ಹಳೆಯದು. ಇವು ಆರಂಭಿಕ ಮಾನವ ಅಸ್ತಿತ್ವದ ಮೇಲೆ ಬೆಳಕು ಚೆಲ್ಲುತ್ತದೆ. ಆದರೆ, 1963ರಿಂದ ಈ ಗುಹೆಗಳಿಗೆ ಪ್ರವಾಸಿಗರಿಗೆ ಪ್ರವೇಶವಿಲ್ಲ. ಸಂದರ್ಶಕರ ಉಸಿರಾಟದ ತೇವಾಂಶ ಮತ್ತು ಇಂಗಾಲದ ಡೈಆಕ್ಸೈಡ್‌ನಿಂದ ಕಲಾಕೃತಿಯು ಹದಗೆಡುತ್ತದೆ ಎಂದು ಪ್ರವೇಶ ನಿರ್ಬಂಧಿಸಲಾಗಿದೆ. ಈಗ ಕೆಲವೇ ಸಂಖ್ಯೆಯ ವಿಜ್ಞಾನಿಗಳನ್ನು ಮಾತ್ರ ಒಳಗೆ ಬಿಡಲಾಗುತ್ತದೆ.

ನಿಹೌ ದ್ವೀಪ, ಯುಎಸ್‌ಎ

'ನಿಷೇಧಿತ ದ್ವೀಪ' ಎಂದು ಕರೆಯಲ್ಪಡುವ ನಿಹೌ ಖಾಸಗಿ ಒಡೆತನದ ಹವಾಯಿಯನ್ ದ್ವೀಪವಾಗಿದೆ. 1860ರ ದಶಕದಿಂದಲೂ ಇಲ್ಲಿಗೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ. ಅಲ್ಲಿನ ಸಣ್ಣ ಸಮುದಾಯವು ಅತ್ಯಾಧುನಿಕ ಸೌಕರ್ಯಗಳು ಮತ್ತು ತಂತ್ರಜ್ಞಾನದಿಂದ ದೂರವಾಗಿ ಸಾಂಪ್ರದಾಯಿಕ ಜೀವನಶೈಲಿಯನ್ನು ಜೀವಿಸುತ್ತಾರೆ. ಇಲ್ಲಿಗೆ ದ್ವೀಪದ ಮಾಲೀಕರು ಮತ್ತು ಅದರ ನಿವಾಸಿಗಳು ಮಾತ್ರ ಭೇಟಿ ನೀಡಬಹುದು.

ವ್ಯಾಟಿಕನ್ ಸೀಕ್ರೆಟ್ ಆರ್ಕೈವ್ಸ್, ವ್ಯಾಟಿಕನ್ ಸಿಟಿ

ವ್ಯಾಟಿಕನ್ ಸೀಕ್ರೆಟ್ ಆರ್ಕೈವ್ಸ್ ಸ್ಥಳಕ್ಕೂ ಜನರಿಗೆ ಪ್ರವೇಶವಿಲ್ಲ. ಇಲ್ಲಿ ಜಾಗತಿಕ ಇತಿಹಾಸದ ಮೇಲೆ ಕ್ಯಾಥೋಲಿಕ್ ಚರ್ಚ್‌ನ ಪ್ರಭಾವವನ್ನು ತಿಳಿಸುವ ಶತಮಾನಗಳಷ್ಟು ಹಳೆಯ ದಾಖಲೆಗಳಿವೆ. ಪಾಪಲ್ ದಾಖಲೆಗಳಿಂದ ಹಿಡಿದು ಮೈಕೆಲ್ಯಾಂಜೆಲೊ ಅವರ ಪತ್ರಗಳವರೆಗೆ, ಐತಿಹಾಸಿಕ ಸಂಪತ್ತನ್ನು ಹೊಂದಿವೆ. ಆಯ್ದ ಸಂಶೋಧಕರ ಗುಂಪಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ಇದೆ.

Whats_app_banner