Telangana Assembly Elections: ತೆಲಂಗಾಣ ವಿಧಾನಸಭೆ ಚುನಾವಣೆಗೆ ವಿಪಕ್ಷಗಳ ಭರ್ಜರಿ ಕಸರತ್ತು; ಟಿಕೆಟ್‌ಗಾಗಿ ಆಕಾಂಕ್ಷಿಗಳ ಪೈಪೋಟಿಯೂ ಜೋರು-telangana news assembly election congress bjp brs opposition parties preparing for telangana election in kannada rmy ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Telangana Assembly Elections: ತೆಲಂಗಾಣ ವಿಧಾನಸಭೆ ಚುನಾವಣೆಗೆ ವಿಪಕ್ಷಗಳ ಭರ್ಜರಿ ಕಸರತ್ತು; ಟಿಕೆಟ್‌ಗಾಗಿ ಆಕಾಂಕ್ಷಿಗಳ ಪೈಪೋಟಿಯೂ ಜೋರು

Telangana Assembly Elections: ತೆಲಂಗಾಣ ವಿಧಾನಸಭೆ ಚುನಾವಣೆಗೆ ವಿಪಕ್ಷಗಳ ಭರ್ಜರಿ ಕಸರತ್ತು; ಟಿಕೆಟ್‌ಗಾಗಿ ಆಕಾಂಕ್ಷಿಗಳ ಪೈಪೋಟಿಯೂ ಜೋರು

ಕೆಲವೇ ತಿಂಗಳಲ್ಲಿ ತೆಲಂಗಾಣ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದಕ್ಕಾಗಿ ಸಿಎಂ ಕೆಸಿಆರ್‌ ಅವರ ಬಿಆರ್‌ಎಸ್‌, ಕಾಂಗ್ರೆಸ್ ಹಾಗೂ ಬಿಜೆಪಿ ಕಸರತ್ತುಗಳನ್ನು ಆರಂಭಿಸಿವೆ. ನಲ್ಗೊಂಡ ವ್ಯಾಪ್ತಿಯಲ್ಲಿ ಈ ಬಾರಿ ಹಿಂದುಳಿದ ವರ್ಗದವರಿಗೆ ಟಿಕೆಟ್‌ ನೀಡಬೇಕೆಂಬ ಒತ್ತಾಯಗಳು ಕೇಳಿ ಬರುತ್ತಿವೆ.

ತೆಲಂಗಾಣ ವಿಧಾನಸಭೆ ಚುನಾವಣೆಗೆ ವಿರೋಧ ಪಕ್ಷಗಳು ಭರ್ಜರಿ ಸಿದ್ಧತೆಗಳನ್ನು ಆರಂಭಿಸಿವೆ.
ತೆಲಂಗಾಣ ವಿಧಾನಸಭೆ ಚುನಾವಣೆಗೆ ವಿರೋಧ ಪಕ್ಷಗಳು ಭರ್ಜರಿ ಸಿದ್ಧತೆಗಳನ್ನು ಆರಂಭಿಸಿವೆ.

ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆಗೆ (Telangana Assembly Election) ಕೆಲವೇ ತಿಂಗಳು ಬಾಕಿದ್ದು, ಆಡಳಿತ ಪಕ್ಷ ಭಾರತ ರಾಷ್ಟ್ರ ಸಮಿತಿ (BRS), ವಿರೋಧ ಪಕ್ಷಗಳಾದ ಕಾಂಗ್ರೆಸ್, ಭಾರತೀಯ ಜನತಾ ಪಾರ್ಟಿ ಭರ್ಜರಿ ಕಸರತ್ತುಗಳನ್ನು ಆರಂಭಿಸಿದ್ದಾರೆ.

ಹ್ಯಾಟ್ರಿಕ್ ಗೆಲುವಿನ ಪತಾಕೆ ಹಾರಿಸೋಕೆ ಸಿಎಂ ಕೆ ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್‌ಎಸ್ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದರೆ, ಆಡಳಿತ ಗುಲಾಬಿ ಪಕ್ಷವನ್ನ ಮಣಿಸಲೇ ಬೇಕೆಂದು ಬಿಜೆಪಿ ಮತ್ತು ಕಾಂಗ್ರೆಸ್ ತಂತ್ರ, ಪ್ರತಿತಂತ್ರಗಳನ್ನು ರೂಪಿಸುತ್ತಿವೆ.

ನಲ್ಗೊಂಡ ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ಕಾಂಗ್ರೆಸ್‌ ನಾಯಕರು ಸಭೆ ನಡೆಸಿದ್ದು, ವಿಧಾನಸಭೆ ಚುನಾವಣೆಗೆ ಟಿಕೆಟ್ ಹಂಚಿಕೆ, ಪ್ರಚಾರ, ಸಭೆ ಸಮಾರಂಭಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಈ ಜಿಲ್ಲೆಯಲ್ಲಿ ಎಸ್‌ಎಸಿ, ಎಸ್‌ಟಿ ಮೀಸಲು ಕ್ಷೇತ್ರಗಳನ್ನು ಹೊರತುಪಡಿಸಿದರೆ 9 ಸಾಮಾನ್ಯ ವಿಧಾನಸಭೆ ಕ್ಷೇತ್ರಗಳಿವೆ. ಕಾಂಗ್ರೆಸ್ ವಿಚಾರದಲ್ಲಿ ಹೇಳುವುದಾದರೆ ಇಲ್ಲಿನ ಬಹುಪಾಲು ಕ್ಷೇತ್ರಗಳು ಕಾಂಗ್ರೆಸ್ ನಾಯಕರ ಕೈಯಲ್ಲೇ ಇವೆ.

ಕೋಡದ ಮತ್ತು ಹುಜೂರ್ ನಗರ ಸಂಸದ ಉತ್ತಮ್ ಕುಮಾರ್ ರೆಡ್ಡಿ ದಂಪತಿ ಹಿಡಿತವನ್ನು ಹೊಂದಿದ್ದಾರೆ. ಸಾಗರ ಮತ್ತು ಮಿರ್ಯಾಲಗೂಡ ಕ್ಷೇತ್ರದಲ್ಲಿ ಸಂಸದ ಕೋಮಟಿರೆಡ್ಡಿ ಜಾನರೆಡ್ಡಿ, ನಲ್ಗೊಂಡ, ಮುನುಗೋಡು ಮತ್ತು ಭುವನಗಿರಿ ಕ್ಷೇತ್ರಗಳಲ್ಲಿ ಪ್ರಾಬಲ್ಯ ಹೊಂದಿದ್ದಾರೆ.

ಸೂರ್ಯಪೇಟೆಯಲ್ಲಿ ದಾಮೋದರ್ ರೆಡ್ಡಿ, ಪಟೇಲ್ ರಮೇಶ್ ರೆಡ್ಡಿ ಮುಂತಾದ ನಾಯಕರು ಇದ್ದಾರೆ. ಹಿಂದುಳಿದ ವರ್ಗದ ಮುಖಂಡರು ಆಯಾ ಕ್ಷೇತ್ರಗಳಲ್ಲಿ ಹೊಸ ಬೇಡಿಕೆಗಳನ್ನು ಇಡುತ್ತಿದ್ದು, ಈ ಬಾರಿಯಾದರೂ ತಮಗೆ ಅವಕಾಶ ನೀಡಬೇಕೆಂದು ಮನವಿ ಮಾಡುತ್ತಿದ್ದಾರೆ.

ಇಲ್ಲಿ ಆಡಳಿತ ಪಕ್ಷದ ಪರಿಸ್ಥಿತಿ ಭಿನ್ನವಾಗಿದೆ. ಈ ಹಿಂದೆ ಉಪ ಚುನಾವಣೆಯ ವೇಳೆ ಹಿಂದುಳಿದ ವರ್ಗದವರಿಗೆ ಸೇರಿದ ವ್ಯಕ್ತಿಗೆ ಟಿಕೆಟ್ ನೀಡುವ ನಿರೀಕ್ಷೆ ಇತ್ತಾದರೂ ಅದು ಸಕಾರವಾಗಿಲ್ಲ. ಬಿಸಿಗಳಿಗೇ ಟಿಕೆಟ್ ನೀಡಬೇಕೆಂದು ಸ್ಥಳೀಯ ಮುಖಂಡರು ಒತ್ತಾಯಿಸುತ್ತಿದ್ದಾರೆ.

ಕೆಳೆದ ಕೆಲ ದಿನಗಳ ಹಿಂದೆ ಬಿಆರ್‌ಎಸ್‌ಗೆ ಸೇರ್ಪಡೆಗೊಂಡಿದ್ದ ರವಿಕುಮಾರ್ ಗೌಡ್ ಜೊತೆಗೆ ಕರ್ಣೆ ಪ್ರಪಭಾಕರ್ ಕೂಡ ಬಿಆರ್‌ಎಸ್‌ ಪಕ್ಷದಿಂದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಬಿಜೆಪಿಯಲ್ಲೂ ಹಿಂದುಳಿದ ವರ್ಗದ ಹಲವು ಮುಖಂಡರು ನಾಲ್ಗೊಂಡ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಕ್ಷೇತ್ರಗಳಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ಸಿಎಂ ಕೆ ಚಂದ್ರಶೇಖರ್ ರಾವ್ ಅವರ ಚುನಾವಣಾ ತಂತ್ರವೇನು?

ತೆಲಂಗಾಣದ ಸಿಎಂ ಕೆ ಚಂದ್ರಶೇಖರ್ ರಾವ್ ಚುನಾವಣಾ ರಣತಂತ್ರಗಳನ್ನು ರೂಪಿಸುವಲ್ಲಿ ನಿಸ್ಸೀಮರು. ಎದುರಾಳಿ ಪಕ್ಷದವರನ್ನು ಸಲುಭವಾಗಿ ಮಣಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ನೇರ ಮತ್ತು ಹರಿತವಾದ ಮಾತುಗಳಿಂದಲೇ ಗುರಿಯಿಟ್ಟು ಹೊಡೆಯುತ್ತಾರೆ. ಸ್ವಲ್ಪ ಸೈಲೆಂಟ್ ಆಗಿದ್ದರೂ ರಾಜಕೀಯದ ಮಾಸ್ಟರ್ ಪ್ಲಾನ್‌ಗಳನ್ನು ರೂಪಿಸುವುದರಲ್ಲಿ ಇವರು ಯಾವಾಗಲೂ ಮುಂಚೂಣಿಯಲ್ಲಿ ಇರುತ್ತಾರೆ.

ಸಿಎಂ ಕೆಸಿಆರ್ ತೆದುಕೊಳ್ಳುವ ನಿರ್ಧಾರಗಳು ಯಾರಿಗೂ ಅರ್ಥವಾಗುವುದಿಲ್ಲ. ಚುನಾವಣೆಗಾಗಿ ಗುಲಾಬಿ ಬಾಸ್ ಈಗಾಗಲೇ ಹಲವಾರು ತಂತ್ರಗಳನ್ನು ರೂಪಿಸಿದ್ದಾರೆ ಎನ್ನುತ್ತಿವೆ ಮೂಲಗಳು. ಜಿಲ್ಲಾವಾರು ರೇಸ್ ಕುದುವರೆಗಳತ್ತ ಗಮನ ಹರಿಸಿರುವುದು ಮಾತ್ರವಲ್ಲದೆ, ಕೆಲವು ಕ್ಷೇತ್ರಗಳಲ್ಲಿ ಈ ಬಾರಿ ಹಾಲಿ ಶಾಸಕರಿಗೆ ಟಿಕೆಟ್ ನೀಡುವ ಸಾಧ್ಯತೆ ಕಡಿಮೆ ಇದೆ. ಅಂತಹ ಕ್ಷೇತ್ರಗಳಲ್ಲಿ ಗೆಲ್ಲುವ ಕುದುರೆಗಳಿಗಾಗಿ ಹುಟುಕಾಟ ಆರಂಭಿಸಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಕೆಸಿಆರ್ ಮುಂದಿನ ಚುನಾವಣೆಯಲ್ಲಿ ಎಲ್ಲಿಂದ ಸ್ಪರ್ಧಿಸುತ್ತಾರೆ ಎಂಬ ಕುತೂಹಲ ಹೆಚ್ಚಿದೆ. ಈ ಬಾರಿ ಗಜ್ವೆಲ್ ಬದಲು ಬೇರೆ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಜೋರಾಗಿದೆ. ಮೇಲಾಗಿ ಎರಡು ಕ್ಷೇತ್ರಗಳು ಹೆಸರು ಮುನ್ನೆಲೆಗೆ ಬರುತ್ತಿವೆ. ಉತ್ತರ ತೆಲಂಗಾಣದ ಕಾಮರೆಡ್ಡಿ ಕ್ಷೇತ್ರದಿಂದ ಸ್ಪರ್ಧೆಗೆ ಕೆಸಿಆರ್ ಆಸಕ್ತಿ ತೋರಿದ್ದಾರೆ ಅಂತ ಹೇಳಲಾಗುತ್ತಿದೆ.

mysore-dasara_Entry_Point
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.