Asia Cup 2023: ಏಷ್ಯಾಕಪ್ ವೇಳೆಗೆ ಶ್ರೇಯಸ್ ಅಯ್ಯರ್ ಮತ್ತು ಜಸ್ಪ್ರೀತ್ ಬುಮ್ರಾ ಫಿಟ್; ಟೀಮ್ ಇಂಡಿಯಾ ಸೇರುವ ಸಾಧ್ಯತೆ
Jasprit Bumrah and Shreyas Iyer : ಭಾರತ ತಂಡದಿಂದ ಹೊರಗಿರುವ ಬುಮ್ರಾ ಹಾಗೂ ಅಯ್ಯರ್, ಏಷ್ಯಾಕಪ್ ವೇಳೆಗೆ ತಂಡಕ್ಕೆ ಮರಳಲಿದ್ದಾರೆ ಎಂದು ವರದಿ ಹೇಳಿದೆ.
ಭಾರತ ಕ್ರಿಕೆಟ್ ತಂಡದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಮತ್ತು ಬ್ಯಾಟರ್ ಶ್ರೇಯಸ್ ಅಯ್ಯರ್ (Shreyas Iyer), ಈ ವರ್ಷ ನಡೆಯಲಿರುವ ಏಷ್ಯಾಕಪ್ (Asia Cup 2023) ವೇಳೆಗೆ ಭಾರತ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ. ಸುದೀರ್ಘ ಅವಧಿಯಿಂದ ಭಾರತ ತಂಡದಿಂದ ಹೊರಗಿರುವ ಬುಮ್ರಾ ಹಾಗೂ, ಈ ವರ್ಷ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ವೇಳೆ ತಂಡದಿಂದ ಹೊರಬಿದ್ದ ಅಯ್ಯರ್, ಮತ್ತೆ ಕೆಲವು ತಿಂಗಳುಗಳ ಬಳಿಕ ತಂಡಕ್ಕೆ ಮರಳಲಿದ್ದಾರೆ.
ಈ ಕುರಿತಾಗಿ ಇಎಸ್‌ಪಿಎನ್ ಕ್ರಿಕ್ಇನ್ಫೋ ವರದಿ ಮಾಡಿದೆ. ಭಾರತದ ಪ್ರಮುಖ ವೇಗಿ ಬುಮ್ರಾ, ಬೆನ್ನುನೋವಿನಿಂದಾಗಿ 2022ರ ಸೆಪ್ಟೆಂಬರ್ ತಿಂಗಳಿನಿಂದ ಮೈದಾನಕ್ಕಿಳಿದಿಲ್ಲ. ಇದೇ ಕಾರಣದಿಂದಾಗಿ ಅವರು ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯಗಳಿಂದಲೂ ಹೊರಬಿದ್ದಿದ್ದರು.
ಬೆನ್ನುನೋವಿನ ಕಾರಣದಿಂದಾಗಿ ಅವರು ಕಳೆದ ಎಂಟರಿಂದ ಒಂಬತ್ತು ತಿಂಗಳಿಂದ ಕ್ರಿಕೆಟ್‌ನಿಂದ ಹೊರಗುಳಿದಿದ್ದಾರೆ. ಈ ವರ್ಷದ ಏಪ್ರಿಲ್ ತಿಂಗಳಲ್ಲಿ, ನ್ಯೂಜಿಲ್ಯಾಂಡ್‌ನಲ್ಲಿ ಬುಮ್ರಾ ಬೆನ್ನಿನ ಕೆಳಭಾಗದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ವೈದ್ಯಕೀಯ ಪ್ರಕ್ರಿಯೆಯು ಯಶಸ್ವಿಯಾಗಿದ್ದು, ಬುಮ್ರಾ ಚೇತರಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಅವರು ಪ್ರಸಕ್ತ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಿಂದಲೂ ಹೊರಗುಳಿದರು.
ಅತ್ತ ಶ್ರೇಯಸ್ ಅಯ್ಯರ್, ಏಪ್ರಿಲ್‌ನಲ್ಲಿ ಕೆಳ ಬೆನ್ನಿನ ಗಾಯ ಉಲ್ಬಣಿಸಿದ ಹಿನ್ನೆಲೆಯಲ್ಲಿ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾದರು. ಅದಕ್ಕೂ ಮುನ್ನ ಮಾರ್ಚ್ ತಿಂಗಳಲ್ಲಿ ಅಹಮದಾಬಾದ್‌ನಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಅಂತಿಮ ಟೆಸ್ಟ್ ಪಂದ್ಯದಿಂದ ಹೊರಬರಬೇಕಾಯ್ತು. ಮೇ ತಿಂಗಳಲ್ಲಿ ಅವರು ಲಂಡನ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದರು. ಶಸ್ತ್ರಚಿಕಿತ್ಸೆ ಬಳಿಕ ಪುನರ್ವಸತಿ ಮುಂದುವರೆಸಿದ್ದಾರೆ.
ಇಎಸ್‌ಪಿಎನ್ ಕ್ರಿಕ್‌ಇನ್ಫೋ ಪ್ರಕಾರ ಬುಮ್ರಾ ಮತ್ತು ಶ್ರೇಯಸ್ ಇಬ್ಬರೂ ಬೆಂಗಳೂರಿನ ಎನ್‌ಸಿಎನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ಏಷ್ಯಾಕಪ್ ವೇಳೆಗೆ ಇವರಿಬ್ಬರೂ ಲಭ್ಯರಾಗುವ ಬಗ್ಗೆ ಎನ್‌ಸಿಎ ವೈದ್ಯಕೀಯ ಸಿಬ್ಬಂದಿ ಆಶಾವಾದ ವ್ಯಕ್ತಪಡಿಸಿದ್ದಾರೆ.
ಬುಮ್ರಾ ಇತ್ತೀಚೆಗೆ ಲಘು ಬೌಲಿಂಗ್ ಕಾರ್ಯವನ್ನು ಪ್ರಾರಂಭಿಸಿದ್ದಾರೆ ಎನ್ನಲಾಗಿದೆ. ನಿಧಾನವಾಗಿ ವೇಗಕ್ಕೆ ಗಮನ ಕೊಡಲಿದ್ದಾರೆ. ಮತ್ತೊಂದೆಡೆ ಶ್ರೇಯಸ್ ಕೂಡಾ ಈಗ ಫಿಸಿಯೋಥೆರಪಿಗೆ ಒಳಗಾಗಿದ್ದಾರೆ ಎಂದು ಇಎಸ್‌ಪಿಎನ್ ವರದಿ ಉಲ್ಲೇಖಿಸಿ ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಪ್ರಸಕ್ತ ವರ್ಷದ ಪ್ರಮುಖ ಕ್ರೀಡಾಕೂಟವಾದ ಏಕದಿನ ವಿಶ್ವಕಪ್ 2023ಕ್ಕೂ ಮುಂಚಿತವಾಗಿ, ಏಷ್ಯಾಕಪ್ ನಡೆಯಲಿದೆ. ಏಷ್ಯಾದ ಎರಡು ಬಲಿಷ್ಠ ತಂಡಗಳು ಹಾಗೂ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ (India vs Pakistan)ದ ರೋಚಕ ಪೈಪೋಟಿಗೆ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ. 2023ರ ಏಷ್ಯಾಕಪ್ ಆವೃತ್ತಿಗೆ ಸದ್ಯ ಮುಹೂರ್ತ ನಿಗದಿಯಾಗಿದ್ದು, ಪಿಸಿಬಿ ಮನವಿಯಂತೆಯೇ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಆಗಸ್ಟ್ 31ರಿಂದ ಸೆಪ್ಟೆಂಬರ್ 17ರವರೆಗೆ ಏಷ್ಯಾಕಪ್ ಪಂದ್ಯಾವಳಿ ನಡೆಯಲಿದೆ. ಈ ಪಂದ್ಯಾವಳಿಯು ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಸೆಪ್ಟೆಂಬರ್ 17ರಂದು ಫೈನಲ್ ಪಂದ್ಯ ನಡೆಯಲಿದೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ