West Indies vs India: ಮಳೆ ಪಾಲಾದ ಎರಡನೇ ಟೆಸ್ಟ್; ಪಂದ್ಯ ಡ್ರಾದಲ್ಲಿ ಅಂತ್ಯ, 1-0 ಅಂತರದಿಂದ ಸರಣಿ ಗೆದ್ದ ಭಾರತ
India Win Test series: 5ನೇ ದಿನದಾಟಕ್ಕೆ ಮಳೆ ಅಡ್ಡಿಯಾಗಿ ಎರಡನೇ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು. ಹೀಗಾಗಿ ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ 1-0 ಅಂತರದಲ್ಲಿ ವಶಪಡಿಸಿಕೊಂಡಿತು.
ಕೊನೆಗೂ ಭಾರತದ ಗೆಲುವಿನ ಕನಸಿಗೆ ವರುಣನ ನೆರವು ಸಿಗಲೇ ಇಲ್ಲ. ವೆಸ್ಟ್ ಇಂಡೀಸ್ (West Indies vs India) ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಗೆದ್ದು, 2-0 ಅಂತರದಿಂದ ಸರಣಿ ಕ್ಲೀನ್‌ಸ್ವೀಪ್ ಸಾಧಿಸುವ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ಮಳೆ ಸಂಪೂರ್ಣವಾಗಿ ಕಾಡಿತು. ಪಂದ್ಯದ ಐದನೇ ದಿನದಾಟದ ಆರಂಭದಿಂದಲೂ ಸುರಿದ ಭಾರಿ ಮಳೆಯಯಿಂದಾಗಿ ಸಂಪೂರ್ಣ ದಿನದಾಟವನ್ನು ಮೊಟಕುಗೊಳಿಸಲಾಯ್ತು. ಹೀಗಾಗಿ ಇಂಡೋ ವಿಂಡೀಸ್ ಟೆಸ್ಟ್ ಸರಣಿಯ ಎರಡನೇ ಪಂದ್ಯ ನೀರಸ ಡ್ರಾದಲ್ಲಿ ಅಂತ್ಯಗೊಂಡಿತು.
ಎರಡನೇ ಟೆಸ್ಟ್‌ನ ಆರಂಭದಿಂದಲೂ ಮೇಲುಗೈ ಸಾಧಿಸಿದ್ದ ಭಾರತ, ನಾಲ್ಕನೇ ದಿನದಾಟದಲ್ಲಿ ವಿಂಡೀಸ್‌ಗೆ 365 ರನ್‌ಗಳ ಬೃಹತ್ ಗುರಿ ನೀಡಿತು. ಹೀಗಾಗಿ ಪಂದ್ಯದ ಐದನೇ ಮತ್ತು ಅಂತಿಮ ದಿನದಾಟವು ಕುತೂಹಲ ಮೂಡಿಸಿತ್ತು. ಭಾರತದ ಗೆಲುವಿಗೆ ಎಂಟು ವಿಕೆಟ್‌ಗಳ ಅಗತ್ಯವಿತ್ತು. ಆದರೆ ಮಳೆ ನಿಲ್ಲದ ಕಾರಣ ಪಂದ್ಯವು ಡ್ರಾದಲ್ಲಿ ಕೊನೆಗೊಂಡಿತು.
ನಾಲ್ಕನೇ ದಿನದಾಟದ ಅಂತ್ಯದ ವೇಳೆಗೆ 289 ರನ್‌ಗಳ ಹಿನ್ನಡೆಯಲ್ಲಿದ್ದ ವೆಸ್ಟ್‌ಇಂಡೀಸ್, ಎರಡು ಆರಂಭಿಕ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಅತ್ತ ಟೀಮ್ ಇಂಡಿಯಾವು ಸತತ ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) 2023-25ರ ಆವೃತ್ತಿಗೆ ಸಂಪೂರ್ಣ 24 ಅಂಕಗಳನ್ನು ಗಳಿಸುವ ನಿರೀಕ್ಷೆಯಲ್ಲಿತ್ತು. ಆದರೆ, ಭಾರತದ ಗೆಲುವು ಸಾಧ್ಯವಾಗಲಿಲ್ಲ. ಗೆಲುವಿನಿಂದ ಸಿಗುತ್ತಿದ್ದ 12 ಅಂಕಗಳ ಬದಲಿಗೆ ಉಭಯ ತಂಡಗಳಿಗೂ ತಲಾ 4 ಅಂಕಗಳು ಸಿಕ್ಕಿವೆ.
ದಿನದ ಆರಂಭದಲ್ಲೇ ಮಳೆಯಾಗುತ್ತಿದ್ದರಿಂದ, ಸುಮಾರು ಎರಡೂವರೆ ಗಂಟೆ ಬಳಿಕ ಪಿಚ್ ಕವರ್ ತೆಗೆದು ಪಂದ್ಯದ ಆರಂಭಕ್ಕೆ ಸಿದ್ಧತೆ ಮಾಡಲಾಯ್ತು. ಆಟಗಾರರು ಮೈದಾನಕ್ಕಿಳಿಯಲು ಸಿದ್ಧರಾಗುತ್ತಿದ್ದಂತೆಯೇ ಮತ್ತೆ ಮಳೆ ಸುರಿಯಿತು. ಕೊನೆಗೂ ಮಳೆ ನಿಲ್ಲದ ಕಾರಣ ಪಂದ್ಯವನ್ನು ಡ್ರಾ ಮಾಡಲಾಯ್ತು.
2016ರಲ್ಲಿ ಇದೇ ಮೈದಾನದಲ್ಲಿ ಕೊನೆಯ ಬಾರಿಗೆ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಸತತ ಮಳೆಯಿಂದಾಗಿ ಕೇವಲ 22 ಓವರ್‌ಗಳು ಮಾತ್ರ ಆಡಲಾಗಿತ್ತು.
ಪಂದ್ಯವು ಡ್ರಾದಲ್ಲಿ ಕೊನೆಗೊಂಡಿದ್ದರಿಂದ ಟೀಮ್ ಇಂಡಿಯಾಗೆ ಕೇವಲ ನಾಲ್ಕು ಅಂಕಗಳು ಮಾತ್ರ ಸಿಕ್ಕಿವೆ. ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಅಂಕಗಳು ಹಂಚಿಕೆಯಾಗುವ ಪ್ರಕಾರ, ಪಂದ್ಯವು ಟೈ ಆದರೆ ಉಭಯ ತಂಡಗಳಿಗೂ ತಲಾ ಆರು ಅಂಕಗಳನ್ನು ನೀಡಲಾಗುತ್ತದೆ. ಅಂದರೆ ಒಟ್ಟು 12 ಅಂಕಗಳನ್ನು ಎರಡು ತಂಡಗಳಿಗೆ ಸಮನಾಗಿ ಹಂಚಲಾಗುತ್ತವೆ.
ಸದ್ಯ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತವು ಗೆದ್ದಿದ್ದು, 12 ಅಂಕಗಳನ್ನು ಪಡೆದಿದೆ. ಎರಡನೇ ಟೆಸ್ಟ್ ಪಂದ್ಯ ಡ್ರಾಗೊಂಡಲರೂ ಭಾರತ ಸರಣಿಯನ್ನು ಕಳೆದುಕೊಂಡಿಲ್ಲ. ಕೆರಿಬಿಯನ್ ನೆಲದಲ್ಲಿ ಭಾರತ ಸತತ ಐದನೇ ಸರಣಿ ಗೆದ್ದಿತು.
ಭಾರತವು ಮುಂದೆ ಡಬ್ಲ್ಯೂಟಿಸಿ ಆವೃತ್ತಿಯಲ್ಲಿ ಎರಡು ವಿದೇಶಿ ಪ್ರವಾಸ ಕೈಗೊಳ್ಳಲಿದೆ. ದಕ್ಷಿಣ ಆಫ್ರಿಕಾ ಮತ್ತು ಹಾಲಿ ವಿಶ್ವ ಟೆಸ್ಟ್ ಚಾಂಪಿಯನ್ ಆಸ್ಟ್ರೇಲಿಯಾ ಪ್ರವಾಸವು ಭಾರತದ ಪಾಲಿಗೆ ತುಸು ಕಠಿಣವಾಗಲಿದೆ. ಅದರ ನಡುವೆ ಇಂಗ್ಲೆಂಡ್ ವಿರುದ್ಧ ಸ್ವದೇಶಿ ಸರಣಿಯನ್ನೂ ಆಡಲಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಬಳಿಕ ಭಾರತ 16 ಅಂಕಗಳನ್ನು ಸಂಪಾದಿಸಿದ್ದು, ಶೇಕಡಾ 66 ಪಿಸಿಟಿಯೊಂದಿಗೆ ಸರಣಿ ಮುಗಿದಿದೆ. ಹೀಗಾಗಿ ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನಕ್ಕೆ ಕುಸಿದಿದೆ. ಶ್ರೀಲಂಕಾ ವಿರುದ್ಧ ಗೆದ್ದ ಪಾಕಿಸ್ತಾನ ಅಗ್ರಸ್ಥಾನದಲ್ಲಿದೆ.
ಸದ್ಯ ಟಸ್ಟ್ ಸರಣಿ ಮುಗಿದಿದ್ದು, ಜುಲೈ 27ರಿಂದ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಆರಂಭವಾಗಲಿದೆ.
ವಿಭಾಗ