Sarfaraz Khan: ರಣಜಿ ಆಡೋದು ನಿಲ್ಲಿಸಿ, ಇಲ್ಲಿ ಐಪಿಎಲ್ ಪ್ರತಿಭೆಗಳಿಗಷ್ಟೆ ಬೆಲೆ; ಸರ್ಫರಾಜ್​ಗೆ ಮತ್ತೆ ಅನ್ಯಾಯವಾಗಿದ್ದಕ್ಕೆ ಗವಾಸ್ಕರ್ ಕಿಡಿ
ಕನ್ನಡ ಸುದ್ದಿ  /  ಕ್ರೀಡೆ  /  Sarfaraz Khan: ರಣಜಿ ಆಡೋದು ನಿಲ್ಲಿಸಿ, ಇಲ್ಲಿ ಐಪಿಎಲ್ ಪ್ರತಿಭೆಗಳಿಗಷ್ಟೆ ಬೆಲೆ; ಸರ್ಫರಾಜ್​ಗೆ ಮತ್ತೆ ಅನ್ಯಾಯವಾಗಿದ್ದಕ್ಕೆ ಗವಾಸ್ಕರ್ ಕಿಡಿ

Sarfaraz Khan: ರಣಜಿ ಆಡೋದು ನಿಲ್ಲಿಸಿ, ಇಲ್ಲಿ ಐಪಿಎಲ್ ಪ್ರತಿಭೆಗಳಿಗಷ್ಟೆ ಬೆಲೆ; ಸರ್ಫರಾಜ್​ಗೆ ಮತ್ತೆ ಅನ್ಯಾಯವಾಗಿದ್ದಕ್ಕೆ ಗವಾಸ್ಕರ್ ಕಿಡಿ

Sarfaraz Khan: ಟೆಸ್ಟ್​ ಕ್ರಿಕೆಟ್​ಗೆ ಆಟಗಾರರನ್ನು ಆಯ್ಕೆ ಮಾಡಲು ಐಪಿಎಲ್​ ಎನ್ನುವಂತಾಗಿದೆ. ಹೀಗಾದರೆ ಪ್ರತಿಭಾವಂತ ಕ್ರಿಕೆಟಿಗರ ಕಥೆಯೇನು. ಸರ್ಫರಾಜ್​ ಖಾನ್​ಗೆ ಅನ್ಯಾಯ ಮಾಡಲಾಗಿದೆ ಎಂದು ದಿಗ್ಗಜ ಸುನಿಲ್ ಗವಾಸ್ಕರ್, ಸೆಲೆಕ್ಟರ್​ಗಳ ವಿರುದ್ಧ ಹರಿಹಾಯ್ದಿದ್ದಾರೆ.

ಸರ್ಫರಾಜ್​ ಖಾನ್​ಗೆ ಮತ್ತೆ ಅನ್ಯಾಯವಾಗಿದ್ದಕ್ಕೆ ಸುನಿಲ್ ಗವಾಸ್ಕರ್ ಕಿಡಿ
ಸರ್ಫರಾಜ್​ ಖಾನ್​ಗೆ ಮತ್ತೆ ಅನ್ಯಾಯವಾಗಿದ್ದಕ್ಕೆ ಸುನಿಲ್ ಗವಾಸ್ಕರ್ ಕಿಡಿ

ವೆಸ್ಟ್​ ಇಂಡೀಸ್​ ಎದುರಿನ ಪ್ರವಾಸಕ್ಕೆ ಟೀಮ್​ ಇಂಡಿಯಾ (Team India) ಪ್ರಕಟವಾಗಿದೆ. ತಂಡದಲ್ಲಿ ಕೆಲವು ಅಚ್ಚರಿಯ ಬದಲಾವಣೆಗಳು ಕಂಡು ಬಂದಿವೆ. ಆಯ್ಕೆಯ ನಿರೀಕ್ಷೆಯಲ್ಲಿದ್ದವರಿಗೆ, ನಿರಾಸೆಯಾಗಿದೆ. ಕೆಲವರು ಅನಿರೀಕ್ಷಿತವಾಗಿ ತಂಡವನ್ನು ಕೂಡಿಕೊಂಡಿದ್ದಾರೆ. 16ನೇ ಆವೃತ್ತಿಯ ಐಪಿಎಲ್​ನಲ್ಲಿ (IPL 2023) ಅದ್ಭುತ ಪ್ರದರ್ಶನ ನೀಡಿದ ಆಟಗಾರರಿಗೆ ಮಣೆ ಹಾಕಿರುವುದು ವಿಶೇಷ. ಆದರೆ ಟೀಮ್​ ಇಂಡಿಯಾ ಆಯ್ಕೆಯ ಕುರಿತಂತೆ ದಿಗ್ಗ ಕ್ರಿಕೆಟಿಗ ಸುನಿಲ್ ಗವಾಸ್ಕರ್ (Sunil Gavaskar) ಕಿಡಿ ಕಾರಿದ್ದಾರೆ.

ಚೇತೇಶ್ವರ್​ ಪೂಜಾರ, ಉಮೇಶ್​ ಯಾದವ್ ಮತ್ತು ಮೊಹಮ್ಮದ್​ ಶಮಿ ಅವರು ಈ ಪ್ರವಾಸದಿಂದ ಹೊರಗುಳಿದಿದ್ದಾರೆ. ವಿಶ್ರಾಂತಿಯೇ ಅಥವಾ ತಂಡದಿಂದ ಹೊರಗಿಡಲಾಗಿದೆಯೇ ಎಂಬುದಕ್ಕೆ ಸ್ಪಷ್ಟನೆ ಸಿಕ್ಕಿಲ್ಲ. ಟೆಸ್ಟ್​ನಲ್ಲಿ ಮುಕೇಶ್​ ಕುಮಾರ್​​, ಯಶಸ್ವಿ ಜೈಸ್ವಾಲ್ (ಏಕದಿನಕ್ಕೂ ಆಯ್ಕೆ), ಋತುರಾಜ್ ಗಾಯಕ್ವಾಡ್​ (ಏಕದಿನ ಆಡಿದ್ದಾರೆ) ಹೊಸ ಮುಖಗಳಾಗಿ ಕಾಣಿಸಿಕೊಂಡಿದ್ದಾರೆ. ಆದರೆ, ದೇಶೀಯ ಕ್ರಿಕೆಟ್​ನ ರನ್​ ಮೆಷಿನ್​ ಎಂದೇ ಹೆಸರಾಗಿರುವ ಸರ್ಫರಾಜ್​ ಖಾನ್ (Sarfaraz Khan) ಅವ​ರನ್ನು ಮತ್ತೆ ಕಡೆಗಣಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಗವಾಸ್ಕರ್​​ ಆಕ್ರೋಶ

ಸರ್ಫರಾಜ್​ ಆಟಕ್ಕೆ ನ್ಯಾಯಯುತ ಗೌರವ ಸಿಗದೇ ಇರುವುದಕ್ಕೆ ಸುನಿಲ್​ ಗವಾಸ್ಕರ್ ಕೆಂಡಾಮಂಡಲರಾಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್‌ಗೆ ಯುವ ಆಟಗಾರರಿಗೆ ಹೆಚ್ಚು ಅವಕಾಶ ನೀಡಲಾಗಿದೆ. ಆದರೂ ಕೆಲವೊಂದು ಅದ್ಭುತ ಅವಕಾಶಗಳನ್ನು ಕಳೆದುಕೊಂಡಿದೆ ಎಂದು ಮಾಜಿ ನಾಯಕ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಅದರಲ್ಲೂ ಸರ್ಫರಾಜ್​​ರನ್ನು ಆಯ್ಕೆಗಾರರು ಕಡೆಗಣಿಸಿದ್ದು ಅತ್ಯಂತ ಬೇಸರದ ಸಂಗತಿ ಎಂದು ಹೇಳಿದ್ದಾರೆ.

ರಣಜಿ ತೊರೆಯಿರಿ ಎಂದ ದಿಗ್ಗಜ

ಇಂಡಿಯನ್ ಪ್ರೀಮಿಯರ್ ಲೀಗ್​​ ಪ್ರದರ್ಶನದ ಆಧಾರದ ಮೇಲೆ ಆಟಗಾರರನ್ನು ಟೆಸ್ಟ್ ತಂಡಕ್ಕೆ ಮಾತ್ರ ಆಯ್ಕೆ ಮಾಡಿದರೆ, ರಣಜಿ ಟ್ರೋಫಿಯಲ್ಲಿ ಮುಂದುವರಿಯುವ ಅಗತ್ಯ ಇಲ್ಲ ಎಂದು ಸೆಲೆಕ್ಟರ್​​ಗಳ ವಿರುದ್ಧ ಗವಾಸ್ಕರ್ ಕಿಡಿಕಾರಿದ್ದಾರೆ. ಇಂಡಿಯಾ ಟುಡೇ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಗವಾಸ್ಕರ್ ತಮ್ಮ ಅಭಿಪ್ರಾಯ ಹೊರ ಹಾಕಿದ್ದಾರೆ. ಸರ್ಫರಾಜ್ ಖಾನ್ ದೇಶೀಯ ಕ್ರಿಕೆಟ್​​ನಲ್ಲಿ ಅದ್ಭುತ ಅಮೋಘ ಪ್ರದರ್ಶನ ನೀಡಿದ್ದಾರೆ. ಆದರೆ ಅವರಿಗೆ ಅನ್ಯಾಯ ಮಾಡಲಾಗಿದೆ ಎಂದು ಹೇಳಿದ್ದಾರೆ.

ಸರ್ಫರಾಜ್​​ ಪ್ರದರ್ಶನ

ಕಳೆದ ಮೂರು ದೇಶೀಯ ಕ್ರಿಕೆಟ್​​​ನಲ್ಲಿ​​​ (ರಣಜಿ, ದುಲೀಪ್ ಟ್ರೋಫಿ) ಸರ್ಫರಾಜ್​ ಆಡಿದ ಕೇವಲ 37 ಪಂದ್ಯಗಳಲ್ಲಿ 3505 ರನ್ ಗಳಿಸಿದ್ದಾರೆ. 13 ಶತಕ ಮತ್ತು 9 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. 79.65ರ ಬ್ಯಾಟಿಂಗ್​ ಸರಾಸರಿ ಹೊಂದಿದ್ದಾರೆ. ಆದರೂ ಅವರನ್ನು ಆಯ್ಕೆ ಮಾಡದೆ ಕಡೆಗಣಿಸಲಾಗಿದೆ. ಈ ಹುಡುಗ ಇದಕ್ಕಿಂತ ಇನ್ನೇನು ಮಾಡಬೇಕು ಎಂದು ಪ್ರಶ್ನಿಸಿದ ಅವರು, ಅವರು ಆಡುವ 11ರ ಬಳಗಕ್ಕೆ ಬರದಿದ್ದರೂ, ಆತನ ಪ್ರದರ್ಶನ ಗುರುತಿಸಿ ತಂಡದಲ್ಲಿ ಸ್ಥಾನ ನೀಡಬೇಕು ಎಂದು ಒತ್ತಿ ಹೇಳಿದ್ದಾರೆ.

ಸರ್ಫರಾಜ್ ಅವರಂತಹ ಆಟಗಾರರ ಪ್ರಯತ್ನವನ್ನು ಗುರುತಿಸಲು ಆಯ್ಕೆಗಾರರು ವಿಫಲವಾದರೆ, ರಣಜಿ ಟ್ರೋಫಿಯಲ್ಲಿ ಆಡುವ ಅಗತ್ಯ ಇಲ್ಲ. ರಣಜಿ ತೊರೆಯುವುದೇ ಉತ್ತಮ ಎಂದು ಗವಾಸ್ಕರ್ ಸಲಹೆ ನೀಡಿದ್ದಾರೆ. ರೆಡ್​ ಬಾಲ್​ ಮಾದರಿಗೆ ಆಟಗಾರರು ತಮ್ಮನ್ನು ತಾವು ಸೂಕ್ತವೆಂದು ಪರಿಗಣಿಸಲು, ಐಪಿಎಲ್ ಆಡಿದರೆ ಸಾಕು ಎನ್ನುವಂತಾಗಿದೆ. ಹೀಗಾದರೆ ಪ್ರತಿಭಾವಂತರ ಕಥೆಯೇನು ಎಂದು ಸೆಲೆಕ್ಟರ್​ಗಳ ವಿರುದ್ಧ ಹರಿಹಾಯ್ದಿದ್ದಾರೆ.

ಜೈಸ್ವಾಲ್, ಋತುರಾಜ್​ ಅದ್ಭುತ ಪ್ರದರ್ಶನ

ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ತೋರಿದ ಜೈಸ್ವಾಲ್ ಮತ್ತು ಋತುರಾಜ್​ ಅವರು ದೇಶೀಯ ಕ್ರಿಕೆಟ್​ನಲ್ಲೂ ಮಿಂಚಿದ್ದಾರೆ. ಇದೇ ಕಾರಣಕ್ಕಾಗಿ ಅವರಿಗೆ ಮಣೆ ಹಾಕಲಾಗಿದೆ. ಜೈಸ್ವಲ್ 15 ಪ್ರಥಮ ದರ್ಜೆ ಪಂದ್ಯಗಳಲ್ಲಿ 80.21ರ ಬ್ಯಾಟಿಂಗ್​ ಸರಾಸರಿಯಲ್ಲಿ 1845 ರನ್ ಗಳಿಸಿದ್ದಾರೆ. 9 ಶತಕ, 2 ಅರ್ಧಶತಕ ಸಿಡಿಸಿದ್ದಾರೆ. ಹಾಗೆ ಋತುರಾಜ್ ಗಾಯಕ್ವಾಡ್, 28 ಪ್ರಥಮ ದರ್ಜೆ ಪಂದ್ಯಗಳಲ್ಲಿ 42.19ರ ಬ್ಯಾಟಿಂಗ್ ಸರಾಸರಿಯಲ್ಲಿ 1941 ರನ್​ ಗಳಿಸಿದ್ದಾರೆ.

ಭಾರತ ಟೆಸ್ಟ್ ತಂಡ

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಜಯದೇವ್ ಉನಾದ್ಕತ್, ನವದೀಪ್ ಸೈನಿ.

ಭಾರತ ಏಕದಿನ ತಂಡ

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಯುಜ್ವೇಂದ್ರ ಚಹಾಲ್, ಕುಲ್ದೀಪ್ ಯಾದವ್, ಜಯದೇವ್ ಉನಾದ್ಕತ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಮುಕೇಶ್ ಕುಮಾರ್.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.