ಆಸ್ಟ್ರೇಲಿಯನ್ ಓಪನ್ ಸೆಮಿಫೈನಲ್ ತಲುಪಿದ ಬೋಪಣ್ಣ; ನಂ 1 ಶ್ರೇಯಾಂಕ ಪಡೆದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆ
Rohan Bopanna: ಭಾರತದ ರೋಹನ್ ಬೋಪಣ್ಣ ವಿಶೇಷ ಗರಿಮೆಗೆ ಪಾತ್ರರಾಗಿದ್ದಾರೆ. ನಂಬರ್ ವನ್ ಸ್ಥಾನ ಪಡೆದ ವಿಶ್ವದ ಹಿರಿಯ ಆಟಗಾರ ಎಂಬ ಖ್ಯಾತಿ ಭಾರತೀಯನದ್ದಾಗಿದೆ. ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯಲ್ಲಿ ಅಮೋಘ ಫಾರ್ಮ್‌ನಲ್ಲಿರುವ ಇಂಡೋ-ಆಸೀಸ್ ಜೋಡಿ ಇದೀಗ ಸೆಮಿಫೈನಲ್‌ಗೆ ಮುನ್ನಡೆದಿದ್ದಾರೆ.
ಆಸ್ಟ್ರೇಲಿಯನ್ ಓಪನ್ 2024ರ (Australian Open) ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾದ ಜೋಡಿ ವಿರುದ್ಧ ಗೆದ್ದ ಭಾರತದ ರೋಹನ್ ಬೋಪಣ್ಣ (Rohan Bopanna) ಮತ್ತೊಂದು ಹಿರಿಮೆಗೆ ಪಾತ್ರರಾಗಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬೋಪಣ್ಣ ತಮ್ಮ ಆಸ್ಟ್ರೇಲಿಯಾದ ಜೋಡಿ ಮ್ಯಾಥ್ಯೂ ಎಬ್ಡೆನ್ ಅವರೊಂದಿಗೆ ಅರ್ಜೆಂಟೀನಾದ ಮ್ಯಾಕ್ಸಿಮೊ ಗೊಂಜಾಲೆಜ್ ಮತ್ತು ಆಂಡ್ರೆಸ್ ಮೊಲ್ಟೆನಿ ವಿರುದ್ಧ 6-4, 7-6 (5) ಸೆಟ್‌ಗಳಿಂದ ಜಯಗಳಿಸಿದರು. ಆ ಮೂಲಕ 43 ವರ್ಷದ ಹಿರಿಯ ಟೆನ್ನಿಸ್ ಆಟಗಾರ, ಎಟಿಪಿ ಪುರುಷರ ಡಬಲ್ಸ್ ಶ್ರೇಯಾಂಕದಲ್ಲಿ ಮೊದಲ ಇದೇ ಮೊದಲ ಬಾರಿಗೆ ವಿಶ್ವದ ನಂಬರ್ 1 ಆಟಗಾರನಾಗಿದ್ದಾರೆ.
ಫೈನಲ್ ಪಂದ್ಯದ ಮರುದಿನ ಸೋಮವಾರ ಹೊಸ ಶ್ರೇಯಾಂಕ ಪಟ್ಟಿ ಪ್ರಕಟಗೊಳ್ಳಲಿದೆ. ಆ ಮೂಲಕ ಭಾರತೀಯನಿಗೆ ಅಧಿಕೃತವಾಗಿ ನಂ.1 ಪಟ್ಟ ಸಿಗಲಿದೆ.
ಅಗ್ರಸ್ಥಾನದೊಂದಿಗೆ ಬೋಪಣ್ಣ ವಿಶೇಷ ಗರಿಮೆಗೆ ಪಾತ್ರರಾಗಿದ್ದಾರೆ. ನಂಬರ್ ವನ್ ಸ್ಥಾನ ಪಡೆದ ವಿಶ್ವದ ಹಿರಿಯ ಆಟಗಾರ ಎಂಬ ಖ್ಯಾತಿ ಭಾರತೀಯನದ್ದಾಗಿದೆ. ಈ ಹಿಂದೆ 2022ರ ಅಕ್ಟೋಬರ್‌ನಲ್ಲಿ 38ನೇ ವಯಸ್ಸಿನಲ್ಲಿ ಅಮೆರಿಕದ ರಾಜೀವ್ ರಾಮ್ ಅಗ್ರಸ್ಥಾನಕ್ಕೇರಿದ್ದರು. ಅವರನ್ನು ಹಿಂದಿಕ್ಕುವ ಮೂಲಕ ಭಾರತೀಯ ಟೆನಿಸ್ ದಿಗ್ಗಜ ಹೊಸ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇದನ್ನೂ ಓದಿ | ಆಸ್ಟ್ರೇಲಿಯನ್ ಓಪನ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಬೋಪಣ್ಣ-ಎಬ್ಡೆನ್ ಜೋಡಿ
ಭಾರತದ ಶ್ರೇಷ್ಠ ಟೆನ್ನಿಸ್ ಆಟಗಾರ ಪುರುಷರ ಡಬಲ್ಸ್‌ನಲ್ಲಿ ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಟ್ರೋಫಿ ಗೆಲುವಿನಿಂದ ಕೇವಲ ಎರಡು ಹೆಜ್ಜೆ ದೂರದಲ್ಲಿದ್ದಾರೆ. ಅತ್ತ ಭಾರತೀಯನ ಜೋಡಿ ಎಬ್ಡೆನ್ ಈಗಾಗಲೇ ಪುರುಷರ ಡಬಲ್ಸ್ ಗ್ರಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದಿದ್ದಾರೆ. ಅವರು 2022ರಲ್ಲಿ ಆಸ್ಟ್ರೇಲಿಯಾದ ಮ್ಯಾಕ್ಸ್ ಪರ್ಸೆಲ್ ಅವರೊಂದಿಗೆ ವಿಂಬಲ್ಡನ್ ಗೆದ್ದಿದ್ದರು. ಮುಂದಿನ ಮಾರ್ಚ್ ತಿಂಗಳಲ್ಲಿ 44ನೇ ವರ್ಷಕ್ಕೆ ಕಾಲಿಡಲಿರುವ ಬೋಪಣ್ಣ, ಈ ಸಾಧನೆ ಮಾಡಿದರೆ ಗ್ರ್ಯಾಂಡ್ ಸ್ಲಾಮ್ ಪುರುಷರ ಡಬಲ್ಸ್ ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಳ್ಳಲಿದ್ದಾರೆ.
2024ರ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯಲ್ಲಿ ಅಮೋಘ ಫಾರ್ಮ್‌ನಲ್ಲಿರುವ ಇಂಡೋ-ಆಸೀಸ್ ಜೋಡಿ ಇದೀಗ ಸೆಮಿಫೈನಲ್‌ಗೆ ಮುನ್ನಡೆದಿದ್ದಾರೆ. ಮೆಲ್ಬೋರ್ನ್‌ನಲ್ಲಿ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಪಂದ್ಯವು ಕೆಲಕಾಲ ವಿಳಂಬವಾಯ್ತು. ಇಂಡೋ-ಆಸೀಸ್ ಜೋಡಿ ಆರಂಭಿಕ ಸೆಟ್ ಅನ್ನು ಕೇವಲ ಅರ್ಧ ಗಂಟೆಯಲ್ಲಿ ಮುಗಿಸಿದರು. ಐದನೇ ಗೇಮ್‌ನಲ್ಲಿ ಗೊನ್ಜಾಲೆಜ್ ಅವರ ಸರ್ವ್ ಮುರಿದ ಬೋಪಣ್ಣ, ಮೊದಲ ಸೆಟ್ ಅನ್ನು 6-4ರಿಂದ ಗೆದ್ದುಕೊಂಡರು.
ಆಸ್ಟ್ರೇಲಿಯನ್ ಓಪನ್ ಮೊದಲ ಸೆಮಿಫೈನಲ್
2008ರಲ್ಲಿ ಆಸ್ಟ್ರೇಲಿಯನ್ ಓಪನ್‌ಗೆ ಪದಾರ್ಪಣೆ ಮಾಡಿದ ಬೋಪಣ್ಣ, ಮೆಲ್ಬೋರ್ನ್ ಪಾರ್ಕ್‌ನಲ್ಲಿ ಸತತ 17ನೇ ಪಂದ್ಯಾವಳಿಯನ್ನು ಆಡುತ್ತಿದ್ದಾರೆ. ಅಲ್ಲದೆ ಇದೇ ಮೊದಲ ಬಾರಿಗೆ ತಮ್ಮ ವೃತ್ತಿಜೀವನದಲ್ಲಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸೆಮಿಫೈನಲ್ ತಲುಪಿದ್ದಾರೆ. ಈ ಹಿಂದೆ ಮೂರನೇ ಸುತ್ತಿನ ಫಿನಿಶ್ ಅವರ ಹಿಂದಿನ ಅತ್ಯುತ್ತಮ ಪ್ರದರ್ಶನವಾಗಿತ್ತು. ಇದನ್ನು ಅವರು ತಮ್ಮ ವೃತ್ತಿಜೀವನದಲ್ಲಿ ಆರು ಬಾರಿ ಸಾಧಿಸಿದ್ದಾರೆ.
ನಾಲ್ಕು ತಿಂಗಳ ಹಿಂದೆ, ಕಳೆದ ಸೆಪ್ಟೆಂಬರ್‌ಲ್ಲಿ ನಡೆದ ಯುಎಸ್ ಓಪನ್ ಫೈನಲ್‌ಲ್ಲಿ ಬೋಪಣ್ಣ ಮತ್ತು ಎಬ್ಡೆನ್ ಸೋತಿದ್ದರು. ಆದರೂ ಓಪನ್ ಯುಗದಲ್ಲಿ ಗ್ರ್ಯಾಂಡ್ ಸ್ಲಾಮ್ ಫೈನಲ್ ತಲುಪಿದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು.
ಇದನ್ನೂ ಓದಿ | ಆಸ್ಟ್ರೇಲಿಯನ್ ಓಪನ್; ವೃತ್ತಿಜೀವನದ 500ನೇ ಗೆಲುವು ದಾಖಲಿಸಿದ ರೋಹನ್ ಬೋಪಣ್ಣ
ಸದ್ಯ ಎರಡನೇ ಶ್ರೇಯಾಂಕದ ಪುರುಷರ ಡಬಲ್ಸ್ ಜೋಡಿಯು ಮುಂದೆ ಚೀನಾದ ಶ್ರೇಯಾಂಕರಹಿತ ಜಾಂಗ್ ಝಿಝೆನ್ ಮತ್ತು ಜೆಕ್ ಗಣರಾಜ್ಯದ ಟೊಮಾಸ್ ಮಚಾಕ್ ಅವರನ್ನು ಸೆಮಿ ಕದನದಲ್ಲಿ ಎದುರಿಸಲಿದ್ದಾರೆ. ಅವರು ಆಡಮ್ ಪಾವ್ಲಾಸೆಕ್ ಮತ್ತು ಏರಿಯಲ್ ಬೆಹಾರ್ ಅವರನ್ನು 6-3, 6-1 ಸೆಟ್ ಗಳಿಂದ ಸೋಲಿಸಿ ಸೆಮೀಸ್ ತಲುಪಿದ್ದಾರೆ.(This copy first appeared in Hindustan Times Kannada website. To read more like this please logon to kannada.hindustantime.com )
ವಿಭಾಗ