Wrestling Trials: ಆಗಸ್ಟ್ 25, 26ರಂದು ಪಟಿಯಾಲದಲ್ಲಿ ಕುಸ್ತಿ ಟ್ರಯಲ್ಸ್; ಯಾವುದೇ ಕುಸ್ತಿಪಟುವಿಗಿಲ್ಲ ವಿನಾಯಿತಿ
ಕನ್ನಡ ಸುದ್ದಿ  /  ಕ್ರೀಡೆ  /  Wrestling Trials: ಆಗಸ್ಟ್ 25, 26ರಂದು ಪಟಿಯಾಲದಲ್ಲಿ ಕುಸ್ತಿ ಟ್ರಯಲ್ಸ್; ಯಾವುದೇ ಕುಸ್ತಿಪಟುವಿಗಿಲ್ಲ ವಿನಾಯಿತಿ

Wrestling Trials: ಆಗಸ್ಟ್ 25, 26ರಂದು ಪಟಿಯಾಲದಲ್ಲಿ ಕುಸ್ತಿ ಟ್ರಯಲ್ಸ್; ಯಾವುದೇ ಕುಸ್ತಿಪಟುವಿಗಿಲ್ಲ ವಿನಾಯಿತಿ

World Championships Trials: ಸೆಪ್ಟೆಂಬರ್ 23ರಿಂದ ಚೀನಾದಲ್ಲಿ ಆರಂಭವಾಗಲಿರುವ ಏಷ್ಯನ್ ಗೇಮ್ಸ್‌ಗೆ ಕೆಲವೇ ದಿನಗಳು ಬಾಕಿ ಉಳಿದಿರುವುದರಿಂದ ವರ್ಲ್ಡ್ಸ್‌ ಟ್ರಯಲ್ಸ್‌ನಲ್ಲಿ ಭಾಗವಹಿಸುವ ಕುರಿತಾಗಿ ಬಜರಂಗ್ ಪೂನಿಯಾ ಮತ್ತು ವಿನೇಶ್ ಫೋಗಟ್ ಇನ್ನೂ ನಿರ್ಧರಿಸಿಲ್ಲ.

ವಿನೇಶ್ ಫೋಗಟ್‌, ಬಜರಂಗ್ ಪೂನಿಯಾ
ವಿನೇಶ್ ಫೋಗಟ್‌, ಬಜರಂಗ್ ಪೂನಿಯಾ

ಆಗಸ್ಟ್ 25 ಮತ್ತು 26ರಂದು ಪಂಜಾಬ್‌ನ ಪಟಿಯಾಲದಲ್ಲಿ (Patiala) ಕುಸ್ತಿ ವಿಶ್ವ ಚಾಂಪಿಯನ್‌ಶಿಪ್‌ನ (World Championships) ಟ್ರಯಲ್ಸ್ ನಡೆಯಲಿದೆ ಎಂದು ತಾತ್ಕಾಲಿಕ ಸಮಿತಿ ತಿಳಿಸಿದೆ. ಆ ಮೂಲಕ ಟ್ರಯಲ್ಸ್‌ ಕುರಿತಾಗಿ ವಾರಗಳಿಂದ ಎದ್ದಿದ್ದ ಗೊಂದಲಗಳಿಗೆ ಕೊನೆಗೂ ತೆರೆ ಬಿದ್ದಿದೆ. ಈ ಹಿಂದೆ ಏಷ್ಯನ್ ಗೇಮ್ಸ್ ಟ್ರಯಲ್ಸ್‌ನಿಂದ ಬಜರಂಗ್ ಪೂನಿಯಾ ಮತ್ತು ವಿನೇಶ್ ಫೋಗಟ್‌ಗೆ ವಿನಾಯಿತಿ ನೀಡಲಾಗಿತ್ತು. ಹೀಗಾಗಿ ತಾತ್ಕಾಲಿಕ ಸಮಿತಿ ತೆಗೆದುಕೊಂಡ ನಿರ್ಧಾರವನ್ನು ಬಹುತೇಕ ಕುಸ್ತಿಪಟುಗಳು ಟೀಕಿಸಿದ್ದರು. ಇದು ಭಾರಿ ಕೋಲಾಹಲವನ್ನು ಸೃಷ್ಟಿಸಿತ್ತು.

ಯಾರೆಲ್ಲಾ ಟ್ರಯಲ್ಸ್‌ಗೆ ಹಾಜರಾಗಬೇಕು?

ವರ್ಲ್ಡ್ ಚಾಂಪಿಯನ್‌ಶಿಪ್‌ ಟ್ರಯಲ್ಸ್‌ನಿಂದ ಯಾವುದೇ ಕುಸ್ತಿಪಟುಗಳಿಗೆ ತಾತ್ಕಾಲಿಕ ಸಮಿತಿಯು ವಿನಾಯಿತಿಯನ್ನು ನೀಡಿಲ್ಲ. ವಿಶ್ವ ಚಾಂಪಿಯನ್‌ಶಿಪ್‌ ಕ್ರೀಡಾಪಟುಗಳ ಕಿರುಪಟ್ಟಿಯನ್ನು ಅಂತಿಮಗೊಳಿಸಲು ಮಾನದಂಡಗಳನ್ನು ಉಲ್ಲೇಖಿಸಲಾಗಿದೆ. “2022 ಮತ್ತು 2023ರಲ್ಲಿ ನಡೆದ ಎಲ್ಲಾ ಅಂತಾರಾಷ್ಟ್ರೀಯ / ಶ್ರೇಯಾಂಕ / ಏಷ್ಯನ್ / ವಿಶ್ವ ಚಾಂಪಿಯನ್‌ಶಿಪ್‌ಗಳು / 2022 ಮತ್ತು 2023ರ ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲಿ ಪದಕ ವಿಜೇತರು ಮತ್ತು 2022ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದವರು ಕೂಡಾ ಟ್ರಯಲ್ಸ್‌ಗೆ ಹಾಜರಾಗಬೇಕಾಗುತ್ತದೆ” ಎಂದು ತಾತ್ಕಾಲಿಕ ಸಮಿತಿ ತಿಳಿಸಿದೆ.

ಸೆಪ್ಟೆಂಬರ್ 23ರಿಂದ ಚೀನಾದಲ್ಲಿ ಆರಂಭವಾಗಲಿರುವ ಏಷ್ಯನ್ ಗೇಮ್ಸ್‌ಗೆ ಕೆಲವೇ ದಿನಗಳು ಬಾಕಿ ಉಳಿದಿರುವುದರಿಂದ ವರ್ಲ್ಡ್ಸ್‌ ಟ್ರಯಲ್ಸ್‌ನಲ್ಲಿ ಭಾಗವಹಿಸುವ ಕುರಿತಾಗಿ ಬಜರಂಗ್ ಮತ್ತು ವಿನೇಶ್ ಇನ್ನೂ ನಿರ್ಧರಿಸಿಲ್ಲ. 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಮೊದಲ ಅರ್ಹತಾ ಪಂದ್ಯವಾಗಿ ವಿಶ್ವ ಚಾಂಪಿಯನ್‌ಶಿಪ್ ಕಾರ್ಯನಿರ್ವಹಿಸಲಿದೆ.

ಯಾವೆಲ್ಲಾ ವಿಭಾಗಗಳಿಗೆ ಟ್ರಯಲ್ಸ್

“ಸೆಲೆಕ್ಷನ್ ಟ್ರಯಲ್ಸ್‌ ದಿನಾಂಕ ನಿಗದಿಯಾಗಿರುವಂದು ಬೆಳಗ್ಗೆ 7.00 ಗಂಟೆಗೆ ಪಟಿಯಾಲಾದ ಎಸ್‌ಎಐ ಸೆಂಟರ್‌ನಲ್ಲಿ ಟ್ರಯಲ್ಸ್‌ ನಡೆಯಲಿದೆ. ಎಲ್ಲಾ ತೂಕದ ವಿಭಾಗಗಳಲ್ಲಿ ಎರಡು ಕೆಜಿಯಷ್ಟು ಏರುಪೇರುಗಳಿಗೆ ಅನುಮತಿಸಲಾಗುತ್ತದೆ” ಎಂದು ಹೇಳಿಕೆ ತಿಳಿಸಿದೆ.

ಫ್ರೀಸ್ಟೈಲ್ : 57 ಕೆಜಿ, 61 ಕೆಜಿ, 65 ಕೆಜಿ, 70 ಕೆಜಿ, 74 ಕೆಜಿ, 79 ಕೆಜಿ, 86 ಕೆಜಿ, 92 ಕೆಜಿ, 97 ಕೆಜಿ ಮತ್ತು 125 ಕೆಜಿ.

ಗ್ರೀಕೋ-ರೋಮನ್ : 55 ಕೆಜಿ, 60 ಕೆಜಿ, 63 ಕೆಜಿ, 67 ಕೆಜಿ, 72 ಕೆಜಿ, 77 ಕೆಜಿ, 82 ಕೆಜಿ, 87 ಕೆಜಿ, 97 ಕೆಜಿ ಮತ್ತು 130 ಕೆಜಿ.

ಮಹಿಳೆಯರ ಕುಸ್ತಿ : 50 ಕೆಜಿ, 53 ಕೆಜಿ, 55 ಕೆಜಿ, 57 ಕೆಜಿ, 59 ಕೆಜಿ, 62 ಕೆಜಿ, 65 ಕೆಜಿ, 68 ಕೆಜಿ, 72 ಕೆಜಿ ಮತ್ತು 76 ಕೆಜಿ.

ಟ್ರಯಲ್ಸ್‌ ಹೇಗಿರುತ್ತದೆ?

ಒಂದು ವೇಳೆ ಎಂಟು ಕುಸ್ತಿಪಟುಗಳು ತೂಕ ವಿಭಾಗದಲ್ಲಿ ಟ್ರಯಲ್ಸ್‌ ಅರ್ಹರಾಗಿದ್ದರೆ, ನಾರ್ಡಿಕ್ ವ್ಯವಸ್ಥೆಯ ಮೂಲಕ ಆಯ್ಕೆ ಮಾಡಲಾಗುತ್ತದೆ ಎಂದು ತಾತ್ಕಾಲಿಕ ಸಮಿತಿ ಹೇಳಿದೆ. ನಾರ್ಡಿಕ್ ವ್ಯವಸ್ಥೆಯ ಅಡಿಯಲ್ಲಿ, ಕುಸ್ತಿಪಟುಗಳು ರೌಂಡ್-ರಾಬಿನ್ ರೂಪದಲ್ಲಿ ಪರಸ್ಪರ ಮುಖಾಮುಖಿಯಾಗುತ್ತಾರೆ. ಪಂದ್ಯಗಳು ಮುಗಿದ ನಂತರ ಗೆಲುವುಗಳ ಸಂಖ್ಯೆಗೆ ಅನುಗುಣವಾಗಿ ಕುಸ್ತಿಪಟುಗಳಿಗೆ ಶ್ರೇಯಾಂಕ ನೀಡಲಾಗುತ್ತದೆ. ಅಗ್ರ ಮೂವರು ಪದಕಗಳನ್ನು ಗೆಲ್ಲುತ್ತಾರೆ.

"ಒಂದು ತೂಕ ವಿಭಾಗದಲ್ಲಿ ಎಂಟು ಅಥವಾ ಅದಕ್ಕಿಂತ ಹೆಚ್ಚು ಕುಸ್ತಿಪಟುಗಳು ಅರ್ಹರಾದರೆ, ನೇರ ಎಲಿಮಿನೇಷನ್ ನಡೆಸಲಾಗುತ್ತದೆ" ಎಂದು ತಾತ್ಕಾಲಿಕ ಸಮಿತಿ ಹೇಳಿಕೆ ತಿಳಿಸಿದೆ.

Whats_app_banner

ವಿಭಾಗ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.