ಟಿ20 ಕ್ರಿಕೆಟ್ನಲ್ಲಿ 5ನೇ ಶತಕ ಸಿಡಿಸಿ ರೋಹಿತ್ ಶರ್ಮಾ ವಿಶ್ವ ದಾಖಲೆ ಸರಿಗಟ್ಟಿದ ಗ್ಲೆನ್ ಮ್ಯಾಕ್ಸ್‌ವೆಲ್
Glenn Maxwell : ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಕ್ರಿಕೆಟ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಆಸ್ಟ್ರೇಲಿಯಾ ತಂಡದ ಗ್ಲೆನ್ ಮ್ಯಾಕ್ಸ್‌ವೆಲ್, ರೋಹಿತ್ ಶರ್ಮಾ ಅವರ ಟಿ20 ಶತಕಗಳ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.
ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ಅವರು ತಮ್ಮ 5ನೇ ಟಿ20ಐ ಶತಕ ಗಳಿಸುವ ಮೂಲಕ ಭಾನುವಾರ (ಫೆಬ್ರವರಿ 11) ಚುಟುಕು ಕ್ರಿಕೆಟ್ನಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಅವರ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ. ಅಡಿಲೇಡ್‌ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧ 2ನೇ ಟಿ20ಐ ಪಂದ್ಯದಲ್ಲಿ 35 ವರ್ಷದ ಆಸೀಸ್ ಕ್ರಿಕೆಟಿಗ ಈ ಮೈಲಿಗಲ್ಲು ಸಾಧಿಸಿದರು.
ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮ್ಯಾಕ್ಸ್‌ವೆಲ್, ಅಬ್ಬರದ ಆಟವಾಡಿದರು. ವಿಂಡೀಸ್ ಬೌಲರ್ಸ್ಗೆ ಬೆಂಡೆತ್ತಿದ ಮ್ಯಾಕ್ಸಿ, ಕೇವಲ 55 ಎಸೆತಗಳಲ್ಲಿ ಸ್ಫೋಟಕ 120 ರನ್ ಗಳಿಸಿದರು. ಔಟಾಗದೆ ಉಳಿದ ಬಲಗೈ ಆಟಗಾರ 12 ಬೌಂಡರಿ, ಭರ್ಜರಿ 8 ಸಿಕ್ಸರ್ ಬಾರಿಸಿದ್ದು, ತಾನಾಡಿದ ಕೊನೆಯ ಮೂರು ಟಿ20 ಪಂದ್ಯಗಳಲ್ಲಿ ಚಚ್ಚಿದ 2ನೇ ಶತಕ ಇದಾಗಿದೆ.
ರೋಹಿತ್ ದಾಖಲೆ ಸರಿಗಟ್ಟಿದ ಮ್ಯಾಕ್ಸ್‌ವೆಲ್
2023ರ ನವೆಂಬರ್ 28ರಂದು ಭಾರತದ ವಿರುದ್ಧ ಗುವಾಹಟಿಯಲ್ಲಿ ನಡೆದ ತನ್ನ 100ನೇ ಟಿ20ಐನಲ್ಲಿ ಮ್ಯಾಕ್ಸ್‌ವೆಲ್ ಶತಕ ಚಚ್ಚಿದ್ದರು. ಅಂದು ಟಿ20ಐ ಕ್ರಿಕೆಟ್ನಲ್ಲಿ ಅತ್ಯಧಿಕ ಸೆಂಚುರಿ ಸಿಡಿಸಿದ ರೋಹಿತ್ ವಿಶ್ವ ದಾಖಲೆ ಸರಿಗಟ್ಟಿದ್ದರು. ಆದರೆ ರೋಹಿತ್ 2024ರ ಜ. 17ರಂದು ಅಫ್ಘಾನಿಸ್ತಾನ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ತಮ್ಮ 5ನೇ ಅಂತಾರಾಷ್ಟ್ರೀಯ ಟಿ20ಐ ಶತಕ ದಾಖಲಿಸಿದ್ದರು. ಆ ಮೂಲಕ ಚುಟುಕು ಕ್ರಿಕೆಟ್ನಲ್ಲಿ ಹೆಚ್ಚು ಸೆಂಚುರಿ ಸಿಡಿಸಿದ ಆಟಗಾರ ಎನಿಸಿದರು.
ಇದೀಗ ಹಿಟ್ಮ್ಯಾನ್ ದಾಖಲೆ ಸರಿಗಟ್ಟಿದ್ದಾರೆ. ವಿಂಡೀಸ್ ವಿರುದ್ಧದ ಎರಡನೇ ಚುಟುಕು ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ ಅಮೋಘ ಆಟವಾಡಿ ಮೂರಂಕಿ ದಾಟಿದರು. ಇದರೊಂದಿಗೆ ರೋಹಿತ್ ಅವರ ವಿಶ್ವ ದಾಖಲೆ ಸಮಗೊಳಿಸಿದರು. ಸದ್ಯ ಮ್ಯಾಕ್ಸಿ ಖಾತೆಯಲ್ಲೂ 5 ಟಿ20 ಶತಕಗಳು ದಾಖಲಾಗಿದ್ದು, ರೋಹಿತ್ ಜೊತೆ ಜಂಟಿ ದಾಖಲೆಗೆ ಪಾತ್ರರಾಗಿದ್ದಾರೆ. ಇವರಿಬ್ಬರ ನಂತರ ಸೂರ್ಯಕುಮಾರ್ ಯಾದವ್ ಸ್ಥಾನ ಪಡೆದಿದ್ದಾರೆ.
ವಿಶ್ವದ ನಂಬರ್ 1 ಟಿ20ಐ ಬ್ಯಾಟರ್ ಸೂರ್ಯಕುಮಾರ್ ಯಾದವ್ ತನ್ನ ವೃತ್ತಿಜೀವನದಲ್ಲಿ 4 ಶತಕ ಸಿಡಿಸಿದ್ದಾರೆ. 2021ರ ಮಾರ್ಚ್ನಲ್ಲಿ ಚುಟುಕು ಕ್ರಿಕೆಟ್ಗೆ ಪದಾರ್ಪಣೆಗೈದ ನಂತರ ಭಾರತ ತಂಡದ ಪರ 60 ಟಿ20ಐ ಪಂದ್ಯಗಳಲ್ಲಿ ಸೂರ್ಯ, 45.55ರ ಬ್ಯಾಟಿಂಗ್ ಸರಾಸರಿಯಲ್ಲಿ 2141 ರನ್ ಗಳಿಸಿದ್ದಾರೆ. 17 ಅರ್ಧಶತಕ, 4 ಶತಕಗಳು ಅವರ ಇನ್ನಿಂಗ್ಸ್ನಲ್ಲಿವೆ.
ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದವರು
ರೋಹಿತ್ ಶರ್ಮಾ - 5
ಗ್ಲೆನ್ ಮ್ಯಾಕ್ಸ್‌ವೆಲ್ - 5
ಸೂರ್ಯಕುಮಾರ್ - 4
ಸಬಾವೂನ್ ಡೇವಿಜಿ - 3
ಕಾಲಿನ್ ಮನ್ರೋ - 3
ಬಾಬರ್ ಅಜಮ್ - 3
ಆಸೀಸ್ಗೆ ಭರ್ಜರಿ ಗೆಲುವು
ಎರಡನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಆಸ್ಟ್ರೇಲಿಯಾ 34 ರನ್ಗಳ ಅಂತರದಿಂದ ಗೆಲುವು ದಾಖಲಿಸಿದೆ. ಇದರೊಂದಿಗೆ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ವಶಪಡಿಸಿಕೊಂಡಿದೆ. ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ, 4 ವಿಕೆಟ್ ನಷ್ಟಕ್ಕೆ 241 ರನ್ಗಳ ಬೃಹತ್ ಮೊತ್ತ ಪೇರಿಸಿತು. ಮ್ಯಾಕ್ಸ್‌ವೆಲ್ ಭರ್ಜರಿ ಶತಕ ಸಿಡಿಸಿ ಗಮನ ಸೆಳೆದರು. ಈ ಗುರಿ ಬೆನ್ನಟ್ಟಿದ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿತು.