ಕೊಹ್ಲಿ ನಾಯಕತ್ವಕ್ಕೆ ಮರಳಿದ್ದರಿಂದ ಹಾರ್ದಿಕ್ ಮುಂಬೈ ಕ್ಯಾಪ್ಟನ್ವರೆಗೂ; 2023ರ ಐಪಿಎಲ್ ಟಾಪ್ ಅಪ್ಡೇಟ್ಸ್
Indian Premier League 2023: 2023ರ ಕ್ಯಾಲೆಂಡರ್ ವರ್ಷದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಸಂಬಂಧಿಸಿದ ಪ್ರಮುಖ ಸುದ್ದಿಗಳು ಏನೆಲ್ಲಾ ಇವೆ ಎಂಬುದನ್ನು ಈ ಮುಂದೆ ನೋಡೋಣ.
2023ರ ವರ್ಷ ಮುಗಿಯುತ್ತಿದೆ. ಸಿಹಿ-ಕಹಿಯೊಂದಿಗೆ ಮರೆಗೆ ಸರಿಯುತ್ತಿದೆ. ಕ್ರಿಕೆಟ್ ಕೂಡ ಹಲವು ಏಳು-ಬೀಳುಗಳಿಗೆ ಸಾಕ್ಷಿಯಾಗಿದೆ. ಆದರೂ 2023ರ ಇಂಡಿಯನ್ ಪ್ರೀಮಿಯರ್ ಲೀಗ್ ಸ್ಮರಣೀಯವಾಗಿದೆ. ಐಪಿಎಲ್ ಆರಂಭದಿಂದ ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ ಮಿನಿ ಹರಾಜುವರೆಗೂ ವಿಶೇಷ ಅಚ್ಚರಿ ಕ್ಷಣಗಳಿವೆ. ಅದರಲ್ಲೂ ಈ ಸುದ್ದಿಗಳು ಐಪಿಎಲ್ ಇತಿಹಾಸದಲ್ಲಿ ಹೆಚ್ಚು ಸದ್ದು ಮಾಡಿದವು ಎಂಬುದು ವಿಶೇಷ.
ಮತ್ತೆ ಚೆನ್ನೈ ತಂಡವನ್ನು ಮುನ್ನಡೆಸಿ ಟ್ರೋಫಿ ಗೆದ್ದ ಧೋನಿ
2022ರ ಐಪಿಎಲ್ ನಂತರ ಎಂಎಸ್ ಧೋನಿ ಕ್ರಿಕೆಟ್‌ಗೆ ಗುಡ್ ಬೈ ಹೇಳುತ್ತಾರೆಂದು ಭಾವಿಸಲಾಗಿತ್ತು. ಆದರೆ ಅವರು ಮತ್ತೊಮ್ಮೆ ಕಣಕ್ಕಿಳಿಯುವ ಮೂಲಕ ಹೆಚ್ಚು ಸುದ್ದಿಯಾದರು. ಅಲ್ಲದೆ, ಮೊಣಕಾಲಿನ ಗಾಯದ ನಡುವೆಯೇ ತಂಡವನ್ನು ಮುನ್ನೆಡೆಸಿ ಚೆನ್ನೈಗೆ ಐದನೇ ಟ್ರೋಫಿ ಗೆದ್ದುಕೊಟ್ಟರು. ಇದರೊಂದಿಗೆ ಮುಂಬೈ ಇಂಡಿಯನ್ ಐದು ಪ್ರಶಸ್ತಿಗಳ ದಾಖಲೆಯನ್ನು ಸಮಗೊಳಿಸಿದರು. ಈಗ 2024ರ ಐಪಿಎಲ್ನಲ್ಲೂ ಕಣಕ್ಕಿಳಿಯಲು ಧೋನಿ ಸಜ್ಜಾಗಿದ್ದು, ತಯಾರಿ ಕೂಡ ಆರಂಭಿಸಿದ್ದಾರೆ.
ವಿರಾಟ್ ಕೊಹ್ಲಿ ಮತ್ತೆ ಕ್ಯಾಪ್ಟನ್ಸಿ
2021ರಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಜೊತೆಗೆ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವವನ್ನೂ ವಿರಾಟ್ ಕೊಹ್ಲಿ ತೊರೆದರು. ಬಳಿಕ ಫಾಫ್ ಡು ಪ್ಲೆಸಿಸ್ ತಂಡವನ್ನು ಮುನ್ನಡೆಸಿದರು. ಈ ವರ್ಷ ಡು ಪ್ಲೆಸಿಸ್ ಕೆಲ ಪಂದ್ಯಗಳಿಗೆ ಗಾಯದ ಸಮಸ್ಯೆಗೆ ಸಿಲುಕಿದ ಕಾರಣ ಕೊಹ್ಲಿ ಮತ್ತೆ ಕ್ಯಾಪ್ ತೊಟ್ಟು ತಂಡವನ್ನು ಮುನ್ನಡೆಸಿದರು. ಇದು ಆರ್ಸಿಬಿ ಫ್ಯಾನ್ಸ್ ಪಾಲಿಗೆ ಅತ್ಯಂತ ಖುಷಿಯ ವಿಚಾರ. ಕೊಹ್ಲಿ ಸಾರಥ್ಯ ವಹಿಸಿದ ಎಲ್ಲಾ ಪಂದ್ಯಗಳಲ್ಲೂ ಬೆಂಗಳೂರು ಗೆದ್ದಿತ್ತು.
ಮೂರು ದಿನಗಳ ಐಪಿಎಲ್ ಫೈನಲ್ ಪಂದ್ಯ
ಈ ವರ್ಷದ ಐಪಿಎಲ್ ಫೈನಲ್ ಪಂದ್ಯ ಮೂರು ದಿನಗಳ ಕಾಲ ನಡೆಯುವ ಮೂಲಕ ದಾಖಲೆ ಬರೆಯಿತು. ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಮೇ 29ರಂದು ಫೈನಲ್ ನಡೆಯಬೇಕಿತ್ತು. ಆದರೆ ಮಳೆಯ ಕಾರಣ ಮೇ 30ಕ್ಕೆ ಮುಂದೂಡಲಾಯಿತು. ಅಂದು ಸಹ ಮಳೆ ಸುರಿದ ಕಾರಣ ತಡವಾಗಿ ಆರಂಭಗೊಂಡಿತು. ಮೇ 31ರ ರಾತ್ರಿ 1.30 ಪಂದ್ಯ ಕೊನೆಗೊಂಡಿತು. ಆ ಮೂಲಕ ಮೂರು ದಿನಗಳ ಫೈನಲ್ ನಡೆದು ದಾಖಲೆ ಬರೆಯಿತು.
ಕೊಹ್ಲಿ ಮತ್ತು ಗಂಭೀರ್ ನಡುವೆ ಕಾಳಗ
ಆರ್ಸಿಬಿ ಆಟಗಾರ ವಿರಾಟ್ ಕೊಹ್ಲಿ ಮತ್ತು ಲಕ್ನೋ ಮೆಂಟರ್ ಆಗಿದ್ದ ಗೌತಮ್ ಗಂಭೀರ್ ನಡುವೆ ಐಪಿಎಲ್ನಲ್ಲಿ ದೊಡ್ಡ ಗಲಾಟೆ ನಡೆಯಿತು. ಆರ್ಸಿಬಿ ಮತ್ತು ಲಕ್ನೋ ನಡುವೆ ಮೇ 1ರಂದು ನಡೆದ ಪಂದ್ಯದಲ್ಲಿ ನವೀನ್ ಉಲ್ ಹಕ್ ಮತ್ತು ಕೈಲ್ ಮೇಯರ್ಸ್ ಕೊಹ್ಲಿಯೊಂದಿಗೆ ಮಾತಿನ ಚಕಮಕಿ ನಡೆಸಿದರು. ಅವರ ಪರವಾಗಿ ವಾದಿಸಿದ ಗಂಭೀರ್, ಕೊಹ್ಲಿ ಜೊತೆಗೆ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು. ಜೋರು ಗಲಾಟೆ ನಡೆಸಿದ್ದರು. ಇದು ವಿಶ್ವವ್ಯಾಪಿ ಸುದ್ದಿಯಾಗಿತ್ತು. ಅಲ್ಲದೆ, ಇಬ್ಬರಿಗೂ ದೊಡ್ಡ ಮಟ್ಟದಲ್ಲಿ ದಂಡವನ್ನೂ ವಿಧಿಸಲಾಗಿತ್ತು.
ಹಾರ್ದಿಕ್ ಮರಳಿ ಮುಂಬೈಗೆ, ಕ್ಯಾಪ್ಟನ್ಸಿಯಿಂದ ರೋಹಿತ್ ವಜಾ
ಮುಂಬೈ ಇಂಡಿಯನ್ಸ್ ತೊರೆದು ಗುಜರಾತ್ ಟೈಟಾನ್ಸ್ ಸೇರಿದ್ದ ಹಾರ್ದಿಕ್ ಪಾಂಡ್ಯ ಮತ್ತೆ ಅದೇ ತಂಡವನ್ನು ಕೂಡಿಕೊಂಡಿದ್ದಾರೆ. ಆದರೆ ಬೇಸರದ ಸಂಗತಿ ಏನೆಂದರೆ ಹತ್ತು ವರ್ಷಗಳಿಂದ ತಂಡವನ್ನು ಮುನ್ನಡೆಸಿ 5 ಟ್ರೋಫಿ ಗೆದ್ದುಕೊಟ್ಟಿದ್ದ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಿ ಹಾರ್ದಿಕ್ ಗೆ ಪಟ್ಟ ಕಟ್ಟಲಾಗಿದೆ. ಟ್ರೇಡ್ ಮೂಲಕ ಮುಂಬೈ ಸೇರಿದ ಪಾಂಡ್ಯಗೆ ನಾಯಕತ್ವ ನೀಡಿದ್ದು, ರೋಹಿತ್ ಫ್ಯಾನ್ಸ್ ಪಾಲಿಗೆ ತೀವ್ರ ಬೇಸರ ತರಿಸಿತು. ಇದರಿಂದ ಎಂಐ ಸೋಷಿಯಲ್ ಮೀಡಿಯಾ ಪೇಜ್ಗಳನ್ನು ಅನ್ ಫಾಲೋ ಮಾಡಿದರು. ತನ್ನನ್ನು ನಾಯಕತ್ವದಿಂದ ಕಿತ್ತಾಕಿದ್ದು ರೋಹಿತ್ ಗೂ ಅಚ್ಚರಿ ತರಿಸಿದೆ.
ಆಸೀಸ್ ಆಟಗಾರರಿಗೆ ಕೋಟಿ ಕೋಟಿ
ಡಿಸೆಂಬರ್ 19ರಂದು ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾ ತಂಡದ ಆಟಗಾರರು ದಾಖಲೆಯ ಮೊತ್ತಕ್ಕೆ ಖರೀದಿಯಾದರು. ವೇಗಿ ಮಿಚೆಲ್ ಸ್ಟಾರ್ಕ್ 24.75 ಕೋಟಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪಾಲಾದರು. ಪ್ಯಾಟ್ ಕಮಿನ್ಸ್ ಅವರು 20.50 ಕೋಟಿಗೆ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಸೇಲಾದರು. ಈ ಇಬ್ಬರ ಖರೀದಿ ಇತಿಹಾಸ ಪುಟಗಳಲ್ಲಿ ದಾಖಲಾಗಿದೆ. 2008 ರಿಂದ ಇಲ್ಲಿಯವರೆಗೂ ನಡೆದ ಹರಾಜು ಇತಿಹಾಸದಲ್ಲಿ ಯಾರೂ ಇಷ್ಟು ಮೊತ್ತಕ್ಕೆ ಖರೀದಿಯಾಗಿರಲಿಲ್ಲ ಎಂಬುದು ವಿಶೇಷ.