ಪಾಕಿಸ್ತಾನಕ್ಕೆ ಭಾರತ ತಂಡ ಪ್ರಯಾಣಿಸಬೇಕು, ಆದರೆ ಒಂದು ಷರತ್ತು; ಹರ್ಭಜನ್ ಸಿಂಗ್ ಅಚ್ಚರಿ ಹೇಳಿಕೆ
Harbhajan Singh: ಐಸಿಸಿ ಚಾಂಪಿಯನ್ಸ್ 2025 ಟ್ರೋಫಿಗೆ ಭಾರತ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸಬೇಕು. ಆದರೆ ಪಾಕ್ ಸರ್ಕಾರ ಸಂಪೂರ್ಣ ಭದ್ರತೆ ಒದಗಿಸಿದರೆ ಮಾತ್ರ ಎಂದು ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಸೂಚಿಸಿದ್ದಾರೆ.
2025ರ ನಂತರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿದೆ. 1996ರ ಏಕದಿನ ವಿಶ್ವಕಪ್ ಬಳಿಕ ಪಾಕ್ಐಸಿಸಿ ಟೂರ್ನಿಗೆ ಇದೇ ಮೊದಲ ಬಾರಿಗೆ. ಆದರೆ ಚಾಂಪಿಯನ್ಸ್ ಟ್ರೋಫಿ ಆಡಲು ನೆರೆಯ ದೇಶಕ್ಕೆ ಹೋಗಲು ಭಾರತ ತಂಡವು ಬಯಸುತ್ತಿಲ್ಲ. ಉಭಯ ತಂಡಗಳ ನಡುವೆ ರಾಜಕೀಯ ಸಂಬಂಧ ಹದಗೆಟ್ಟ ಕಾರಣ ಟೀಮ್ ಇಂಡಿಯಾ ಪ್ರಯಾಣಿಸಲು ಹಿಂದೇಟು ಹಾಕುತ್ತಿದೆ. ಭಾರತ ಸರ್ಕಾರ ಅನುಮತಿ ಕೊಟ್ಟರೆ ಮಾತ್ರ ಪಾಕ್ ಪ್ರಯಾಣಿಸಲಿದೆ. ಈ ಗೊಂದಲಗಳ ನಡುವೆ ಭಾರತ ತಂಡವು ಪಾಕ್ಗೆ ಒಂದು ಷರತ್ತಿನ ಮೇಲೆ ಪ್ರಯಾಣಿಸಬೇಕು ಎಂದು ಹೇಳಿದ್ದಾರೆ.
ಸ್ಪೋರ್ಟ್ಸ್ ಟಾಕ್ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಹರ್ಭಜನ್ ಸಿಂಗ್, ತಂಡದ ಭದ್ರತೆ ಖಚಿತಪಡಿಸದಿದ್ದರೆ ಭಾರತವು ಪಾಕಿಸ್ತಾನಕ್ಕೆ ಹೋಗುವುದು ಬೇಡ. ತಂಡಕ್ಕೆ ಸಂಪೂರ್ಣ ಭದ್ರತೆ ಸಿಗಲಿದೆ ಎಂದು ಅಧಿಕಾರಿಗಳು ಹೇಳಿದರೆ, ಸರ್ಕಾರವೇ ಆಲೋಚಿಸಿ ಕೊನೆಗೆ ನಿರ್ಧಾರ ಕೈಗೊಳ್ಳಬೇಕಿದೆ. ಈ ವಿಷಯ ಕೇವಲ ಕ್ರಿಕೆಟ್‌ಗೆ ಸಂಬಂಧಿಸಿಲ್ಲ, ಅದರ ಆಚೆಗೂ ಮೀರಿದ್ದು. ಎಲ್ಲದ್ದಕ್ಕೂ ಸಂಬಂಧಿಸಿದ್ದು. ಅವರು (ಪಾಕ್) ಹೇಳಿದ್ದೆಲ್ಲಾ ಸರಿ ಎಂದು ಅವರೇ ಭಾವಿಸುತ್ತಾರೆ. ಆದರೆ, ನಾವು ಹೇಳುವುದು ನಮ್ಮ ದೃಷ್ಟಿಕೋನವಾಗಿದೆ ಎಂದು ಭಜ್ಜಿ ಹೇಳಿದ್ದಾರೆ.
ಭದ್ರತಾ ಕಾಳಜಿ ಎಂಬುದು ಯಾವಾಗಲೂ ಇರುತ್ತದೆ ಎಂದು ನಾನು ಭಾವಿಸುತ್ತೇನೆ. ಆಟಗಾರರ ಭದ್ರತೆಯನ್ನು ಅಲ್ಲಿ ಖಾತ್ರಿಪಡಿಸದಿದ್ದರೆ ಭಾರತ ತಂಡವು ಹೋಗಬೇಕು ಎಂದು ನಾನು ಭಾವಿಸುವುದಿಲ್ಲ. ಅಲ್ಲಿ ತಂಡಕ್ಕೆ ಸಂಪೂರ್ಣ ಭದ್ರತೆ ಸಿಗಲಿದೆ ಮತ್ತು ಯಾವುದೇ ರೀತಿಯ ತೊಂದರೆ ಎದುರಾಗುವುದಿಲ್ಲ ಎಂದು ಪಾಕಿಸ್ತಾನ ಸರ್ಕಾರ ಭರವಸೆ ಕೊಟ್ಟರೆ, ನಮ್ಮ ಸರ್ಕಾರ ಮುಂದಿನ ನಿರ್ಧಾರ ಕೈಗೊಳ್ಳಲಿದೆ. ಅಲ್ಲದೆ, ಇದು ಕ್ರಿಕೆಟ್ ವಿಷಯಗಳಿಗೆ ಮಾತ್ರವಲ್ಲ. ಎಲ್ಲಾ ಸಮಸ್ಯೆಗಳಿಗೂ ಒಂದು ಪರಿಹಾರ ಸಿಕ್ಕಂತಾಗುತ್ತದೆ. ಹಾಗಾಗಿ ಈ ಷರತ್ತಿನೊಂದಿಗೆ ನೆರೆಯ ದೇಶಕ್ಕೆ ನಮ್ಮ ತಂಡವು ಪ್ರಯಾಣಿಸಬೇಕಿದೆ ಎಂದಿದ್ದಾರೆ.
ಭಾರತ ಪ್ರಯಾಣಿಸದಿದ್ದರೆ, ಪಾಕ್ಗೆ ಹೆಚ್ಚುವರಿ 65 ಕೋಟಿ
ಕ್ರಿಕೆಟಿಗನಾಗಿ ಈ ವಿಚಾರವನ್ನು ನಾನು ಹೇಳಬಲ್ಲೆ, ನೀವು ಕ್ರಿಕೆಟ್ ಆಡಲು ಬಯಸಿದರೆ ಭದ್ರತೆಯ ಕಾಳಜಿ ಯಾವಾಗಲೂ ಇರುತ್ತದೆ. ಮತ್ತು ಭದ್ರತೆಯನ್ನು ಖಾತರಿಪಡಿಸುವವರೆಗೆ ಆಟಗಾರರು ಅಲ್ಲಿಗೆ ಹೋಗಬಾರದು ಎಂದು ಹೇಳಿದ್ದಾರೆ. ಹರ್ಭಜನ್, ತಮ್ಮ ಸಲಹೆಯನ್ನು ಬಿಸಿಸಿಐ ಮತ್ತು ಭಾರತದ ಮುಂದಿಟ್ಟಿದ್ದಾರೆ. ಆದರೆ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. 2008ರಲ್ಲಿ ಏಷ್ಯಾಕಪ್ ಟೂರ್ನಿಗೆ ಭಾರತ ಕೊನೆಯದಾಗಿ ಪಾಕಿಸ್ತಾನಕ್ಕೆ ತೆರಳಿತ್ತು. ಒಂದ್ವೇಳೆ ಭಾರತ ತಂಡವು ಪ್ರಯಾಣಿಸದೇ ಇದ್ದರೆ ಪಾಕ್ಗೆ ಹೆಚ್ಚುವರಿ 65 ಕೋಟಿ ರೂಪಾಯಿ ನೀಡುವುದಾಗಿ ಐಸಿಸಿ ತಿಳಿಸಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಭಾರತ ತಂಡಕ್ಕೆ ಅನುಕೂಲವಾಗಲು ಒಂದು ಮೈದಾನವನ್ನಷ್ಟೇ ಆಯ್ಕೆ ಮಾಡಿಕೊಂಡಿದೆ. ವಾಘಾ ಗಡಿಗೆ (ಭಾರತ-ಪಾಕಿಸ್ತಾನದ ಗಡಿ) ಹತ್ತಿರವಿರುವ ಕಾರಣ, ಲಾಹೋರ್ನ ಐಕಾನಿಕ್ ಗಡಾಫಿ ಸ್ಟೇಡಿಯಂನಲ್ಲಿ ಭಾರತ ತಂಡದ ಪಂದ್ಯಗಳನ್ನು ಆಡಿಸಲು ಪಿಸಿಬಿ ಚಿಂತನೆ ನಡೆಸಿದೆ. ಅಲ್ಲದೆ, ಫೈನಲ್ ಪಂದ್ಯಕ್ಕೂ ಇದೇ ಮೈದಾನ ಆಯ್ಕೆ ಮಾಡಿದೆ. ಇದು ಭಾರತ ತಂಡಕ್ಕೆ ಭದ್ರತಾ ಮತ್ತು ಪ್ರಯಾಣವನ್ನು ಸುಲಭಗೊಳಿಸುವ ಸಲುವಾಗಿ ನಿರ್ಧಾರ ಕೈಗೊಂಡಿದೆ. ಆದರೆ ಪಾಕ್ನ ನಿರ್ಧಾರವನ್ನು ಬಿಸಿಸಿಐ ಒಪ್ಪಿಲ್ಲ. ನಮ್ಮ ಸರ್ಕಾರ ಅನುಮತಿ ಕೊಟ್ಟರೆ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದೆ.
ಪ್ರಸ್ತುತ ಬಿಸಿಸಿಐ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜನೆಗೆ ಪಟ್ಟು ಹಿಡಿದಿದೆ. ಭಾರತದ ಪಂದ್ಯಗಳನ್ನು ಯುಎಇ ಅಥವಾ ಶ್ರೀಲಂಕಾದಲ್ಲಿ ಆಯೋಜಿಸಲು ಕೇಳಿದೆ. ಆದರೆ ಪಾಕ್ ಇದಕ್ಕೆ ಒಪ್ಪಿಗೆ ಸೂಚಿಸುತ್ತಿಲ್ಲ. ಚಾಂಪಿಯನ್ಸ್ ಟ್ರೋಫಿ-2025 ತಾತ್ಕಾಲಿಕ ವೇಳಾಪಟ್ಟಿಯನ್ನು ಐಸಿಸಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕಳುಹಿಸಿಕೊಟ್ಟಿದೆ. ಅದರಂತೆ, ಫೆಬ್ರವರಿ 2025ರ ಫೆಬ್ರವರಿ 18ರಿಂದ ಪ್ರಾರಂಭವಾಗುತ್ತದೆ ಎಂದು ಹೇಳಲಾಗಿದೆ. ಭಾರತ ಫೆಬ್ರವರಿ 20ರಂದು ತನ್ನ ಅಭಿಯಾನ ಪ್ರಾರಂಭಿಸಲಿದೆ. ಮಾರ್ಚ್ 1ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಣಸಾಟ ನಡೆಸಲಿವೆ.