ಮದುವೆ ಬೆನ್ನಲ್ಲೇ ಟಿ20 ಕ್ರಿಕೆಟ್ನಲ್ಲಿ ಐತಿಹಾಸಿಕ ದಾಖಲೆ ಮಾಡಿದ ಶೋಯೆಬ್ ಮಲಿಕ್
Shoaib Malik: ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಶೋಯೆಬ್ ಮಲಿಕ್ ಐಡಿಹಾಸಿಕ ದಾಖಲೆ ಮಾಡಿದ್ದಾರೆ. ಆ ಮೂಲಕ ಸ್ಫೋಟಕ ಬ್ಯಾಟರ್ ವಿಂಡೀಸ್ನ ಕ್ರಿಸ್ ಗೇಲ್ ದಾಖಲೆಯ ಪಟ್ಟಿ ಸೇರಿಕೊಂಡಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ತಂಡದ ಆಲ್ರೌಂಡರ್ ಶೋಯೆಬ್ ಮಲಿಕ್ (Shoaib Malik), ನಟಿ ಸನಾ ಜಾವೇದ್ ಅವರೊಂದಿಗೆ ಮದುವೆಯಾಗಿ ಸುದ್ದಿಯಲ್ಲಿದ್ದಾರೆ. ಭಾರತೀಯ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರೊಂದಿಗೆ ವಿಚ್ಛೇದನದ ವದಂತಿಗಳ ನಡುವೆ, ಮೂರನೇ ಮದುವೆಯಾಗಿ ಅಚ್ಚರಿ ಮೂಡಿಸಿದ್ದಾರೆ. ಈ ನಡುವೆ ಕ್ರಿಕೆಟ್ ಮೈದಾನದ ಹೊರಗೂ ಮಲಿಕ್ ದಾಖಲೆಯೇ ಸುದ್ದಿಯಲ್ಲಿದೆ. ಮದುವೆ ಬೆನ್ನಲ್ಲೇ ಕ್ರಿಕೆಟ್ ಮೈದಾನಕ್ಕಿಳಿದು ಅಪರೂಪದ ದಾಖಲೆ ಮಾಡಿದ ಶೋಯೆಬ್ ಮತ್ತೊಮ್ಮೆ ಟ್ರೆಂಡ್ ಆಗಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ 13,000 ರನ್ ಗಳಿಸಿದ ಏಷ್ಯಾದ ಮೊದಲ ಆಟಗಾರ ಮತ್ತು ಒಟ್ಟಾರೆಯಾಗಿ ಜಗತ್ತಿನ ಎರಡನೇ ಆಟಗಾರ ಎಂಬ ದಾಖಲೆಯನ್ನು ಅನುಭವಿ ಕ್ರಿಕೆಟಿಗ ನಿರ್ಮಿಸಿದ್ದಾರೆ. ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (BPL) ಪಂದ್ಯದಲ್ಲಿ ರಂಗ್ಪುರ್ ರೈಡರ್ಸ್ ಮತ್ತು ಫಾರ್ಚೂನ್ ಬಾರಿಶಾಲ್ ನಡುವಿನ ಪಂದ್ಯದ ವೇಳೆ ಈ ವಿಶೇಷ ಸಾಧನೆ ಮಾಡಿದ್ದಾರೆ. ಆ ಮೂಲಕ ಸ್ಫೋಟಕ ಬ್ಯಾಟರ್ ವಿಂಡೀಸ್ನ ಕ್ರಿಸ್ ಗೇಲ್ ದಾಖಲೆಯ ಪಟ್ಟಿ ಸೇರಿಕೊಂಡಿದ್ದಾರೆ.
ಪಾಕಿಸ್ತಾನದ ಕ್ರಿಕೆಟಿಗ ಈಗಾಗಲೇ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ನಿಂದ ನಿವೃತ್ತರಾಗಿದ್ದಾರೆ. ಆದರೆ ಚುಟುಕು ಸ್ವರೂಪದಲ್ಲಿ ಈಗಲೂ ಆಡುತ್ತಿದ್ದಾರೆ. ಸದ್ಯ ಈ ವರ್ಷ ನಡೆಯಲಿರುವ ಮಹತ್ವದ ಟೂರ್ನಿಯಾಗಿರುವ 2024ರ ಟಿ20 ವಿಶ್ವಕಪ್ನಲ್ಲಿ ಆಯ್ಕೆಗೆ ಲಭ್ಯವಿರಲಿದ್ದಾರೆ.
ಇದನ್ನೂ ಓದಿ | ಸನಾ ಜಾವೇದ್ ಮಾಜಿ ಪತಿ ಉಮೈರ್ ಜೈಸ್ವಾಲ್ ಮತ್ತು ಶೋಯೆಬ್ ಮಲಿಕ್ ಸ್ನೇಹಿತರಾಗಿದ್ದರೇ; ಗೂಗಲ್ ಹುಡುಕಿತು ಸಾಕ್ಷಿ
2022ರಿಂದಲೂ ಶೋಯೆಬ್ ಮತ್ತು ಸಾನಿಯಾ ನಡುವೆ ಭಿನ್ನಾಭಿಪ್ರಾಯ ಇರುವ ಕುರಿತು ವದಂತಿಗಳಿದ್ದವು. ಅದಕ್ಕೆ ಪುಷ್ಠಿ ನೀಡುವಂತೆ ಕಳೆದೆರಡು ವರ್ಷಗಳಲ್ಲಿ ಅವರು ಒಟ್ಟಿಗೆ ಕಾಣಿಸಿಕೊಂಡಿದ್ದು ಕೂಡಾ ತುಂಬಾ ಅಪರೂಪ. ಕೆಲವು ದಿನಗಳ ಹಿಂದಷ್ಟೇ ಮಲಿಕ್ ಭಾರತೀಯ ಟೆನಿಸ್ ತಾರೆಯನ್ನು ಇನ್ಸ್ಟಾಗ್ರಾಮ್ನಲ್ಲಿ ಅನ್ಫಾಲೋ ಮಾಡಿದ್ದರು.
ಈ ನಡುವೆ ಪಾಕಿಸ್ತಾನದ ಜನಪ್ರಿಯ ನಟಿ ಸನಾ ಜಾವೇದ್ ಅವರನ್ನು ಮದುವೆಯಾಗಿರುವುದಾಗಿ ಮಲಿಕ್ ಶನಿವಾರ ಘೋಷಿಸಿದ್ದಾರೆ. ಆ ಮೂಲಕ ಕೊನೆಗೂ ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಅವರೊಂದಿಗೆ ಸಂಬಂಧದಲ್ಲಿ ಬಿರುಕು ಇರುವ ಕುರಿತ ಊಹಾಪೋಹಗಳಿಗೆ ಅಂತ್ಯ ಹಾಡಿದ್ದಾರೆ. ಇದೀಗ ಅವರ ಐದು ವರ್ಷದ ಮಗ ಇಜಾನ್, ಸಾನಿಯಾ ಅವರೊಂದಿಗೆ ವಾಸಿಸುತ್ತಿದ್ದಾನೆ. ಸಾನಿಯಾ ವಿಚ್ಛೇದನ ಪ್ರಕ್ರಿಯೆ ಆರಂಭಿಸಿದ್ದಾರೆ ಎಂದು ಕುಟುಂಬದ ಮೂಲವೊಂದು ಪಿಟಿಐಗೆ ತಿಳಿಸಿದೆ.
ಇದನ್ನೂ ಓದಿ | ಸಾನಿಯಾ ಮಿರ್ಜಾಗೂ ಮೊದಲು ಶೋಯೆಬ್ ಮಲಿಕ್ ಮದುವೆಯಾಗಿದ್ದ ಭಾರತದ ಮಹಿಳೆ ಯಾರು?
ಶೋಯೆಬ್ ಮತ್ತು ಸಾನಿಯಾ 2010ರ ಏಪ್ರಿಲ್ ತಿಂಗಳಲ್ಲಿ ವಿವಾಹವಾಗಿದ್ದರು. ಸಾನಿಯಾ ಅವರ ಹುಟ್ಟೂರು ಹೈದರಾಬಾದ್ನಲ್ಲಿ ಮದುವೆ ನಡೆದಿತ್ತು. ಆ ಬಳಿಕ ಇಬ್ಬರೂ ದುಬೈನಲ್ಲಿ ವಾಸಿಸುತ್ತಿದ್ದರು. ಸಾನಿಯಾ ಮತ್ತು ಮಲಿಕ್ ನಡುವೆ ಯಾವ ಕಾರಣಕ್ಕೆ ಬಿರುಕು ಉಂಟಾಯಿತು ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ 2021ರ ಮೊದಲಾರ್ಧದಿಂದ ಇಬ್ಬರು ಬೇರ್ಪಟ್ಟಿದ್ದಾರೆ ಎಂದು ಹೇಳಲಾಗಿದೆ.