ವಿನೇಶ್ ಫೋಗಟ್ ಅನರ್ಹ ಬೆನ್ನಲ್ಲೇ ಹೆಚ್ಚಾಯ್ತು ರೋಹಿತ್ ಶರ್ಮಾ ಫಿಟ್‌ನೆಸ್‌ ಚರ್ಚೆ; ಈ ನಿಯಮ ಕ್ರಿಕೆಟ್‌ಗೆ ಯಾಕಿಲ್ಲ ಎಂದು ಪ್ರಶ್ನೆ
ಕನ್ನಡ ಸುದ್ದಿ  /  ಕ್ರಿಕೆಟ್  /  ವಿನೇಶ್ ಫೋಗಟ್ ಅನರ್ಹ ಬೆನ್ನಲ್ಲೇ ಹೆಚ್ಚಾಯ್ತು ರೋಹಿತ್ ಶರ್ಮಾ ಫಿಟ್‌ನೆಸ್‌ ಚರ್ಚೆ; ಈ ನಿಯಮ ಕ್ರಿಕೆಟ್‌ಗೆ ಯಾಕಿಲ್ಲ ಎಂದು ಪ್ರಶ್ನೆ

ವಿನೇಶ್ ಫೋಗಟ್ ಅನರ್ಹ ಬೆನ್ನಲ್ಲೇ ಹೆಚ್ಚಾಯ್ತು ರೋಹಿತ್ ಶರ್ಮಾ ಫಿಟ್‌ನೆಸ್‌ ಚರ್ಚೆ; ಈ ನಿಯಮ ಕ್ರಿಕೆಟ್‌ಗೆ ಯಾಕಿಲ್ಲ ಎಂದು ಪ್ರಶ್ನೆ

ಪ್ಯಾರಿಸ್ ಒಲಿಂಪಿಕ್ಸ್‌ ಕುಸ್ತಿ ಫೈನಲ್‌ನಿಂದ ವಿನೇಶ್ ಫೋಗಟ್ ಅನರ್ಹಗೊಂಡ ಬೆನ್ನಲ್ಲೇ, ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್ ಶರ್ಮಾ ಫಿಟ್‌ನೆಸ್‌ ಕುರಿತು ಚರ್ಚೆ ಶುರುವಾಗಿದೆ. ಅಧಿಕ ತೂಕವಿದ್ದರೂ ಕ್ರಿಕೆಟಿಗರು ಆಡಬಹುದು. ಆದರೆ ಇದೇ ನಿಯಮ ಕುಸ್ತಿಗೆ ಯಾಕಿಲ್ಲ ಎಂಬ ಪ್ರಶ್ನೆಗಳು ಕೂಡಾ ಬಂದಿವೆ.

ವಿನೇಶ್ ಫೋಗಟ್ ಅನರ್ಹ ಬೆನ್ನಲ್ಲೇ ಹೆಚ್ಚಾಯ್ತು ರೋಹಿತ್ ಶರ್ಮಾ ಫಿಟ್‌ನೆಸ್‌ ಚರ್ಚೆ
ವಿನೇಶ್ ಫೋಗಟ್ ಅನರ್ಹ ಬೆನ್ನಲ್ಲೇ ಹೆಚ್ಚಾಯ್ತು ರೋಹಿತ್ ಶರ್ಮಾ ಫಿಟ್‌ನೆಸ್‌ ಚರ್ಚೆ

ಕೇವಲ ನೂರು ಗ್ರಾಮ್‌ ತೂಕ ಹೆಚ್ಚಳದ ಕಾರಣದಿಂದಾಗಿ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಪ್ಯಾರಿಸ್ ಒಲಿಂಪಿಕ್ಸ್ 2024ರಿಂದ ಅನರ್ಹಗೊಳಿಸಲಾಯ್ತು. ಭಾರತವು ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಗೆಲ್ಲುವುದು ಖಚಿತ ಎಂದು ಅಭಿಮಾನಿಗಳು ಭಾರಿ ನಿರೀಕ್ಷೆಯಲ್ಲಿರುವಾಗ, ಅನರ್ಹಗೊಂಡ ಸುದ್ದಿಯು ಅಭಿಮಾನಿಗಳಿಗೆ ಅಚ್ಚರಿಯ ಜೊತೆಗೆ ಬೇಸರ ತರಿಸಿದೆ. ಕೇವಲ 100 ಗ್ರಾಮ್ ತೂಕ ಹೆಚ್ಚಾದ ಕಾರಣಕ್ಕೆ ಕುಸ್ತಿಪಟುವನ್ನು ಆಟದಿಂದಲೇ ಅನರ್ಹಗೊಳುವುದೇ ಎಂದು ಫ್ಯಾನ್ಸ್‌ ಪ್ರಶ್ನಿಸುತ್ತಿದ್ದಾರೆ. ಈ ನಡುವೆ ಕೆಲವು ಅಭಿಮಾನಿಗಳು, ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಈ ವಿಷಯಕ್ಕೆ ಎಳೆದು ತಂದಿದ್ದಾರೆ.‌ ಇದಕ್ಕೆ ಕಾರಣವೂ ಇದೆ.

29 ವರ್ಷದ ಕುಸ್ತಿಪಟು ವಿನೇಶ್ ಫೋಗಟ್, ಮಹಿಳೆಯರ 50 ಕೆಜಿ ವಿಭಾಗದ ಕುಸ್ತಿ ಫೈನಲ್ ಪಂದ್ಯಕ್ಕೂ ಮುಂಚಿತವಾಗಿ ನಡೆದ ತೂಕ ಪರೀಕ್ಷೆಯಲ್ಲಿ ಅಧಿಕ ತೂಕವನ್ನು ಹೊಂದಿರುವುದು ಕಂಡುಬಂದಿದೆ. ಹೀಗಾಗಿ ಅವರಿಗೆ ಯಾವುದೇ ಪದಕವನ್ನು ನೀಡದೆ ಮತ್ತು ಶ್ರೇಯಾಂಕವಿಲ್ಲದೆ ಅನರ್ಹಗೊಳಿಸಲಾಗಿದೆ. ಕುಸ್ತಿಯಲ್ಲಿ ದೇಹದ ತೂಕ ಕಾಪಾಡಿಕೊಳ್ಳುವುದು ಎಷ್ಟು ಮುಖ್ಯ ಎಂಬುದಕ್ಕೆ ಅಭಿಮಾನಿಗಳು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಶುರು ಮಾಡಿದ್ದಾರೆ.

ಫೋಗಟ್ ಅನರ್ಹತೆಯಿಂದ ಭಾರತೀಯರಿಗೆ ಭಾರಿ ನಿರಾಶೆಯಾಗಿದೆ. ಇದರಿಂದಾಗಿ ಕೆಲವು ಅಭಿಮಾನಿಗಳು ಕುಸ್ತಿ ಮತ್ತು ಕ್ರಿಕೆಟ್‌ನಲ್ಲಿ ಫಿಟ್‌ನೆಸ್‌ ವಿಚಾರವಾಗಿ ಇರುವ ವ್ಯತ್ಯಾಸದ ಕುರಿತು ಮಾತನಾಡಿದ್ದಾರೆ. ಮುಖ್ಯವಾಗಿ ಕ್ರಿಕೆಟಿಗ ರೋಹಿತ್ ಶರ್ಮಾ ಅವರ ಫಿಟ್‌ನೆಸ್‌ ಕುರಿತು ಈ ಹಿಂದೆಯೂ ಹಲವು ಬಾರಿ ಚರ್ಚೆ ನಡೆದಿವೆ. ಇದೀಗ ಹಿಟ್‌ಮ್ಯಾನ್‌ ದೈಹಿಕ ಸಾಮರ್ಥ್ಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಲವರು ಕಾಮೆಂಟ್‌ ಮೂಲಕ ಪ್ರಸ್ತಾಪಿಸಿದ್ದಾರೆ.

ವಿವಿಧ ಕ್ರೀಡೆಗಳಲ್ಲಿ ತೂಕ ಪರಿಶೀಲನೆಯಲ್ಲಿ ಅಸಮಾನತೆಗಳು ಯಾಕೆ ಎಂದು ಹಲವಾರು ಆಶ್ಚರ್ಯಪಟ್ಟಿದ್ದಾರೆ. ಈ ನಡುವೆ ನೆಟ್ಟಿಗರು ಬಗೆ ಬಗೆಯ ರೀತಿಯಲ್ಲಿ ತಮ್ಮದೇ ಅಭಿಪ್ರಾಯಗಳನ್ನು ಹರಿಬಿಟ್ಟಿದ್ದಾರೆ. “ಅದೃಷ್ಟವಶಾತ್, ರೋಹಿತ್ ಶರ್ಮಾ ಪ್ರತಿದಿನ ಕ್ರಿಕೆಟ್ ಪಂದ್ಯಕ್ಕೂ ಮುಂಚಿತವಾಗಿ ತಮ್ಮ ತೂಕ ಪರೀಕ್ಷಿಸುವ ಅಗತ್ಯವಿಲ್ಲ,” ಎಂದು ಎಕ್ಸ್ ಬಳಕೆದಾರ ಬೆನೆಡಿಕ್ಟ್ ಹೇಳಿದ್ದಾರೆ.

"ರೋಹಿತ್ ಶರ್ಮಾ ಅಧಿಕ ತೂಕ ಹೊಂದಿದ್ದರೂ ಹಲವು ವರ್ಷಗಳಿಂದ ಆಡುತ್ತಿದ್ದಾರೆ. ಆದರೆ, ವಿನೇಶ್ ಫೋಗಟ್ ಕೇವಲ 100 ಗ್ರಾಂ ಅಧಿಕ ತೂಕ ಇರುವ ಕಾರಣದಿಂದ ಅನರ್ಹರಾಗಿದ್ದಾರೆ" ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ.

"ಭಾರತೀಯರಿಗೆ ಕ್ರಿಕೆಟ್ ಹೇಗಿದ್ದರೂ ಸರಿ. ಕ್ರಿಕೆಟ್‌ನಲ್ಲಿ ತೂಕದ ಬಗ್ಗೆ ಯಾವುದೇ ತಕರಾರು ಇಲ್ಲ" ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ.

ವಿನೇಶ್ ಫೋಗಟ್‌ ಇಂದು (ಆಗಸ್ಟ್ 7ರ ಬುಧವಾರ) ರಾತ್ರಿ 11.30ಕ್ಕೆ ಫೈನಲ್ ಪಂದ್ಯದಲ್ಲಿ ಅಮೆರಿಕದ ಸೆರಾ ಹಿಲ್ದಿಬ್ರೇಟ್‌ ಅವರನ್ನು ಎದುರಿಸಬೇಕಿತ್ತು. ಆದರೆ ಅನರ್ಹಗೊಂಡ ಕಾರಣದಿಂದಾಗಿ ಅವರನ್ನು ಪದಕ ಸುತ್ತಿನಿಂದ ಹೊರಗಿಡಲಾಗಿದೆ. ಇಲ್ಲಿ ಯಾವ ಪದಕವನ್ನು ವಿನೇಶ್‌ಗೆ ನೀಡಲಾಗುವುದಿಲ್ಲ. ವಿನೇಶ್ ಕಾಮನ್​ವೆಲ್ತ್ ಮತ್ತು ಏಷ್ಯನ್ ಗೇಮ್ಸ್ ಎರಡರಲ್ಲೂ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ದಾಖಲೆ ವಿನೇಶ್‌ ಅವರದ್ದು. ರಿಯೋದಲ್ಲಿ ನಡೆದ 2016ರ ಒಲಿಂಪಿಕ್ಸ್ ಮತ್ತು ಕಳೆದ ಬಾರಿಯ ಟೊಕಿಯೊ ಒಲಿಂಪಿಕ್ಸ್​​ಗಳಲ್ಲಿ ವಿನೇಶ್ ಅವರು ಕ್ವಾರ್ಟರ್ ಫೈನಲ್​ನಲ್ಲಿ ನಿರ್ಗಮಿಸಿದ್ದರು.

Whats_app_banner