ಫೇರ್‌ಪ್ಲೇ ಅಲ್ಲ, ಅವರಿಗೆ ಆಸ್ಕರ್ ಪ್ರಶಸ್ತಿ ಕೊಡಬೇಕು: ವಿರಾಟ್-ಗಂಭೀರ್ ಅಪ್ಪುಗೆಗೆ ಗವಾಸ್ಕರ್, ರವಿಶಾಸ್ತ್ರಿ ಹಾಸ್ಯಚಟಾಕಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಫೇರ್‌ಪ್ಲೇ ಅಲ್ಲ, ಅವರಿಗೆ ಆಸ್ಕರ್ ಪ್ರಶಸ್ತಿ ಕೊಡಬೇಕು: ವಿರಾಟ್-ಗಂಭೀರ್ ಅಪ್ಪುಗೆಗೆ ಗವಾಸ್ಕರ್, ರವಿಶಾಸ್ತ್ರಿ ಹಾಸ್ಯಚಟಾಕಿ

ಫೇರ್‌ಪ್ಲೇ ಅಲ್ಲ, ಅವರಿಗೆ ಆಸ್ಕರ್ ಪ್ರಶಸ್ತಿ ಕೊಡಬೇಕು: ವಿರಾಟ್-ಗಂಭೀರ್ ಅಪ್ಪುಗೆಗೆ ಗವಾಸ್ಕರ್, ರವಿಶಾಸ್ತ್ರಿ ಹಾಸ್ಯಚಟಾಕಿ

ಐಪಿಎಲ್‌ ಪಂದ್ಯಗಳ ವೇಳೆ ಹಲವು ಬಾರಿ ಜಗಳವಾಡಿದ್ದ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್, ಇದೇ ಮೊದಲ ಬಾರಿಗೆ ಅಚ್ಚರಿಯ ರೀತಿಯಲ್ಲಿ ಮಾತನಾಡಿ ಪರಸ್ಪರ ತಬ್ಬಿಕೊಂಡಿದ್ದಾರೆ. ಆರ್‌ಸಿಬಿ ಮತ್ತು ಕೆಕೆಆರ್‌ ನಡುವಿನ ಪಂದ್ಯದ ವೇಳೆ ಇಬ್ಬರು ಅಪ್ಪಿಕೊಂಡದನ್ನು ನೋಡಿ, ಸುನಿಲ್ ಗವಾಸ್ಕರ್ ಮತ್ತು‌ ರವಿ ಶಾಸ್ತ್ರಿ ಕಾಮೆಂಟರಿಯಲ್ಲಿ ಹಾಸ್ಯಚಟಾಕಿ ಹಾರಿಸಿದ್ದಾರೆ.

ವಿರಾಟ್-ಗಂಭೀರ್ ಅಪ್ಪುಗೆಗೆ ಗವಾಸ್ಕರ್, ರವಿಶಾಸ್ತ್ರಿ ಹಾಸ್ಯಚಟಾಕಿ
ವಿರಾಟ್-ಗಂಭೀರ್ ಅಪ್ಪುಗೆಗೆ ಗವಾಸ್ಕರ್, ರವಿಶಾಸ್ತ್ರಿ ಹಾಸ್ಯಚಟಾಕಿ

ವಿರಾಟ್‌ ಕೊಹ್ಲಿ ಮತ್ತು ಗೌತಮ್‌ ಗಂಭೀರ್‌ ನಡುವಿನ ಆ ಒಂದು ಅಪ್ಪುಗೆ, ಆರ್‌ಸಿಬಿ ಮತ್ತು ಕೆಕೆಆರ್ ತಂಡಗಳ ನಡುವಿನ ಐಪಿಎಲ್‌ ಪಂದ್ಯದ ಸ್ಮರಣೀಯ ಕ್ಷಣವಾಗಿ ಮಾರ್ಪಟ್ಟಿತು. ಟೈಮ್ ಔಟ್ ವೇಳೆ ಮಾಜಿ ಮತ್ತು ಅನುಭವಿ ಕ್ರಿಕೆಟಿಗರ ನಡುವಿನ ಪ್ರೀತಿಯ ಅಪ್ಪುಗೆ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಶತ್ರುಗಳಂತೆ ವರ್ತಿಸುತ್ತಿದ್ದ ಹಾಗೂ ಹಲವು ಬಾರಿ ಬಹಿರಂಗವಾಗಿ ಜಗಳವಾಡುತ್ತಿದ್ದ ಈ ಇಬ್ಬರ ಅಪರೂಪದ ನಡೆಯ ದೃಶ್ಯಗಳು ಎಲ್ಲಡೆ ವೈರಲ್‌ ಆಗಿದೆ. ಈ ನಡುವೆ ಈ ದೃಶ್ಯಕ್ಕೆ ನೇರವಾಗಿ ಸಾಕ್ಷಿಯಾದ ದಿಗ್ಗಜ ಕ್ರಿಕೆಟಿಗರಾದ ರವಿ ಶಾಸ್ತ್ರಿ ಮತ್ತು ಸುನಿಲ್‌ ಗವಾಸ್ಕರ್‌, ಕಾಮೆಂಟರಿ ವೇಳೆ ಹಾಸ್ಯಚಟಾಕಿ ಹಾರಿಸಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾರ್ಚ್ 29ರಂದು ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಪಂದ್ಯ ನಡೆಯಿತು. ಆರ್‌ಸಿಬಿ ಇನ್ನಿಂಗ್ಸ್‌ ಸಮಯದಲ್ಲಿ ಟೈಮ್‌ ಔಟ್‌ ಇದ್ದಾಗ, ಮೈದಾನದಲ್ಲಿ ಗೌತಮ್ ಗಂಭೀರ್ ಅವರು ವಿರಾಟ್ ಕೊಹ್ಲಿ ಸಮೀಪ ಬಂದು ಪರಸ್ಪರ ಮಾತನಾಡಿದ್ದಾರೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ನಡುವೆ ಇಬ್ಬರೂ ಮಾತನಾಡುತ್ತಾ ತಬ್ಬಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಈ ಇಬ್ಬರು ಆಟಗಾರರ ನಡುವೆ ಹಲವು ಬಾರಿ ಬಹಿರಂಗವಾಗಿಯೇ ಜಗಳ ಹಾಗೂ ಮಾತುಕತೆಗಳು ಸಂಭವಿಸಿದೆ. 2013ರ ಐಪಿಎಲ್ ಪಂದ್ಯದ ವೇಳೆ ಈ ಇಬ್ಬರ ನಡುವೆ ಮೊದಲ ಬಾರಿಗೆ ಜಗಳವಾಗಿತ್ತು. 2016ರಲ್ಲಿ ಮತ್ತೊಂದು ಬಾರಿ ಕಾದಾಡಿಕೊಂಡಿದ್ದರು. ಕಳೆದ ಋತುವಿನಲ್ಲಿ ಲಕ್ನೋದಲ್ಲಿ ನಡೆದ ಐಪಿಎಲ್‌ ಪಂದ್ಯದ ವೇಳೆ ಮತ್ತೆ ಇಬ್ಬರು ಜಗಳವಾಡಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಉಭಯ ಆಟಗಾರರ ನಡುವೆ ಜಗಳ ಅಥವಾ ಮಾತುಕತೆಯ ನಿರೀಕ್ಷೆ ಇತ್ತು.

ಇದನ್ನೂ ಓದಿ | ವಿರಾಟ್ ಕೊಹ್ಲಿ 83ರ ಬದಲಿಗೆ 120 ರನ್ ಗಳಿಸ್ತಿದ್ರು; ಆರ್​ಸಿಬಿ ಬ್ಯಾಟರ್ಸ್​ಗೆ ಬೆಂಡೆತ್ತಿದ ಸುನಿಲ್ ಗವಾಸ್ಕರ್

ಅಭಿಮಾನಿಗಳ ನಿರೀಕ್ಷೆಗೆ ವ್ಯತಿರಿಕ್ತವಾಗಿ, ಇಬ್ಬರೂ ಪಂದ್ಯದ ಸಮಯದಲ್ಲಿ ಅಪ್ಪುಗೆಯೊಂದಿಗೆ ಅಭಿಮಾನಿಗಳು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೆ, ದಿಗ್ಗಜ ಕ್ರಿಕೆಟಿಗರಿಗೂ ಇದು ಅಚ್ಚರಿ ಮೂಡಿಸಿದೆ. ಸುನಿಲ್ ಗವಾಸ್ಕರ್ ಮತ್ತು ರವಿಶಾಸ್ತ್ರಿ ಪ್ರತಿಕ್ರಿಯೆಯೇ ಇದಕ್ಕೆ ಸಾಕ್ಷಿ.

ಹಾಲಿ ಹಾಗೂ ಮಾಜಿ ಆಟಗಾರರು ಪರಸ್ಪರ ತಬ್ಬಿಕೊಂಡ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಅದಕ್ಕೂ ಮುನ್ನ ನೇರಪ್ರಸಾರದ ವೇಳೆ ಪ್ರಸಾರಕರು ಸಹ ಪಂದ್ಯದುದ್ದಕ್ಕೂ ಆ ದೃಶ್ಯದ ತುಣುಕನ್ನು ಹಲವು ಬಾರಿ ಪ್ರಸಾರ ಮಾಡಿದ್ದಾರೆ. ಈ ನಡುವೆ ವೀಕ್ಷಕ ವಿವರಣೆಯಲ್ಲಿದ್ದ ರವಿ ಶಾಸ್ತ್ರಿ ಈ ಕುರಿತು ಮಾತನಾಡಿದ್ದಾರೆ.

ಆಸ್ಕರ್ ಪ್ರಶಸ್ತಿ ಕೊಡಬೇಕು

“ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವಿನ ಈ ಅಪ್ಪುಗೆಗಾಗಿ ಕೆಕೆಆರ್‌ ತಂಡಕ್ಕೆ ಫೇರ್‌ ಪ್ಲೇ ಪ್ರಶಸ್ತಿ ನೀಡಬೇಕು” ಎಂದು ಶಾಸ್ತ್ರಿ ಹೇಳಿದ್ದಾರೆ. ಅವರೊಂದಿಗೆ ಕಾಮೆಂಟರಿ ಬಾಕ್ಸ್‌ನಲ್ಲಿದ್ದ ಗವಾಸ್ಕರ್ ಇದಕ್ಕೆ ಇನ್ನೂ ಹಾಸ್ಯಮಯವಾಗಿ ಪ್ರತಿಕ್ರಿಯಿಸಿ, “ಫೇರ್‌ ರ್ಪ್ಲೇ ಪ್ರಶಸ್ತಿ ಮಾತ್ರವಲ್ಲ, ಆಸ್ಕರ್ ಪ್ರಶಸ್ತಿ ಕೂಡ ಕೊಡಬೇಕು” ಎಂದು ಸನ್ನಿ ಹೇಳಿದ್ದಾರೆ.

ಪಂದ್ಯದಲ್ಲಿ ಕೆಕೆಆರ್‌ ವಿರುದ್ಧ ವಿರಾಟ್‌ ಕೊಹ್ಲಿ ಅಜೇಯ 83 ರನ್ ಗಳಿಸಿದರು. ಜವಾಬ್ದಾರಿಯುತ ಆಟವಾಡಿದ ಅವರು, 59 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್ ಸಿಡಿಸಿದರು. ಇದರೊಂದಿಗೆ ಆರೆಂಜ್‌ ಕ್ಯಾಪ್‌ ತಮ್ಮದಾಗಿಸಿಕೊಂಡರು. ವಿರಾಟ್‌ ಅರ್ಧಶತಕದ ನೆರವಿಂದ ಆರ್‌ಸಿಬಿ ತಂಡವು 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು.

Whats_app_banner