ವಿರಾಟ್ ಕೊಹ್ಲಿ 83ರ ಬದಲಿಗೆ 120 ರನ್ ಗಳಿಸ್ತಿದ್ರು; ಆರ್​ಸಿಬಿ ಬ್ಯಾಟರ್ಸ್​ಗೆ ಬೆಂಡೆತ್ತಿದ ಸುನಿಲ್ ಗವಾಸ್ಕರ್-virat would have scored 120 instead of 83 sunil gavaskar blasts rcb for not supporting kohli in record kkr loss prs ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ವಿರಾಟ್ ಕೊಹ್ಲಿ 83ರ ಬದಲಿಗೆ 120 ರನ್ ಗಳಿಸ್ತಿದ್ರು; ಆರ್​ಸಿಬಿ ಬ್ಯಾಟರ್ಸ್​ಗೆ ಬೆಂಡೆತ್ತಿದ ಸುನಿಲ್ ಗವಾಸ್ಕರ್

ವಿರಾಟ್ ಕೊಹ್ಲಿ 83ರ ಬದಲಿಗೆ 120 ರನ್ ಗಳಿಸ್ತಿದ್ರು; ಆರ್​ಸಿಬಿ ಬ್ಯಾಟರ್ಸ್​ಗೆ ಬೆಂಡೆತ್ತಿದ ಸುನಿಲ್ ಗವಾಸ್ಕರ್

Sunil Gavaskar : ಕೋಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧ ಸೋಲು ಅನುಭವಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಕೋಪಗೊಂಡ ಸುನಿಲ್ ಗವಾಸ್ಕರ್, ವಿರಾಟ್ ಕೊಹ್ಲಿ ಅವರಿಗೆ ಬೆಂಬಲ ನೀಡದ ಆಟಗಾರರಿಗೆ ಬೆಂಡೆತ್ತಿದ್ದಾರೆ.

ಆರ್​ಸಿಬಿ ಬ್ಯಾಟರ್ಸ್​ಗೆ ಬೆಂಡೆತ್ತಿದ ಸುನಿಲ್ ಗವಾಸ್ಕರ್
ಆರ್​ಸಿಬಿ ಬ್ಯಾಟರ್ಸ್​ಗೆ ಬೆಂಡೆತ್ತಿದ ಸುನಿಲ್ ಗವಾಸ್ಕರ್

ಇಂಡಿಯನ್ ಪ್ರೀಮಿಯರ್ ಲೀಗ್ (IPL) 2024ರ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ (Virat Kohli) ತಮ್ಮ ಅದ್ಭುತ ಫಾರ್ಮ್ ಮುಂದುವರಿಸಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 77 ರನ್ ಗಳಿಸಿದ್ದ ಕೊಹ್ಲಿ, ಮಾರ್ಚ್ 29ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 59 ಎಸೆತಗಳಲ್ಲಿ 83 ರನ್ ಗಳಿಸಿ ಆಪತ್ಭಾಂಧವರಾದರು. ಆದರೆ ಉಳಿದ ಬ್ಯಾಟರ್​​ಗಳು ಕಳಪೆ ಪ್ರದರ್ಶನ ನೀಡುತ್ತಿದ್ದು, ಸೋಲಿಗೆ ಕಾರಣವಾಗುತ್ತಿದೆ. ಕೆಕೆಆರ್ ವಿರುದ್ಧ ಕೊಹ್ಲಿಗೆ ಬೆಂಬಲ ನೀಡದ ಆರ್​​ಸಿಬಿ ಆಟಗಾರರಿಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವು ಬೆಂಡೆತ್ತಿದ್ದಾರೆ.

ಆರ್​​​ಸಿಬಿಯ ಸೋಲಿನ ಬಗ್ಗೆ ಕೋಪಗೊಂಡಿರುವ ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್, ಕೊಹ್ಲಿಯನ್ನು ಬೆಂಬಲಿಸದ ಬೆಂಗಳೂರು ಬ್ಯಾಟ್ಸ್​ಮನ್​ಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೊದಲು ಬ್ಯಾಟಿಂಗ್​ ನಡೆಸಿದ ಆರ್​​ಸಿಬಿ 20 ಓವರ್​​ಗಳಲ್ಲಿ 6 ವಿಕೆಟ್​ಗೆ ನಷ್ಟಕ್ಕೆ 182 ಗಳಿಸಿತು. ವಿರಾಟ್ ಕೊಹ್ಲಿ ಅವರು 59 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್​​​ ಸಹಿತ ಅಜೇಯ 83 ರನ್​ ಗಳಿಸಿದರು. ಆದರೆ ಉಳಿದ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಪದೇ ಪದೇ ಬ್ಯಾಟಿಂಗ್​ನಲ್ಲಿ ವೈಫಲ್ಯ ಅನುಭವಿಸುತ್ತಿರುವ ಆರ್​​ಸಿಬಿ ಬ್ಯಾಟರ್​​​ಗಳ ವಿರುದ್ಧ ಕಿಡಿಕಾರಿದ್ದಾರೆ.

ಸುನಿಲ್ ಗವಾಸ್ಕರ್ ಹೇಳಿದ್ದೇನು?

ಆರ್​ಸಿಬಿ ತಂಡದ ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದ ನಿರಾಶೆಗೊಂಡ ಗವಾಸ್ಕರ್, ಗ್ರೀನ್ ಮತ್ತು ಮ್ಯಾಕ್ಸ್​ವೆಲ್​ ಅವರಂತಹ ಆಟಗಾರರು ಉತ್ತಮ ಬೆಂಬಲ ನೀಡಿದ್ದರೆ ಕೊಹ್ಲಿ ಕೆಕೆಆರ್ ವಿರುದ್ಧ ಶತಕ ಗಳಿಸುತ್ತಿದ್ದರು ಎಂದು ಸ್ಟಾರ್ ಸ್ಪೋರ್ಟ್ಸ್​ನಲ್ಲಿ ಹೇಳಿದ್ದಾರೆ. ಕೊಹ್ಲಿ ಏಕಾಂಗಿಯಾಗಿ ಎಷ್ಟು ಹೋರಾಟ ಮಾಡಲು ಸಾಧ್ಯ? ಇದನ್ನು ನೀವೇ ಯೋಚಿಸಿ. ಯಾರಾದರೂ ಅವರೊಂದಿಗೆ ಉತ್ತಮ ಇನ್ನಿಂಗ್ಸ್​ ಕಟ್ಟಬೇಕಿತ್ತು. ಯಾರಾದರೂ ಅವರನ್ನು ಬೆಂಬಲಿಸಬೇಕಿತ್ತು. ಇದು ಸಾಧ್ಯವಾಗಿದ್ದರೆ, ಕೊಹ್ಲಿ ಖಂಡಿತವಾಗಿಯೂ 83 ರನ್​​ಗಳ ಬದಲಿಗೆ 120 ರನ್ ಗಳಿಸುತ್ತಿದ್ದರು. ಒಂದು ಪಂದ್ಯವು ತಂಡದ ಮೇಲೆ ಪ್ರದರ್ಶನದ ಮೇಲೆ ನಿಂತಿರುತ್ತದೆ. ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ ಎಂದು ಗವಾಸ್ಕರ್ ಹೇಳಿದರು.

ನಾಯಕ ಫಾಫ್ ಡು ಪ್ಲೆಸಿಸ್ ಬೇಗನೆ ಔಟಾದ ನಂತರ ಕೊಹ್ಲಿ ಅವರು, ಕ್ಯಾಮರೂನ್ ಗ್ರೀನ್ ಅವರೊಂದಿಗೆ 65 ರನ್​ಗಳ ಉತ್ತಮ ಪಾಲುದಾರಿಕೆ ನೀಡಿದರು. ಬಳಿಕ ಗ್ಲೆನ್ ಮ್ಯಾಕ್ಸ್​ವೆಲ್ ಅವರೊಂದಿಗೆ 42 ರನ್​​ಗಳ ಜೊತೆಯಾಟ ನೀಡಿದರು. ಆದರೆ ಕೊಹ್ಲಿ 2 ಪಾಲುದಾರಿಕೆಗಳ ಮೂಲಕ ಆವೇಗವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೂ, ಮ್ಯಾಕ್ಸಿ, ಗ್ರೀನ್​ ಅವರು ದೊಡ್ಡ ಇನ್ನಿಂಗ್ಸ್​ ಕಟ್ಟಲು ವಿಫಲರಾದರು. ಬಳಿಕ ರಜತ್ ಪಾಟೀದಾರ್, ಅನುಜ್ ರಾವತ್ ಅವರು ಮತ್ತೆ ವಿಫಲರಾದರು. ಕೊನೆಯಲ್ಲಿ ದಿನೇಶ್ ಕಾರ್ತಿಕ್ 8 ಎಸೆತಗಳಲ್ಲಿ 18 ರನ್ ಗಳಿಸಿದರು.

183 ರನ್​ಗಳ ಗುರಿ ಬೆನ್ನಟ್ಟಿದ ಕೆಕೆಆರ್​​ ಇನ್ನೂ 19 ಎಸೆತಗಳು ಬಾಕಿ ಇರುವಂತೆಯೇ ಗೆಲುವು ಸಾಧಿಸಿತು. ಸುನಿಲ್ ನರೈನ್ (22 ಎಸೆತಗಳಲ್ಲಿ 47 ರನ್) ಮತ್ತು ವೆಂಕಟೇಶ್ ಅಯ್ಯರ್ (30 ಎಸೆತಗಳಲ್ಲಿ 50 ರನ್) ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಕೆಕೆಆರ್ 16.5 ಓವರ್​​ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಚಿನ್ನಸ್ವಾಮಿಯಲ್ಲಿ ಕೆಕೆಆರ್​​ ಗೆಲುವಿನ ದಾಖಲೆಯನ್ನು ವಿಸ್ತರಿಸಿದೆ. 2015 ರಿಂದ ಆರ್​​ಸಿಬಿ ವಿರುದ್ಧ ಚಿನ್ನಸ್ವಾಮಿ ಮೈದಾನದಲ್ಲಿ ಕೋಲ್ಕತ್ತಾ ಅಜೇಯ ದಾಖಲೆ ಹೊಂದಿದೆ. ಅಂದಿನಿಂದ ಆರ್​ಸಿಬಿ ಎದುರು ಕೆಕೆಆರ್​ ಒಟ್ಟು 8 ಪಂದ್ಯಗಳನ್ನು ಸತತವಾಗಿ ಗೆಲ್ಲುತ್ತಾ ಬಂದಿದೆ.

17ನೇ ಆವೃತ್ತಿಯ ಐಪಿಎಲ್​ನಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಸೋಲು ಕಂಡಿರುವ ಆರ್​​ಸಿಬಿ, ಕೇವಲ ಒಂದು ಪಂದ್ಯವನ್ನು ಗೆದ್ದಿದೆ. ತನ್ನ ಮುಂದಿನ ಪಂದ್ಯದಲ್ಲಿ ಏಪ್ರಿಲ್ 2 ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೆಣಸಾಟ ನಡೆಸಲಿದೆ. ಈ ಪಂದ್ಯವು ಚಿನ್ನಸ್ವಾಮಿ ಮೈದಾನದಲ್ಲೇ ನಡೆಯಲಿದೆ.