ಒಂದೇ ವೇದಿಕೆಯಲ್ಲಿ ಕೊಹ್ಲಿ, ಮುರಳೀಧರನ್, ಗೇಲ್, ಪೊಲಾರ್ಡ್ ಡ್ಯಾನ್ಸ್; ನೀವೇಂದೂ ನೋಡಿರದ ಅಪರೂಪದ ವಿಡಿಯೋ ವೈರಲ್
ಕನ್ನಡ ಸುದ್ದಿ  /  ಕ್ರಿಕೆಟ್  /  ಒಂದೇ ವೇದಿಕೆಯಲ್ಲಿ ಕೊಹ್ಲಿ, ಮುರಳೀಧರನ್, ಗೇಲ್, ಪೊಲಾರ್ಡ್ ಡ್ಯಾನ್ಸ್; ನೀವೇಂದೂ ನೋಡಿರದ ಅಪರೂಪದ ವಿಡಿಯೋ ವೈರಲ್

ಒಂದೇ ವೇದಿಕೆಯಲ್ಲಿ ಕೊಹ್ಲಿ, ಮುರಳೀಧರನ್, ಗೇಲ್, ಪೊಲಾರ್ಡ್ ಡ್ಯಾನ್ಸ್; ನೀವೇಂದೂ ನೋಡಿರದ ಅಪರೂಪದ ವಿಡಿಯೋ ವೈರಲ್

Virat Kohli Dance: ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್ ಮಾಡಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ. ಕ್ರಿಸ್​ಗೇಲ್ ಮತ್ತು ಮುತ್ತಯ್ಯ ಮುರಳೀಧರನ್ ಸೇರಿ ದಿಗ್ಗಜ ಆಟಗಾರರು ಸಹ ಈ ವಿಡಿಯೋದಲ್ಲಿದ್ದಾರೆ.

ಒಂದೇ ವೇದಿಕೆಯಲ್ಲಿ ಕೊಹ್ಲಿ, ಮುರಳೀಧರನ್, ಗೇಲ್, ಪೊಲಾರ್ಡ್ ಡ್ಯಾನ್ಸ್
ಒಂದೇ ವೇದಿಕೆಯಲ್ಲಿ ಕೊಹ್ಲಿ, ಮುರಳೀಧರನ್, ಗೇಲ್, ಪೊಲಾರ್ಡ್ ಡ್ಯಾನ್ಸ್

ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಗೆಲುವಿಗಾಗಿ ಪರದಾಡುತ್ತಿದೆ. ಐಪಿಎಲ್ 2024ರಲ್ಲಿ ಆರ್​ಸಿಬಿ ಆಡಿದ 6 ಪಂದ್ಯಗಳಲ್ಲಿ 5ರಲ್ಲಿ ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಹೀಗಾಗಿ ತಂಡದ ಭವಿಷ್ಯ ಸಂದಿಗ್ದ ಸ್ಥಿತಿಗೆ ಸಿಲುಕಿದೆ. ಬ್ಯಾಟಿಂಗ್​ನಲ್ಲಿ ಪರವಾಗಿಲ್ಲ ಎನಿಸಿದರೂ ಬೌಲಿಂಗ್​​ ವಿಭಾಗದಲ್ಲಿ ಸಂಪೂರ್ಣ ನೆಲಕಚ್ಚುತ್ತಿದೆ. ಜೋಶ್ ಹೇಜಲ್​ವುಡ್​ರನ್ನು ಕೈಬಿಟ್ಟ ನಂತರ ಸ್ಥಿರ ಬೌಲರ್​​ಗಳ ಕೊರತೆ ಕಾಡುತ್ತಿದೆ. ಪ್ರಸ್ತುತ ಆರ್​ಸಿಬಿ ಪರಿಸ್ಥಿತಿ ದಯನೀಯವಾಗಿದ್ದು, ಪ್ಲೇಆಫ್​ ರೇಸ್​ಗೇರಲು ಉಳಿದೆಲ್ಲಾ ಪಂದ್ಯಗಳನ್ನು ಗೆಲ್ಲುವ ಪರಿಸ್ಥಿತಿಗೆ ಸಿಲುಕಿದೆ.

ಅದರಲ್ಲೂ ವಿರಾಟ್ ಕೊಹ್ಲಿ ತಂಡದ ಪರ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ. ಆರು ಪಂದ್ಯಗಳಲ್ಲಿ ಎರಡು ಅರ್ಧಶತಕ, 1 ಶತಕ ಸಹಿತ 319 ರನ್ ಬಾರಿಸಿದ್ದಾರೆ. ಇದೀಗ ಅವರ ಮೇಲೆಯೇ ನಿರೀಕ್ಷೆ ಹೆಚ್ಚಾಗಿದೆ. ಉಳಿದ ಪಂದ್ಯಗಳಲ್ಲೂ ಮಿಂಚುವ ಭರವಸೆ ಮೂಡಿಸಿದ ವಿರಾಟ್, ಪ್ರಸ್ತುತ ಏಪ್ರಿಲ್ 15ರ ಸೋಮವಾರ ಸನ್​ರೈಸರ್ಸ್ ಹೈದರಾಬಾದ್​ ವಿರುದ್ದದ ಕಾದಾಟಕ್ಕೆ ಸಜ್ಜಾಗುತ್ತಿದ್ದಾರೆ. ಇದರ ನಡುವೆ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್ ಮಾಡಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ. ದಿಗ್ಗಜ ಆಟಗಾರರು ಸಹ ಈ ವಿಡಿಯೋದಲ್ಲಿದ್ದಾರೆ.

ಒಂದೇ ವೇದಿಕೆಯಲ್ಲಿ ದಿಗ್ಗಜರು

ದಿಗ್ಗಜ ಆಟಗಾರರು ಒಂದೇ ವೇದಿಕೆಯಲ್ಲಿ ಡ್ಯಾನ್ಸ್ ಮಾಡಿರುವ ಅಪರೂಪದ ವಿಡಿಯೋ ವೈರಲ್ ಆಗುತ್ತಿದೆ. ವಿರಾಟ್ ಕೊಹ್ಲಿ ಅವರು ಕೀರಾನ್ ಪೊಲಾರ್ಡ್, ಕ್ರಿಸ್ ಗೇಲ್ ಮತ್ತು ಮುತ್ತಯ್ಯ ಮುರಳೀಧರನ್ ಅವರೊಂದಿಗೆ ನೃತ್ಯ ಮಾಡುವುದನ್ನು ಕಾಣಬಹುದು. ಆರಂಭದಲ್ಲಿ ಕೊಹ್ಲಿ ಮತ್ತು ಗೇಲ್ ಡ್ಯಾನ್ಸ್ ಮಾಡುತ್ತಾರೆ. ಆ ಬಳಿಕ ಗೇಲ್-ಪೊಲಾರ್ಡ್ ಹೆಜ್ಜೆ ಹಾಕುತ್ತಾರೆ. ನಂತರ ಕೊನೆಯಲ್ಲಿ ಮುರಳೀಧರನ್ ಸೊಂಟ ಬಳುಕಿಸುತ್ತಿದ್ದಂತೆ ಹಿಂದೆ ನಿಂತಿದ್ದ ಪೊಲಾರ್ಡ್, ಕೊಹ್ಲಿ ಮತ್ತು ಗೇಲ್ ಬಿದ್ದು ಬಿದ್ದು ನಗುತ್ತಾರೆ. ಎಬಿ ಡಿವಿಲಿಯರ್ಸ್ ಹಿಂದೆ ನಿಂತಿರುವುದನ್ನು ಕಾಣಬಹುದು, ಈ ಅಪರೂಪದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ಕಳಪೆ ಬೌಲಿಂಗ್ ದಾಳಿ

ಜೋಶ್ ಹೇಜಲ್​ವುಡ್, ವನಿಂದು ಹಸರಂಗ ಅವರನ್ನು ಕೈ ಬಿಟ್ಟ ನಂತರ ಮಿನಿ ಹರಾಜಿನಲ್ಲಿ ಉತ್ತಮ ಬೌಲರ್​ಗಳನ್ನು ಖರೀದಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಅಲ್ಜಾರಿ ಜೋಸೆಫ್, ಟಾಮ್ ಕರ್ರಾನ್, ಲಾಕಿ ಫರ್ಗುಸನ್ ಮತ್ತು ಯಶ್ ದಯಾಲ್​ಗೆ ಮಣೆ ಹಾಕಲಾಯಿತು. ಬೌಲರ್​ಗಳು ಪಂದ್ಯ ಗೆಲ್ಲಿಸುವಷ್ಟು ಸಮರ್ಥರಾಗಿದ್ದರೂ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ತಂಡದಲ್ಲಿ ಮೊಹಮ್ಮದ್ ಸಿರಾಜ್ ಕೂಡ ಕಳಪೆ ಬೌಲಿಂಗ್ ಮಾಡುತ್ತಿದ್ದಾರೆ.

ಫಾಫ್ ಡು ಪ್ಲೆಸಿಸ್, ಕ್ಯಾಮರೂನ್ ಗ್ರೀನ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್‌ರ ಸಾಗರೋತ್ತರ ಮೂವರು ಮಹತ್ವದ ಪ್ರಭಾವ ನೀಡುತ್ತಿಲ್ಲ. ಇದು ಬ್ಯಾಟಿಂಗ್ ಘಟಕ ಕುಸಿಯಲು ಕಾರಣವಾಗಿದೆ. ಏಸ್ ಬ್ಯಾಟರ್ ವಿರಾಟ್ ಕೊಹ್ಲಿ ಏಕಾಂಗಿಯಾಗಿ ಹೋರಾಟ ನಡೆಸುತ್ತಿದ್ದಾರೆ. ದಿನೇಶ್ ಕಾರ್ತಿಕ್, ಮಹಿಪಾಲ್ ಲೊಮ್ರೊರ್​ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ರಜತ್ ಪಾಟೀದಾರ್​ ಫಾರ್ಮ್​ಗೆ ಮರಳಿದ್ದು ಮುಂದಿನ ಪಂದ್ಯದಲ್ಲಿ ಮತ್ತೊಮ್ಮೆ ಮಿಂಚುವ ಭರವಸೆ ಮೂಡಿಸಿದ್ದಾರೆ.

ಆರ್​ಸಿಬಿ ಬಿಟ್ಟು ಹೋಗಲ್ಲ ಕೊಹ್ಲಿ

17 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಟ್ರೋಫಿ ಗೆಲ್ಲದಿದ್ದರೂ ವಿರಾಟ್ ಕೊಹ್ಲಿ ಆರ್‌ಸಿಬಿಗೆ ನಿಷ್ಠರಾಗಿದ್ದಾರೆ. ಐಪಿಎಲ್ ಹರಾಜಿನಲ್ಲಿ ತನ್ನ ಹೆಸರನ್ನು ಹಾಕಲು ಹಲವು ಫ್ರಾಂಚೈಸಿಗಳು ನನ್ನನ್ನು ಸಂಪರ್ಕಿಸಿದ್ದವು. ಆದರೆ ತನ್ನ ಆರಂಭಿಕ ದಿನಗಳಲ್ಲಿ ತನಗೆ ಆರ್​​ಸಿಬಿ ಬೆಂಬಲ ನೀಡಿದ್ದರ ಹಿನ್ನೆಲೆ ಹರಾಜಿಗೆ ಹೋಗುವ ಮನಸ್ಸು ಮಾಡಲಿಲ್ಲ ಎಂದು ಕೊಹ್ಲಿ ಇತ್ತೀಚೆಗೆ ಬಹಿರಂಗಪಡಿಸಿದ್ದರು.

ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ?

2024ರ ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಅವರನ್ನು ಆಯ್ಕೆ ಮಾಡಬೇಕೇ ಎಂಬ ಚರ್ಚೆ ನಡೆಯುತ್ತಿದೆ. ಐಪಿಎಲ್ 2024ರಲ್ಲಿ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ, ಕೆಲವರು ಅವರ ಸ್ಟ್ರೈಕ್ ರೇಟ್ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಈ ಹಿಂದೆ, ಟಿ20 ವಿಶ್ವಕಪ್ ತಂಡದಲ್ಲಿ ಕೊಹ್ಲಿಯನ್ನು ಆಯ್ಕೆ ಮಾಡಲು ಸೆಲೆಕ್ಟರ್ಸ್ ಉತ್ಸುಕರಾಗಿಲ್ಲ ಎಂಬ ವರದಿಗಳು ಹೊರಹೊಮ್ಮಿದ್ದವು. ಆದರೆ, ಇತ್ತೀಚಿನ ವರದಿಗಳು ವಿರಾಟ್ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನವನ್ನು ಬಹುತೇಕ ಖಚಿತಪಡಿಸಿದ್ದಾರೆ ಎಂದು ಹೇಳುತ್ತಿವೆ.

Whats_app_banner