Kannada Serial TRP: ಟಾಪ್ ಸ್ಥಾನದಿಂದ ಕೊನೆಗೂ ಕೆಳಗಿಳಿದ ‘ಪುಟ್ಟಕ್ಕನ ಮಕ್ಕಳು’; ಹೊಸ ಧಾರಾವಾಹಿಗೆ ಮಣೆ ಹಾಕಿದ ವೀಕ್ಷಕ
ಕಳೆದ ಎರಡು ವರ್ಷಗಳಿಂದ ಟಿಆರ್‌ಪಿಯಲ್ಲಿ ಟಾಪ್ ಸ್ಥಾನದಲ್ಲಿಯೇ ಗಟ್ಟಿಯಾಗಿ ನೆಲೆನಿಂತಿದ್ದು ಉಮಾಶ್ರೀ ಮುಖ್ಯಭೂಮಿಕೆಯಲ್ಲಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ. ಇದೀಗ ಇದೇ ಸೀರಿಯಲ್, ಟಿಆರ್‌ಪಿ ವಿಚಾರದಲ್ಲಿ ಮೊದಲ ಸಲ ಕುಸಿತ ಕಂಡಿದೆ. ಆ ಸ್ಥಾನಕ್ಕೆ ಹೊಸ ಸೀರಿಯಲ್ ಎಂಟ್ರಿ ಕೊಟ್ಟಿದೆ. ಯಾವುದಾ ಧಾರಾವಾಹಿ?
Kannada Serial TRP: ಕನ್ನಡ ಕಿರುತೆರೆಯಲ್ಲಿ ಹೊಸ ಹೊಸ ಪ್ರಯೋಗಗಳಾಗುತ್ತಿವೆ. ನೋಡುಗನನ್ನು ಸೆಳೆಯುವ ಉದ್ದೇಶಕ್ಕೆ, ಚಿಕ್ಕ ಚಿಕ್ಕ ವಿಚಾರಗಳನ್ನೂ ವೈಭವೀಕರಿಸುವ ಕೆಲಸಗಳಾಗುತ್ತಿವೆ. ಅದ್ಧೂರಿತನಕ್ಕೆ ಕೊರತೆ ಬಾರದಂತೆ, ರಿಚ್ ಆಗಿಯೇ ಸೀರಿಯಲ್‌ಗಳನ್ನು ಜಿದ್ದಿಗೆ ಬಿದ್ದಂತೆ ವೀಕ್ಷಕರ ಮುಂದಿಡುತ್ತಿವೆ ಮನರಂಜನಾ ವಾಹಿನಿಗಳು. ಮೊದಲೆಲ್ಲ ಸರಳ ಕಥೆ, ಲಿಮಿಟೆಡ್ ಮೇಕಿಂಗ್ ಮೂಲಕ ಮೂಡಿಬರುತ್ತಿದ್ದ ಧಾರಾವಾಹಿಗಳೀಗ ಐಶಾರಾಮಿ ಬಂಗಲೆ, ಕಾಸ್ಟ್ಲೀ ಕಾರ್‌ಗಳು, ಹೆಲಿಕಾಪ್ಟರ್, ವಿದೇಶಿ ಶೂಟಿಂಗ್ ಎಲ್ಲವನ್ನೂ ನೋಡುಗರಿಗೆ ನೀಡುತ್ತಿವೆ ಕನ್ನಡ ಸೀರಿಯಲ್ ತಂಡಗಳು. ಇದೀಗ ಈ ವಾರದ ಸ್ಪರ್ಧಾ ಕಣದಲ್ಲಿ ಯಾವ ಸೀರಿಯಲ್ ಟಾಪ್ ಎಂಬ ಲೆಕ್ಕಾಚಾರವೂ ಹೊರಬಿದ್ದಿದೆ.
ಟಿಆರ್‌ಪಿ ಎಂಬುದು ಒಂದು ರೀತಿ ಹಾವು ಏಣಿ ಆಟ ಇದ್ದಂತೆ. ಇಲ್ಲಿ ಮೇಲಿದ್ದವನು ಕೆಳಕ್ಕೆ, ಕೆಳಕ್ಕಿದ್ದವನು ಮೇಲಕ್ಕೆ ಏರುವುದು ಸರ್ವೇಸಾಮಾನ್ಯ. ಅದರಂತೆ, ಕಳೆದ ಎರಡು ವರ್ಷಗಳಿಂದ ಟಿಆರ್‌ಪಿಯಲ್ಲಿ ಟಾಪ್ ಸ್ಥಾನದಲ್ಲಿಯೇ ಗಟ್ಟಿಯಾಗಿ ನೆಲೆನಿಂತಿದ್ದು ಉಮಾಶ್ರೀ ಮುಖ್ಯಭೂಮಿಕೆಯಲ್ಲಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ. ಇದೀಗ ಇದೇ ಸೀರಿಯಲ್, ಟಿಆರ್‌ಪಿ ವಿಚಾರದಲ್ಲಿ ಮೊದಲ ಸಲ ಕುಸಿತ ಕಂಡು, ಮೊದಲ ಸ್ಥಾನವನ್ನೂ ಕಳೆದುಕೊಂಡಿದೆ. ಈ ಮೊದಲೆಲ್ಲ ಎರಡಂಕಿಯ ಟಿಆರ್‌ಪಿ ಪಡೆದು ಮಿಂಚಿದ್ದ ಪುಟ್ಟಕ್ಕನ ಮಕ್ಕಳು ಧಾರಾವಾಹಿಯನ್ನು ಹಿಂದಿಕ್ಕಿರುವುದು ಹೊಸ ಸೀರಿಯಲ್ ಲಕ್ಷ್ಮೀ ನಿವಾಸ!
ಹೊಸ ಸೀರಿಯಲ್‌ಗೆ ಮಣೆ ಹಾಕಿದ ವೀಕ್ಷಕ
ಇತ್ತೀಚೆಗಷ್ಟೇ ಜೀ ಕನ್ನಡದಲ್ಲಿ ಶುರುವಾಗಿರುವ ಲಕ್ಷ್ಮೀ ನಿವಾಸ ಧಾರಾವಾಹಿ ನೋಡುಗನ ಗಮನ ಸೆಳೆದಿದೆ. ಅದರ ಪರಿಣಾಮ, ಟಿಆರ್‌ಪಿಯಲ್ಲೂ ಈ ಧಾರಾವಾಹಿಯನ್ನು ಎತ್ತಿ ಹಿಡಿದಿದ್ದಾನೆ ವೀಕ್ಷಕ. ಹಲವು ಕೋನಗಳಲ್ಲಿ ಕವಲುಗಳಾಗಿ ತೆರೆದುಕೊಂಡ ಲಕ್ಷ್ಮೀ ನಿವಾಸ, ನೋಡುಗನಿಂದ ಬಹುಪರಾಕ್ ಪಡೆಯುತ್ತಿದೆ. ಅದರಂತೆ, ಟಿಆರ್‌ಪಿಯಲ್ಲೂ ಈ ವಾರ ಮೊದಲ ಸ್ಥಾನಕ್ಕೆ ಏರಿದೆ. ಕಳೆದ ವಾರ ಎರಡನೇ ಸ್ಥಾನದಲ್ಲಿದ್ದ ಈ ಸೀರಿಯಲ್ ಇದೀಗ, 8.7 ಟಿಆರ್‌ಪಿ ಪಡೆದು ಟಾಪ್ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಇತ್ತ ಪುಟ್ಟಕ್ಕನ ಮಕ್ಕಳು, 8.2 ಟಿಆರ್‌ಪಿ ಪಡೆದುಕೊಂಡು ಎರಡನೇ ಸ್ಥಾನದಲ್ಲಿದೆ.
ಶ್ರೀರಸ್ತು ಶುಭಮಸ್ತು ಜಿಗಿತ, ಅಲ್ಲೇ ಇದೆ ಸೀತಾ ರಾಮ
ಮಾಧವ್, ದತ್ತಣ್ಣ, ತುಳಸಿ ಫ್ಯಾಮಿಲಿ ಡ್ರಾಮಾ ಶ್ರೀರಸ್ತು ಶುಭಮಸ್ತು ಸೀರಿಯಲ್‌ಗೆ ಒಳ್ಳೆಯ ಅಂಕಿ ಸಿಕ್ಕಿದೆ. ಟಾಪ್ ಐದರಲ್ಲಿಯೇ ಇರುತ್ತಿದ್ದ ಈ ಧಾರಾವಾಹಿ ಈ ಸಲ ಮೂರನೇ ಸ್ಥಾನದಲ್ಲಿದೆ. ಟಿಆರ್‌ಪಿಯಲ್ಲಿ 7.3 ನಂಬರ್ ಪಡೆದುಕೊಂಡಿದೆ. ಇತ್ತ ಕಥೆಯ ವಿಚಾರದಲ್ಲಿ ಒಂದಷ್ಟು ಸರ್ಕಸ್ ಮಾಡಿದ ಸೀತಾ ರಾಮ ಧಾರಾವಾಹಿ ಈ ಮೊದಲು ಟಾಪ್ 2ಕ್ಕೆ ಬಂದು ನಿಂತ ಉದಾಹರಣೆ ಇದೆ. ಇದೀಗ 7.2 ಟಿಆರ್‌ಪಿ ಪಡೆದು ನಾಲ್ಕನೇ ಸ್ಥಾನದಲ್ಲಿದೆ. ರೋಚಕತೆಯನ್ನು ಉಕ್ಕಿಸುವ ಕೆಲಸವನ್ನು ಸೀರಿಯಲ್ ತಂಡ ಮಾಡುತ್ತಿದೆಯಾದರೂ, ಕಳೆದ ಕೆಲ ವಾರಗಳಿಂದ ತಟಸ್ಥವಾಗಿ ಉಳಿದಿದೆ ಸೀತಾ ರಾಮ.
ವರ್ಕೌಟ್ ಆಯ್ತಾ ಅಮೃತಧಾರೆಯ ಕೌತುಕ?
ಕಳೆದ ಒಂದು ತಿಂಗಳಿಂದ ತನ್ನ ಹೊಸ ಪ್ರೋಮೋ ಮೂಲಕವೇ ಕುತೂಹಲಕ್ಕೆ ಒಗ್ಗರಣೆ ಹಾಕಿದ್ದ ಅಮೃತಧಾರೆ ಧಾರಾವಾಹಿ, ನೋಡುಗರಿಂದ ಮೆಚ್ಚುಗೆಯ ಜತೆಗೆ ಕೌತುಕವನ್ನೂ ಸೃಷ್ಟಿಸಿತ್ತು. ಮಲ್ಲಿ ಮತ್ತು ಜೈದೇವ್ ಮದುವೆ ಪ್ರಹಸನದಲ್ಲಿ ಭೂಮಿಕಾಳ ನಿಲುವು ಏನು ಎಂಬುದೇ ಯಕ್ಷ ಪ್ರಶ್ನೆಯಾಗಿತ್ತು. ಕೊನೆಗೆ ಮಲ್ಲಿಯ ಜತೆಗೇ ಮೈದುನನ ಮದುವೆ ಮಾಡಿಸಿ ಗೆದ್ದು ಬೀಗಿದ್ದಾಳೆ ಭೂಮಿಕಾ. ಹೀಗೆ ರೋಚಕ ಟ್ವಿಸ್ಟ್‌ಗಳಿದ್ದರೂ ಈ ಸೀರಿಯಲ್ ಈ ವಾರ 7.0 ಟಿಆರ್‌ಪಿ ಪಡೆಯುವ ಮೂಲಕ ಐದನೇ ಸ್ಥಾನದಲ್ಲಿದೆ.
ಪೊಲೀಸ್ ಆಗುವ ಭರದಲ್ಲಿ ಸತ್ಯ
ಸತ್ಯ ಸೀರಿಯಲ್ ಸಹ ನೋಡುಗರನ್ನು ಸೆಳೆಯುತ್ತಿದೆ. ಮೆಕ್ಯಾನಿಕ್ ಆಗಿದ್ದ ಗಂಡುಬೀರಿ ಹುಡುಗಿ, ಸಭ್ಯ ಗೃಹಿಣಿಯಾಗಿಯೂ ಮನೆ ಮಂದಿಯ ಪ್ರೀತಿ ಗಿಟ್ಟಿಸಿಕೊಂಡಿದ್ದಾಳೆ. ಇದೀಗ ಇದೇ ಸತ್ಯ ಪೊಲೀಸ್ ಇಲಾಖೆಗೂ ಸೇರಿದ್ದಾಳೆ. ಪೊಲೀಸ್ ಟ್ರೇನಿಂಗ್ ಸೆಂಟರ್ ಪ್ರವೇಶ ಪಡೆದಿದ್ದಾಳೆ. ಸತ್ಯ ಪೊಲೀಸ್ ಆಗ್ತಾಳಾ ಅನ್ನೋ ವಿಚಾರಕ್ಕೆ ಸೀರಿಯಲ್ ತಂಡ ಒಗ್ಗರಣೆ ಹಾಕಿತ್ತು. ಇದೀಗ ಅದರಂತೆ, ಟಿಆರ್‌ಪಿಯಲ್ಲಿ ಈ ವಾರ ಆರನೇ ಸ್ಥಾನದಲ್ಲಿದೆ ಈ ಧಾರಾವಾಹಿ.
ರಾಮಾಚಾರಿ, ಲಕ್ಷ್ಮೀ ಬಾರಮ್ಮ, ಭಾಗ್ಯಲಕ್ಷ್ಮೀಗೆ ಯಾವ ಸ್ಥಾನ?
ಇನ್ನು ಕಲರ್ಸ್ ಕನ್ನಡದಲ್ಲಿನ ರಾಮಾಚಾರಿ ಧಾರಾವಾಹಿ ಈ ವಾರ 6.3 ಟಿಆರ್‌ಪಿ ಪಡೆದುಕೊಂಡಿದೆ. ಇತ್ತ ರಾಮಾಚಾರಿಗಿಂತ ಮೇಲಿನ ಸ್ತರದಲ್ಲಿರುತ್ತಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಮೀ ಬಾರಮ್ಮ ಧಾರಾವಾಹಿಗಳನ್ನೂ ರಾಮಾಚಾರಿ ದಾಟಿ ಮುಂದೆ ಸಾಗಿದೆ. ಲಕ್ಷ್ಮೀ ಬಾರಮ್ಮ 5.7 ಟಿಆರ್‌ಪಿ ಪಡೆದುಕೊಂಡು ಎಂಟನೇ ಸ್ಥಾನದಲ್ಲಿದ್ದರೆ, ಭಾಗ್ಯಲಕ್ಷ್ಮೀ 5.1 ಟಿಆರ್‌ಪಿ ಪಡೆದು 9ನೇ ಸ್ಥಾನದಲ್ಲಿದೆ.
ವಿಭಾಗ