Bhagyalakshmi Serial: ಮಾಡಿದ್ದುಣ್ಣೋ ಮಹಾರಾಯ: ಕಸದ ರಾಶಿಯಿಂದ ತಂದ ಗುಲಾಬಿಯಿಂದ ತಯಾರಿಸಿದ, ರೋಸ್ ಮಿಲ್ಕ್ ಚಪ್ಪರಿಸಿದ ತಾಂಡವ್
ತಾನೇ ತಂದ ಗುಲಾಬಿಯಿಂದ ಮಾಡಿದ್ದು ಎಂದು ತಿಳಿಯದ ತಾಂಡವ್ ರೋಸ್ ಮಿಲ್ಕನ್ನು ಚಪ್ಪರಿಸಿಕೊಂಡು ಕುಡಿಯುತ್ತಾನೆ. ಇನ್ನೊಂದು ಗ್ಲಾಸ್ ಉಳಿತಲ್ಲ ಯಾರಿಗೆ ಕೊಡುವುದು ಎಂದು ಕುಸುಮಾ ಹೇಳುವಾಗ, ನೀನು ಚಿಂತೆ ಮಾಡಬೇಡ, ನಾನೇ ಕುಡಿಯುತ್ತೇನೆ ಎಂದು ತಾಂಡವ್ ಮತ್ತೊಂದು ಗ್ಲಾಸ್ ರೋಸ್ ಮಿಲ್ಕ್ ಕುಡಿಯುತ್ತಾನೆ.
ಭಾಗ್ಯ ಸ್ಕೂಲ್‌ಗೆ ಸೇರಿರುವುದು ತಾಂಡವ್‌ಗೆ ನುಂಗಲಾರದ ತುಪ್ಪವಾಗಿದೆ. ಕೋಪವನ್ನು ವ್ಯಕ್ತಪಡಿಸಲಾಗುತ್ತಿಲ್ಲ, ಖುಷಿಯ ನಾಟಕ ಮಾಡಲಾಗುತ್ತಿಲ್ಲ. ಮಗಳು ತನ್ವಿಗೆ ಅಮ್ಮ ಸ್ಕೂಲ್‌ಗೆ ಸೇರಿದ ಕೋಪ ಒಂದೆಡೆ ಆದರೆ, ನಾನು ಸ್ಕೂಲ್‌ಗೆ ಚಕ್ಕರ್ ಹಾಕಿದ ವಿಚಾರ ಎಲ್ಲಿ ಮನೆಯವರಿಗೆಲ್ಲಾ ತಿಳಿದುಬಿಡುವುದೋ ಎಂಬ ಭಯ.
ಮನೆಯವರ ಮುಂದೆ ತಾಂಡವ್ ಖುಷಿಯ ನಾಟಕ
ಕಸದಲ್ಲಿ ಬಿದ್ದಿದ್ದ ಹೂವಿನ ಬೊಕ್ಕೆ ತರುವ ತಾಂಡವ್, ಅದನ್ನು ಭಾಗ್ಯಳಿಗೆ ಕೊಟ್ಟು ಕಂಗ್ರಾಟ್ಸ್ ಹೇಳುತ್ತಾನೆ. ಬೊಕ್ಕೆ ಎಲ್ಲಿಂದ ತಂದಿದ್ದು ಎಂದು ಭಾಗ್ಯ ಕೇಳುತ್ತಾಳೆ, ನಿನಗಾಗಿ ಹೂವಿನ ಶಾಪ್‌ನಿಂದ ತಂದೆ ಎಂದು ತಾಂಡವ್ ಸುಳ್ಳು ಹೇಳುತ್ತಾನೆ. ಈ ಸಮಯದಲ್ಲಿ ಯಾವ ಹೂವಿನ ಅಂಗಡಿ ತೆಗೆದಿರುವುದಿಲ್ಲ ಅದಕ್ಕೆ ಕೇಳಿದೆ ಎಂದಾಗ, ನಿನಗಾಗಿ ಅಷ್ಟು ಮಾಡದಿದ್ದರೆ ಹೇಗೆ, ತುಂಬಾ ಹುಡುಕಿ ತಂದಿದ್ದೇನೆ ಎಂದು ತಾಂಡವ್ ಹೇಳುತ್ತಾನೆ. ನಿಜ ವಿಚಾರ ಗೊತ್ತಿರುವ ಭಾಗ್ಯ ಒಲ್ಲದ ಮನಸ್ಸಿನಿಂದ ಬೊಕ್ಕೆ ಸ್ವೀಕರಿಸುತ್ತಾಳೆ. ನಾಳೆ ನಿನಗೆ ಎಕ್ಸಾಂ ಇದೆ ಹೋಗಿ ಓದು ಎಂದು ಭಾಗ್ಯ ಮಗಳಿಗೆ ಹೇಳಿದಾಗ ತನ್ವಿ ಅಲ್ಲಿಂದ ಎದ್ದು ಹೋಗುತ್ತಾಳೆ.
ಮಗಳನ್ನು ಗದರಿಸುವ ಭಾಗ್ಯ
ಗುಲಾಬಿ ಬೊಕ್ಕೆ ಹಿಡಿದು ತನ್ವಿಯನ್ನು ಹಿಂಬಾಲಿಸುವ ಭಾಗ್ಯ ಆಕೆಯ ರೂಮ್‌ಗೆ ಬರುತ್ತಾಳೆ. ಅಮ್ಮ ಹಿಂದೆ ಬಂದಿರುವ ವಿಚಾರ ಗೊತ್ತಿಲ್ಲದ ತನ್ವಿ, ಗೊಣಗುತ್ತಾಳೆ. ಅಷ್ಟರಲ್ಲಿ ಭಾಗ್ಯ ರೂಮ್‌ಗೆ ಬಂದು ಮಗಳನ್ನು ಹತ್ತಿರ ಬಂದು ಪಕ್ಕದಲ್ಲಿ ಕೂರುವಂತೆ ಹೇಳುತ್ತಾಳೆ. ಅಮ್ಮ ಹೊಡೆಯಬಹುದು ಎಂಬ ಭಯದಿಂದಲೇ ತನ್ವಿ ಭಾಗ್ಯ ಪಕ್ಕ ಬಂದು ಕೂರುತ್ತಾಳೆ. ಇಷ್ಟು ದಿನಗಳು ಎದೆ ಉಬ್ಬಿಸಿ ಕೂರುತ್ತಿದ್ದ ನೀನು ಈಗ ಬಾಲ ಮುದುಡಿದ ಬೆಕ್ಕಿನಂತೆ ಏಕೆ ಆಡುತ್ತಿದ್ದೀಯ? ಎಂದು ಕೇಳುತ್ತಾಳೆ. ಅಮ್ಮನ ಪ್ರಶ್ನೆಗೆ ಉತ್ತರ ನೀಡಲಾಗದೆ ತನ್ವಿ ತಡಬಡಾಯಿಸುತ್ತಾಳೆ.
ಮಗ ತಂದೆ ಗುಲಾಬಿಯಿಂದ ರೋಸ್ ಮಿಲ್ಕ್ ತಯಾರಿಸುವ ಕುಸುಮಾ
ಭಾಗ್ಯ, ಪತಿ ತಾಂಡವ್ ನೀಡಿದ ಹೂವಿನ ಬೊಕ್ಕೆಯನ್ನು ಸೋಫಾ ಮೇಲೆ ಬಿಟ್ಟಿರುವುದನ್ನು ನೋಡಿದ ಮಗ ತನ್ಮಯ್, ಹೂವು ಬಾಡಿ ಹೋಗುತ್ತದೆ ನೀರಿನಲ್ಲಿ ಇಟ್ಟರೆ ಫ್ರೆಷ್ ಇರುತ್ತದೆ ಎಂದು ಅದನ್ನು ತೆಗೆದುಕೊಂಡು ಹೋಗುವಾಗ ಕುಸುಮಾ ಅಲ್ಲಿಗೆ ಬಂದು ಮೊಮ್ಮಗನ ಕೈಯಿಂದ ಹೂ ಕಿತ್ತುಕೊಳ್ಳುತ್ತಾಳೆ. ಇದನ್ನು ನೀರಿನಲ್ಲಿ ಇಡುವುದು ಬೇಡ ಬಾ ನಾನು ಬೇರೆ ಏನೋ ಮಾಡುತ್ತೇನೆ ಎಂದು ಅಡುಗೆ ಮನೆಗೆ ಹೋಗುತ್ತಾಳೆ. ಹೂವಿನ ದಳಗಳನ್ನು ಬಿಡಿಸುವಾಗ ತನ್ಮಯ್‌ಗೆ ದುಃಖವಾಗುತ್ತದೆ.
ರೋಸ್ ಮಿಲ್ಕ್ ಚಪ್ಪರಿಸುವ ತಾಂಡವ್
ಆ ಗುಲಾಬಿಗಳಿಂದ ಕುಸುಮಾ ರೋಸ್ ಮಿಲ್ಕ್ ತಯಾರಿಸುತ್ತಾಳೆ. ಅದನ್ನು ಕುಡಿಯಲು ತನ್ಮಯ್ ನಿರಾಕರಿಸುತ್ತಾನೆ. ನೀನು ಕುಡಿಯದಿದ್ದರೆ ಏನಂತೆ ನನ್ನ ಮಗ ತಾಂಡವ್‌ಗೆ ಕೊಡುತ್ತೇನೆ ಎಂದು ಮಗನನ್ನು ಕರೆದು ರೋಸ್ ಮಿಲ್ಕ್ ಕೊಡುತ್ತಾಳೆ. ಅದು ತಾನು ತಂದ, ರಸ್ತೆಯಲ್ಲಿ ಬಿದ್ದಿದ್ದ ಗುಲಾಬಿಯಿಂದ ಮಾಡಿದ್ದು ಎಂದು ತಿಳಿಯದ ತಾಂಡವ್ ಚಪ್ಪರಿಸಿಕೊಂಡು ಕುಡಿಯುತ್ತಾನೆ. ಇನ್ನೊಂದು ಗ್ಲಾಸ್ ಉಳಿತಲ್ಲ ಯಾರಿಗೆ ಕೊಡುವುದು? ನನಗೆ ರಾತ್ರಿ ಹಾಲು ಕುಡಿದರೆ ಕಷ್ಟ, ನಿಮ್ಮ ಅಪ್ಪನಿಗೆ ಶುಗರ್ ಇದೆ ಎಂದು ಕುಸುಮಾ ಹೇಳುವಾಗ, ನೀನು ಚಿಂತೆ ಮಾಡಬೇಡ, ನಾನೇ ಕುಡಿಯುತ್ತೇನೆ ಎಂದು ತಾಂಡವ್ ಮತ್ತೊಂದು ಗ್ಲಾಸ್ ರೋಸ್ ಮಿಲ್ಕ್ ಕುಡಿಯುತ್ತಾನೆ.
ತಾನು ಕುಡಿದದ್ದು ತನ್ನದೇ ಕರ್ಮದ ಫಲ ಎಂದು ತಾಂಡವ್‌ಗೆ ತಿಳಿಯುವುದಾ? ಗೊತ್ತಾದರೆ ಹೇಗೆ ಪ್ರತಿಕ್ರಿಯಿಸುತ್ತಾನೆ ಅನ್ನೋದನ್ನು ನೋಡಲು ಧಾರಾವಾಹಿ ಪ್ರಿಯರು ಇಂದಿನ ಎಪಿಸೋಡ್‌ಗೆ ಕಾಯುತ್ತಿದ್ದಾರೆ.