Weekend with Ramesh 5: ನಾನು ಬೇಡವೆಂದು ಗರ್ಭದಲ್ಲಿದ್ದಾಗ ಅಮ್ಮ ಬಹಳ ಪರಂಗಿಕಾಯಿ ತಿಂದಿದ್ರಂತೆ; ಹಳೆಯ ದಿನಗಳನ್ನು ನೆನೆದ ಮಂಡ್ಯ ರಮೇಶ್
ಕನ್ನಡ ಸುದ್ದಿ  /  ಮನರಂಜನೆ  /  Weekend With Ramesh 5: ನಾನು ಬೇಡವೆಂದು ಗರ್ಭದಲ್ಲಿದ್ದಾಗ ಅಮ್ಮ ಬಹಳ ಪರಂಗಿಕಾಯಿ ತಿಂದಿದ್ರಂತೆ; ಹಳೆಯ ದಿನಗಳನ್ನು ನೆನೆದ ಮಂಡ್ಯ ರಮೇಶ್

Weekend with Ramesh 5: ನಾನು ಬೇಡವೆಂದು ಗರ್ಭದಲ್ಲಿದ್ದಾಗ ಅಮ್ಮ ಬಹಳ ಪರಂಗಿಕಾಯಿ ತಿಂದಿದ್ರಂತೆ; ಹಳೆಯ ದಿನಗಳನ್ನು ನೆನೆದ ಮಂಡ್ಯ ರಮೇಶ್

ತಮ್ಮ ನಾಟಕ, ಸಿನಿಮಾಗಳ ಮೂಲಕ ಲಕ್ಷಾಂತರ ಕಲಾರಸಿಕರಿಗೆ ಮನರಂಜನೆ ನೀಡುತ್ತಿರುವ ಮಂಡ್ಯ ರಮೇಶ್‌ ತಾಯಿಯ ಗರ್ಭದಲ್ಲಿರುವಾಗ ಅವರ ತಾಯಿ ಮಗು ಬೇಡ ಎಂದು ನಿರ್ಧರಿಸಿದ್ದರಂತೆ ಈ ವಿಚಾರವನ್ನು ಸ್ವತ: ಮಂಡ್ಯ ರಮೇಶ್‌ ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

ಮಂಡ್ಯ ರಮೇಶ್‌
ಮಂಡ್ಯ ರಮೇಶ್‌ (PC: Zee Kannada)

ವೀಕೆಂಡ್‌ ವಿತ್‌ ರಮೇಶ್‌ 5 ನೇ ಸೀಸನ್‌ನ 5ನೇ ಎಪಿಸೋಡ್‌ ಕಳೆದ ಭಾನುವಾರ ಪ್ರಸಾರವಾಗಿದೆ. ಶನಿವಾರ ಸ್ಯಾಂಡಲ್‌ವುಡ್‌ ನಟ ಅವಿನಾಶ್‌ ಹಾಗೂ ಭಾನುವಾರದ ಎಪಿಸೋಡ್‌ನಲ್ಲಿ ಮಂಡ್ಯ ರಮೇಶ್‌ ಭಾಗವಹಿಸಿದ್ದಾರೆ. ಇದುವರೆಗೂ ಈ ಕಾರ್ಯಕ್ರಮದಲ್ಲಿ ಒಟ್ಟು 7 ಅತಿಥಿಗಳು ಭಾಗವಹಿಸಿದ್ದು ಎಲ್ಲಾ ಸಾಧಕರು ತಮ್ಮ ಜೀವನದ ಅನೇಕ ಸ್ವಾರಸ್ಯಕರ ಘಟನೆಗಳನ್ನು ಹಂಚಿಕೊಂಡಿದ್ದಾರೆ.

ಕುಂತೂರು ಸುಬ್ರಹ್ಮಣ್ಯ ರಮೇಶ್‌, ಮಂಡ್ಯ ರಮೇಶ್‌ ಎಂದೇ ಹೆಸರಾಗಿದ್ದಾರೆ. ತಮ್ಮ ವಿಭಿನ್ನ ಪಾತ್ರ ಹಾಗೂ ಹಾಸ್ಯದಿಂದಲೇ ಸಿನಿರಸಿಕರನ್ನು ನಕ್ಕು ನಲಿಸಿದ ಕಲಾವಿದ ಇವರು. ಈ ಬಾರಿ ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದ 7ನೇ ಅತಿಥಿಯಾಗಿ ಮಂಡ್ಯ ರಮೇಶ್‌ ಭಾಗವಹಿಸಿದ್ದರು. ಮಂಡ್ಯ ರಮೇಶ್‌ ಮೂಲತ: ರಂಗಭೂಮಿ ಕಲಾವಿದ. 1995ರಲ್ಲಿ ತೆರೆ ಕಂಡ 'ಜನುಮದ ಜೋಡಿ' ಸಿನಿಮಾದಲ್ಲಿ ಮಂಡ್ಯ ರಮೇಶ್‌ ಶಿವರಾಜ್‌ಕುಮಾರ್‌ ಸ್ನೇಹಿತನಾಗಿ ನಟಿಸುವ ಮೂಲಕ ಚಿತ್ರರಂಗಕ್ಕೆ ಬಂದರು. ಅಲ್ಲಿಂದ ಇದುವರೆಗೂ 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ರಮೇಶ್‌ ನಟಿಸಿದ್ದಾರೆ. ತಮ್ಮ ನಾಟಕ, ಸಿನಿಮಾಗಳ ಮೂಲಕ ಲಕ್ಷಾಂತರ ಕಲಾರಸಿಕರಿಗೆ ಮನರಂಜನೆ ನೀಡುತ್ತಿರುವ ಮಂಡ್ಯ ರಮೇಶ್‌ ತಾಯಿಯ ಗರ್ಭದಲ್ಲಿರುವಾಗ ಅವರ ತಾಯಿ ಮಗು ಬೇಡ ಎಂದು ನಿರ್ಧರಿಸಿದ್ದರಂತೆ ಈ ವಿಚಾರವನ್ನು ಸ್ವತ: ಮಂಡ್ಯ ರಮೇಶ್‌ ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

''ನನ್ನ ತಂದೆ ನನಗೆ ಆಗ್ಗಾಗ್ಗೆ ಈ ವಿಚಾರ ಹೇಳುತ್ತಿದ್ದರು. ನಾನು ಹುಟ್ಟಿದ್ದು ಏಕಾದಶಿ ದಿನ. ಆಷಾಢದ ಒಂದು ದಿನ ಜಿಡಿ ಮಳೆ ಸುರಿಯುತ್ತಿದ್ದಾಗ ಗಂಡು ಮಗು ಹುಟ್ಟಿದೆ ಎಂದು ಮನೆಯಲ್ಲಿದ್ದ ಅಪ್ಪ ಹಾಗೂ ಅಜ್ಜಿಗೆ ಆಸ್ಪತ್ರೆಯಿಂದ ಸುದ್ದಿ ಬರುತ್ತದೆ. ಆಗ ಎಲ್ಲರೂ ಖುಷಿಯಿಂದ ನನ್ನನ್ನು ನೋಡಲು ಬಂದಿದ್ದರಂತೆ. ಆಗ ಆಗಲೇ ಸರ್ಕಾರ ಎರಡೇ ಮಕ್ಕಳು ಸಾಕು ಎಂದು ಜಾಗೃತಿ ಮೂಡಿಸುತ್ತಿತ್ತು. ಹೆತ್ತವರಿಗೆ ಆಗಲೇ ಇಬ್ಬರು ಮಕ್ಕಳಿದ್ದರು. ಆದ್ದರಿಂದ ನಾನು ಗರ್ಭದಲ್ಲಿರುವಾಗ ಈ ಮಗು ಬೇಡ ಎಂದು ಅಮ್ಮ ಬಹಳ ಪರಂಗಿಕಾಯಿ ತಿಂದಿದ್ದರಂತೆ. ಆದರೂ ನಾನು ಈ ಭೂಮಿಗೆ ಬಂದೆ. ನಾನು ಹುಟ್ಟಿದ್ದು ಮಂಡ್ಯದಲ್ಲಿ. ತಂದೆ ಸರ್ಕಾರಿ ಕೆಲಸದಲ್ಲಿದ್ದರೂ ನಮಗೆ ಬಡತನ ಅರಿವಾಗಲಿ ಎಂಬ ಕಾರಣಕ್ಕೆ ನನ್ನನ್ನು ಅಜ್ಜಿ ಮನೆಯಲ್ಲಿ ಬೆಳೆಯಲು ಬಿಟ್ಟರು'' ಎಂದು ಮಂಡ್ಯ ರಮೇಶ್‌ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಮಂಡ್ಯ ರಮೇಶ್‌ ಸುಮಾರು 40 ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ನಿರ್ದೇಶಿಸಿದ ಅನೇಕ ನಾಟಕಗಳು ಸಾವಿರಾರು ಪ್ರದರ್ಶನ ಕಂಡಿವೆ. ಸದ್ಯಕ್ಕೆ ರಮೇಶ್‌ ಕಿರುತೆರೆಯಲ್ಲಿ ಕೂಡಾ ಗುರುತಿಸಿಕೊಂಡಿದ್ದಾರೆ. ನಟನಾ ಸಂಸ್ಥೆಯನ್ನು ಆರಂಭಿಸಿ ಅನೇಕ ಪ್ರತಿಭೆಗಳಿಗೆ ತರಬೇತಿ ನೀಡುತ್ತಾ ಬಂದಿದ್ದಾರೆ. ಇವರ ಪತ್ನಿ ಸರೋಜಾ ಹೆಗ್ಡೆ ಕೂಡಾ ರಂಗಭೂಮಿ ಕಲಾವಿದೆ. ಮಗಳು ದಿಶಾ ರಮೇಶ್‌ ಕೂಡಾ ನಟಿ. ದೇವರ ನಾಡು, ಸಿರಿ ಲಂಬೋದರ ವಿವಾಹ ಸಿನಿಮಾಗಳಲ್ಲಿ ದಿಶಾ ನಟಿಸಿದ್ದಾರೆ.

Whats_app_banner