ಈ ಅನುಭವಗಳು ನಿಮಗಿದ್ದರೆ ಡಾ. ಬ್ರೋ ಜತೆ ನೀವೂ ಕೆಲಸ ಮಾಡಬಹುದು; ‘ಗೋ ಪ್ರವಾಸ’ದಲ್ಲಿ ಖಾಲಿ ಇವೆ ಹುದ್ದೆಗಳು
ಜನ ಸಾಮಾನ್ಯರೂ ವಿದೇಶಿ ಪ್ರವಾಸ ಮಾಡಬೇಕು, ಕಡಿಮೆ ಖರ್ಚಿನಲ್ಲಿಯೇ ದೇಶ ವಿದೇಶ ಸುತ್ತಬೇಕು ಎಂಬ ಉದ್ದೇಶದಿಂದ ಶುರುವಾದ ಕಂಪನಿ ಗೋ ಪ್ರವಾಸ. ಈ ಗೋ ಪ್ರವಾಸ ಸಂಸ್ಥೆಯ ಜತೆಗೆ ಯೂಟ್ಯೂಬರ್ ಡಾ. ಬ್ರೋ ಸಹ ಕೈ ಜೋಡಿಸಿದ್ದಾರೆ. ಈಗ ಇದೇ ಸಂಸ್ಥೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದೆ. ಆಸಕ್ತಿ ಇದ್ದರೆ ನೀವೂ ಅರ್ಜಿ ಸಲ್ಲಿಸಬಹುದು.
Opportunity to work with Dr Bro: ಡಾ. ಬ್ರೋ ಸದ್ಯ ಕರುನಾಡಿನ ಯೂಟ್ಯೂಬ್ ಸೆನ್ಸೆಷನ್. ಚಿಕ್ಕ ವಯಸ್ಸಿನಲ್ಲಿಯೇ 20ಕ್ಕೂ ಅಧಿಕ ದೇಶಗಳನ್ನು ಸುತ್ತಾಡಿ, ಬೆರಳ ತುದಿಯಲ್ಲಿಯೇ ಇಡೀ ಪ್ರಪಂಚ ತೋರಿಸುವ ಕೆಲಸ ಮಾಡುತ್ತಿದ್ದಾರೆ. ದೇಶ ವಿದೇಶಗಳಿಗೆ ತೆರಳಿ ಅಲ್ಲಿನ ಜನ ಜೀವನ, ಆಹಾರ ಪದ್ಧತಿ ಸೇರಿ ವಾಸ್ತವವನ್ನು ತೆರೆದಿಡುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರು ಪೋಸ್ಟ್ ಮಾಡುವ ಪ್ರತಿ ವಿಡಿಯೋಕ್ಕೆ ಕಾಯುವ ದೊಡ್ಡ ವರ್ಗವೇ ಇದೆ. ಇನ್ನು ಅವರನ್ನು ಭೇಟಿ ಮಾಡಬೇಕು ಎಂದೂ ಸಾಕಷ್ಟು ಮಂದಿ ಅವರ ವಿಡಿಯೋಕ್ಕೆ ಕಾಮೆಂಟ್ ಹಾಕುತ್ತಲೇ ಇದ್ದಾರೆ. ಅಂಥ ಅವಕಾಶ ಇದೀಗ ಒದಗಿಬಂದಿದೆ.
ಹೌದು, ಜನ ಸಾಮಾನ್ಯರೂ ವಿದೇಶಿ ಪ್ರವಾಸ ಮಾಡಬೇಕು, ಕಡಿಮೆ ಖರ್ಚಿನಲ್ಲಿಯೇ ದೇಶ ವಿದೇಶ ಸುತ್ತಬೇಕು ಎಂಬ ಉದ್ದೇಶದಿಂದ ಶುರುವಾದ ಕಂಪನಿ ಗೋ ಪ್ರವಾಸ. ಈ ಗೋ ಪ್ರವಾಸ ಸಂಸ್ಥೆಯ ಜತೆಗೆ ಯೂಟ್ಯೂಬರ್ ಡಾ. ಬ್ರೋ ಸಹ ಕೈ ಜೋಡಿಸಿದ್ದಾರೆ. ತಮ್ಮ ವಿಡಿಯೋಗಳಲ್ಲಿಯೂ ಗೋ ಪ್ರವಾಸದ ಮೂಲಕ ದೇಶ ಸುತ್ತಿ ಎಂದೂ ಹೇಳಿಕೊಂಡು ಬರುತ್ತಿದ್ದಾರೆ. ಇದೀಗ ಇದೇ ಗೋ ಪ್ರವಾಸ ಟೀಮ್ ಖಾಲಿ ಇರುವ ಉದ್ದೇಗಳನ್ನು ಭರ್ತಿ ಮಾಡಿಕೊಳ್ಳುತ್ತಿದೆ. ಒಂದು ವೇಳೆ ಆ ಅನುಭವ, ವಿದ್ಯಾರ್ಹತೆ ನಿಮಗಿದ್ದರೆ ಈಗಲೇ ನೀವು ಗಗನ್ ಶ್ರೀನಿವಾಸ್ ಬಳಗವನ್ನು ಸೇರಿಕೊಳ್ಳಬಹುದು.
ಯಾವೆಲ್ಲ ಹುದ್ದೆಗಳು ಖಾಲಿ ಇವೆ?
ಸದ್ಯ ಗೋ ಪ್ರವಾಸದ ಖಾಲಿ ಇರುವ ಹುದ್ದೆಗಳ ಪ್ರಕಟಣೆಯ ಪೋಸ್ಟ್ ಅನ್ನು ಡಾ. ಬ್ರೋ ತಮ್ಮ ಇನ್‌ಸ್ಟಾಗ್ರಾನಲ್ಲಿ ಶೇರ್ ಮಾಡಿದ್ದಾರೆ. ಹಾಲಿಡೇ ಪ್ಯಾಕೇಜ್‌ಗಾಗಿ ಅನುಭವಿ ಅಂತಾರಾಷ್ಟ್ರೀಯ ಆಪರೇಷನ್ ಎಕ್ಸಿಕ್ಯೂಟಿವ್ ಹುದ್ದೆ ಖಾಲಿ ಇದೆ. ಇದರ ಜತೆಗೆ ಹಾಲಿಡೇ ಪ್ಯಾಕೇಜ್‌ಗಾಗಿ ಅನುಭವಿ ದೇಶಿಯ ಆಪರೇಷನ್ ಎಕ್ಸಿಕ್ಯೂಟಿವ್ ಹುದ್ದೆ, ಏಷ್ಯನ್ ದೇಶಗಳಿಗೆ ನುರಿತ ವೀಸಾ ಪರಿಣಿತರನ್ನೂ ಹೈರ್ ಮಾಡಿಕೊಳ್ಳುತ್ತಿದೆ ಗೋ ಪ್ರವಾಸ ಟೀಮ್. ದೇಶಿ, ವಿದೇಶಿ ಮತ್ತು ಆನ್‌ಲೈನ್ ಮತ್ತು ಆಫ್‌ಲೈನ್ ಟಿಕೆಟಿಂಗ್ ಎಕ್ಸ್‌ಪರ್ಟ್ಸ್‌ಗಳನ್ನೂ ನೇಮಕ ಮಾಡಿಕೊಳ್ಳುತ್ತಿದೆ.
- International OPS Executive Holiday Packages (Experience)
- Domestic OPS Executive Holiday Packages (Experience)
- Visa Experts For Asian Countries
- Ticketing : Dom/ Intl/ Online /Offline
ವಿದ್ಯಾರ್ಹತೆ ಏನು, ಅನುಭವ ಹೇಗಿರಬೇಕು?
ಗೋ ಪ್ರವಾಸ ಟೀಮ್ ಸದ್ಯ ನಾಲ್ಕು ಬಗೆಯ ಹುದ್ದೆಗಳಿಗೆ ಕಾಲ್ ಮಾಡಿದೆ. ಆ ಪೈಕಿ ಈ ಎಲ್ಲ ಹುದ್ದೆಗಳಿಗೆ ಕನಿಷ್ಠ ಪಿಯುಸಿ ದ್ವಿತೀಯ ವರ್ಷ ಪೂರೈಸಿರಬೇಕು. ಟೂರಿಸಂ ವಿಷಯದಲ್ಲಿ ಪದವಿ ಪಡೆದವರಿಗೆ ಆದ್ಯತೆ. ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆ ಮಾತನಾಡಲು ಬರಬೇಕು. ಇವಿಷ್ಟರಲ್ಲಿ ನೀವು ಅರ್ಹರಾದರೆ, ಈ ಕೂಡಲೇ ಗೋ ಪ್ರವಾಸ ನೀಡಿರುವ info@gopravasa.com ಗೆ ನಿಮ್ಮ ಸ್ವ ವಿವರ ಇರುವ ಪ್ರತಿಯನ್ನು ಮೇಲ್ ಮಾಡಿ. ಪುಟಾಣಿ ತಂಡವೊಂದು Go Pravasa ಸಂಸ್ಥೆ ಕಟ್ಟಿಕೊಂಡು, ಮುನ್ನಡೆಸುತ್ತಿದೆ. ಈ ತಂಡದ ಜತೆಗೆ ಡಾ. ಬ್ರೋ ನಿಂತಿದ್ದಾರೆ. ಇತ್ತೀಚೆಗೆ ಆಗಸ್ಟ್ 15ರಂದು ವಿಜಯನಗರದಲ್ಲಿ ಇದೇ ಸಂಸ್ಥೆಯ ಆಫೀಸ್ ಶುರುವಾದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದರು ಗಗನ್.
ವಿಯೆಟ್ನಾಂಗೆ ಹೋಗುವ ತಯಾರಿ..
ಇತ್ತೀಚೆಗಷ್ಟೇ ಯೂಟ್ಯೂಬ್‌ನಲ್ಲಿ ಮೊದಲ ಸಲ ಲೈವ್ ಬಂದಿದ್ದ ಡಾ. ಬ್ರೋ, ಒಂದಷ್ಟು ವಿಚಾರಗಳನ್ನು ಹೇಳಿಕೊಂಡಿದ್ದರು. ತಮ್ಮ ಸಂಭಾವನೆಯ ಬಗ್ಗೆಯೂ ಹೇಳಿಕೊಂಡಿದ್ದ ಗಗನ್, ಅದರ ಜತೆಗೆ ಬಿಗ್‌ಬಾಸ್ ಕನ್ನಡ ಸೀಸನ್ 11ಕ್ಕೆ ಹೋಗ್ತಾರೆ ಅನ್ನೋ ಅನುಮಾನಕ್ಕೂ ಉತ್ತರ ನೀಡಿದ್ದರು. "ಮೂರು ತಿಂಗಳು ಒಂದು ಮನೆಯಲ್ಲಿ ಇರುವುದಕ್ಕೆ ಸಿಕ್ಕಾಪಟ್ಟೆ ಕಷ್ಟ ಆಗುತ್ತೆ. ಅದೇ ಮೂರು ತಿಂಗಳಲ್ಲಿ ಐದು ದೇಶ ನೋಡಬಹುದು" ಎನ್ನುವ ಮೂಲಕ ಬಿಗ್‌ಬಾಸ್‌ಗೆ ಹೋಗಲ್ಲ ಎಂದು ನೇರವಾಗಿಯೇ ಹೇಳಿದ್ದರು. ಸದ್ಯ ವಿಯೆಟ್ನಾಂಗೆ ಹೋಗುವ ತಯಾರಿಯಲ್ಲಿದ್ದಾರೆ ಗಗನ್.