Lokayukta Raid: ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ; 11 ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ, ನಗದು, ಆಭರಣದ ಜತೆ ಸಿಕ್ಕಿತು ಹುಲಿ ಉಗುರು
ಕನ್ನಡ ಸುದ್ದಿ  /  ಕರ್ನಾಟಕ  /  Lokayukta Raid: ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ; 11 ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ, ನಗದು, ಆಭರಣದ ಜತೆ ಸಿಕ್ಕಿತು ಹುಲಿ ಉಗುರು

Lokayukta Raid: ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ; 11 ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ, ನಗದು, ಆಭರಣದ ಜತೆ ಸಿಕ್ಕಿತು ಹುಲಿ ಉಗುರು

ಬೆಳ್ಳಂಬೆಳಿಗ್ಗೆ ಕರ್ನಾಟಕದ ನಾನಾ ಕಡೆಗಳಲ್ಲಿ ಭ್ರಷ್ಟರ ಮನೆಗಳಿಗೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಹಣ, ಆಭರಣ, ಆಸ್ತಿ ವಶಪಡಿಸಿಕೊಂಡಿದ್ದಾರೆ.ವರದಿ: ಎಚ್.ಮಾರುತಿ. ಬೆಂಗಳೂರು

ಲೋಕಾಯುಕ್ತ ದಾಳಿ ವೇಳೆ ಹುಲಿ ಉಗುರು ಸಿಕ್ಕಿದೆ.
ಲೋಕಾಯುಕ್ತ ದಾಳಿ ವೇಳೆ ಹುಲಿ ಉಗುರು ಸಿಕ್ಕಿದೆ.

ಬೆಂಗಳೂರು: ಆ ಅಧಿಕಾರಿಗಳೆಲ್ಲಾ ಬೆಳಿಗ್ಗೆ ಎದ್ದು ಕಚೇರಿಗೆ ಹೋಗಬೇಕು ಎನ್ನುವ ಮೂಡ್‌ನಲ್ಲಿದ್ದರು.ಕೆಲವರು ಬೆಳಗಿನ ವಾಕಿಂಗ್‌ಗೆ ಹೋಗಲು ಅಣಿಯಾಗುತ್ತಿದ್ದರು. ಈ ವೇಳೆ ಮನೆಗಳಿಗೆ ಲೋಕಾಯುಕ್ತ ಪೊಲೀಸ್‌ ಅಧಿಕಾರಿಗಳ ದಂಡು ದಾಳಿ ಇಟ್ಟಿತ್ತು. ಅಕ್ರಮವಾಗಿ ಹಣ ಹಾಗೂ ಆಸ್ತಿ ಸಂಪಾದನೆಯ ದೂರಿನ ಮೇರೆಗೆ ಲೋಕಾಯುಕ್ತ ಅಧಿಕಾರಿಗಳ ತಂಡವು ಸೇವೆಯಲ್ಲಿರುವವರು ಹಾಗ ನಿವೃತ್ತ ಅಧಿಕಾರಿಗಳ ನಿವಾಸಗಳ ಮೇಲೆ ದಾಳಿ ಮಾಡಿದರು. ದಿನವಿಡೀತಪಾಸಣೆ ನಡೆಸಿ ನಗ, ನಗದು ಹಾಗೂ ಹಲವಾರು ದುಬಾರಿ ವಸ್ತುಗಳನ್ನು ವಶಪಡಿಸಿಕೊಂಡರು. ಒಂದು ಕಡೆ ಹುಲಿ ಉಗುರು ಕೂಡ ಪತ್ತೆಯಾಗಿದೆ.

ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದಿಸಿರುವ ಆರೋಪದ ಮೇಲೆ ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ತಹಶೀಲ್ದಾರ್, ಇಂಜಿನಿಯರ್ ಸೇರಿದಂತೆ 11 ಅಧಿಕಾರಿಗಳ ನಿವಾಸಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಇವರಲ್ಲಿ ಇಬ್ಬರು ನಿವೃತ್ತ ಎಂಜಿನಿಯರ್‌ಗಳೂ ಸೇರಿದ್ದಾರೆ. ಈ 11 ಅಧಿಕಾರಿಗಳಿಗೆ ಸಂಬಂಧಿಸಿದ 56 ಸ್ಥಳಗಳ ಮೇಲೆ ಗುರುವಾರ ಬೆಳಗಿನ ಜಾವ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ತಪಾಸಣೆ ನಡೆಸುತ್ತಿದ್ದಾರೆ.

ಬೆಂಗಳೂರು, ದಾವಣಗೆರೆ, ಚಿತ್ರದುರ್ಗ, ಮಂಡ್ಯ, ಕಲಬುರ್ಗಿ, ಕೋಲಾರ, ಮೈಸೂರು, ಹಾಸನ ಮತ್ತು ಬೆಳಗಾವಿ ಸೇರಿದಂತೆ ಒಂಬತ್ತು ಜಿಲ್ಲೆಗಳಲ್ಲಿ ದಾಳಿ ನಡೆದಿದ್ದು, ಲೋಕಾಯುಕ್ತದ ಪೊಲೀಸ್ ವಿಭಾಗದ ಹಿರಿಯ ಅಧಿಕಾರಿಗಳೂ ಸೇರಿದಂತೆ 100ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

ಬಿಬಿಎಂಪಿ ಕೆಂಗೇರಿ ವಲಯದ ಕಂದಾಯ ಅಧಿಕಾರಿ ಬಸವರಾಜ ಮಾಗಿ, ಕೋಲಾರದ ತಹಶೀಲ್ದಾರ್ ವಿಜಯಣ್ಣ, ಸಣ್ಣ ನೀರಾವರಿ ಇಲಾಖೆಯ ನಿವೃತ್ತ ಮುಖ್ಯ ಎಂಜಿನಿಯರ್ ಎಂ.ರವೀಂದ್ರ, ಲೋಕೋಪಯೋಗಿ ಇಲಾಖೆಯ ಸೂಪರಿಂಟೆಂಡಿಂಗ್ ಎಂಜಿನಿಯರ್

ಕೆ.ಜಿ. ಜಗದೀಶ್, ಧಾರವಾಡ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶೇಖರ್ ಗೌಡ, ಜಲ ಸಂಪನ್ಮೂಲ ಇಲಾಖೆಯ ಮೈಸೂರು ಸೂಪರಿಂಟೆಂಡಿಂಗ್ ಎಂಜಿನಿಯರ್ ಮಹೇಶ್ ಕೆ, ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆಯ ನಿವೃತ್ತ ಕಾರ್ಯನಿರ್ವಾಹಕ ಎಂಜಿನಿಯರ್ ಶಿವರಾಜು ಎಸ್, ದಾವಣಗೆರೆಯ ಕಾರ್ಯನಿರ್ವಾಹಕ ಎಂಜಿನಿಯರ್ ಡಿ.ಎಚ್. ಉಮೇಶ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಂ,ಎಸ್, ಪ್ರಭಾಕರ್, ಬೆಳಗಾವಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಹದೇವ್ ಬೆನ್ನೂರು, ಹಾಸನದ ಗ್ರಾಮ ಪಂಚಾಯಿತಿಯೊಂದರ ಗ್ರೇಡ್ 1 ಕಾರ್ಯದರ್ಶಿ ಎನ್.ಎಂ. ಜಗದೀಶ್ ಅವರುಗಳಿಗೆ ಸಂಬಂಧಿಸಿದ ಮನೆ, ಕಚೇರಿ ಮತ್ತು ಅವರಿಗೆ ಸಂಬಂಧಿಸಿದವರ ಮನೆಗಳು ಇತರ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. ಮಧ್ಯಾಹ್ನವಾದರೂ ಎಲ್ಲೆಡೆ ದಾಳಿ ಮುಂದುವರೆದಿತ್ತು. ಮನೆಯಲ್ಲಿರುವ ಲಾಕರ್‌ ಹಾಗೂ ಬ್ಯಾಂಕ್‌ ವಿವರ, ಆಸ್ತಿಯ ಮಾಹಿತಿಗಳನ್ನು ಅಧಿಕಾರಿಗಳ ತಂಡ ಸಂಗ್ರಹಿಸಿತು.

ಕಲಬುರಗಿಯಲ್ಲಿರುವ ಬಿಬಿಎಂಪಿ ಎಂಜಿನಿಯರ್‌ ಬಸವರಾಜ ಮಾಗಿ ಎಂಬುವವರ ಮನೆಯಲ್ಲಿ ತಪಾಸಣೆ ಮಾಡುವಾಗ ಹುಲಿ ಉಗುರು ಸೂಟ್‌ಕೇಸ್‌ನಲ್ಲಿ ಇರುವುದು ಕಂಡು ಬಂದಿತು. ಇದನ್ನು ಕಂಡು ಆಶ್ಚರ್ಯ ಚಕಿತರಾದ ಲೋಕಾಯುಕ್ತ ಅಧಿಕಾರಿಗಳು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಇದರ ವಿವರ ಸಂಗ್ರಹಿಸಿದರು. ಇದಲ್ಲದೇ ಅವರದ್ದೇ ಮನೆಯಲ್ಲಿ ಕ್ಯಾಸಿನೋ ಕಾಯಿನ್‌ಗಳು ಕೂಡ ಸಿಕ್ಕಿವೆ. ಇವುಗಳ ಕುರಿತು ಸಂಜೆ ಹೊತ್ತಿಗೆ ಅಧಿಕೃತವಾಗಿಯೇ ಲೋಕಾಯುಕ್ತ ಎಡಿಜಿಪಿ ಪ್ರಶಾಂತ್‌ ಕುಮಾರ್‌ ಠಾಕೂರ್‌ ಅವರು ಮಾಹಿತಿ ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಈ ಅಧಿಕಾರಿಗಳ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಡಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿಯಲ್ಲಿಈಗಾಗಲೇ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಈಗ ನ್ಯಾಯಾಲಯದಿಂದ ಶೋಧನಾ ವಾರಂಟ್ ಪಡೆದು ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಲೋಕಾಯುಕ್ತದ ಪೊಲೀಸ್ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ವರದಿ: ಎಚ್. ಮಾರುತಿ, ಬೆಂಗಳೂರು

Whats_app_banner