ಬೆಂಗಳೂರು ಅಪರಾಧ ಸುದ್ದಿ: ಶಂಕಿತ ನಕ್ಸಲೈಟ್ ಬಂಧನ, ವಿಮಾನದಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಜೈಲು ಶಿಕ್ಷೆ
ಶಂಕಿತ ನಕ್ಸಲೈಟ್ ಒಬ್ಬನನ್ನು ಬೆಂಗಳೂರು ಮೆಜೆಸ್ಟಿಕ್ ಸಮೀಪದ ಉಪ್ಪಾರಪೇಟೆ ಬಳಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅತ್ತ, ವಿಮಾನದಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಕೋರ್ಟ್ ಶಿಕ್ಷೆ ಪ್ರಕಟಿಸಿದೆ. ಬೆಂಗಳೂರು ಅಪರಾಧ ಸುದ್ದಿಗಳ ವಿವಿರ ಇಲ್ಲಿದೆ. (ಎಚ್.ಮಾರುತಿ)
ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಶಂಕಿತ ನಕ್ಸಲೈಟ್ ಒಬ್ಬನನ್ನು ಬಂಧಿಸಿದ್ದಾರೆ. ಈತನನ್ನು ಅನಿರುದ್ದ ಎಂದು ಗುರುತಿಸಲಾಗಿದೆ. 35 ವರ್ಷದ ಈತ ಚೆನ್ನೈ ಮೂಲದ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿದ್ದ ಈತನನ್ನು ಮೆಜೆಸ್ಟಿಕ್ ಸಮೀಪವೇ ಇರುವ ಉಪ್ಪಾರಪೇಟೆ ಬಳಿ ಬಂಧಿಸಲಾಗಿದೆ. ಬಲ್ಲ ಮೂಲಗಳ ಪ್ರಕಾರ ಈತ ಸ್ನೇಹಿತರೊಬ್ಬರನ್ನು ಭೇಟಿ ಮಾಡಲು ಬೆಂಗಳೂರಿಗೆ ಆಗಮಿಸಿದ್ದ ಎಂದು ತಿಳಿದು ಬಂದಿದೆ.
ಲಭ್ಯವಾದ ಖಚಿತ ಮಾಹಿತಿ ಮೇರೆಗೆ ಭಯೋತ್ಪಾದನಾ ನಿಗ್ರಹ ದಳದ ತನಿಖಾಧಿಕಾರಿಗಳು ಈತನನ್ನು ಬಂಧಿಸಿದ್ದಾರೆ. ಆರಂಭದಲ್ಲಿ ಈತ ಹೆಚ್ಚಿನ ಮಾಹಿತಿಯನ್ನೇನೂ ನೀಡಲಿಲ್ಲ. ತೀವ್ರ ತನಿಖೆಗೊಳಪಡಿಸಿದ ನಂತರ ಈತ ತಾನು ನಿಷೇಧಿತ ಸಿಪಿಐ (ಮಾವೋವಾದಿ) ಸದಸ್ಯ ಎಂದು ಬಾಯಿ ಬಿಟ್ಟಿದ್ದಾನೆ. ಹಲವಾರು ಮಹತ್ವದ ದಾಖಲೆಗಳ ಜೊತೆಗೆ ಈತನ ಬಳಿ ವಿಕಾಸ್ ಘಾಟ್ಗೆ
ಹೆಸರಿನ ಆಧಾರ್ ಕಾರ್ಡ್ ದೊರೆತಿದೆ. ಭಾರತೀಯ ನ್ಯಾಯ ಸಂಹಿತೆ ಕಾಯಿದೆ ಅಡಿಯಲ್ಲಿ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಶಿಕ್ಷೆ
ವಿಮಾನದಲ್ಲಿ ಪ್ರಯಾಣಿಸುವಾಗ ಪಕ್ಕದಲ್ಲಿ ಕುಳಿತಿದ್ದ 14 ವರ್ಷದ ಬಾಲಕಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬೆಂಗಳೂರಿನ ವಿಶೇಷ ನ್ಯಾಯಾಲಯ ಆರೋಪಿಗೆ 3 ವರ್ಷ ಜೈಲು ಮತ್ತು 10 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ. ದೋಹಾದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ 51 ವರ್ಷದ ಮುರುಗೇಶನ್ ಶಿಕ್ಷೆಗೊಳಗಾದ ಆರೋಪಿ. ನ್ಯಾಯಾಧೀಶೆ ಕೆಎನ್ ಸರಸ್ವತಿ ಈ ತೀರ್ಪು ನೀಡಿದ್ದಾರೆ.
2023ರ ಜೂನ್ 27ರಂದು ಬಾಲಕಿಯ ತಂದೆ ಕೆಂಪೇಗೌಡ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಬೆಂಗಳೂರಿನಿಂದ ದೋಹಾದಿಂದ ಬೆಂಗಳೂರಿಗೆ ಆಗಮಿಸುತ್ತಿರುವ ವಿಮಾನದಲ್ಲಿ ತಮ್ಮ ಪುತ್ರಿಯ ಪಕ್ಕ ಕುಳಿತಿದ್ದ ಆರೋಪಿ ಮುರುಗೇಶನ್ ಅಸಭ್ಯವಾಗಿ ಮುಟ್ಟಿದ್ದಾರೆ. ಅಲ್ಲದೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರು ನೀಡಿದ್ದರು. ಆರೋಪಿಯ ವಿರುದ್ಧ ಫೋಕ್ಸೋ ಅಡಿಯಲ್ಲಿ ದೂರು ದಾಖಲಿಸಲಾಗಿತ್ತು.
ಪಬ್ಲಿಕ್ ಪ್ರಾಸಿಕ್ಯೂಟರ್ ಎ ಚಂದ್ರಕಲಾ ಅವರು ಬಾಲಕಿ ಪರವಾಗಿ ವಾದ ಮಂಡಿಸಿದ್ದರು. ಆರೋಪಿ ಮುರುಗೇಶನ್ ಮದ್ಯ ಸೇವಿಸಿದ್ದರು. ತಿನಿಸು ನೀಡುವ ನೆಪದಲ್ಲಿ ಬಾಲಕಿಯಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು. ಬಾಲಕಿಯ ತಾಯಿ ಮುರುಗೇಶನ್ ವರ್ತನೆಯನ್ನು ಖಂಡಿಸಿದ್ದರು. ತಾನು ಕೊಟ್ಟ ಆಹಾರವನ್ನು ಸೇವಿಸುವಂತೆ ಆತ ಬಲವಂತಪಡಿಸಿದ್ದ. ನಂತರ ಈ ವಿಷಯವನ್ನು ವಿಮಾನದ ಸಿಬ್ಬಂದಿಯ ಗಮನಕ್ಕೆ ತರಲಾಗಿತ್ತು. ಸಿಬ್ಬಂದಿಯು ಆತನ ಆಸನವನ್ನು ಬದಲಾಯಿಸಿದ್ದರು. ಬೆಂಗಳೂರಿನಲ್ಲಿ ವಿಮಾನ ಇಳಿಯುತ್ತಿದ್ದಂತೆ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿತ್ತು.
ಬಾಲಕಿ ಮತ್ತು ಆಕೆಯ ಪೋಷಕರು ಒಂದು ತಿಂಗಳ ಮಟ್ಟಿಗೆ ಭಾರತಕ್ಕೆ ಆಗಮಿಸಿದ್ದರು. ನಂತರ ತಾವು ವಾಸಿಸುತ್ತಿದ್ದ ದೇಶಕ್ಕೆ ಮರಳಿದ್ದರು. ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗುತ್ತಿದ್ದರು. ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಎರಡು ತಿಂಗಳು ಸೆರೆವಾಸ ಅನುಭವಿಸಿದ್ದ ಆರೋಪಿ ನಂತರ ಜಾಮಿನು ಮೇಲೆ ಬಿಡುಗಡೆಯಾಗಿದ್ದ.