ವೈದ್ಯ ಲೋಕ ವಿಸ್ಮಯ, ಆರು ತಿಂಗಳಿಗೇ ಹುಟ್ಟಿದ ಅವಳಿ ಮಕ್ಕಳು, 500 ಗ್ರಾಂ ತೂಕದ ಶಿಶುಗಳ ಪ್ರಾಣ ಉಳಿಸಿದ ಬೆಂಗಳೂರು ವೈದ್ಯರ ತಂಡ
ಕನ್ನಡ ಸುದ್ದಿ  /  ಕರ್ನಾಟಕ  /  ವೈದ್ಯ ಲೋಕ ವಿಸ್ಮಯ, ಆರು ತಿಂಗಳಿಗೇ ಹುಟ್ಟಿದ ಅವಳಿ ಮಕ್ಕಳು, 500 ಗ್ರಾಂ ತೂಕದ ಶಿಶುಗಳ ಪ್ರಾಣ ಉಳಿಸಿದ ಬೆಂಗಳೂರು ವೈದ್ಯರ ತಂಡ

ವೈದ್ಯ ಲೋಕ ವಿಸ್ಮಯ, ಆರು ತಿಂಗಳಿಗೇ ಹುಟ್ಟಿದ ಅವಳಿ ಮಕ್ಕಳು, 500 ಗ್ರಾಂ ತೂಕದ ಶಿಶುಗಳ ಪ್ರಾಣ ಉಳಿಸಿದ ಬೆಂಗಳೂರು ವೈದ್ಯರ ತಂಡ

ವೈದ್ಯ ಲೋಕ ವಿಸ್ಮಯ: ಆರು ತಿಂಗಳಿಗೇ ಹುಟ್ಟಿದ ಅವಳಿ ಮಕ್ಕಳು ಸುರಕ್ಷಿತ. ನಾಲ್ಕು ತಿಂಗಳು ಅತೀವ ವೈದ್ಯಕೀಯ ರಕ್ಷಣೆಯಲ್ಲಿದ್ದ ಮಕ್ಕಳ ಪ್ರಾಣ ಉಳಿದಿದೆ. 500 ಗ್ರಾಂ ತೂಕದ ಶಿಶುಗಳ ಪ್ರಾಣ ಉಳಿಸಿದ ಬೆಂಗಳೂರು ವೈದ್ಯರ ತಂಡ ಎಂದು ವರದಿ ಹೇಳಿದೆ. ಈ ವಿರಳ ಘಟನೆಯ ವಿವರ ಇಲ್ಲಿದೆ.

ವೈದ್ಯ ಲೋಕದ ವಿಸ್ಮಯ: ಆರು ತಿಂಗಳಿಗೇ ಹುಟ್ಟಿದ ಅವಳಿ ಮಕ್ಕಳು ಸುರಕ್ಷಿತ. 500 ಗ್ರಾಂ ತೂಕದ ಶಿಶುಗಳ ಪ್ರಾಣ ಉಳಿಸಿದ ಬೆಂಗಳೂರು ವೈದ್ಯರ ತಂಡದ ಕೆಲಸ ಈಗ ಪ್ರಶಂಸೆಗೆ ಒಳಗಾಗಿದೆ. (ಸಾಂಕೇತಿಕ ಚಿತ್ರ)
ವೈದ್ಯ ಲೋಕದ ವಿಸ್ಮಯ: ಆರು ತಿಂಗಳಿಗೇ ಹುಟ್ಟಿದ ಅವಳಿ ಮಕ್ಕಳು ಸುರಕ್ಷಿತ. 500 ಗ್ರಾಂ ತೂಕದ ಶಿಶುಗಳ ಪ್ರಾಣ ಉಳಿಸಿದ ಬೆಂಗಳೂರು ವೈದ್ಯರ ತಂಡದ ಕೆಲಸ ಈಗ ಪ್ರಶಂಸೆಗೆ ಒಳಗಾಗಿದೆ. (ಸಾಂಕೇತಿಕ ಚಿತ್ರ) (HT News/ SHUTTERSTOCK)

ಬೆಂಗಳೂರು: ವೈದ್ಯಕೀಯ ಕ್ಷೇತ್ರದಲ್ಲಿ ವಿಸ್ಮಯಗಳಿಗೆ ಕೊರತೆ ಇಲ್ಲ. ಅಂತಹ ವೈದ್ಯ ಲೋಕ ವಿಸ್ಮಯದ ಒಂದು ಘಟನೆ ಇದು ಅವಧಿ ಪೂರ್ವ ಪ್ರಸವದಲ್ಲಿ 500 ಗ್ರಾಂ ತೂಕದ ಅವಳಿ ಶಿಶು ಜನನವಾಗಿದ್ದು, ಆ ಶಿಶುಗಳ ಪ್ರಾಣವನ್ನು ಬೆಂಗಳೂರು ವೈದ್ಯರ ತಂಡ ಕಾಪಾಡಿದೆ. ಇದು ವಿರಳ ಘಟನೆಯಾಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ವ್ಯಾಪಕ ಚರ್ಚೆಗೆ ಒಳಗಾಗಿದೆ. ಬೆಂಗಳೂರಿನ ಆಸ್ಪತ್ರೆಯ ವೈದ್ಯರು ಕೇವಲ 23 ವಾರಗಳ (6 ತಿಂಗಳು) ಕಾಲ ಗರ್ಭದಲ್ಲಿದ್ದು ಅಕಾಲಿಕವಾಗಿ ಜನಿಸಿದ ಅವಳಿ ಶಿಶುಗಳ ಪ್ರಾಣವನ್ನು ರಕ್ಷಿಸಿದ್ದಾರೆ. ಅವಳಿ ಶಿಶುಗಳ ತೂಕ ತಲಾ 500 ಗ್ರಾಂ ಇತ್ತು ಎಂದು ಎಎನ್‌ಐ ವರದಿ ಮಾಡಿದೆ.

ವೈದ್ಯ ಲೋಕದ ವಿಸ್ಮಯ; ಬದುಕಿ ಉಳಿದಿವೆ ಆರು ತಿಂಗಳಿಗೆ ಹುಟ್ಟಿದ ಅವಳಿ ಮಕ್ಕಳು

ತುಮಕೂರು ಮೂಲದ ಕೃಷಿ ಕುಟುಂಬದ ಹಿನ್ನೆಲೆಯ ದಂಪತಿ ಫಲವತ್ತತೆ ಚಿಕಿತ್ಸೆ ಪಡೆದು ಬಹುಕಾಲದ ಬಳಿಕ ಮಕ್ಕಳಾಗುತ್ತಿರುವ ಸಂತೋಷದಲ್ಲಿದ್ದರು. ಅವಳಿ ಮಕ್ಕಳಾಗುವ ಖುಷಿ ಅವರಲ್ಲಿತ್ತು. ಆದರೆ ತಾಯಿಯ ಗರ್ಭಕಂಠ ಕಿರಿದಾಗುತ್ತಿರುವುದನ್ನು ವೈದ್ಯರು ಗಮನಿಸಿದರು. ಹೀಗಾಗಿ ಸಮಸ್ಯೆಗಳಾದವು. ಆರು ತಿಂಗಳಿಗೇ ಅಕಾಲಿಕ ಹೆರಿಗೆ ಮಾಡಿಸುವಂತಾಯಿತು. 17 ವಾರಕ್ಕೆ ಮುಂಚಿತವಾಗಿಯೇ ಹೆರಿಗೆ ಮಾಡಿಸಿದರು. ಅವಳಿ ಮಕ್ಕಳ ಜನನವಾಯಿತು. ಒಂದು ಮಗು 550 ಗ್ರಾಂ ಮತ್ತೊಂದು ಮಗು 540 ಗ್ರಾಂ ತೂಕ ಇತ್ತು. ಇದು 0.3 ಶೇಕಡ ವಿರಳ ಸಂಭವಿಸುವ ಘಟನೆ ಎಂದು ವರದಿ ಹೇಳಿದೆ.

ಶಿಶುಗಳನ್ನು ತತ್‌ಕ್ಷಣವೇ ವೈಟ್‌ಫೀಲ್ಡ್‌ನ ಆಸ್ಟರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕಕ್ಕೆ (ಎನ್‌ಐಸಿಯು) ದಾಖಲಿಸಲಾಯಿತು. ಅಲ್ಲಿ ಅವಳಿ ಮಕ್ಕಳು ವಿಶೇಷ ವೈದ್ಯಕೀಯ ಆರೈಕೆಯಲ್ಲಿ ಸುಮಾರು ನಾಲ್ಕು ತಿಂಗಳ ಕಾಲ ಇದ್ದರು. ಇತ್ತೀಚಿನ ಮಾಹಿತಿಯ ಪ್ರಕಾರ, 23 ವಾರಗಳಲ್ಲಿ ಜನಿಸಿದ ಒಂಟಿ ಶಿಶುಗಳ ಬದುಕುಳಿಯುವಿಕೆಯ ಪ್ರಮಾಣವು ಪ್ರಪಂಚದಾದ್ಯಂತ ಸುಮಾರು 23.4 ಪ್ರತಿಶತದಷ್ಟಿದ್ದರೆ, ಈ ವಯಸ್ಸಿನಲ್ಲಿ ಅವಳಿ ಮಕ್ಕಳು ಬದುಕುಳಿಯುವ ಪ್ರಕರಣಗಳು ಭಾರತದಲ್ಲಿ ಕಂಡು ಬಂದ ಉದಾಹರಣೆ ಇಲ್ಲ ಎಂದು ವರದಿ ವಿವರಿಸಿದೆ.

ವೈಟ್‌ಫೀಲ್ಡ್‌ನಲ್ಲಿ ಸುಧಾರಿತ ಶಿಶು ಕ್ಷೇಮ ಸೌಲಭ್ಯ

ಅಭಿವೃದ್ಧಿಯಾಗದ ಅಂಗಗಳು ಮತ್ತು ಪ್ರತಿರಕ್ಷಣಾ ವ್ಯವಸ್ಥೆಗಳೊಂದಿಗೆ ಜನಿಸಿದ ಅವಳಿಗಳಿಗೆ ಉಸಿರಾಟದ ತೊಂದರೆ ಸಿಂಡ್ರೋಮ್, ಇಂಟ್ರಾವೆಂಟ್ರಿಕ್ಯುಲರ್ ಹೆಮರೇಜ್ ಮತ್ತು ಸೋಂಕುಗಳು ಸೇರಿದಂತೆ ತೊಡಕುಗಳಿಗೆ ಹೆಚ್ಚಿನ ಅಪಾಯ ಇದೆ. ಆದರೂ, ವೈಟ್‌ಫೀಲ್ಡ್‌ನ ಆಸ್ಟರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕ (ಎನ್‌ಐಸಿಯು)ದಲ್ಲಿ ನಾಲ್ಕು ತಿಂಗಳ ಆರೈಕೆಯಲ್ಲಿ ಅವಳಿ ಮಕ್ಕಳ ಬೆಳವಣಿಗೆ ದಾಖಲಾಗಿದೆ. ಡಾ. ಶ್ರೀನಿವಾಸ ಮೂರ್ತಿ ಸಿಎಲ್‌ (ಪೀಡಿಯಾಟ್ರಿಕ್ಸ್), ಡಾ. ಲತೀಶ್ ಕುಮಾರ್ ಕೆ (ನಿಯೋನಟೋಲಜಿ), ಡಾ. ಸಂಧ್ಯಾ ರಾಣಿ (ಒಬ್‌ಸ್ಟೆಟ್ರಿಕ್ಸ್‌ & ಗೈನಕಾಲಜಿ) ಅವರಿದ್ದ ವೈದ್ಯರ ತಂಡ ಈ ಮಕ್ಕಳ ಆರೈಕೆ ಮಾಡಿದೆ.

"ಭಾರತದಲ್ಲಿ ಇಂತಹ ಪ್ರಕರಣ ಇದುವೆರೆಗೆ ದಾಖಲಾಗಿಲ್ಲ. ಪ್ರತಿ 1,000 ಹೆರಿಗೆಗಳಲ್ಲಿ ಕೇವಲ 2.5 ಮಾತ್ರ 23 ನೇ ವಾರದಲ್ಲಿ ಸಂಭವಿಸುತ್ತವೆ ಎಂದು ಡೇಟಾ ತೋರಿಸುತ್ತದೆ ಮತ್ತು ಈ ಶಿಶುಗಳಲ್ಲಿ 50 ಪ್ರತಿಶತಕ್ಕಿಂತಲೂ ಹೆಚ್ಚು ಶಿಶುಗಳು 72 ಗಂಟೆಗಳ ನಂತರ ಬದುಕುವುದಿಲ್ಲ. ಆದರೆ ಸುಧಾರಿತ ವೆಂಟಿಲೇಟರ್‌ಗಳು, ಇನ್‌ಕ್ಯುಬೇಟರ್‌ಗಳು ಮತ್ತು ಕಾರ್ಡಿಯಾಕ್ ಮಾನಿಟರ್‌ಗಳೊಂದಿಗೆ, ನಾವು ನಿರ್ಣಾಯಕ ಆರೈಕೆಯನ್ನು ಒದಗಿಸಲು ಮತ್ತು ಎರಡೂ ಶಿಶುಗಳು ಬದುಕುಳಿದಿರುವುದನ್ನು ಖಚಿತಪಡಿಸಿಕೊಳ್ಳಲು ನಾವು ಕೆಲಸ ನಿರ್ವಹಿಸುತ್ತಿದ್ದೇವೆ" ಎಂದು ಡಾ. ಶ್ರೀನಿವಾಸ ಮೂರ್ತಿ ಸಿ ಎಲ್ ಪಿಟಿಐಗೆ ತಿಳಿಸಿದರು.

ಪ್ರತಿ ಹಂತದಲ್ಲೂ ಪಾಲಕರಿಗೆ ಮಾಹಿತಿ ಒದಗಿಸಲಾಗಿತ್ತು. ಹಣಕಾಸು ಸಂಕಷ್ಟ ಇದ್ದ ಕಾರಣ ಕುಟುಂಬಕ್ಕೆ ರೋಟರಿ ಕ್ಲಬ್, ಕ್ರೌಡ್ ಫಂಡಿಂಗ್‌ ಮತ್ತು ಕೆಲವು ಡಾಕ್ಟರ್‌ಗಳು ವೈಯಕ್ತಿಕವಾಗಿ ಧನ ಸಹಾಯ ಮಾಡಿದ್ದಾರೆ. ಎನ್‌ಐಸಿಯು ವೆಚ್ಚ ಭರಿಸುವುದಕ್ಕೆ 5 ಲಕ್ಷ ರೂಪಾಯಿ ಸಂಗ್ರಹವಾಗಿದೆ ಎಂದು ವರದಿ ವಿವರಿಸಿದೆ.

Whats_app_banner