ನೀವಿನ್ನೂ ಆಸ್ತಿ ತೆರಿಗೆ ಪಾವತಿಸಿಲ್ವೇ; ಟ್ಯಾಕ್ಸ್ ಕಟ್ಟದಿದ್ರೆ ನಿಮ್ಮ ಮನೆ-ಅಂಗಡಿ ಜಪ್ತಿಯಾದೀತು ಎಚ್ಚರ
ಬೆಂಗಳೂರಿನ ನಿವಾಸಿಯಾಗಿದ್ದುಕೊಂಡು ನೀವೇನಾದರೂ ಇನ್ನೂ ಆಸ್ತಿ ತೆರಿಗೆ ಪಾವತಿಸಿಲ್ಲದಿದ್ದರೆ, ಬೇಗನೆ ಪಾವತಿಸಿ. ಇಲ್ಲವಾದಲ್ಲಿ ಬಿಬಿಎಂಪಿ ನಿಮ್ಮ ಮನೆ ಅಥವಾ ಅಂಗಡಿಯನ್ನು ಜಪ್ತಿ ಮಾಡಬಹುದು. ಇಲ್ಲವೇ ಬೀಗಮುದ್ರೆ ಹಾಕಬಹುದು. ಏಕೆಂದರೆ ಈಗಾಗಲೇ 46 ಸಾವಿರ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ. (ವರದಿ: ಎಚ್.ಮಾರುತಿ)
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (BBMP) ತೆರಿಗೆ ಸಂಗ್ರಹ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ವಾಸದ ಮನೆಯಿರಲಿ ಅಥವಾ ವಾಣಿಜ್ಯ ಮಳಿಗೆ ಇರಲಿ. ಮಾಲೀಕರು ಅಷ್ಟು ಸುಲಭವಾಗಿ ತೆರಿಗೆ ಕಟ್ಟಲು ಒಪ್ಪುವುದಿಲ್ಲ. ಹೀಗಾಗಿ ಬಿಬಿಎಂಪಿ ತೆರಿಗೆ ಪಾವತಿಸದ ಆಸ್ತಿಗಳನ್ನು ಜಪ್ತಿ ಮಾಡಲು ಮುಂದಾಗಿದೆ. ಸೆಪ್ಟಂಬರ್ 1ರವರೆಗೆ 49,482 ವಾಸದ ಮನೆಗಳು ಮತ್ತು 4,586 ವಸತಿಯೇತರ ಆಸ್ತಿಗಳನ್ನು ಜಪ್ತಿ ಮಾಡಿದೆ. ಬಿಬಿಎಂಪಿ ಮಾಹಿತಿಗಳ ಪ್ರಕಾರ, 2.6 ಲಕ್ಷ ಆಸ್ತಿಗಳ ತೆರಿಗೆ ಇನ್ನೂ ಬಾಕಿ ಇದ್ದು ಇದರ ಮೌಲ್ಯ 474 ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿದೆ.
ಈ ಆರ್ಥಿಕ ವರ್ಷದಲ್ಲಿ ಸೆಪ್ಟಂಬರ್ 1ರವರೆಗೆ 1.3 ಲಕ್ಷ ಆಸ್ತಿಗಳಿಂದ 273 ಕೋಟಿ ರೂ. ತೆರಿಗೆ ಸಂಗ್ರಹಿಸಿದೆ. ಆಗಸ್ಟ್ ಕೊನೆಯ ವಾರವೊಂದರಲ್ಲೇ ತೆರಿಗೆ ಪಾವತಿಸಿರದ 28,862 ಆಸ್ತಿಗಳಿಂದ 27 ಕೋಟಿ ರೂಪಾಯಿ ಆಸ್ತಿ ವಸೂಲಿ ಮಾಡಿದೆ. ತೆರಿಗೆ ಪಾವತಿ ಮಾಡುತ್ತಿದ್ದಂತೆ ಆಸ್ತಿ ಜಪ್ತಿಯನ್ನು ತೆರವು ಮಾಡಲಾಗುತ್ತದೆ. ಇಲ್ಲವೇ ಬೀಗಮುದ್ರೆ ಮಾಡಿದ್ದರೆ ಅದನ್ನೂ ತೆಗೆಯಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಬಿಬಿಎಂಪಿ ಕಾಯಿದೆ- 2020ರ ಪ್ರಕಾರ ತೆರಿಗೆ ಪಾವತಿ ಮಾಡದವರ ಆಸ್ತಿ ಜಪ್ತಿಗೆ ಮತ್ತು ಬೀಗಮುದ್ರೆಗೆ ಬಿಬಿಎಂಪಿಗೆ ಅಧಿಕಾರ ದತ್ತವಾಗಿದೆ. ತೆರಿಗೆ ವಸೂಲಿ ಮಾಡಲು ಬಿಬಿಎಂಪಿಗೆ ಹೆಚ್ಚಿನ ಕಾನೂನು ಅಧಿಕಾರ ನೀಡುವ ನಿಟ್ಟಿನಲ್ಲಿ ಆಸ್ತಿ ತೆರಿಗೆ ಲೆಕ್ಕಾಚಾರ, ವಸೂಲಿ ಮತ್ತು ನಿರ್ವಹಣೆ ಕುರಿತಾದ ನಿಯಮ-2024 ಜಾರಿಗೆ ತರಲಾಗಿದ್ದು, ಮತ್ತಷ್ಟು ಹೆಚ್ಚಿನ ಕಾನೂನು ಬದ್ಧ ಅಧಿಕಾರ ಲಭ್ಯವಾದಂತಾಗಿದೆ. ಈ ನಿಯಮದ ಪ್ರಕಾರ ತೆರಿಗೆ ಪಾವತಿ ಮಾಡದವರ ಆಸ್ತಿಗಳ ಜಪ್ತಿ, ಬೀಗಮುದ್ರೆ ಮತ್ತು ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಲು ಅಧಿಕಾರ ಸಿಕ್ಕಂತಾಗಿದೆ.
2.6 ಲಕ್ಷಕ್ಕೂ ಹೆಚ್ಚು ಮಾಲೀಕರು ತೆರಿಗೆ ಬಾಕಿ
ಮಹದೇವಪುರ ವಲಯದಲ್ಲಿ ಅತಿ ಹೆಚ್ಚು ಸುಸ್ತಿದಾರರಿದ್ದಾರೆ. ಇಲ್ಲಿ 56,346 ಆಸ್ತಿಗಳ ಮಾಲೀಕರು ತೆರಿಗೆ ಪಾವತಿಸಿಲ್ಲ. ಬೊಮ್ಮನಹಳ್ಳಿ ವಲಯದಲ್ಲಿ 41,915 ಮತ್ತು ರಾಜರಾಜೇಶ್ವರಿ ವಲಯದಲ್ಲಿ 41,066 ಆಸ್ತಿಗಳ ಮಾಲೀಕರು ಸುಸ್ತಿದಾರರಾಗಿದ್ದಾರೆ. ಬಿಬಿಎಂಪಿ ಅಂಕಿಅಂಶಗಳ ಪ್ರಕಾರ 2.6 ಲಕ್ಷಕ್ಕೂ ಹೆಚ್ಚು ಆಸ್ತಿಗಳ ಮಾಲೀಕರು ತೆರಿಗೆ ಪಾವತಿಸಿಲ್ಲ. ಇದರಲ್ಲಿ ಪೂರ್ವ ವಲಯದಲ್ಲಿ 9,401 ಆಸ್ತಿಗಳನ್ನು ಜಪ್ತಿ ಮಾಡಲಾಗಿದ್ದರೆ 1,317 ಆಸ್ತಿಗಳಿಗೆ ಬೀಗಮುದ್ರೆ ಹಾಕಲಾಗಿದೆ. ಬಾಕಿ ಉಳಿಸಿಕೊಂಡಿರುವ ಎಲ್ಲ ಆಸ್ತಿಗಳಿಂದಲೂ ತೆರಿಗೆ ಸಂಗ್ರಹಿಸಲು ಬಿಬಿಎಂಪಿ ಮುಂದಾಗಿದೆ.
ಕೆಲವು ತಿಂಗಳ ಹಿಂದೆ ಉಪ ಮುಖ್ಯಮಂತ್ರಿ, ಬೆಂಗಳೂರು ಉಸ್ತುವಾರಿ ಡಿಕೆ ಶಿವಕುಮಾರ್ ಅವರು ಆಸ್ತಿ ತೆರಿಗೆ ಸಂಗ್ರಹಕ್ಕೆ ಕಠಿಣ ಕ್ರಮಗಳನ್ನು ಅನುಸರಿಸಬೇಕು ಮತ್ತು ಕಡ್ಡಾಯವಾಗಿ ತೆರಿಗೆ ವಸೂಲು ಮಾಡುವಂತೆ ಬಿಬಿಎಂಪಿಗೆ ತಾಕೀತು ಮಾಡಿದ್ದರು.
ಪೂರ್ವ ವಲಯದಲ್ಲಿ ಅತಿ ಹೆಚ್ಚು, ಅಂದರೆ 9,401 ಆಸ್ತಿಗಳನ್ನು ಜಪ್ತಿ ಮಾಡಲಾಗಿದ್ದರೆ ಪಶ್ಚಿಮ ವಲಯದಲ್ಲಿ 9,088 ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ. ಪೂರ್ವ ವಲಯದಲ್ಲಿ ವಾಸದ ಮನೆಗಳ ಮಾಲೀಕರೇ ಹೆಚ್ಚಿನ ಸಂಖ್ಯೆಯಲ್ಲಿ ಆಸ್ತಿ ತೆರಿಗೆ ಪಾವತಿ ಮಾಡಿಲ್ಲ. ಅಂತಹ 1,317 ಆಸ್ತಿ ಗಳಿಗೆ ಬೀಗಮುದ್ರೆ ಜಡಿಯಲಾಗಿದೆ.