ಬೆಂಗಳೂರು ಸ್ಕೈಡೆಕ್‌; ಕರ್ನಾಟಕದ ರಾಜಧಾನಿಯಲ್ಲಿ 250 ಮೀಟರ್ ಎತ್ತರದ ವೀಕ್ಷಣಾ ಗೋಪುರ, ಏನಿದು 500 ಕೋಟಿ ರೂಪಾಯಿ ವೆಚ್ಚದ ಯೋಜನೆ-bengaluru news bengaluru skydeck karnataka approves 250 metre project worth rs 500 crore uks ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಸ್ಕೈಡೆಕ್‌; ಕರ್ನಾಟಕದ ರಾಜಧಾನಿಯಲ್ಲಿ 250 ಮೀಟರ್ ಎತ್ತರದ ವೀಕ್ಷಣಾ ಗೋಪುರ, ಏನಿದು 500 ಕೋಟಿ ರೂಪಾಯಿ ವೆಚ್ಚದ ಯೋಜನೆ

ಬೆಂಗಳೂರು ಸ್ಕೈಡೆಕ್‌; ಕರ್ನಾಟಕದ ರಾಜಧಾನಿಯಲ್ಲಿ 250 ಮೀಟರ್ ಎತ್ತರದ ವೀಕ್ಷಣಾ ಗೋಪುರ, ಏನಿದು 500 ಕೋಟಿ ರೂಪಾಯಿ ವೆಚ್ಚದ ಯೋಜನೆ

Bengaluru Skydeck; ದಕ್ಷಿಣ ಏಷ್ಯಾದ ಅತಿ ಎತ್ತರ ವೀಕ್ಷಣಾ ಗೋಪುರ ಎಂಬ ಖ್ಯಾತಿ ಪಡೆಯಲಿರುವ ಬೆಂಗಳೂರು ಸ್ಕೈಡೆಕ್‌ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಕರ್ನಾಟಕದ ರಾಜಧಾನಿಯಲ್ಲಿ 250 ಮೀಟರ್ ಎತ್ತರದ ವೀಕ್ಷಣಾ ಗೋಪುರ ನಿರ್ಮಾಣವಾಗಲಿದ್ದು, ಏನಿದು 500 ಕೋಟಿ ರೂಪಾಯಿ ವೆಚ್ಚದ ಯೋಜನೆ ಎಂಬುದರ ವಿವರ ಇಲ್ಲಿದೆ.

ಬೆಂಗಳೂರು ಸ್ಕೈಡೆಕ್‌; ಕರ್ನಾಟಕದ ರಾಜಧಾನಿಯಲ್ಲಿ 250 ಮೀಟರ್ ಎತ್ತರದ ವೀಕ್ಷಣಾ ಗೋಪುರ (ಪರಿಕಲ್ಪನೆಯ ಚಿತ್ರವನ್ನು ಸಾಂಕೇತಿವಾಗಿ ಬಳಸಲಾಗಿದೆ)
ಬೆಂಗಳೂರು ಸ್ಕೈಡೆಕ್‌; ಕರ್ನಾಟಕದ ರಾಜಧಾನಿಯಲ್ಲಿ 250 ಮೀಟರ್ ಎತ್ತರದ ವೀಕ್ಷಣಾ ಗೋಪುರ (ಪರಿಕಲ್ಪನೆಯ ಚಿತ್ರವನ್ನು ಸಾಂಕೇತಿವಾಗಿ ಬಳಸಲಾಗಿದೆ) (Live Mint)

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ದಕ್ಷಿಣ ಏಷ್ಯಾದ ಅತಿ ಎತ್ತರ ವೀಕ್ಷಣಾ ಗೋಪುರ (Bengaluru to get South Asia's tallest Skydeck) ನಿರ್ಮಾಣವಾಗಲಿದೆ. ಕಳೆದ ಕರ್ನಾಟಕ ಬಜೆಟ್‌ (Karnataka Budget) ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದರ ಪ್ರಸ್ತಾಪ ಮಾಡಿದ್ದರು. ಈ ಬೆಂಗಳೂರು ವೀಕ್ಷಣಾ ಗೋಪುರ 250 ಮೀಟರ್ ಎತ್ತರ ಇರಲಿದೆ. ಈ ಯೋಜನೆ ಅನುಷ್ಠಾನಕ್ಕಾಗಿ 250 ಕೋಟಿ ರೂಪಾಯಿ ಪ್ರಸ್ತಾವನೆಯನ್ನು ಸಿದ್ದರಾಮಯ್ಯ ಸಚಿವ ಸಂಪುಟ ಗುರುವಾರ (ಆಗಸ್ಟ್ 22) ಅನುಮೋದಿಸಿದೆ.

ಕರ್ನಾಟಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್‌ ಈ ವಿಚಾರ ತಿಳಿಸಿರುವುದಾಗಿ ಎಎನ್‌ಐ ವರದಿ ಮಾಡಿದೆ. ಈ ವೀಕ್ಷಣಾ ಗೋಪುರ ನಿರ್ಮಾಣವಾದ ಬಳಿಕ ಇದು ದಕ್ಷಿಣ ಏಷ್ಯಾದಲ್ಲೇ ಅತಿ ಎತ್ತರದ ವೀಕ್ಷಣಾ ಗೋಪುರವೆನಿಸಲಿದೆ ಎಂದು ಎನ್‌ಡಿಟಿವಿ ಮತ್ತು ಸನ್‌ಟಿವಿ ವರದಿ ಮಾಡಿವೆ.

ಬೆಂಗಳೂರು ವೀಕ್ಷಣಾ ಗೋಪುರ ನಿರ್ಮಾಣ ಎಲ್ಲಿ

ಬೆಂಗಳೂರು ವೀಕ್ಷಣಾ ಗೋಪುರ ನಿರ್ಮಾಣದ ವಿಚಾರ ಪ್ರಸ್ತಾಪಿಸಿದ್ದರು. ನೈಸ್‌ ರಸ್ತೆಯಲ್ಲಿ ಬೆಂಗಳೂರಿನ ಹೊರವಲಯದಲ್ಲಿ 250 ಮೀಟರ್ ಎತ್ತರ ವೀಕ್ಷಣಾ ಗೋಪುರ (ಸ್ಕೈಡೆಕ್‌) ನಿರ್ಮಾಣಕ್ಕೆ ವಿಪಕ್ಷ ನಾಯಕರು, ಬೆಂಗಳೂರಿನ ಶಾಸಕರು ಕೂಡ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಬೆಂಗಳೂರಿನ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕಳೆದ ತಿಂಗಳು ಹೇಳಿದ್ದರು.

ಸಮಾಲೋಚನೆ ಬಳಿಕ ಸ್ಥಳ ನಿಗದಿ ಮಾಡಿರುವುದಾಗಿ ತಿಳಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌, ಯೋಜನೆಗೆ 25 ಎಕರೆ ಜಮೀನು ಬೇಕಾಗುತ್ತದೆ ಎಂದು ಹೇಳಿದ್ದರು.

"ನಾವು ಕೊಮ್ಮಘಟ್ಟ ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್ ಬಳಿ ಭೂಮಿಯನ್ನು ಪರಿಣಿಸುತ್ತಿದ್ದೇವೆ. ಆದರೆ ಇದು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಬೇಡ ಎನ್ನುವ ನಮ್ಮ ಆಲೋಚನೆಯನ್ನೂ ಅಲ್ಲಿ ವ್ಯಕ್ತಪಡಿಸಿದ್ದೇವೆ. ಈ ಯೋಜನೆಗಾಗಿ ನಾವು ಸುಮಾರು 10 ಸ್ಥಳಗಳನ್ನು ಪರಿಗಣಿಸಿದ್ದು, ವೀಕ್ಷಣಾ ಗೋಪುರ ಎತ್ತರ ಇರುವ ಕಾರಣದಿಂದ ವಿಮಾನಯಾನ ಸಚಿವಾಲಯದ ಅನುಮತಿಯೂ ಬೇಕಾಗಿದೆ. ಅಲ್ಲಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ. ವಿರೋಧ ಪಕ್ಷದ ನಾಯಕ ಆರ್ ಅಶೋಕ ಸೇರಿ ಬೆಂಗಳೂರಿನ ಎಲ್ಲಾ ಚುನಾಯಿತ ಪ್ರತಿನಿಧಿಗಳು ನೈಸ್ ರಸ್ತೆಯ ಸ್ಥಳಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿವರಿಸಿದ್ದಾರೆ.

ವೀಕ್ಷಣಾ ಗೋಪುರಕ್ಕೆ ಬೇಕಾದ ಜಮೀನನ್ನು ನೈಸ್ ಕಂಪನಿ ನೀಡಲಿದೆ

"ವಿಪಕ್ಷ ನಾಯಕ ಆರ್ ಅಶೋಕ್ ಅವರು ಹೇಳಿದ ಪ್ರಕಾರ ಸುಪ್ರೀಂ ಕೋರ್ಟ್ ಆದೇಶದಂತೆ ನೈಸ್‌ ಕಂಪನಿ 200 ಎಕರೆ ಭೂಮಿಯನ್ನು ಸರ್ಕಾರಕ್ಕೆ ನೀಡಬೇಕಾಗಿದೆ. ಹೀಗಾಗಿ ಈ ವೀಕ್ಷಣಾ ಗೋಪುರ ನಿರ್ಮಾಣಕ್ಕೆ ಬೇಕಾದ ಜಮೀನನ್ನು ನೈಸ್ ಕಂಪನಿಯೇ ನೀಡಲಿದೆ. ಆದರೆ, ಜಮೀನು ಎಲ್ಲಿ ಎಂಬುದು ಇನ್ನೂ ಅಂತಿಮವಾಗಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿರುವುದಾಗಿ ವರದಿ ಯಾಗಿದೆ.

ವೀಕ್ಷಣಾ ಗೋಪುರ ಬೆಂಗಳೂರು ನಗರದಿಂದ ತುಂಬಾ ದೂರ ಅಂತ ಅನ್ನಿಸೋದಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌, ಎಲ್ಲ ಅಂಶಗಳನ್ನು ಪರಿಗಣಿಸಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.

"ಎಲ್ಲ ಮುಖ್ಯ ಮತ್ತು ಸೂಕ್ಷ್ಮ ಅಂಶಗಳನ್ನು ಪರಿಗಣಿಸಿಯೇ ಎಲ್ಲಿ ಒಳ್ಳೆಯದು ಎಂಬುದನ್ನು ತೀರ್ಮಾನಿಸಲಾಗಿದೆ. ಮೈಸೂರು ಮತ್ತು ಕೊಡಗಿನಂತಹ ಪ್ರವಾಸಿ ತಾಣಗಳಿಗೆ ಹೋಗುವ ಮಾರ್ಗದಲ್ಲಿ ಈ ಸ್ಥಳವು ಪ್ರವಾಸಿಗರಿಗೆ ಅನುಕೂಲಕರವಾಗಿರುತ್ತದೆ. ಪೆರಿಫೆರಲ್ ರಿಂಗ್ ರೋಡ್ ಸಿದ್ಧವಾದ ನಂತರ ಸಂಪರ್ಕವೂ ಸುಧಾರಿಸಲಿದೆ ”ಎಂದು ಸರ್ಕಾರದ ತೀರ್ಮಾನವನ್ನು ಡಿಕೆ ಶಿವಕುಮಾರ್ ಸಮರ್ಥಿಸಿಕೊಂಡರು.

(ಎಎನ್‌ಐ ಮತ್ತು ಪಿಟಿಐ ಮಾಹಿತಿ)