ಕರ್ನಾಟಕದಲ್ಲಿ ಅತಿವೃಷ್ಟಿ ನಾಶ ನಷ್ಟ ಹೆಚ್ಚು, ಮುಂದಿನ 4 ವಾರ ಭಾರಿ ಮಳೆಗೆ ಮುನ್ನೆಚ್ಚರಿಕೆ ವಹಿಸಲು ಸಿಎಂ ಸೂಚನೆ
ಕರ್ನಾಟಕದಲ್ಲಿ ಅತಿವೃಷ್ಟಿಯಿಂದಾಗಿ 67 ಮಂದಿ ಸಾವು ಸಂಭವಿಸಿದ್ದು, 1283 ಮನೆಗಾಳಿಗೆ ಹಾನಿ ಉಂಟಾಗಿದೆ. ಭಾರಿ ಮಳೆ ಕಾರಣ ಮುನ್ನೆಚ್ಚರಿಕಾ ಕ್ರಮಕ್ಕೆ ಸಿಎಂ ಸೂಚನೆ ನೀಡಿದ್ಉದ, 40 ಕೋಟಿ ರೂಗಳಿಗೂ ಹೆಚ್ಚು ಪರಿಹಾರ ಬಿಡುಗಡೆ ಮಾಡಿದ್ದಾರೆ. ಇದರ ಜೊತೆಗೆ ಬೆಂಗಳೂರಿನಲ್ಲಿ ಕಟ್ಟೆಚ್ಚರ ವಹಿಸಲು ಸೂಚನೆ ನೀಡಿದ್ದಾರೆ. (ವರದಿ-ಎಚ್. ಮಾರುತಿ, ಬೆಂಗಳೂರು)
ಬೆಂಗಳೂರು: ಅತಿವೃಷ್ಟಿಯಿಂದಾಗಿ ರಾಜ್ಯದಲ್ಲಿ ಇದುವರೆಗೆ 67 ಮಂದಿ ಮೃತಪಟ್ಟಿದ್ದು 66 ಪ್ರಕರಣಗಳಲ್ಲಿ 32 ಕೋಟಿ ರೂ. ಪರಿಹಾರ ಒದಗಿಸಲಾಗಿದೆ. ಈವರೆಗೆ ಒಟ್ಟು 1283 ಮನೆಗಳು ಶೇ. 75 ಕ್ಕಿಂತ ಹೆಚ್ಚು ಹಾನಿಗೊಳಗಾಗಿದೆ. ಅದರಲ್ಲಿ 879 ಪ್ರಕರಣಗಳಲ್ಲಿ ತಲಾ 1.2೦ ಲಕ್ಷ ರೂ. ನಂತೆ 10.54 ಕೋಟಿ ರೂ. ಪರಿಹಾರ ವಿತರಿಸಲಾಗಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ರಾಜ್ಯದ ಅತಿವೃಷ್ಟಿ ಮತ್ತು ಪ್ರವಾಹ ಪರಿಸ್ಥಿತಿ ಕುರಿತು ಪರಿಶೀಲನೆ ನಡೆಸಿದರು. ಸಮರೋಪಾದಿಯಲ್ಲಿ ಕರ್ತವ್ಯ ನಿರ್ವಹಿಸಲು ಸೂಚಿಸಿದ ಅವರು ಪರಿಸ್ಥಿತಿಯನ್ನು ಅವಲೋಕಿಸಿದರು.
ಸಭೆಯ ಪ್ರಮುಖ ನಿರ್ಧಾರಗಳ ಪೈಕಿ ಗಮನಿಸುವುದಾದರೆ, 2817 ಕುಟುಂಬಗಳಿಗೆ ಬಟ್ಟೆ ಬರೆ ಹಾನಿಗಾಗಿ 2500 ರೂ. ನಂತೆ ಹಾಗೂ 2811 ಕುಟುಂಬಗಳಿಗೆ ಗೃಹೋಪಯೋಗಿ ಸಾಮಗ್ರಿಗಳ ಹಾನಿಗೆ ತಲಾ 2500 ರಂತೆ ಒಟ್ಟು 1.40 ಕೋಟಿ ರೂ. ಪರಿಹಾರ ವಿತರಿಸಲಾಗಿದೆ. ದೇವರಾಜ ಅರಸು ವಸತಿ ಯೋಜನೆಯಡಿ ಈಗಾಗಲೇ 500 ಮನೆ ಮಂಜೂರು ಮಾಡಲಾಗಿದೆ.
ಮುಖ್ಯಮಂತ್ರಿಗಳು ನೀಡಿರುವ ಸೂಚನೆಗಳು
ಮನೆ ಕುಸಿದು 29 ಸಾವು ಸಂಭವಿಸಿದ್ದು, ನಗರ ಮತ್ತು ಗ್ರಾಮ ಪ್ರದೇಶಗಳಲ್ಲಿ ಶಿಥಿಲಗೊಂಡ ಮನೆಗಳಲ್ಲಿರುವವರನ್ನು ಖಾಲಿ ಮಾಡಿ ಅವರಿಗೆ ಪುನರ್ವಸತಿ ಕಲ್ಪಿಸಬೇಕು.
ಅಂಗನವಾಡಿ , ಶಾಲೆ ಕಟ್ಟಡಗಳ, ಸೇತುವೆಗಳು, ಕರೆಗಳು ಸುಸ್ಥಿತಿಯಲ್ಲಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ಮಲೆನಾಡು, ಕರಾವಳಿ ಭಾಗಗಳಲ್ಲಿ ಇರುವ ಹಳೇ ಶಾಲಾ ಕಟ್ಟಡಗಳನ್ನು ಗುರುತಿಸಿ, ಕ್ರಿಯಾ ಯೋಜನೆಯಲ್ಲಿ ಆದ್ಯತೆ ಮೇರೆಗೆ ದುರಸ್ತಿಪಡಿಸಬೇಕು.
ಮಳೆಯಿಂದ 81589 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಅಂತಿಮ ವರದಿ ಬಂದ ಕೂಡಲೇ ಪರಿಹಾರ ವಿತರಣೆಗೆ ಕ್ರಮ ವಹಿಸಬೇಕು.
ಮಳೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವಿವಿಧ ಏತ ನೀರಾವರಿ ಯೋಜನೆಗಳಡಿ ಎಲ್ಲೆಲ್ಲಿ ಅವಕಾಶವಿದೆಯೋ ಅಲ್ಲೆಲ್ಲ ಕೆರೆಗಳಿಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಬೇಕು. ರಾಜ್ಯ ಹೆದ್ದಾರಿಗಳ ದುರಸ್ತಿಗೆ 210ಕೋಟಿ ರೂ. ರಾಜ್ಯ ಹೆದ್ದಾರಿಗಳ ದುರಸ್ತಿಗೆ ಈಗಾಗಲೇ ಬಿಡುಗಡೆ ಮಾಡಲಾಗಿದೆ.
ರಾಜ್ಯದ ಜಲಾಶಯಗಳು ಶೇ. 89 ರಷ್ಟು ಭರ್ತಿಯಾಗಿವೆ. ಈ ಹಿನ್ನೆಲೆಯಲ್ಲಿ ಕೆರೆಗಳನ್ನು ತುಂಬಿಸಲು ಹಾಗೂ ಮಳೆ ಮುನ್ಸೂಚನೆ ಆಧರಿಸಿ, ಮುಂಚಿತವಾಗಿಯೇ ಸೂಕ್ತ ಪ್ರಮಾಣದ ನೀರನ್ನು ಜಲಾಶಗಳಿಂದ ಹೊರಗೆ ಬಿಡುವ ಮೂಲಕ, ಮಳೆಯಾದಾಗ ಜಲಾಶಯಗಳಲ್ಲಿ ಏಕಾಏಕಿ ನೀರಿನ ಸಂಗ್ರಹ ಹೆಚ್ಚಾಗಿ ಪ್ರವಾಹ ಉಂಟಾಗುವುದನ್ನು ತಡೆಗಟ್ಟಬೇಕು. ಈ ಕುರಿತು ಸಂಬಂಧಿಸಿದ ಎಲ್ಲ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಸೂಚನೆ.
ಸೇತುವೆಗಳ ಫಿಟ್‌ನೆಸ್‌ಗಳ ಬಗ್ಗೆ ವರದಿಯನ್ನು ಲೋಕೋಪಯೋಗಿ ಇಲಾಖೆಯಿಂದ ಪಡೆಯಬೇಕು. ಸಂಪರ್ಕ ರಸ್ತೆಗಳು ಕುಸಿದಿದ್ದರೆ ಅವುಗಳನ್ನು ಸರಿಪಡಿಸಿ, ವಾಹನ ಸಂಚಾರಕ್ಕೆ ಸುಗಮಗೊಳಿಸಬೇಕು. ಎಲ್ಲಾ ಸೇತುವೆ, ರಸ್ತೆಗಳನ್ನು ನಿರಂತರವಾಗಿ ಪರಿಶೀಲನೆ ನಡೆಸಿ ಯಾವುದೇ ಅನಾಹುತವಾಗದಂತೆ ಎಚ್ಚರಿಕೆ ವಹಿಸಬೇಕು. ಮುಳುಗು ಸೇತುವೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಬೇಕು. ಯಾವುದೇ ಕಾರಣಕ್ಕೂ ವಾಹನ ಸಂಚರಿಸದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು.
ರಾಜ್ಯದಲ್ಲಿ ಜೂನ್ 1 ರಿಂದ ಆಗಸ್ಟ್ 15 ರ ವರೆಗೆ ವಾಡಿಕೆಗಿಂತ ಶೇ. 22 ರಷ್ಟು ಹೆಚ್ಚು ಮಳೆಯಾಗಿದ್ದು, ಚಾಮರಾಜನಗರ, ಮಂಡ್ಯ, ತುಮಕೂರಿನಲ್ಲಿ ಅತ್ಯಧಿಕ ಮಳೆಯಾಗಿದೆ. 13 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಈ ಬಾರಿ ಇಡೀ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ.
ಮುಂದಿನ ನಾಲ್ಕು ವಾರಗಳಲ್ಲಿ ದಕ್ಷಿಣ ಒಳನಾಡು, ಉತ್ತರ ಒಳನಾಡು, ಕರಾವಳಿ, ಮಲೆನಾಡಿನಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಗಳನ್ನು ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಸಿರುಗುಪ್ಪ, ದೇವದುರ್ಗ, ಔರಾದ್, ಬೀದರ್, ಕಮಲಾನಗರ, ಹುಬ್ಬಳ್ಳಿ, ಶಹಾಪುರ, ಯಾದಗಿರಿ ಮೊದಲಾದ ಒಂಬತ್ತು ತಾಲ್ಲೂಕುಗಳಲ್ಲಿ ಕಡಿಮೆ ಮಳೆಯಾಗಿದೆ. ಮುಂದೆ ಈ ತಾಲ್ಲೂಕುಗಳಲ್ಲಿಯೂ ಉತ್ತಮ ಮಳೆಯಾಗುವುದಾಗಿ ಮುನ್ಸೂಚನೆ ಇದೆ.
ರಾಜ್ಯಾದ್ಯಂತ 82 ಲಕ್ಷ ಹೆಕ್ಟೇರ್ ಗುರಿಗೆ ಎದುರಾಗಿ 7೦ ಲಕ್ಷ ಹೆಕ್ಟೇರ್ ಬಿತ್ತನೆ ಆಗಿದೆ. ಈ ಬಾರಿ ಗುರಿ ಮೀರಿ ಸಾಧನೆ ಆಗುವ ನಿರೀಕ್ಷೆ ಇದೆ. ಮುಂಗಾರು ಪೂರ್ವ ಬಿತ್ತನೆ ಆಗಿರುವ ಉದ್ದು ಮತ್ತು ಹೆಸರು ಕಟಾವಿಗೆ ಬಂದಿದೆ ಅಧಿಕಾರಿಗಳು ಮಾಹಿತಿ ನೀಡಿದರು.
ಬೆಂಗಳೂರು ನಗರದಲ್ಲಿ ಕೈಗೊಳ್ಳಬೇಕಾದ ಕ್ರಮಗಳು
ಬೆಂಗಳೂರು ನಗರದಲ್ಲಿ ಕಂಟ್ರೋಲ್ ರೂಂ ಗಳನ್ನು ಸ್ಥಾಪಿಸಲಾಗಿದ್ದು, ತೆರೆದಿರುವ ದೊಡ್ಡ ದೊಡ್ಡ ಚರಂಡಿಗಳನ್ನು ಗುರುತಿಸಿ ಮೊದಲೇ ಬಂದೋಬಸ್ತ್ ಮಾಡಲಾಗಿದೆ. ಇದರಿಂದ ಇದುವರೆಗೆ ಯಾವುದೇ ಸಾವು ನೋವು ಸಂಭವಿಸಿಲ್ಲ.
ರಾಜಕಾಲುವೆಗಳ ಒತ್ತುವರಿ ತೆರವು ಮಾಡಬೇಕು. ಕೋಡಿಗೆ ಗೇಟ್ ಅಳವಡಿಸುವ ಮೂಲಕ, ಮಳೆಗಾಲದಲ್ಲಿ ಕೆರೆಗಳಲ್ಲಿ ನೀರಿನ ಪ್ರಮಾಣ ನಿಯಂತ್ರಿಸಿ ಪ್ರವಾಹ ತಡೆಗಟ್ಟಲು ಸೂಚನೆ.
ಬೆಂಗಳೂರಿನಲ್ಲಿ ಅಧಿಕಾರಿಗಳಿಗೆ ಕಟ್ಟೆಚ್ಚರ ವಹಿಸಲು ತಾಕೀತು. ಪ್ರತಿದಿನ ನಗರದ ಪರಿಸ್ಥಿತಿ ಕುರಿತು ಸಭೆ ನಡೆಸಿ ಪರಿಶೀಲಿಸಲು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚನೆ. ವಲಯ ಆಯುಕ್ತರ ಸಭೆ ನಡೆಸಿ, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಹಾಗೂ ಎಂಜಿನಿಯರುಗಳಿಗೆ ಜವಾಬ್ದಾರಿ ನಿಗದಿಪಡಿಸಬೇಕು. ಕರ್ತವ್ಯಲೋಪ ಎಸಗಿದರೆ, ಮುಲಾಜಿಲ್ಲದೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಲಹೆ.
ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದ ಸಂಸ್ಥೆಗಳಾದ ಬಿಡಿಎ, ಬಿಡಬ್ಲ್ಯುಎಸ್ ಎಸ್ ಬಿ, ಬಿಎಂಆರ್ ಸಿ ಎಲ್, ಬಿಬಿಎಂಪಿ ಮೊದಲಾದವುಗಳ ನಡುವೆ ಸಮನ್ವಯ ವಹಿಸಲು ಸೂಚನೆ.
ನಗರ ಮತ್ತು ಪಟ್ಟಣಗಳಲ್ಲಿ ಕಾಲುವೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮ ಕೈಗೊಳ್ಳಬೇಕು. ಎಲ್ಲಾ ಚರಂಡಿಗಳ ಸ್ವಚ್ಚತೆಯನ್ನು ನಿರಂತರವಾಗಿ ಮಾಡಬೇಕು.
ಪ್ರವಾಹ ಸಂದರ್ಭದಲ್ಲಿ ಉದ್ಭವವಾಗಬಹುದಾದ ಸಾಂಕ್ರಾಮಿಕ ಕಾಯಿಲೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ. ಡೆಂಗಿ ಪ್ರಕರಣಗಳಲ್ಲಿ ಇಳಿಕೆಯಾಗಿದ್ದು, ಚಿಕುನ್‌ಗುನ್ಯಾ, ಮಲೇರಿಯಾ ರೋಗ ಹರಡದಂತೆ ಕೂಡ ಎಚ್ಚರಿಕೆ ವಹಿಸಬೇಕು.
ಪ್ರವಾಹ, ಭಾರಿ ಮಳೆ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡರೆ, ಕೂಡಲೇ ಸರಿಪಡಿಸಲು ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಯಿತು. ಅಗತ್ಯವಿರುವ ಟ್ರಾನ್ಸ್‌ಫಾರ್ಮರ್‌ಗಳು, ಕಂಬಗಳನ್ನು ಲಭ್ಯ ಇರಬೇಕು ಎಂದು ಸೂಚಿಸಿದರು.
(ವರದಿ-ಎಚ್. ಮಾರುತಿ, ಬೆಂಗಳೂರು)