Karnataka Reservoirs: ತುಂಗಭದ್ರಾ ಜಲಾಶಯ, ಒಳಹರಿವಿಗಿಂತ ಮೂರು ಪಟ್ಟು ಹೆಚ್ಚಿನ ಹೊರಹರಿವು, ಕೆಆರ್‌ಎಸ್‌, ಕಬಿನಿ ಜಲಾಶಯದಲ್ಲಿ ಕೊಂಚ ಇಳಿಕೆ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Reservoirs: ತುಂಗಭದ್ರಾ ಜಲಾಶಯ, ಒಳಹರಿವಿಗಿಂತ ಮೂರು ಪಟ್ಟು ಹೆಚ್ಚಿನ ಹೊರಹರಿವು, ಕೆಆರ್‌ಎಸ್‌, ಕಬಿನಿ ಜಲಾಶಯದಲ್ಲಿ ಕೊಂಚ ಇಳಿಕೆ

Karnataka Reservoirs: ತುಂಗಭದ್ರಾ ಜಲಾಶಯ, ಒಳಹರಿವಿಗಿಂತ ಮೂರು ಪಟ್ಟು ಹೆಚ್ಚಿನ ಹೊರಹರಿವು, ಕೆಆರ್‌ಎಸ್‌, ಕಬಿನಿ ಜಲಾಶಯದಲ್ಲಿ ಕೊಂಚ ಇಳಿಕೆ

Karnataka Dam Updates ಕರ್ನಾಟಕದಲ್ಲಿ ಮಳೆ ಪ್ರಮಾಣ ಕಡಿಮೆಯಾದರೂ ತುಂಗಭದ್ರಾ ಹೊರತುಪಡಿಸಿ ಜಲಾಶಯದ ನೀರಿನ ಮಟ್ಟ ಚೆನ್ನಾಗಿಯೇ ಇದೆ.

ತುಂಗದ್ರಾ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಹೊರ ಹೋಗುತ್ತಿದೆ.
ತುಂಗದ್ರಾ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಹೊರ ಹೋಗುತ್ತಿದೆ. (pti)

ಬೆಂಗಳೂರು: ಕರ್ನಾಟಕದಲ್ಲಿ ಒಂದು ವಾರದಿಂದ ಕಡಿಮೆಯಾಗಿದ್ದ ಮಳೆಯ ಪ್ರಮಾಣದಿಂದ ಬಹುತೇಕ ಜಲಾಶಯಗಳಿಗೂ ಒಳ ಹರಿವಿನ ಪ್ರಮಾಣ ತಗ್ಗಿದೆ. ಆದರೆ ಜುಲೈ ತಿಂಗಳಲ್ಲಿನ ಸುರಿದ ಭಾರೀ ಮಳೆಯಿಂದಾಗಿ ಜಲಾಶಯಗಳು ಬಹುತೇಕ ತುಂಬಿವೆ. ಮಳೆ ಕಡಿಮೆಯಾಗಿ ಎಲ್ಲಾ ಜಲಾಶಯಗಳಲ್ಲೂ ಒಳ ಹರಿವು ಕಡಿಮೆಯಾದರೂ ನೀರಿನ ಮಟ್ಟ ಯಥಾರೀತಿಯಾಗಿಯೇ ಇದೆ. ಆದರೆ ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯದಲ್ಲಿ ಮಾತ್ರ ತಾಂತ್ರಿಕ ಸಮಸ್ಯೆಯಿಂದ ಒಳ ಹರಿವಿಗಿಂತ ಮೂರು ಪಟ್ಟು ನೀರು ಹೊರ ಬಿಡಲಾಗುತ್ತಿದೆ. ಇದರಿಂದ ಜಲಾಶಯದ ನೀರಿನ ಪ್ರಮಾಣವು ನಿಧಾನವಾಗಿ ಕುಸಿಯುತ್ತಿದೆ. ಕಾವೇರಿ ಕಣಿವೆಯ ಜಲಾಶಯಗಳಿಗೂ ಒಳ ಹರಿವು ಕಡಿಮೆಯಾಗಿದ್ದು. ಬಹುತೇಕ ಜಲಾಶಯಗಳು ತುಂಬಿದ ಸ್ಥಿತಿಯಲ್ಲಿವೆ. ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಇಳಿದಿದ್ದರಿಂದ ಜಲಾಶಯದ ಒಳ ಹರಿವಿನಲ್ಲೊ ಗಣನೀಯ ಇಳಿಕೆ ಕಂಡು ಬಂದಿದೆ.

ತುಂಗಭದ್ರಾ ಜಲಾಶಯ

ವಿಜಯನಗರ ಜಿಲ್ಲೆ ಹೊಸಪೇಟೆ ಸಮೀಪ ಇರುವ ತುಂಗಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿದೆ. ತಾಂತ್ರಿಕ ದೋಷದಿಂದ ಗೇಟ್‌ ನ ಚೈನ್‌ ಕುಸಿದು ಮೂರು ದಿನದಿಂದ ಭಾರೀ ಪ್ರಮಾಣದ ನೀರು ನದಿಗೆ ಹರಿ ಬಿಡಲಾಗುತ್ತಿದೆ. ಇದರಿಂದ ನೀರಿನ ಪ್ರಮಾಣ ಒಳಹರಿವಿಗಿಂತ ಮೂರು ಒಟ್ಟು ಹೊರಹರಿವು ಹೆಚ್ಚಾಗಿ ಕಡಿಮೆಯಾಗಿದೆ.

ಜಲಾಶಯದಲ್ಲಿ ಬುಧವಾರ ಬೆಳಿಗ್ಗೆ 1629.26 ಅಡಿ ನೀರಿದೆ. ಜಲಾಶಯದ ಗರಿಷ್ಠ ಮಟ್ಟವು 1633 ಅಡಿ. ಜಲಾಶಯದಕ್ಕೆ ಸದ್ಯ 35425 ಕ್ಯೂಸೆಕ್‌ ಒಳ ಹರಿವು ಇದೆ. ಮಲೆನಾಡಿನಲ್ಲಿ ಮಳೆ ಕಡಿಮೆಯಾಗಿ ವಾರದಿಂದಲೂ ಒಳ ಹರಿವು ಕಡಿಮೆಯಾಗಿದೆ. ಆದರೆ ಹೊರ ಹರಿವಿನ ಪ್ರಮಾಣವು 109526 ಕ್ಯೂಸೆಕ್‌ ಇದೆ. ಜಲಾಶಯದಲ್ಲಿ ನೀರಿನ ಪ್ರಮಾಣವು 91.311 ಟಿಎಂಸಿಗೆ ಕುಸಿದಿದೆ. ಜಲಾಶಯದಲ್ಲಿ 105.78 ಟಿಎಂಸಿ ನೀರು ಸಂಗ್ರಹಿಸಬಹುದು.

ಮಲೆನಾಡು ಭಾಗದಲ್ಲಿ ಮತ್ತೆ ಮಳೆ ಶುರುವಾಗಿದೆ. ನಾಲ್ಕೈದು ದಿನದಲ್ಲಿ ಮತ್ತೆ ಜಲಾಶಯದ ಒಳಹರಿವು ಹೆಚ್ಚಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ.

ಆಲಮಟ್ಟಿ ಜಲಾಶಯ

ವಿಜಯಪುರ ಜಿಲ್ಲೆಯ ಆಲಮಟ್ಟಿಯ ಲಾಲ್‌ ಬಹದ್ದೂರು ಶಾಸ್ತ್ರಿ ಜಲಾಶಯಕ್ಕೂ ಒಳ ಹರಿವು ತಗ್ಗಿದೆ. ಮಹಾರಾಷ್ಟ್ರ ಭಾಗದಲ್ಲಿ ಮಳೆ ಕಡಿಮೆಯಾಗಿ ಕೃಷ್ಣಾ ನದಿ ಉಬ್ಬರ ತಗ್ಗಿದ್ದರಿಂದ ಆಲಮಟ್ಟಿಗೂ ಹೆಚ್ಚಿನ ನೀರು ಹರಿದು ಬರುತ್ತಿಲ್ಲ. ಬುಧವಾರ ಬೆಳಿಗ್ಗೆ ಆಲಮಟ್ಟಿಗೆ ಬರುತ್ತಿರುವ ನೀರಿನ ಪ್ರಮಾಣ 33,123 ಕ್ಯೂಸೆಕ್‌. ಹೊರ ಹರಿವಿನ ಪ್ರಮಾಣವನ್ನು 15,000 ಕ್ಯೂಸೆಕ್‌ಗೆ ಇಳಿಕೆ ಮಾಡಲಾಗಿದೆ. ಕಳೆದ ವಾರ ಮೂರು ಲಕ್ಷ ಕ್ಯೂಸೆಕ್‌ ಅಧಿಕ ನೀರು ಜಲಾಶಯಕ್ಕೆ ಬರುತ್ತಿತ್ತು. ಎರಡು ಲಕ್ಷ ಕ್ಯೂಸೆಕ್‌ ಹೊರ ಹರಿವು ಇತ್ತು. ಜಲಾಶಯದ ನೀರಿನ ಮಟ್ಟವು 519.50 ಮೀಟರ್‌ ಇದೆ. ಗರಿಷ್ಠ ಮಟ್ಟ519.60 ಮೀಟರ್.‌ ಜಲಾಶಯ ಬಹುತೇಕ ತುಂಬಿದ್ದು, 121.262 ಟಿಎಂಸಿ ನೀರು ಸಂಗ್ರಹವಾಗಿದೆ. ಇಲ್ಲಿ 123.081 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯವಿದೆ.

ಕೆಆರ್‌ಎಸ್‌ ಜಲಾಶಯ

ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟವು ಬುಧವಾರ 123.06 ಅಡಿ ಇದೆ. ಜಲಾಶಯಕ್ಕೆ 15350 ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು ಹೊರ ಹರಿವು 14512 ಕ್ಯೂಸೆಕ್‌ ಇದೆ. ಜಲಾಶಯದಲ್ಲಿ ಈಗ 47.05 ಟಿಎಂಸಿ ನೀರಿದೆ. ಕೊಡಗಿನಲ್ಲಿ ಮಳೆ ಕಡಿಮೆಯಾಗಿದ್ದರಿಂದ ಒಳ ಹರಿವು ತಗ್ಗಿದೆ. ಈ ವಾರ ಮತ್ತೆ ಮಳೆಯಾದರೆ ಕೆಆರ್‌ಎಸ್‌ಗೆ ಹೆಚ್ಚಿನ ಒಳ ಹರಿವು ಬರಬಹುದು.

ಲಿಂಗನಮಕ್ಕಿ ಜಲಾಶಯ

ಕರ್ನಾಟಕದ ಅತಿ ದೊಡ್ಡ ಜಲಾಶಯಗಳಲ್ಲಿ ಒಂದಾದ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟವು ಬುಧವಾರ ಬೆಳಿಗ್ಗೆ 1816.65 ಅಡಿಯಷ್ಟಿದ್ದು, ಒಳ ಹರಿವಿನ ಪ್ರಮಾಣ 7741 ಕ್ಯೂಸೆಕ್‌ ಇದೆ. ಜಲಾಶಯ ಶೇ 95 ರಷ್ಟು ಭರ್ತಿಯಾಗಿದೆ. ಹೊರ ಹರಿವಿನ ಪ್ರಮಾಣವನ್ನು ನಿಲ್ಲಿಸಲಾಗಿದೆ.

ಕಬಿನಿ ಜಲಾಶಯ

ಕೇರಳದಲ್ಲೂ ಮಳೆ ಪ್ರಮಾಣ ಕಡಿಮೆಯಾದ ಪರಿಣಾಮವಾಗಿ ಮೈಸೂರು ಜಿಲ್ಲೆಯ ಎಚ್‌ಡಿಕೋಟೆ ತಾಲ್ಲೂಕಿನ ಕಬಿನಿ ಜಲಾಶಯಕ್ಕೂ ನೀರಿನ ಒಳ ಹರಿವು ಇಳಿಕೆಯಾಗಿದೆ. ಬುಧವಾರ ಜಲಾಶಯಕ್ಕೆ 5960 ಕ್ಯೂಸೆಕ್‌ ನೀರು ಬರುತ್ತಿದ್ದು, ನಾಲೆಗಳಿಗೂ ಸೇರಿ 6350 ಕ್ಯೂಸೆಕ್‌ ನೀರನ್ನು ಹೊರಕ್ಕೆ ಹರಿಸಲಾಗುತ್ತಿದೆ. ಜಲಾಶಯದ ನೀರಿನ ಮಟ್ಟವು 2282.64 ಅಡಿಯಿದೆ. ಜಲಾಶಯದಲ್ಲಿ 18.64 ಟಿಎಂಸಿ ನೀರು ಸಂಗ್ರಹವಿದೆ. ಜಲಾಶಯದಲ್ಲಿ 19.52 ಟಿಎಂಸಿ ನೀರು ಸಂಗ್ರಹಿಸಬಹುದು.

ಭದ್ರಾ ಜಲಾಶಯ

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಭದ್ರಾ ಜಲಾಶಯಕ್ಕೂ ಒಳಹರಿವು ತಗ್ಗಿದೆ. ಜಲಾಶಯಕ್ಕೆ ಬುಧವಾರ 5116 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಹೊರ ಹರಿವಿನ ಪ್ರಮಾಣ ನದಿ ಹಾಗೂ ನಾಲೆಗಳು ಸೇರಿ 6841 ಕ್ಯೂಸೆಕ್‌ ಇದೆ. ಜಲಾಶಯದ ನೀರಿನ ಮಟ್ಟವು 2152 ಅಡಿ ಇದೆ. ಜಲಾಶಯದಲ್ಲಿ 59.999 ಟಿಎಂಸಿ ನೀರು ಸಂಗ್ರಹವಿದೆ.

ಹಾರಂಗಿ ಜಲಾಶಯ

ಕೊಡಗಿನ ಹಾರಂಗಿ ಜಲಾಶಯದ ನೀರಿನ ಮಟ್ಟವು 2856.21 ಅಡಿ ಇದೆ. 2859 ಅಡಿ ಗರಿಷ್ಠಮಟ್ಟ. ಜಲಾಶಯಕ್ಕೆ ಈ 1821 ಕ್ಯೂಸೆಕ್‌ ಒಳ ಹರಿವು ಇದೆ. ಹೊರ ಹರಿವಿನ ಪ್ರಮಾಣವು 5666 ಕ್ಯೂಸೆಕ್‌. ಜಲಾಶಯದಲ್ಲಿ 7.55 ಟಿಎಂಸಿ ನೀರು ಸಂಗ್ರಹವಿದೆ.

Whats_app_banner