Doctors Protest; ಕೋಲ್ಕತ ವೈದ್ಯೆಯ ಅತ್ಯಾಚಾರ ಹತ್ಯೆ ಖಂಡಿಸಿ ವೈದ್ಯರ ಪ್ರತಿಭಟನೆ, ಕರ್ನಾಟಕದಲ್ಲಿ ಯಾವ ವೈದ್ಯಕೀಯ ಸೇವೆ ಇದೆ, ಯಾವುದಿಲ್ಲ
ಕನ್ನಡ ಸುದ್ದಿ  /  ಕರ್ನಾಟಕ  /  Doctors Protest; ಕೋಲ್ಕತ ವೈದ್ಯೆಯ ಅತ್ಯಾಚಾರ ಹತ್ಯೆ ಖಂಡಿಸಿ ವೈದ್ಯರ ಪ್ರತಿಭಟನೆ, ಕರ್ನಾಟಕದಲ್ಲಿ ಯಾವ ವೈದ್ಯಕೀಯ ಸೇವೆ ಇದೆ, ಯಾವುದಿಲ್ಲ

Doctors Protest; ಕೋಲ್ಕತ ವೈದ್ಯೆಯ ಅತ್ಯಾಚಾರ ಹತ್ಯೆ ಖಂಡಿಸಿ ವೈದ್ಯರ ಪ್ರತಿಭಟನೆ, ಕರ್ನಾಟಕದಲ್ಲಿ ಯಾವ ವೈದ್ಯಕೀಯ ಸೇವೆ ಇದೆ, ಯಾವುದಿಲ್ಲ

Karnataka Doctors Protest; ಸರ್ಕಾರಿ ಸ್ವಾಮ್ಯದ ಆಸ್ಪತ್ರೆಯಲ್ಲಿಯೇ ಕೋಲ್ಕತ ವೈದ್ಯೆಯ ಅತ್ಯಾಚಾರ ಹತ್ಯೆ ನಡೆದಿರುವುದನ್ನು ಖಂಡಿಸಿ ದೇಶಾದ್ಯಂತ ವೈದ್ಯರ ಪ್ರತಿಭಟನೆ ಶುರುವಾಗಿದೆ. ಇಂದು ಕರ್ನಾಟಕದಲ್ಲಿ ಯಾವ ವೈದ್ಯಕೀಯ ಸೇವೆ ಇದೆ, ಯಾವುದಿಲ್ಲ ಎಂಬುದರ ವಿವರ ಇಲ್ಲಿದೆ.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ವೈದ್ಯರು ಶುಕ್ರವಾರ ಪ್ರತಿಭಟನೆ ನಡೆಸಿದ ಸಂದರ್ಭ. (ಕಡತ ಚಿತ್ರ)
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ವೈದ್ಯರು ಶುಕ್ರವಾರ ಪ್ರತಿಭಟನೆ ನಡೆಸಿದ ಸಂದರ್ಭ. (ಕಡತ ಚಿತ್ರ) (PTI)

ಬೆಂಗಳೂರು: ಕೋಲ್ಕತದ ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್‌ ಆಸ್ಪತ್ರೆಯಲ್ಲಿ ವೈದ್ಯೆ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿರುವುದನ್ನು ವಿರೋಧಿಸಿ ಕರ್ನಾಟಕದಲ್ಲೂ ಇಂದು ಆಸತ್ರೆಗಳಲ್ಲಿ ಹೊರರೋಗಿ ಸೇವೆ ಬಂದ್ ಮಾಡುವ ಮೂಲಕ ವೈದ್ಯರು ಪ್ರತಿಭಟನೆ ಶುರುಮಾಡಿದ್ದಾರೆ.

ಕೋಲ್ಕತ್ತಾದಲ್ಲಿ ವೈದ್ಯೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವುದನ್ನು ಖಂಡಿಸಿ ಮತ್ತು ಪ್ರತಿಭಟಿಸಿ ಕರ್ನಾಟಕದಾದ್ಯಂತ ಶನಿವಾರ ಹೊರರೋಗಿ ಸೇವೆ ವಿಭಾಗ (ಒಪಿಡಿ) ಬಂದ್ ಮಾಡುವುದಾಗಿ ಖಾಸಗಿ ಆಸ್ಪತ್ರೆಗಳ ವೈದ್ಯರು ನಿನ್ನೆ (ಆಗಸ್ಟ್‌ 16) ಘೋಷಿಸಿದ್ದರು.

ಕರ್ನಾಟಕದಲ್ಲೂ ಖಾಸಗಿ ಆಸ್ಪತ್ರೆಗಳ ವೈದ್ಯರು ಹೊರರೋಗಿಗಳ ವಿಭಾಗವನ್ನು ಬಂದ್ ಮಾಡಿ ಪ್ರತಿಭಟನೆ ಮಾಡುತ್ತಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಲವು ದಿನಗಳ ಹಿಂದಷ್ಟೇ ಸರ್ಕಾರಿ ವೈದ್ಯರು ಪ್ರತಿಭಟನೆ, ಮುಷ್ಕರ ನಡೆಸಿದ್ದರು.

ಏನೆಲ್ಲಾ ಸೇವೆ ಇರುತ್ತದೆ?: ಎಮರ್ಜೆನ್ಸಿ ಸೇವೆ, ಮೆಡಿಕಲ್ ಶಾಪ್, ಇನ್ ಪೇಷೆಂಟ್ ಸೇವೆ, ಹೆರಿಗೆ, ಎಮರ್ಜೆನ್ಸಿ ಸರ್ಜರಿಗಳಿಗೆ ಸಮಸ್ಯೆ ಇಲ್ಲ.

ಈ ಸೇವೆ ಇರುವುದಿಲ್ಲ: ಓಪಿಡಿ (ಹೊರ ರೋಗಿ ವಿಭಾಗ), ಡಯಾಲಿಸಿಸ್, ಕ್ಲಿನಿಕ್ ಸೇವೆ, ಮಕ್ಕಳ ಓಪಿಡಿ, ದಂತ ವೈದ್ಯ ಸೇವೆ ಇರಲ್ಲ.

ಕೋಲ್ಕತ್ತ ಆಸ್ಪತ್ರೆಯಲ್ಲಿ ನಡೆದುದು ಏನು; ವೈದ್ಯೆಗೇನಾಯಿತು

ಕಳೆದ ಶುಕ್ರವಾರ ಕೊಲ್ಕತ್ತಾದ ಸರ್ಕಾರಿ ಸ್ವಾಮ್ಯದ ಆರ್‌ಜಿ ಕ‌ರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಸ್ನಾತಕೋತ್ತರ ತರಬೇತಿ (ಪಿಜಿಟಿ) ವೈದ್ಯೆಯ ಶವ ಅರೆ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ರಾತ್ರಿ ಕರ್ತವ್ಯದಲ್ಲಿದ್ದ ಆ ವೈದ್ಯೆ ತನ್ನ ಸಹೋದ್ಯೋಗಿಗಳ ಜೊತೆ ಊಟ ಮುಗಿಸಿ, ವಿಶ್ರಾಂತಿಗೆಂದು ಸೆಮಿನಾರ್ ಹಾಲ್‌ಗೆ ಹೋಗಿದ್ದರು. ಯಾರೋ ದುಷ್ಕರ್ಮಿಗಳು ಏಕಾಂಗಿಯಾಗಿದ್ದ ಅವರ ಮೇಲೆ ಅತ್ಯಾಚಾರ ನಡೆಸಿ, ಬರ್ಬರವಾಗಿ ಕೊಲೆ ಮಾಡಿದ್ದಾರೆ. ಮರಣೋತ್ತರ ಪರೀಕ್ಷೆ ವರದಿಯ ಪ್ರಕಾರ, ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಈ ವಿದ್ಯಮಾನ ಪಶ್ಚಿಮ ಬಂಗಾಳದ ಉದ್ದಗಲಕ್ಕೂ ವೈದ್ಯರಲ್ಲಿ ಕಳವಳ ಮೂಡಿಸಿದ್ದು, ತಮಗೆ ರಕ್ಷಣೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ಈ ಪ್ರತಿಭಟನೆಯ ಕಾವು ಇದೀಗ ದೇಶವನ್ನು ವ್ಯಾಪಿಸಿದ್ದು, ಮೃತ ವೈದ್ಯೆಗೆ ನ್ಯಾಯ ಒದಗಿಸಬೇಕೆಂಬ ಆಗ್ರಹ ಹೆಚ್ಚಾಗಿದೆ. ಪಶ್ಚಿಮ ಬಂಗಾಳದ ವೈದ್ಯರಿಗೆ ಬೆಂಬಲವಾಗಿ ಇಡೀ ದೇಶದಲ್ಲಿ ಶನಿವಾರ (ಆಗಸ್ಟ್ 17) ಹೊರರೋಗಿಗಳ ಸೇವಾ ವಿಭಾಗವನ್ನು ಒಂದು ದಿನ ಬಂದ್ ಮಾಡಿ ಪ್ರತಿಭಟನೆ ಶುರುಮಾಡಿದ್ದಾರೆ.

ಕರ್ನಾಟಕದಲ್ಲಿ ಇಂದು ಸರ್ಕಾರಿ ವೈದ್ಯರಿಗೆ ರಜೆ ಇಲ್ಲ

ಕರ್ನಾಟಕದಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ಇಂದು ರಜೆ ಇಲ್ಲ. ಯಾರಿಗೂ ರಜೆ ನೀಡದಂತೆ ಸರ್ಕಾರ ನಿನ್ನೆ ಆದೇಶ ಹೊರಡಿಸಿದೆ. ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಗಳಲ್ಲಿ ವೈದ್ಯಕೀಯ ಸೇವೆಯು ವ್ಯತ್ಯಯವಾಗಿ ಸಾರ್ವಜನಿಕ ಆರೋಗ್ಯ ಸೇವೆಗೆ ದಕ್ಕೆಯಾಗುವ ಸಾಧ್ಯತೆ ಇರುತ್ತದೆ. ಆದುದರಿಂದ ಎಲ್ಲಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಜಿಲ್ಲಾ ಶಸ್ತ್ರ ಚಿಕಿತ್ಸಕರು ಮತ್ತು ಎಲ್ಲಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು, ಅಗತ್ಯ ಮುನ್ನೆಚ್ಚರಿಕಾ ಕ್ರಮವಹಿಸಿ ಸಾರ್ವಜನಿಕ ತುರ್ತು ವೈದ್ಯಕೀಯ ಸೇವೆಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಬೇಕು ಎಂದು ಆದೇಶದಲ್ಲಿ ಸರ್ಕಾರ ತಿಳಿಸಿದೆ.

ತಮ್ಮ ಬೇಡಿಕೆ ಈಡೇರಿಸಲು ಆಗ್ರಹಿಸಿ ವೈದ್ಯರು ಮುಷ್ಕರ ಮಾಡಲಿ. ಅದು ಅವರ ಹಕ್ಕು. ಆದರೆ, ಮುಷ್ಕರದಿಂದಾಗಿ ರೋಗಿಗಳಿಗೆ ತೊಂದರೆಯಾಗಬಾರದು. ಪ್ರತಿಭಟನೆ ಮಾಡುವವರೂ ಕೂಡಾ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪ್ರತಿಭಟನೆ ಮಾಡುವುದಾಗಿ ಹೇಳಿದ್ದಾರೆ. ಈ ವಿಷಯವಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೂಡಾ ವೈದ್ಯರೊಂದಿಗೆ ಚರ್ಚಿಸಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶುಕ್ರವಾರ ತಿಳಿಸಿದ್ದರು.

ಇನ್ನೊಂದೆಡೆ, ಕರ್ನಾಟಕದಾದ್ಯಂತ ಅದರ ಶಾಖೆಗಳನ್ನು ಮುಚ್ಚಲಾಗುವುದು ಮತ್ತು ಎಲ್ಲಿಯೂ ಒಪಿಡಿ ಸೇವೆಗಳಿಲ್ಲ ಎಂದು ಕರ್ನಾಟಕದ ಹಲವಾರು ಭಾಗಗಳಲ್ಲಿ ವೈದ್ಯರಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ಬೆಂಗಳೂರಿನಲ್ಲಿ ಐಎಂಎಯ ಚಾಮರಾಜಪೇಟೆ ಕಚೇರಿ ಎದುರು ಪ್ರತಿಭಟನೆ ನಡೆಯಲಿದೆ ಎಂದು ಐಎಂಎ ಕರ್ನಾಟಕ ಘಟಕದ ಅಧ್ಯಕ್ಷ ಶ್ರೀನಿವಾಸ ಎಸ್, ಅವರು ಹೇಳಿದರು.

Whats_app_banner